
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಮನಸ್ಸೇ ದೇವಾಲಯ
ಏನೇ ಇದ್ದರೂ ಸಹ-ಬಾಳ್ವೆಯೇ ಎಲ್ಲರ ಗುರಿ. ಕಾರಣಾಂತರಗಳಿಂದ ಅರಿವು ಇದ್ದೋ ಇಲ್ಲದೆಯೋ, ನಮ್ಮ ಸಮ ಮತ್ತು ಸಹಬಾಳ್ವೆಯಲ್ಲಿ ಅಶಾಂತಿ ತಲೆದೋರಿದೆ. ಈ ಅಶಾಂತಿಯು ನಿಯಂತ್ರಣವಾಗದಿದ್ದಲ್ಲಿ ಸಾಮಾನ್ಯ ಮನುಜ ಮನೋ ರೋಗಗಳಿಗೆ ತುತ್ತಾಗುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಇದು ನಮ್ಮೆಲ್ಲರನ್ನೂ ಸದಾ ಕಾಡುತ್ತಿರುವ ಸಂಗತಿ. ಅವರವರ ಜೀವ ತಂತುವಿನ ಕಾರ್ಯ ವೈಖರಿ, ನರ – ರಸಗಳ ಸಂವೇದನಾ ನಿಯಂತ್ರಣ ಅಥವಾ ಅನಿಯಂತ್ರಣ, ಬೆಳೆದಂತಹ ಪರಿಸರ, ಸಂಸ್ಕಾರ ವಿಧಾನ, ಬಂಧುಮಿತ್ರರೊಡನಾಟದ ಫಲ, ಗುರು ಹಿರಿಯ ಬೋಧನಾ ವಿಷಯ, ಪ್ರಕೃತಿ, ಜ್ಞಾನ ಮತ್ತು ಸಿರಿಸಂಪತ್ತುಗಳು. ಎಲ್ಲಕ್ಕಿಂತ ಮುಖ್ಯವಾಗಿ ಜೀವನ ಶೈಲಿ, ಕಲೆ, ಇವೆಲ್ಲವೂ ಶಾಂತಿ ಮತ್ತು ಅಶಾಂತಿಯನ್ನು ಅವಲಂಬಿಸಿರುತ್ತೆ. ಅಶಾಂತಿಯನ್ನು ಕ್ರೋಢೀಕರಿಸಿದಾಗ ಶೇ. 60-70 ರವರೆಗೂ ತ್ವರಿತ ಮತ್ತು ಮಧ್ಯಮ ಅಶಾಂತಿಗಳು ಸಹಜವಾಗಿ, ಯಾವುದರ ನೆರವೂ ಇಲ್ಲದೆ ಶಾಂತಿಯಾಗಿ ಮಾರ್ಪಾಟಾಗುತ್ತವೆ.
ಇನ್ನುಳಿದ ಶೇ. 30-40 ಮಂದಿ ದೀರ್ಘ ಅಶಾಂತಿಗಳಾಗಿ ಇದ್ದು ಬಿಡುತ್ತಾರೆ. ಇಂಥ ಅಶಾಂತಿಗಳು ಮನೋ ವ್ಯಾಕುಲತೆಗೆ ತಿರುಗುತ್ತವೆ. ಇದರಲ್ಲಿ ಹೆಚ್ಚಿನ ಅಂಶ ಮೂಢನಂಬಿಕೆಗಳಿಗೆ ಮಾರುಹೋಗುವರು. ಕಡಿಮೆ ಪ್ರಮಾಣ ಕೆಲವು ಸಂದರ್ಭಗಳಲ್ಲಿ ನೆರೆಹೊರೆಯುವರು, ಬಂಧು ಬಳಗ ಮಿತ್ರರ ವಾಕ್ ಚಿಕಿತ್ಸಾ ಪದ್ಧತಿ ಆಗಿರುವುದರಿಂದ ಹಲವು ಸಂದರ್ಭಗಳಲ್ಲಿ ಅನಾನುಕೂಲಗಳೂ ಉಂಟು. ಸಕಾರಾತ್ಮಕವಾಗಿ, ನ್ಯಾಯವಾಗಿ ಮತ್ತು ವೈಜ್ಞಾನಿಕವಾಗಿ ಶೇ. 5-10 ದೀರ್ಘ ಮನೋ ವ್ಯಾಕುಲತೆಗೆ ಮನೋ ವೈದ್ಯರಿಂದ ಚಿಕಿತ್ಸೆ ಲಭ್ಯ. ವಿಜ್ಞಾನದಲ್ಲಿ ಈ ತೋರಿಕಾ ವಿಧಾನಕ್ಕೆ ಸಾಗರದೊಳಗಿನ ಮಂಜುಗಡ್ಡೆಯ ಹೊರ ತುದಿ ಎಂದು ಕರೆಯುವರು. ಆ ಕಾರಣದಿಂದಾಗಿ ಈ ಅಂಕಣವನ್ನು ಬರೆಯಲು ಪ್ರೇರಣೆಯಾಯ್ತು.
ಇದಿಷ್ಟು ಮನೋ ವ್ಯಾಕುಲತೆ ಅಥವಾ ರೋಗಕ್ಕೆ ಸಂಬಂಧಪಟ್ಟಿದ್ದರೆ ಇತರೆ ಬಹು ಹೆಚ್ಚಿನ ಪಾಲು ಶೇ. 70 ರಷ್ಟು ನಾವು ಸರಿಯಾಗಿದ್ದೇವೆ ಅನ್ನುವವರು ಸರಿಯಾಗಿ ಇದ್ದಾರೆಯೇ ಎಂಬುದು ಯಕ್ಷ ಪ್ರಶ್ನೆ. ನಾನು ಸರಿಯಾಗಿರುವೆನು ಅನ್ನುವುದಕ್ಕೆ ಯಾವುದಾದರೂ ತಾಂತ್ರಿಕ ಮಾಪನಗಳು ಇವೆಯೇ?
ನನ್ನ ಸ್ನೇಹಿತರಾದ ಪ್ರೊ. ನಿರ್ವಾಣಿ ಹೇಳುವ ಹಾಗೆ, ಡಾಕ್ಟ್ರೇ ಮನುಷ್ಯನೆಂಬುವನು ಅತಿ ಶ್ರೇಷ್ಠವಾದ ದೇವಸ್ಥಾನ. ಮಾಂಸ ಮೂಳೆಗಳೇ ಅದರ ಆಧಾರಸ್ಥಂಭ. ಮನಸ್ಸೇ ಗರ್ಭಗುಡಿ. ಆ ಗರ್ಭಗುಡಿಯಲ್ಲಿರುವ ದೇವರೇ ‘ಮೌಲ್ಯ, ಸೃಜನಶೀಲ ಮತ್ತು ಕ್ಷಮೆ’. ಪ್ರತಿನಿತ್ಯವೂ ಅಲ್ಲಿ ಪೂಜೆ, ಪುನಸ್ಕಾರ, ಕ್ಷೀರಾಭಿಷೇಕ ಆಗಬೇಕು. ಇಲ್ಲದಿದ್ದರೆ ದೇವಸ್ಥಾನವು ದೇವರ ಸ್ಥಾನ ಆಗುವುದಿಲ್ಲ. ಅದು ‘ದೆವ್ವ ಸ್ಥಾನ’ವಾಗುತ್ತದೆ. ಅಲ್ಲವೇ? ಹಾಗೆಯೇ ನಮ್ಮ ನಮ್ಮ ಗರ್ಭಗುಡಿಯಲ್ಲಿರುವ ಮೌಲ್ಯ, ಸೃಜನಶೀಲ ಮತ್ತು ಕ್ಷಮೆಗಳಿಗೆ ಪ್ರೀತಿಯೆಂಬ ಪೂಜೆ, ಜ್ಞಾನವೆಂಬ ಅಭಿಷೇಕ ಪ್ರತಿ ನಿತ್ಯವೂ ಇರುವುದಾದರೆ ಮಾನವ ಅಶಾಂತಿಯಿಂದ ದೂರವಾಗಲು ಸಾಧ್ಯ. ಇಲ್ಲದಿದ್ದರೆ ಅವನು ದೇವರು ಆಗುವುದಿಲ್ಲ, ದೆವ್ವನಾಗುತ್ತಾನೆ ಅಂದರು.

ನಾನು ಕೇಳಿದೆ. “ನೀವೇನೋ ಹೇಳಿದಿರಿ, ಜ್ಞಾನ ಮತ್ತು ಪ್ರೀತಿ ಇರುವವನು ದೇವರು ಎಂದು. ಆದರೆ ನಾವು ಅವುಗಳನ್ನು ಈ ಲೌಕಿಕ ಜಗತ್ತಿನಲ್ಲಿ ಗುರುತಿಸಿಕೊಳ್ಳುವೆವೋ?’’
“ಒಳ್ಳೇ ಪ್ರಶ್ನೆ ಕೇಳಿದಿರಿ ಡಾಕ್ಟ್ರೇ . ಇದೆ ಈ ಹೊತ್ತಿನಲ್ಲಿ ಸಮಾಜವನ್ನು ನಿಜವಾಗಿಯೂ ಕಾಡುತ್ತಿರುವ ಪ್ರಶ್ನೆ ಮತ್ತು ಸಮಸ್ಯೆ. ನೀವು ಹೇಳುತ್ತಿರುವುದು ಸತ್ಯ. ನಾವು ಇಂದು ಬೆಟ್ಟು ಮಾಡಿ ತೋರಿಸುತ್ತಿರುವ ದೇವಸ್ಥಾನ ಯಾವುದೆಂದರೆ ತಿರುಪತಿ ವೆಂಕಟರಮಣ. ಆ ದೇವಸ್ಥಾನದ ಒಳಗೆ ಯಾವ ಶಕ್ತಿ ಇದೆ ಅನ್ನುವುದು ನನಗೆ ಗೊತ್ತಿಲ್ಲ. ಕೇಳಿದರೆ ನಂಬಿಕೆ ಅನ್ನುವರು. ನಂಬಿಕೆ ಅವರಿಗೆ ಬಿಟ್ಟಿದ್ದು. ಆದರೆ ಅಲ್ಲಿ ನನಗೆ ಕಾಣುವುದು ಆಡಂಬರ, ಆಭರಣ ಮತ್ತು ಸಿರಿವಂತಿಕೆ.
ಪಾಪ, ಆ ತಿರುಪತಿ ತಿಮ್ಮಪ್ಪ ಇವೆಲ್ಲವನ್ನು ಬಯಸಿದ್ದನೇ? ಖಂಡಿತಾ ಇಲ್ಲ. ತಿಮ್ಮಪ್ಪನಿಗೇನಾದರೂ ಕಣ್ಣು, ಬಾಯಿ ಮತ್ತು ಮೂಗು ಇದ್ದಿದ್ದೇ ಆದರೆ ಅಲ್ಲಿಂದ ಅವನು ಯಾವತ್ತೋ ಓಡಿ ಹೋಗುತ್ತಿದ್ದ.
ವಾಸ್ತವವಾಗಿ ನಾವು ನಮ್ಮಲ್ಲಿ ಕಾಣುತ್ತಿರುವುದು ಈ ಕಥಾ ಸಾರಾಂಶವೇ. ಜ್ಞಾನ ಮತ್ತು ಪ್ರೀತಿ ಇರುವವರನ್ನು ಯಾರು ಗುರುತಿಸುತ್ತಿದ್ದಾರೆ? ನೀವೇ ಹೇಳಿ.
ಆಡಂಬರ, ಆಭರಣ ಮತ್ತು ಸಿರಿವಂತಿಕೆ ಇದ್ದರೆ ಸಿಹಿಗೆ ಮುತ್ತುವ ನೊಣ ಮತ್ತು ಇರುವೆಗಳಂತೆ ಜನ ಮುತ್ತಿಕೊಂಡಿರುತ್ತಾರೆ. ಆದರೂ ಸಹಾ ಇವೆಲ್ಲಾ ನಿಮಿತ್ತ ಮಾತ್ರ. ಮಿಥ್ಯ ಯಾವುದೆಂದರೆ ಜ್ಞಾನವೇ ಹೊರತು, ಆಡಂಬರವಲ್ಲ. ತಿಳಿತಾ ಡಾಕ್ಟ್ರೇ ” ಅಂದರು.
ನನಗೂ ಸಹಾ ಹೌದೆನಿಸಿತು. ಯಾವತ್ತು ನ್ಯಾಯ, ಧರ್ಮ ಮತ್ತು ನೀತಿ ಈ ಭೂಮಿಯಲ್ಲಿ ಹುದುಗಿಹೋಗಿದ್ದಾವೋ ಅಲ್ಲಿಯವರೆಗೂ ಜ್ಞಾನ ಮತ್ತು ಪ್ರೀತಿ ಹೊಂದಿರುವ ಮನುಜರು ಈ ಜಗತ್ತಿಗೆ ಗೋಚರಿಸುವುದಿಲ್ಲ. ಈ ನಿಟ್ಟಿನಲ್ಲಿ ನಾವು ಮನೊ ಚಿಂತನವನ್ನು ಮತ್ತು ಮಂಥನವನ್ನು ಮಾಡಬೇಕಿದೆ. ಮನೋ ಮಾಪನಗಳನ್ನು ಕಂಡುಕೊಳ್ಳಬೇಕಾಗಿದೆ. ಕಂಡುಕೊಂಡ ಮಾಪನಗಳನ್ನು ಸರಿಯಾಗಿ ಉಪಯೋಗಿಸಬೇಕಾಗಿದೆ. ಮುರಿದು ಹೋಗಿರುವ ಮನವೆಂಬ ಮನೆಯನ್ನು ವೈಜ್ಞಾನಿಕ ಸಾಧನಗಳಿಂದ ಸರಿಮಾಡಬೇಕಾಗಿದೆ.
ಯಾವುದೇ ರಾಷ್ಟ್ರದ ಸಿರಿಸಂಪತ್ತಿನ ಮೌಲ್ಯವರ್ಧನೆಗೆ ಮಾನವರ ಮನಸ್ಸು ಮತ್ತು ಶಾರೀರಿಕ ಆರೋಗ್ಯಗಳು ಸರಿಯಾಗಬೇಕು ಅನ್ನುವುದು. ಆದರೆ ಮನವೆಂಬ ಆಯಾಮವನ್ನು ನಿಯಂತ್ರಿಸಬೇಕಾಗಿದೆ. ಇದನ್ನು ಬರೀ ವೈದ್ಯರಿಂದ, ಸ್ವಾಮೀಜಿಗಳಿಂದ ಅಥವಾ ಕಾನೂನುಗಳಿಂದ ಸರಿಪಡಿಸಲು ಸಾಧ್ಯವಿಲ್ಲ. ಇದಕ್ಕೆ ಜ್ಞಾನವೊಂದೇ ಸಾಧನ. ಈ ಸಾಧನವನ್ನು ಬಲಪಡಿಸಬೇಕಾದರೆ ಸಮಗ್ರ ಜನತೆಯು ಎಚ್ಚೆತ್ತುಕೊಳ್ಳಬೇಕು. ಕೇಳುವವರಾಗಿರಬೇಕು. ಮನವನ್ನು ವೃದ್ಧಿಸಿಕೊಳ್ಳಬೇಕು ಮತ್ತು ಸಹಾಯ ಹಸ್ತ ಚಾಚಬೇಕು.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ