
Young happy couple on seashore in the lights of sunset.
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಪ್ರೇಮ ಪ್ರಸಂಗ
ನನ್ನ ಗೆಳೆಯ ಕವಿ ತಿಮ್ಮ ಅವರ ಖಾಲಿ ಇದ್ದ ಪಕ್ಕದ ಕೆಳ ಮನೆಗೆ ಮೊನ್ನೆ ತಾನೇ ಒಂದು ಕುಟುಂಬ ಬಾಡಿಗೆಗೆ ಬಂತು. ಸ್ಫುರದ್ರೂಪಿ ಗಂಡ, ಸಾಮಾನ್ಯ ಲಕ್ಷಣದ ಹೆಂಡತಿ. ಹೀಗೆ ಕೂಗಳತೆಯ ದೂರದಲ್ಲಿದ್ದ ಮಹಡಿ ಮನೆಗೆ ಬಂದವರಲ್ಲಿ ಗಂಡ ಉದ್ಯೋಗಸ್ಥ ಮತ್ತು ಯಾರ ತಂಟೆ ತಕರಾರಿಗೂ ಹೋಗದ ಸುಸಂಸ್ಕೃತಸ್ಥ.
ಕೆಳಗಿನ ಮನೆಯಲ್ಲಿ ವಾಸವಿದ್ದವರಲ್ಲಿ ಮನೆಯಾಕೆ ಸ್ಫುರದ್ರೂಪಿ ಹೆಣ್ಣು. ಒಂದು ಮಗುವಿನ ತಾಯಿಯಾದರೂ ನೋಡುವವರ ಮನ ಸೆಳೆವ ಬಣ್ಣ ಮತ್ತು ಮೈಕಟ್ಟು. ಹಾಗಾಗಿಯೇ ಏನೋ ಅವರಿಬ್ಬರಲ್ಲಿನ ಆಕರ್ಷಣೀಯವಾದ ಮಾತು ಕಥೆಗಳು, ಹಾವಭಾವ ನೆರೆಹೊರೆಯವರಿಗೆ ಅನುಮಾನವನ್ನುಂಟು ಮಾಡಿದ್ದವು. ಅವರಿಬ್ಬರ ಬಗ್ಗೆ ಬೀದಿಯಲ್ಲೆಲ್ಲ ಕೆಲವೇ ತಿಂಗಳಲ್ಲಿ ಏನೇನೋ ಗಾಳಿಸುದ್ದಿ ಹರಡಿತ್ತು. ಆದರೆ ಕವಿ ತಿಮ್ಮ ಮಾತ್ರ ಯಾವುದರ ಪರಿವಿಲ್ಲದೆ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಯಾವುದನ್ನೇ ಆಗಲಿ ‘ಪ್ರತ್ಯಕ್ಷವಾಗಿ ಕಂಡದ್ದನ್ನು ಪ್ರಮಾಣಿಸಿ ನೋಡು’ ಎಂಬ ನಿಲುವಿನವರು. ಯಾವ ಕಾರಣಕ್ಕೂ ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವವರಾಗಿರಲಿಲ್ಲ.
ಒಂದು ದಿನ ಅವನ ಕಡೆ ಮತ್ತು ಈಕೆಯ ಕಡೆ ಸಂಬಂಧಿಕರು ಮತ್ತು ಸ್ನೇಹಿತರು ಬಿಗಡಾಯಿಸಿದ್ದರು. ಏರು ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯುತ್ತಿತ್ತು. ಕವಿ ತಿಮ್ಮರಿಗೆ ಏನಿರಬಹುದು ಎಂಬ ಕುತೂಹಲ. ಆದರೆ ಹೋಗಿ ನೋಡುವವರಲ್ಲ. ಇವರನ್ನು ಯಾರೂ ಹಚ್ಚಿಕೊಳ್ಳುತ್ತಿರಲಿಲ್ಲ. ಇವರೂ ಹೋಗುತ್ತಿರಲಿಲ್ಲ. ಮನೆ ಆಯ್ತು, ಕೆಲಸವಾಯ್ತು. ಸಮಯ ಸಿಕ್ಕರೆ ಒಳ್ಳೆಯ ಪುಸ್ತಕಗಳ ಮೊರೆ ಹೋಗುವುದು. ಮೂಡಿದ್ದರೆ ಏನಾದರೂ ಬರೆಯುವುದು. ಆದ್ರೂ ಮನಸ್ಸು ಮಾಡಿ ಆ ಮನೆಯ ಮಾಲಿಕನನ್ನು ಕೇಳಿಯೇ ಬಿಟ್ಟರು. ಅವರಿಗೂ ಸ್ಪಷ್ಟ ಸಂಗತಿ ಗೊತ್ತಿಲ್ಲದ್ದರಿಂದ ‘ಇಬ್ಬರ ನಡುವೆಯೂ ಅನೈತಿಕ ಸಂಬಂಧ ಇರಬಹುದು’ ಎಂದು ಅನುಮಾನ ವ್ಯಕ್ತಪಡಿಸಿದರು. ಯಾರೂ ನೋಡಿಲ್ಲವಾದ್ದರಿಂದ ಕರಾರುವಕ್ಕಾಗಿ ಹೇಳುತ್ತಿರಲಿಲ್ಲ. ಇದನ್ನೆಲ್ಲಾ ಆಲಿಸಿದ ಕವಿ ತಿಮ್ಮರು ಒಂದು ಗಮನ ಇಟ್ಟರು. ಕೆಲವೇ ತಿಂಗಳಲ್ಲಿ ಅವರಿಬ್ಬರ ಚಲನವಲನಗಳನ್ನು ನೋಡಿ ಒಂದು ಕವನ ಬರೆದರು.
ಪರ ಸಂಗ
(ಪ್ರೇಯಸಿಗೆ)
ಬೇಡಾ ಬೇಡಾ ಕಾಂತಿ
ಮುಂದೆ ಬಂದರೆ ವಾಂತಿ
ಆಗುತ್ತೇ ಹೊಟ್ಟೆ ಸೂರ್ಯಕಾಂತಿ
ಬಂದೀತು ನನಗೆ ಭ್ರಾಂತಿ.
(ಪ್ರಸಂಗ)
ಬಂದೇ ಬಿಟ್ಳು ಮನೆಯ ಒಳಗೆ
ಹೆಂಡತಿ ಅವ್ಳೆ ಮಹಡಿ ಮೇಲೆ
ಎಳೆದೇ ಬಿಟ್ಳು ಜಡೆಯ ಮೇಲೆ
ನೂಕೆ ಬಿಟ್ಳು ಮೆಟ್ಟಿಲ ಕೆಳಗೆ.
(ಹೆಂಡತಿಗೆ)
ಹೋಗಬೇಡ ಹೋಗಬೇಡ ಮಾರಾಯ್ಗಿತ್ತಿ
ಇದೆಲ್ಲ ಮಾಮೂಲು ಪಾತರಗಿತ್ತಿ
ಹೋದರೆ ತವರಿಗೆ ನೀ ಅತ್ತಿ
ನನಗಿಲ್ಲಿ ಮೂಲೆಯೇ ಗತಿ
ಬೇಡಾ ಬೇಡಾ ಕಾಂತಿ…
ಅರರೇ, ಎಂತ ಹಾಡರಿ ಚೆನ್ನಾಗಿ ಬರ್ದಿದೀರಿ ಎಂದು ಹೇಳಿದೆ. ಏನೇನೋ ಮಾತಾಡಿದ ನಂತರ ಒಬ್ಬರನ್ನೊಬ್ಬರು ಅಗಲಿದೆವು. ನಾನು ಮನೋವೈದ್ಯನಾಗಿದ್ದರಿಂದಲೊ ಏನೋ ಆ ಘಟನೆಯ ಪಾತ್ರಗಳೆಲ್ಲಾ ಮನದಲ್ಲಿ ಓಡಾಡತೊಡಗಿದವು. ಆ ಸುಂದರ ಸುಂದರಿಯರ ಮನಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಿದೆ. ಎಲ್ಲಿಯ ರಾಮನ ಆದರ್ಶ? ಎಲ್ಲಿಯ ಕೃಷ್ಣನ ಜ್ಞಾನ? ಕೃಷ್ಣನು ಚಪಲ ಚೆನ್ನಿಗರಾಯ. ಬಹುಪತ್ನಿಯರು ಅವನಿಗೆ, ಅರವತ್ತೆರಡು ಸಾವಿರ ಸ್ತ್ರೀ ಯರ ಸರದಾರ ಎಂದೆಲ್ಲಾ ಅನುಕರಿಸುವ ನಮ್ಮ ಮಂದಿಗೆ ‘ರಾಸಲೀಲೆ’ ಅಂದರೆ ಎಷ್ಟು ಜನಕ್ಕೆ ಗೊತ್ತು? ಈ ‘ರಾಸಲೀಲೆ’ ಕುರಿತು ಸೂಕ್ಷ್ಮ ವಾಗಿ ಹೇಳುವುದಾದರೆ, ‘ಇದೊಂದು ಭಕ್ತಿಯ ಪರಾಕಷ್ಠೆ.

ಸ್ತ್ರೀಯರು ಸಾಂಕೇತಿಕವಾಗಿ ಈ ಭೂಮಿಯ ವಸ್ತುಗಳು. ಸುತ್ತುವರಿದ ಸ್ತ್ರೀ ಯರ ಮಧ್ಯೆ ಶ್ರೀಕೃಷ್ಣನು ಸರ್ವಂತರ್ಯಾಮಿ. ಆ ಭಕ್ತೆಯರು ಭಗವಂತನನ್ನು ಕೇಂದ್ರೀಕರಿಸಿ ಪ್ರೀತಿ ಎಂಬ ಏಕೈಕ ಮಂತ್ರವನ್ನು ಅಗೋಚರ ಹಗ್ಗದ ಸಂಪರ್ಕದ ಮೂಲಕ ಆ ಲೀಲೆಯ ಆಟದಲ್ಲಿ ಮೈಮರೆಯುತ್ತಾರೆ. ಆದರೆ ಆ ಭಕ್ತೆಯರಿಗೆ ಯಾವುದೇ ರೀತಿಯ ಲೈಂಗಿಕ ದೃಷ್ಟಿ ಇರುವುದಿಲ್ಲ. ಹಾಗಾಗಿ ಪ್ರೀತಿ ಮತ್ತು ಕಾಮಕ್ಕೆ ಅಜಗಜಾಂತರ ವ್ಯತ್ಯಾಸವಿರುತ್ತದೆ. ಅರಿಯದವರ ನೋಟಕ್ಕೆ ಕೃಷ್ಣ ಪೋಲಿ ಹುಡುಗನಂತೆ ಭಾಸವಾಗುತ್ತಾನೆ. ಆದರೆ ನಾನು ಮೊದಲೇ ತಿಳಿಸಿದ ಘಟನೆಯ ಅರ್ಥವೇ ಬೇರೆ. ಅಲ್ಲಿ ಕಾಮಕೇಳಿ ಆಟ. ಅದರಿಂದ ಅನಾಹುತಗಳು, ಸಮಾಜದಲ್ಲಿ ಮರ್ಯಾದೆ ಇರುವುದಿಲ್ಲ. ಖಿನ್ನತೆಗೆ ಒಳಗಾಗುವರು. ಸಂಸಾರಗಳು ಹಾಳಾಗುವವು.
ಸ್ನೇಹಿತರೇ, ಈ ಆಕರ್ಷಣೆ ಎಂಬ ಬಲೆಯಲ್ಲಿ ಸಿಕ್ಕಿ ಎಷ್ಟೆಲ್ಲಾ ತೊಂದರೆಗಳಿಗೆ ಬಲಿಯಾಗುತ್ತೇವೆ. ಆಕರ್ಷಣೆಗೆ ನಿರ್ದಿಷ್ಟವಾದ ನಿರೂಪಣೆ ಇಲ್ಲ. ಕೆಲವರು ಇದನ್ನು ಸಿದ್ಧಾಂತದ ಮೂಲಕ ವಿಸ್ತರಿಸಿದರೆ, ನಾನು ವೈಜ್ಞಾನಿಕವಾಗಿ ತಿಳಿಸಲು ಪ್ರಯತ್ನಿಸುವೆ. ರಾಸಾಯನಿಕ ಕ್ರಮಗಳಿಂದ ನರಮಂಡಲ, ನರವ್ಯೂಹ, ನರಕ್ಷೇತ್ರ ಮತ್ತು ನರ ರಚನೆಗಳಲ್ಲಿ ಬದಲಾವಣೆಯ ಕಾರಣದಿಂದ ಆಗಬಹುದಾದ ಕಾರ್ಯಗಳನ್ನು ನೋಡಬೇಕಾಗಿದೆ.
ಬಹಳಷ್ಟು ರಸಾಯನಿಕ ವಸ್ತುಗಳನ್ನು ಮತ್ತು ಅದರ ಕಾರ್ಯವೈಖರಿಯನ್ನು ನರ ವಿಜ್ಞಾನಿಗಳು ತಿಳಿಸಿರುವರು. ಇಲ್ಲಿ ನಾನು ಮುಖ್ಯವಾಗಿ ಎರಡು ರಸಾಯನಿಕ ವಸ್ತುಗಳನ್ನು ಪ್ರಸ್ತಾಪ ಮಾಡುವೆ. ಇದು ಗಣಿತದ ಸೂತ್ರದಂತೆ ಇರುವುದು.
ಹೇಗೆಂದರೆ:
Adrenaline (Dopamine) – ಕಾಮ ಪ್ರಚೋದಿಸುವ ರಸಾಯನಿಕ ವಸ್ತು
Serotinine – ಕಾಮದ ಗೀಳು, ಕಾಮದ ಬಿಂಬ, ಕಾಮದ ಯೋಚನೆ, ಕಾಮ ತೀರಿಸಿಕೊಳ್ಳುವ ಕಾತುರಗಳಿಗೆ ಸಂಬಂಧಪಟ್ಟ ರಸಾಯನಿಕ ವಸ್ತು.
ಔಷಧಿ ಮತ್ತು ಮನೋ ವಿಶ್ಲೇಷಣೆ, ವಾಕ್ ಚಿಕಿತ್ಸೆ, ನಡವಳಿಕೆ ಚಿಕಿತ್ಸಾ ಪದ್ಧತಿಗಳಿಂದ ಚೇತರಿಸಿಕೊಳ್ಳುವ ಚಿಕಿತ್ಸಾ ವಿಧಾನಗಳಿವೆ. ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ ಮತ್ತು ಈ ಮೇಲೆ ಹೇಳಿದ ಘಟನೆಗಳಂತಹ ತೊಂದರೆ ಕಂಡು ಬಂದಲ್ಲಿ ಮನೋವೈದ್ಯರನ್ನು ಕಾಣಲು ಸಲಹೆ ನೀಡಿ.
ಸರ್ವೇ ಜನೋ ಸುಖಿನೋ ಭವಂತು.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ