ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಹುಚ್ಚು ಕೋಡಿಯ ಮನಸು…!!!
ಹಿರಿಯರು ಯುವ ಪೀಳಿಗೆಯನ್ನು ಕಮಂಗಿಗಳಿಗೆ ಹೋಲಿಸಿದ್ದಾರೆ. ಇದಕ್ಕೆ ನಾನೂ ಸೇರಿದಂತೆ ಬಹುತೇಕ ಯಾರೂ ಹೊರತಲ್ಲ.
ನಾನು ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಾಗ, ನಮ್ಮ ಕಾಲೇಜಿನ ಯಾವುದೇ ಸಮಸ್ಯೆಗಳನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದ ವಿದ್ಯಾರ್ಥಿಗಳಲ್ಲಿ ನಾನೇ ಮೊದಲಿಗ. ಆ ಕಾರಣದಿಂದ ನನ್ನ ಆದರಣೀಯ ಪ್ರಾಂಶುಪಾಲರು “What Bird?” ಎಂದೇ ಸಂಬೋಧಿಸುತ್ತಿದ್ದರು. ಆಗ ಅವರ ಆ ಪದದ ಅರ್ಥವನ್ನು ತಿಳಿಯುವ ಗೋಜಿಗೆ ಹೋಗಿರಲಿಲ್ಲ. ಈಗ ಅದನ್ನು ಮೆಲುಕು ಹಾಕಿದಾಗ ಯೌವ್ವನದಲ್ಲಿ ನಾವು ಕಾಲಿನ ಮೇಲೆ ನಿಂತಿರಲಿಲ್ಲ. ಇದರಿಂದ ಎಷ್ಟೋ ಯುವಕರು ಹಾರುವ ಯತ್ನದಲ್ಲಿ ರೆಕ್ಕೆ ಮತ್ತು ಕಾಲುಗಳನ್ನು ಮುರಿದುಕೊಂಡು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಂಡರು.
ನಾನು ಅದೇ ಮಹಾವಿದ್ಯಾಲಯದಲ್ಲಿ ಓದುತ್ತಿದ್ದಾಗ ನಡೆದ ನನ್ನ ಸ್ವ ಅನುಭವವನ್ನು ನಿಮ್ಮೊಂದಿಗೆ ಅದರಲ್ಲೂ ವಿಶೇಷವಾಗಿ ಯುವಕರೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ನನ್ನ ಆ ಕಾಲೇಜು ಇದ್ದುದು ಬರಗಾಡು ಪ್ರದೇಶವಾದ್ದರಿಂದ ಸದಾ ಸುಡು ಬಿಸಿಲು. ಹಾಗಾಗಿ ನನ್ನ ಸಹಪಾಠಿಗಳಿಗೆಲ್ಲಾ ನೀರಿನಲ್ಲಿ ಇಳಿಯುವ ಮತ್ತು ಈಜುವ ಅಭ್ಯಾಸ. ನನಗೆ ಈಜು ಬರುತ್ತಿರಲಿಲ್ಲ ಮತ್ತು ಎಲ್ಲ ಯುವಕರಂತೆಯೇ ಮೆದುಳು ಪಕ್ವಗೊಂಡಿರಲಿಲ್ಲ. ಅಸಹಜ ಧೈರ್ಯ, ಸ್ವಂತ ಬುದ್ಧಿ ಕಡಿಮೆ. ಏನಾಗುತ್ತೆ ಆಗಿಯೇ ಬಿಡಲಿ ಎಂಬ ಹುಂಬತನ.
ಸ್ನೇಹಿತರ ಒತ್ತಾಯದ ಮೇರೆಗೆ ಒಮ್ಮೆ ಕಾಲೇಜಿನ ಸನಿಹವಿದ್ದ ತೆರೆದ ಬಾವಿಯ ಕಡೆ ಹೋದೆ. ಕಟ್ಟೆಯ ಮೇಲೆ ಕೂತ ನಾನು, ಸ್ನೇಹಿತರು ಮೇಲಿನಿಂದ ಜಿಗಿಯುವ ಮನೋಹರ ನೋಟ, ಮೀನಿನಂತೆ ಈಜುವ ಸೊಬಗನ್ನು ನೋಡಿ ಆಕರ್ಷಿತನಾದೆ. ಈಜು ಬಾರದಿದ್ದರಿಂದ ನೀರಿಗಿಳಿಯುವ ಸಾಹಸ ಮಾಡಲಿಲ್ಲ. ಆದರೆ ಸ್ನೇಹಿತರು ಬಿಡಬೇಕಲ್ಲ. ಬಲವಂತದಿಂದ ನೀರಿಗೆ ಕೆಡವಿದರು. ಸುಮಾರು ಇಪ್ಪತ್ತು ಅಡಿ ಆಳ, ಕದಡಿದ ನೀರಾದ್ದರಿಂದ ದೃಷ್ಟಿ ಮಂಜಾದಂತಿತ್ತು.
ಒಮ್ಮೆಲೇ ಕೈಕಾಲು ನಡುಕ, ಭಯ, ಮೂಗು ಕಟ್ಟಿದಂತಾಗಿ ಉಸಿರಾಟ ಕಡಿಮೆಯಾದ ಅನುಭವವಾಯಿತು. ಅಲ್ಲೇ ನನ್ನ ಜೀವ ಹೋಯಿತು ಅನ್ನುವಷ್ಟರಲ್ಲಿ ನನ್ನನ್ನು ಗಮನಿಸಿದ ಸ್ನೇಹಿತ ಈಜಿನಲ್ಲಿ ನಿಪುಣನಾಗಿದ್ದರಿಂದ ನನ್ನನ್ನು ಮೇಲೆ ಎಳೆದು ತಂದು ಕಟ್ಟೆಯ ಮೇಲೆ ಕೂರಿಸಿ ಎಚ್ಚರಿಸಿದ. ಅದು ನನ್ನ ಮರುಜನ್ಮ. ಇಂತಹ ಯುವ ಚೇಷ್ಟೆಗಳಿಂದ ಸಂಭವಿಸಿದ ಅವಘಡದ ಪ್ರಕರಣಗಳನ್ನು ಮಾಧ್ಯಮಗಳಲ್ಲಿ ವೀಕ್ಷಿಸಿದಾಗಲೆಲ್ಲಾ ಆ ನನ್ನ (ಪ್ರಾಣ) ಸ್ನೇಹಿತನನ್ನು ಸ್ಮರಿಸುವೆನು.

ಸ್ನೇಹಿತರೇ, ಯುವಕರನ್ನು ಕಮಂಗಿಗಳಿಗೆ ಹೋಲಿಸಲು ಇರುವ ವೈಜ್ಞಾನಿಕ ಕಾರಣದ ಕಡೆಗೆ ಗಮನ ಹರಿಸೋಣ. ನಮ್ಮ ನರವ್ಯೂಹ ಕೋಶಗಳಲ್ಲಿ ಚಿಕ್ಕದು ಮತ್ತು ದೊಡ್ಡದು ಇರುವವು. ಇಲ್ಲಿ ದೊಡ್ಡದು ಅನ್ನುವುದು ಗಾತ್ರದಲ್ಲಿಲ್ಲ, ಉದ್ದದಲ್ಲಿ ಇದನ್ನು ನರವೈದ್ಯ ಗ್ರಂಥಗಳಲ್ಲಿ NEURON ಎನ್ನುವರು.
ಈ NEURON ಒಂದು ನರಕ್ಷೇತ್ರ. ಪುಂಜ ಮತ್ತು ಪಟಲದಿಂದ ಮತ್ತೊಂದು ನರಮಂಡಲಕ್ಕೆ ವಿದ್ಯುತ್ ತರಂಗಗಳನ್ನು ರವಾನಿಸುವಿಕೆಯಲ್ಲಿ ಭಾಗಿಯಾಗಿರುತ್ತದೆ. ಇದರ ರಚನಾ ವ್ಯವಸ್ಥೆಯಲ್ಲಿ ಮಕ್ಕಳಿಂದ ದೊಡ್ಡವರವರೆಗೂ ವಿಭಿನ್ನವಾಗಿರುತ್ತದೆ. ಮಕ್ಕಳ ಉದ್ಧಟತನ, ಹಟ, ಅವಲಂಬಿಸುವಿಕೆ, ಒಡೆತನ ಮನೊಭಾವ, ಅಹಂ ಯೋಜನೆಗಳಿಗೆ ಈ ನರಕೋಶಗಳಿಗೆ ಅಂಟಿದ ಮೀಸೆಗಳೇ ((Dendrites) ) ಕಾರಣ.
ಉದಾಹರಣೆಗೆ ಗುಲಾಬಿ ಕಡ್ಡಿಗೆ ಮುಳ್ಳು ಇರುವ ಹಾಗೆ. ಮಗು ಬೆಳೆದಂತೆ ಈ ಮೀಸೆಗಳು ಉದುರಿ ಜಾಣನಾಗುತ್ತ ಬರುವನು. ಕೆಲವೊಮ್ಮೆ ಈ ಮೀಸೆಗಳು ಹದಿಹರೆಯದಲ್ಲಿ ಉದುರದೆ ಇರುವುದರಿಂದ ಕಮಂಗಿಗಳಂತೆ ವರ್ತಿಸುತ್ತಾರೆ. ಮನೆಯಲ್ಲಿ ವಿದ್ಯುತ್ Short Circuit (Looping) ಆದಂತೆ ಇದ್ದ ವಸ್ತುಗಳೆಲ್ಲಾ ಹೇಗೆ ನಾಶವಾಗುವವೊ ಹಾಗೆಯೇ ಈ ಮೀಸೆಗಳಿಂದ ಗ್ರಹಿಕೆಯು ಸಂಯೋಜನಾ ಸ್ಥಿತಿಗೆ ಬಾರದೆ ಅಥವಾ ಸಂಯೊಜನಾ ಮಂಡಲಕ್ಕೆ ಮುನ್ನವೇ ವಿವೇಕಕ್ಕೆ ಬಾರದೆ ಮಂಗಗಳಂತೆ ವರ್ತಿಸುತ್ತಾರೆ. ಈ ರೀತಿಯ ವರ್ತನೆಯಿಂದ ಮನಸ್ಸು, ಮನೆ ಮತ್ತು ದೇಶವೇ ಹಾಳಾಗುವ, ಆತಂಕಕ್ಕೀಡಾಗುವ ಸಂಭವವುಂಟು ಎಂಬುದನ್ನು Jean Pieoget ಎಂಬ ಅಭಿವೃದ್ಧಿ ಮನಶಾಸ್ತ್ರಜ್ಞಾನು ಉಲ್ಲೇಖಿಸಿರುವರು.

ಇದಕ್ಕೆ ಇನ್ನೊಂದು ಕಾರಣವೆಂದರೆ, ನಿಮಗೆ ಗೊತ್ತಿರಬಹುದು. ಹಿಂದೆ Gold Rush’ ’ ಮತ್ತು ‘‘Diamond Rush’ ’ ಎಂಬುದು. ಹಾಗೆಯೇ ಯುವಕರಲ್ಲಿ Adrenal Rush ಆಗುವುದರಿಂದ ಅವರು ಕೋತಿಗಳಾಗಿ ಬಿಡುತ್ತಾರೆ. ಈ ನರರಸ Gland Adrenal ಅನ್ನುವ ಗ್ರಂಥಿಯಿಂದ ಉತ್ಪತ್ತಿಯಾಗುವುದು. ಇದು ನರ ಪ್ರಚೋದನಾಕಾರಿ ಹಾಗೂ ಜೀವನೋಪಕಾರಿ. ಇದರಿಂದ ಯುವಕರಲ್ಲಿ ಛಲವುಳ್ಳವನಾಗಿ, ಹುಡುಗಿಯರ ಮುಂದೆ ಶ್ರೇಷ್ಠರಾಗಿಬಿಡುತ್ತಾರೆ. ಅವರ ಗಮನವನ್ನು ಸೆಳೆಯುವ ಪುಂಡಾಟಿಕೆ, ಮೀರಿದ ತುಂಟಾಟಿಕೆ ಕಾಣಿಸಿಕೊಳ್ಳುವುದು.
ಇಂತಹ ಸ್ಥಿತಿಯಲ್ಲಿ ಅನ್ವೇಷಣೆಗೆ ತೊಡಗುವರು. ಇದು ಜ್ಞಾನದ ದಾರಿ ಬಿಟ್ಟು ಬೇಡದ, ಇಲ್ಲದ ದಾರಿಗಳನ್ನು ಹುಡುಕುತ್ತಾ ಹೋಗುವರು. ಈ ಸನ್ನಿವೇಶದಲ್ಲಿ ಚಾರಣವೂ ಒಂದು. ಅರಿವಿದ್ದ ಚಾರಣ ಜಾನನಿಗೆ, ಅರಿವಿಲ್ಲದ ಚಾರಣ ಭಂಡನಿಗೆ ಹೀಗೆ ರಾಸಾಯನಿಕ ಉತ್ಪನ್ನಗಳು ಅರಿವಿಲ್ಲದೆ ಕೆಲಸ ಮಾಡುತ್ತವೆ. ಇತ್ತೀಚೆಗೆ ತಾಂತ್ರಿಕ ವಿದ್ಯಾರ್ಥಿಯೊಬ್ಬ ನಮ್ಮ ಜಿಲ್ಲೆಯ ನಿಗೂಢವಾದ ಕಾಡಿನ ಚಾರಣದಲ್ಲಿ ಸಾವಿಗೀಡಾದ. ಇಂಥ ಎಷ್ಟೋ ಘಟನೆಗಳು ನಡೆಯುತ್ತಿರುತ್ತವೆ. ಪ್ರಿಯ ಯುವಕರೇ ಚಾರಣದಂತಹ ಸಾಹಸಗಳಿಗೆ ಮುಂದಾಗುವ ಮುನ್ನ ಹಿರಿಯರ ಮಾರ್ಗದರ್ಶನ, ಸಲಹೆ ಮತ್ತು ಇಂತಹ ಬರಹಗಳನ್ನು ಮತ್ತೊಮ್ಮೆ ಗಮನಿಸಿ.
‘ಯುವಕರೇ ದೇಶದ ಆಸ್ತಿ’ ಎಂಬುದು ಸದಾ ಮನದಲ್ಲಿರಲಿ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

