
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಬುದ್ಧಿ ಭ್ರಮಣೆ (Schizophrenia)
ಮೊನ್ನೆ ಪ್ರಮುಖ ಪತ್ರಿಕೆಯೊಂದರಲ್ಲಿದ್ದ ‘ಶೀಲ ಶಂಕಿಸಿದ ಪತಿಯು, ಪತ್ನಿಯನ್ನು ಸಜೀವ ದಹಿಸಿದನು’ ಎಂಬ ಸುದ್ದಿ ನನ್ನ ಮನ ಕಲಕಿತು ಹಾಗೂ ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಪ್ರಕರಣವೊಂದನ್ನು ನೆನಪಿಗೆ ತರಿಸಿತು.
ಎರಡು ಮಕ್ಕಳಿರುವ ನಲವತ್ತರ ಪ್ರಾಯದ ಸರ್ಕಾರಿ ನೌಕರಿಯಲ್ಲಿರುವ ಒಬ್ಬಾತ ನನ್ನ ಸ್ನೇಹಿತನ ಚರ್ಮ ರೋಗ ಚಿಕಿತ್ಸಾಲಯಕ್ಕೆ ಬಂದು, ಸಲಹಾ ಕೊಠಡಿಯ ಮೇಜಿನ ಮೇಲೆ ಹಾಸಿದ ಗಾಜನ್ನು ಪುಡಿಪುಡಿ ಮಾಡಿ, ಅಲ್ಲಿದ್ದ ವಸ್ತುಗಳನ್ನು ಜಖಂಗೊಳಿಸಿ, ದೊಡ್ಡ ರಂಪಾಟವನ್ನೇ ಮಾಡಿದ್ದ. ಸ್ನೇಹಿತನ ಫೋನ್ ಕರೆಯ ಮೇರೆಗೆ ಹೋದ ನಾನು ಗಾಬರಿಯಿಂದಿದ್ದ ಸ್ನೇಹಿತನನ್ನು ಸಮಾಧಾನಿಸಿ, ಬಂದಿದ್ದ ಆ ವ್ಯಕ್ತಿಯನ್ನು ಪುಸಲಾಯಿಸಿ ಹೊರ ಕಳುಹಿಸಿದೆವು.
ನಮ್ಮಿಬ್ಬರಿಗೂ ಈ ರಂಪಾಟಕ್ಕೆ ಸ್ಪಷ್ಟ ಕಾರಣ ತಿಳಿಯಲಿಲ್ಲ. ಆ ವ್ಯಕ್ತಿಯಾಗಲೀ, ಅವರ ಕಡೆಯವರಾಗಲೀ ನಮ್ಮ ಕಡೆ ಸುಳಿಯಲಿಲ್ಲ.
ಸುಮಾರು ನಾಲ್ಕೈದು ತಿಂಗಳ ನಂತರ ಮಧ್ಯ ವಯಸ್ಸಿನ ಹೆಂಗಸೊಬ್ಬಳನ್ನು ನನ್ನ ಸ್ನೇಹಿತನು ನನ್ನಲ್ಲಿಗೆ ಸಲಹೆಗೆಂದು ಶಿಫಾರಸ್ಸು ಮಾಡಿದ್ದ. ನಂತರ ತಿಳಿಯಿತು, ಆಕೆ ಅಂದು ರಂಪಾಟ ಮಾಡಿದ್ದವನ ಹೆಂಡತಿ ಎಂದು. ಆಕೆಯ ಮನವಿಯೆಂದರೆ, ‘ಡಾಕ್ಟ್ರೇ ಬದುಕಿದ್ದಾಗ ಎಷ್ಟೇ ಪ್ರಯತ್ನಿಸಿದರೂ ಯಜಮಾನರನ್ನು ಕರೆತರಲು ಸಾಧ್ಯವಾಗಲಿಲ್ಲ. ಅವರು ‘ನನಗೇನಾಗಿದೆ? ಹುಚ್ಚು ನಿಮಗೆ ಹಿಡಿದಿರಬೇಕು, ಬೇಕಿದ್ದರೆ ಹೋಗಿ ತೋರಿಸಿಕೊಳ್ಳಿ ಎಂದೆಲ್ಲಾ ಬೊಬ್ಬೆ ಇಡುತ್ತಿದ್ದರು. ನಿದ್ರೆ ಇಲ್ಲ, ಭಯ ಮತ್ತು ಅನುಮಾನ ಆವರಿಸಿತ್ತು. ಕಿಟಕಿ ಮತ್ತು ಬಾಗಿಲು ಕಡೆ ಮುಖ ಮಾಡಿ ಕುಳಿತು ಬಾಗಿಲು ಹಾಕಿಕೊಳ್ಳಿ ಎಂದು ಕಿರುಚುತ್ತಿದ್ದರು. ನನ್ನ ಶೀಲದ ಬಗ್ಗೆಯೂ ಅವರಿಗೆ ಅನುಮಾನ ಇತ್ತು. ನೋಡಿ ನನ್ನ ಕೈ ಬೆರಳುಗಳನ್ನು’ ಎಂದು ಆಕೆ ತನ್ನ ಬೆರಳನ್ನು ತೋರಿಸಿದಳು. ನಾನು ನೋಡಿ ಅಚ್ಚರಿಗೊಂಡೆ.
ಖಾರ ರುಬ್ಬುವ ಗುಂಡು ಕಲ್ಲಿನಿಂದ ಆತ ಜಜ್ಜಿದ್ದ. ಮೂಳೆ ಮುರಿದು ವಾಸಿಯಾಗುತ್ತಿದ್ದ ಕಲೆಗಳಿದ್ದವು. ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವಳೆಂಬ ಅಸಹಜ ಅನುಮಾನ, ಹೊರಗಿನಿಂದ ಮನೆಗೆ ಬಂದೊಡನೆ ಅವಳ ಹಾವಭಾವ, ಉಡುಗೆಗಳನ್ನು ಗಮನಿಸುವುದು ಮತ್ತು ಪರಿಶೀಲನೆ ಮಾಡುವುದು, ನನ್ನನ್ನು ಹಿಂಬಾಲಿಸುತ್ತಿದ್ದಾರೆ. ಅವರ ವಿಷಯಗಳು ಆಕಾಶವಾಣಿ, ದೂರದರ್ಶನ ಮತ್ತು ದಿನಪತ್ರಿಕೆಗಳಲ್ಲಿ ಬರುತ್ತಿದೆ, ಯಾರೋ ನಿಗೂಢ ಯಂತ್ರಗಳಿಂದ ನಿಯಂತ್ರಿಸುತ್ತಿದ್ದಾರೆ ಅನ್ನುವ ನಿರ್ಧಾರ ಮನೋಭಾವ.
ಪ್ರತಿದಿನ ನಡವಳಿಕೆಯನ್ನು ಮೂರನೇ ವ್ಯಕ್ತಿ ಆತನ ಕಿವಿಯಲ್ಲಿ ಅಶರೀರವಾಣಿ ಮುಖಾಂತರ ನುಡಿದಂತೆ, ಕೇಳಿಸಿದಂತೆ ಆಗುತ್ತದೆಂದು ಹೇಳುತ್ತಿದ್ದರು. ಈ ಅಶರೀರವಾಣಿಯ ನುಡಿಗಳು ಬೈಗುಳ, ನಿಂದನೆ, ಆಜ್ಞೆ ಮತ್ತು ಪ್ರೇರಣೆಗಳೆಂದು ತಿಳಿಯಬಹುದಾಗಿದೆ. ಇಂತಹ ಆಜ್ಞೆಯಿಂದ ಬಹುಶಃ ಆತನು ನಗರದ ಸರ್ಕಾರಿ ಆಸ್ಪತ್ರೆಯ ಮೂರನೇ ಮಹಡಿಯಿಂದ ನೆಗೆದು ಆತ್ಮಹತ್ಯೆ ಮಾಡಿಕೊಂಡಿದ್ದ. ನನ್ನಲ್ಲಿ ಆತನ ಹೆಂಡತಿಯು ಪ್ರಮಾಣ ಪತ್ರ ಕೇಳಲು ಬಂದಿದ್ದಳು. ನಂತರ ಅನುಕಂಪದ ಮೇರೆಗೆ ಆಕೆಗೆ ಅದೇ ಸರ್ಕಾರಿ ಇಲಾಖೆಯಲ್ಲಿ ಉದ್ಯೋಗ ದೊರೆಯಿತು. ಅದು ಬೇರೆಯ ವಿಷಯ.

ಇಲ್ಲಿ ನಮೂದಿಸಿದ ಲಕ್ಷಣಗಳನ್ನು ಬುದ್ಧಿ ವಿಕಲ್ಪ ಅಥವಾ ಬುದ್ಧಿ ವಿಕಲ್ಪತೆ ಎಂದು ಕರೆಯಬಹುದು. ಮನೋ ವಿಜ್ಞಾನದಲ್ಲಿ ಇದನ್ನು ಅನುಮಾನದ ಚಿತ್ತ ಭ್ರಮಣೆ ( Paronoid schizophrenia ) ಎಂದು ಕರೆಯುವರು. ಈ ವ್ಯಾಧಿಯನ್ನು ಬಹು ಬೇಗ ಗುರುತಿಸಿ, ಮನೋವೈದ್ಯರಲ್ಲಿ ತೋರಿದರೆ ಶೇ.8೦-೧೦೦ರವರೆಗೆ ವಾಸಿ ಮಾಡಬಹುದು. ವಾಸ್ತವದಲ್ಲಿ ಇದನ್ನು ಗುರುತಿಸುವುದು ಸ್ವಲ್ಪ ಕಷ್ಟಕರ. ಗುರುತಿಸಿದರು ಮೌಢ್ಯತೆಯಿಂದ ದೇವರು, ಶರಣರು ಮತ್ತು ವಾಮಾಚಾರರಲ್ಲಿ ತೋರಿಸಿ, ಇಲ್ಲದ ಕಷ್ಟಗಳನ್ನು ಅನುಭವಿಸುವರು.
ಸಂಕ್ಷಿಪ್ತವಾಗಿ ಈ ತರಹದ ವ್ಯಾಧಿಯಲ್ಲಿ ನಾಲ್ಕು ಭಾಗಗಳಾಗಿ :
೧) Simple schizophrenia (ಸಾಮಾನ್ಯ ಮನೋಭ್ರಾಂತಿ)
೨)Paronoid schizophrenia (ಅನುಮಾನ ಮನೋಭ್ರಾಂತಿ)
೩)Hebephrenic schizophrenia (ಹದಿಹರೆಯದವರ ಮನೋಭ್ರಾಂತಿ)
೪) Catatonic schizophrenia (ನಿಸ್ತಂತುವಿನ ಮನೊಭ್ರಾಂತಿ) ಗಳೆಂದು ವಿಂಗಡಿಸಬಹುದು.
ಸಾಮಾನ್ಯ ಮನೋಭ್ರಾಂತಿ :
ಈ ವ್ಯಾಧಿಯ ಲಕ್ಷಣಗಳೆಂದರೆ, ನಿಲುಕದ ಪ್ರಶ್ನೆಗಳನ್ನು ಕೇಳುವುದು, ಅಸಂಬದ್ಧ ಉತ್ತರಗಳನ್ನು ನೀಡುವುದು, ಏಕಾಂಗಿತನವನ್ನು ಬಯಸುವುದು, ಮೌನವಾಗಿರುವುದು, ನಿತ್ಯ ಕರ್ಮಗಳಲ್ಲಿ ನಿರಾಸಕ್ತಿ, ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವುದು, ಗೊಣಗುವುದು, ನಗುವುದು ಕಂಡು ಬರುತ್ತದೆ. ಇಂತಹವರಿಂದ ಯಾವುದೇ ತೊಂದರೆಗಳು ಆಗದಿದ್ದರೂ ಇಚ್ಛಾಶಕ್ತಿಯ ಕೊರತೆಯಿರುವುದರಿಂದ ಕುಟುಂಬದವರಿಗೆ ಪರಾವಲಂಬಿ ಗಳಾಗಿರುತ್ತಾರೆ. ಇದು ಪ್ರೌಢಾವಸ್ಥೆಯಲ್ಲಿ ಲಿಂಗ ಭೇದವಿಲ್ಲದೆ ಕಾಣಿಸಿಕೊಳ್ಳುವ ವ್ಯಾಧಿಯಾಗಿದೆ.
ಅನುಮಾನ ಮನೋಭ್ರಾಂತಿ :
ಇದರಿಂದ ಸಮಾಜ ಮತ್ತು ಕುಟುಂಬಕ್ಕೆ ಮಾರಕವಾಗುತ್ತದೆ. ಇದರಿಂದ ಅನೇಕ ಅನಾಹುತಗಳು ಆಗುವುದು. ‘ಅನುಮಾನಂ ಪೆದ್ದ ರೋಗಂ’ ಎನ್ನುವಂತೆ ನರ ಕೇಂದ್ರ ಮತ್ತು ಪುಂಜಗಳಲ್ಲಿ ನರ ರಸ ವರ್ತನೆಗಳು ಪಲ್ಲಟಗೊಂಡಾಗ ಆಗುವ ಈ ಮನೋಭ್ರಾಂತಿ ಅಥವ ಮನೊ ವಿಕಲತೆ ಸುಲಭವಾಗಿ ವೈದ್ಯೋಪಚಾರಕ್ಕೆ ಸಿಲುಕದು. ಅಸ್ವಾಭಾವಿಕ ನಂಬಿಕೆಗೆ ಅನರ್ಹರಾದ್ದರಿಂದ ಚಿಕಿತ್ಸೆಗೆ ಸ್ಪಂದಿಸರು. ಸ್ವ ಇಚ್ಛೆಯಿಂದ ಚಿಕಿತ್ಸೆಗೆ ಬಾರದಿರುವುದರಿಂದ ಒತ್ತಾಯವಾಗಿ ಕರೆ ತರಬೇಕಾಗುವುದು. ಅನುಮಾನ, ಅಸಾಮಾನ್ಯ ಯೋಚನೆ, ಅಸಹಜ ನಡವಳಿಕೆ ಇವರಲ್ಲಿ ಗೋಚರಿಸುತ್ತದೆ.
ಉದಾಹರಣೆಗೆ :
ಅಗೋಚರ ಮತ್ತು ಕಾಲ್ಪನಿಕ ವ್ಯಕ್ತಿಗಳ ಮೇಲೆ ನ್ಯಾಯಾಲಯಕ್ಕೆ ಮೊರೆ ಹೋಗುವುದು, ಆರಕ್ಷಕ ಠಾಣೆಯಲ್ಲಿ ಮೊಕದ್ದಮೆ ದಾಖಲಿಸುವುದು, ಇತರರಿಗೆ ನಂಬಿಸುವುದರಲ್ಲಿ, ಉಲ್ಲೇಖಿಸುವುದರಲ್ಲಿ ಮತ್ತು ಮಾತನಾಡುವುದರಲ್ಲಿ ನಿಪುಣತೆಯನ್ನು ಹೊಂದಿರುತ್ತಾರೆ. ಅಲ್ಲದೆ ಅಸಹಜ ಒಂದೇ ಅನುಮಾನದ ಚಿತ್ತ ಭ್ರಮಣೆ (Single paranoid) ಇವರಲ್ಲಿ ತರ್ಕಕ್ಕೆ ನಿಲುಕದ ಪ್ರೇಮಾಂಕುರವನ್ನು ಕಾಣಬಹುದು. (Delusion of love). . ಹೆಂಡತಿಯ ಬಗ್ಗೆ, ಆಕೆಯ ಶೀಲದ ಬಗ್ಗೆ ಅನುಮಾನವನ್ನು ಕುಡುಕ ಮಹಾಶಯರಲ್ಲೂ ಕಾಣಬಹುದು. ಪೀಡಕರು(Stalkers) ಸಹ ಇಂತಹವರಲ್ಲಿ ಒಬ್ಬರು. ಚೀಟಿ, ಅಂತರ್ಜಾಲ ಮತ್ತು ದೂರವಾಣಿಗಳು ಇವರ ಅಸ್ತ್ರಗಳಾಗಿರುತ್ತವೆ. ಈ ವ್ಯಾಧಿಯು ಲಿಂಗಭೇದವಿಲ್ಲದೆ (ಗಂಡಸರಲ್ಲೇ ಹೆಚ್ಚು) 3೦ ರಿಂದ 4೦ ವಯಸ್ಸಿನಲ್ಲಿ ಕಾಣಬಹುದಾಗಿದೆ. ಇಂತಹವರಿಗೆ ಚಿಕಿತ್ಸೆ ಫಲಕಾರಿಯಾಗುವುದು.
ಹದಿಹರೆಯದವರ ಮನೋಭ್ರಾಂತಿ :
ಇದೊಂದು ಅಪರೂಪದ ಚಿತ್ತ ಭ್ರಮಣೆಯಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹದಿಹರೆಯದ ಹುಡುಗಿಯರಲ್ಲಿ ಕಾಣಿಸಿಕೊಳ್ಳುವ ವ್ಯಾಧಿ. ಇದರಲ್ಲಿ ಅಸಹಜ ವೇಷಭೂಷಣ, ತಾಸುಗಟ್ಟಲೇ ಪುನಃ ಪುನಃ ಕನ್ನಡಿ ಮುಂದೆ ನಿಂತುಕೊಳ್ಳುವುದು, ಹಠಮಾರಿತನ, ಗೊಂಬೆ ರೀತಿಯಲ್ಲಿ ನಿಂತುಕೊಳ್ಳುವುದು ಮತ್ತು ಕೂರುವುದನ್ನು ಗಮನಿಸಬಹುದು. ಚಿಕಿತ್ಸೆಗೆ ಸ್ಪಂದಿಸಿದರೂ, ಸಂಪೂರ್ಣ ಗುಣಮುಖವಾಗದೆ ಅಲ್ಪ ಮಟ್ಟಿನ ವ್ಯಾಧಿ ಉಳಿದುಕೊಳ್ಳುವುದು.
ನಿಸ್ತಂತುವಿನ ಮನೋಭ್ರಾಂತಿ :
ಇದು ಸಹ ತುಂಬಾ ವಿರಳ. ಪುತ್ಥಲಿಯಂತೆ ನಿಲ್ಲುವುದು ಮತ್ತು ಸದಾ ನಿದ್ರಾವಸ್ಥೆಯಲ್ಲಿರುವಂತಹ ಲಕ್ಷಣಗಳನ್ನು ಕಾಣಬಹುದು. ಇದು ಸಾಮಾನ್ಯವಾಗಿ ಗಂಡಸರಲ್ಲಿ ಕಾಣಿಸಿಕೊಳ್ಳುವ ವ್ಯಾಧಿಯಾಗಿದ್ದು, ಚಿಕಿತ್ಸೆಗೆ ಶೇ. 1೦೦ ರಷ್ಟು ಸ್ಪಂದಿಸುತ್ತದೆ.
ಸ್ನೇಹಿತರೇ, ಈ ಮೇಲಿನ ಲಕ್ಷಣಗಳುಳ್ಳವರು ನಿಮ್ಮ ಅಕ್ಕ ಪಕ್ಕದಲ್ಲೇ ಇದ್ದರೂ, ಕೆಲವೊಮ್ಮೆ ನಾವು ಗಮನಿಸಿರುವುದಿಲ್ಲ. ಇಂತಹವರನ್ನು ಕಂಡಾಗ, ಕೇಳಿದಾಗ ಸಮೀಪದ ಮನೋ ವೈದ್ಯರಲ್ಲಿ ತೋರಿಸಿದರೆ ಅವರಿಗು, ಅವರ ಕುಟುಂಬದವರಿಗೂ ಸಹಾಯ ಮಾಡಿದಂತೆ ಆಗುತ್ತದೆ. ಅಲ್ಲವೇ?
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ