
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಖಿನ್ನತೆಗೆ ಬಹುಮುಖ
ಅರ್ಧ ಆಯಸ್ಸನ್ನು ಮನೋವೈದ್ಯನಾಗಿ ಕಳೆದಿರುವ ನನ್ನಲ್ಲಿ ಮಾನಸಿಕ ರೋಗಕ್ಕೆ ಸಂಬಂಧಿಸಿದಂತೆ ಬಹುತೇಕ ಎಲ್ಲಾ ರೀತಿಯ ರೋಗಿಗಳೂ ಬಂದಿದ್ದಾರೆ, ಗುಣಮುಖರಾಗಿದ್ದಾರೆ, ಸಂತೋಷವಾಗಿದ್ದಾರೆ. ನಾ ಕಂಡ ಹಲವಾರು ಘಟನೆಗಳಲ್ಲಿ ಕೆಲವೊಂದು ನಿಮ್ಮಲ್ಲಿ ಹಂಚಿಕೊಳ್ಳಬಯಸುತ್ತೇನೆ.
ಎಂದಿನಂತೆ ಸಲಹಾ ಕೊಠಡಿಯೊಳಗೆ ರೋಗಿಯೊಬ್ಬರ ಜೊತೆ ಆಪ್ತ ಸಮಾಲೋಚನೆಯಲ್ಲಿದ್ದಾಗ ಹೊರಗೆ ಜೋರು ಅಳು, ಏರಿದ ಧ್ವನಿಯ ಮಾತು, ಗದ್ದಲ ಒಮ್ಮೆಲೇ ಕೇಳಿಸಿತು. ಅಷ್ಟರಲ್ಲಿ ಆಯಾ ಬಂದು ‘ಸರ್ ಎಮರ್ಜೆನ್ಸಿ’ ಅಂದಳು. ತಕ್ಷಣವೇ ಪರೀಕ್ಷಾ ಕೊಠಡಿಗೆ ಹೋಗಿ ನೋಡಿದೆ. ಸುಮಾರು ಮೂವತ್ತು ವರ್ಷದ ಹೆಂಗಸನ್ನು ಮಲಗಿಸಿದ್ದಾರೆ. ದುಃಖದ ಮಡುವಿನಲ್ಲಿದ್ದ ಕುಟುಂಬದವರನ್ನು ಸರಿಸಿ ನೋಡಿದಾಗ ನಿರಂತರವಾಗಿ ಬಾಯಲ್ಲಿ ಉಸಿರು ತೆಗೆದುಕೊಳ್ಳುತ್ತಿದ್ದಳು. ಕೈಕಾಲು ಚೊಟ್ಟವಾಗಿದ್ದವು. ಆಕೆಯನ್ನು ಕುರಿತು ನಿಧನವಾಗಿ ಮೂಗಿನಲ್ಲಿ ಉಸಿರಾಡು ಎಂದೆ. ಹಾಗೇ ಮಾಡಿದಳು. ಕೆಲವೇ ಕ್ಷಣಗಳಲ್ಲಿ ಕೊಕ್ಕೆ ಹಿಡಿದಿದ್ದ ಕೈಕಾಲುಗಳು ಸರಿಯಾದವು. ಸ್ವಲ್ಪ ಸುಸ್ತಾದಂತೆ ಇದ್ದಳು. ಇವಳಿಗೆ ಅಪಸ್ಮಾರವಿದೆ, ಇದು ಆಸ್ಪತ್ರೆ ಕಾಯಿಲೆಯಲ್ಲ. ದೆವ್ವ ಹಿಡಿದಿರಬೇಕು. ದೇವಸ್ಥಾನಕ್ಕೆ ಕರೆದೊಯ್ದರೆ ಸರಿಯಾಗುತ್ತಾಳೆ ಎಂಬೆಲ್ಲಾ ಯೋಚನೆಯಲ್ಲಿದ್ದ ಅವರ ಸಂಬಂಧಿಕರಿಗೆ ಕೆಲವೇ ಕ್ಷಣದಲ್ಲಿ ಚೇತರಿಸಿಕೊಂಡಿದ್ದನ್ನು ಕಂಡು ಖುಷಿ ಮತ್ತು ಆಶ್ಚರ್ಯವಾಯಿತು.
ಈ ರೋಗಿಯ ಕಡೆಯವರನ್ನು ನನ್ನ ಸಲಹಾ ಕೊಠಡಿಗೆ ಕರೆದು ವಿಚಾರಿಸಿದಾಗ, ಆಕೆಯ ಕೌಟುಂಬಿಕ ಹಿನ್ನೆಲೆ ಹೀಗಿತ್ತು. ಈಕೆ ಐದು ಮಕ್ಕಳಲ್ಲಿ ಎರಡನೆಯವಳು. ನಾಲ್ಕು ಹೆಣ್ಣು ಮಕ್ಕಳ ನಂತರ ಒಂದು ಗಂಡು. ಮರ್ಯಾದಸ್ಥ ಹಾಗೂ ಆರ್ಥಿಕವಾಗಿ ಮಧ್ಯಮ ಕುಟುಂಬದಿಂದ ಬಂದವಳು. ಪಿ.ಯು.ಸಿ.ಯವರೆಗೆ ಕಲಿತಿರುವ ವಿದ್ಯಾವಂತೆ. ಚಿಕ್ಕಂದಿನಲ್ಲೇ ತಾಯಿ ತೀರಿಕೊಂಡಿದ್ದರಿಂದ ಮತ್ತು ಹಣಕಾಸಿನ ತೊಂದರೆಯಿಂದ ಓದು ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಐದನೇ ತರಗತಿಯವರೆಗೆ ಕಲಿತಿರುವ ಗಂಡ ಮತ್ತು ಇಬ್ಬರು ಮಕ್ಕಳಿದ್ದಾರೆ. ನೋಡಲು ಸುಂದರವಾಗಿರುವ ಈಕೆಯ ಗಂಡನ ಮನೆಯಲ್ಲಿ ಇವನೇ ಹಿರಿ ಮಗ. ಮೂರು ಜನ ತಮ್ಮಂದಿರು. ಎರಡನೇ ತಮ್ಮನಿಗೆ ಮಾತ್ರ ಮದುವೆಯಾಗಿದೆ. ಅವಿದ್ಯಾವಂತ ಹಳ್ಳಿಯ ಹುಡುಗಿ. ಮಾವ ಒಳ್ಳೆಯ ಮನುಷ್ಯ ಮತ್ತು ಸಾಧು. ಅತ್ತೆ ಎಲ್ಲರ ತಪ್ಪು ಕಂಡು ಹಿಡಿಯುವುದರಲ್ಲಿ ನಿಸ್ಸೀಮಳು. ಆದರೆ ಕೆಟ್ಟ ಭಾಷೆ ಬಳಸಿದವಳಲ್ಲ ಮತ್ತು ಹಿಂಸೆಯನ್ನು ಕೊಟ್ಟವಳಲ್ಲ.
ಆದರೆ ಅತ್ತೆಗೆ ಎರಡನೇ ಸೊಸೆಯೊಂದಿಗೆ ಬಾಂಧವ್ಯ ಹೆಚ್ಚು. ಕಾರಣ ಭಾಷೆ, ಜ್ಞಾನ ಮತ್ತು ಭಾವನೆ ಒಂದೇ. ಇವಳು ಜಾಣೆ, ಓದಿದವಳು. ಹಾಗಾಗಿ ಸ್ವಲ್ಪ ಅಂತರ ಹೆಚ್ಚು. ಗಂಡನೂ ಇವಳ ಮಾತನ್ನು ಅಷ್ಟಾಗಿ ತಲೆಗೆ ಹಾಕಿಕೊಳ್ಳುತ್ತಿರಲಿಲ್ಲ. ಯಾವುದೇ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿರಲಿಲ್ಲ. ಹಾಗಾಗಿ ಪರಸ್ಪರ ಅರ್ಥೈಸಿಕೊಳ್ಳುವುದರಲ್ಲಿಯೇ ಏಳೆಂಟು ವರ್ಷಗಳು ಕಳೆದೇ ಹೋದವು. ಮನೆಯಲ್ಲಿ ದೊಡ್ಡ ಹಬ್ಬ, ಹರಿದಿನ, ಮದುವೆಯಂತಹ ಸಂದರ್ಭಗಳಲ್ಲಿ ಚಿಕ್ಕಪುಟ್ಟ ಚರ್ಚೆಗಳಾಗಿ ಜಗಳವಾಗುತ್ತಿದ್ದು ಬಿಟ್ಟರೆ ವಿಕೋಪಕ್ಕೆ ಹೋಗುತ್ತಿರಲಿಲ್ಲ. ವ್ಯಾಧಿಗೆ ಮುನ್ನ ಇವಳ ವರ್ಚಸ್ಸು ಸಮಾಧಾನವಿಲ್ಲದಿರುವುದು. ಕೊಂಚ ತಾಳ್ಮೆ ಕಮ್ಮಿ. ಹೆದರಿಕೆ ಸ್ವಭಾವ ಮತ್ತು ದೇವರಲ್ಲಿ ಅಪಾರ ನಂಬಿಕೆಯುಳ್ಳವಳಾಗಿದ್ದಳು.

ಇಷ್ಟು ವಿಷಯವನ್ನು ಸಂಗ್ರಹಿಸಿದ ನಾನು ಆಕೆಯನ್ನು ಒಳ ಕರೆದು ನಿನಗೆ ಏನು ತೊಂದರೆಯಮ್ಮಾ ಎಂದು ಕೇಳಿದೆ. ‘ನೆತ್ತಿ ಉರಿ, ತಲೆ ನೋವು, ಕಿವಿಯಲ್ಲಿ ಗುಂಯ್ಗುಟ್ಟುವ ಶಬ್ದ, ಕೋಪ ಜಾಸ್ತಿ. ಎದೆ ಬಡಿದುಕೊಳ್ಳುತ್ತದೆ. ಮೂಗು ಕಟ್ಟಿದಂತಾಗುತ್ತದೆ. ಬಾಯಲ್ಲಿ ಉಸಿರಾಡಬೇಕು ಅನಿಸುತ್ತೆ. ಒಮ್ಮೊಮ್ಮೆ ಉಸಿರು ನಿಂತು ಹೋದ ಹಾಗೆ ಆಗುತ್ತೆ, ಮನೆಯಲ್ಲಿ ಇರೋದೇ ಬೇಡ ಅನಿಸುತ್ತೆ. ಸಾಯಬೇಕು ಅನಿಸುತ್ತೆ. ಬೇಜಾರಾಗುತ್ತೆ. ಅಳು ಬರುತ್ತೆ. ಊಟ ಸೇರಲ್ಲ. ಮನಸ್ಸಿಗೆ ಯೋಚನೆ ಬಂದೊಡನೆ ಏದುಸಿರು ಜಾಸ್ತಿ ಆಗಿ ಕೈಕಾಲು ಚೊಟ್ಟವಾಗಿ ಬಿಡುತ್ತವೆ’ ಎಂದಳು.
ಇವನ್ನೆಲ್ಲ ಕೂಲಂಕುಷವಾಗಿ ಗಮನಿಸಿದ ನಾನು, ‘ಖಿನ್ನತೆ’ ʼHyper venilation syndrome with alkalotic Tetany’ ಎಂಬ ವ್ಯಾಧಿಗೆ ಒಳಗಾಗಿರುವಳು ಎಂಬ ನಿರ್ಣಯಕ್ಕೆ ಬಂದೆ. ಮುಕ್ತ ಚರ್ಚೆಯಲ್ಲಿ ಅವಳ ಮನೋ ಲೋಕವನ್ನು ಪ್ರವೇಶಿಸಿದಾಗ, ನಾ ಕಂಡ ಅವಳ ಸುಪ್ತ ವಿಷಯಗಳೆಂದರೆ,
* ಒಳ್ಳೆಯ ನಗರದ ವಿದ್ಯಾವಂತ ಗಂಡ ಸಿಕ್ಕಿದ್ದರೆ ಚೆನ್ನಾಗಿತ್ತು. * ಅತ್ತೆಯೊಂದಿಗೆ ಹೊಂದಾಣಿಕೆ ಕಷ್ಟ. * ಬೇರೆ ಮನೆ ಮಾಡುವಾಸೆ. * ಗಂಡ ಹಿರಿಯ ಮಗನಾದ್ದರಿಂದ ಹೇಳುವುದು ಕಷ್ಟ. * ನಗರದಲ್ಲಿ ವಾಸಿಸುವ ಆಸೆ, ಕಾರಣ ಮಕ್ಕಳ ವಿದ್ಯಾಭ್ಯಾಸ. * ನನ್ನ ಜೀವನ ಅಂದ್ರೆ ಇಷ್ಟೇನಾ? ಎಂಬೆಲ್ಲಾ ವಿಚಾರಗಳು ಹಲವಾರಿದ್ದರೂ, ನಾನು ಒಂದೊಂದೇ ವಿಷಯಕ್ಕೆ ಸಲಹೆಯನ್ನು (Counselling) ಕೊಟ್ಟು ಆಕೆಯ ಮನೋ ಪರಿವರ್ತನೆಗೆ ಬೇಕಾದ ವಿಚಾರಗಳನ್ನು ಹೇಳತೊಡಗಿದೆ.
* ವಿದ್ಯಾವಂತ, ಸುಂದರ, ಪಟ್ಟಣದ ಹುಡುಗನಾಗಿದ್ದು, ಕುಡುಕ ಮತ್ತು ದುಶ್ಚಟಗಳಿಗೆ ಬಲಿಯಾದವನಾಗಿದ್ದರೆ? * ಅತ್ತೆ ಒರಟಾಗಿದ್ದು ಹಿಂಸೆ ಕೊಡುವವಳಾಗಿದ್ದರೆ? * ಮಾವನು ಕೆಟ್ಟ ಮನುಷ್ಯನಾಗಿದ್ದರೆ? ಅವರ ಮನೆಯವರೆಲ್ಲಾ ಒಟ್ಟಾಗಿ ನಿನ್ನನ್ನು ಬೇರೆಯವಳು ಎಂಬ ದೃಷ್ಟಿಯಲ್ಲಿ ನೋಡಿದ್ದರೆ ಹೇಗಿರುತ್ತಿತ್ತು ಯೋಚನೆ ಮಾಡು. * ಬೇರೆಯಾಗುವ ವಿಚಾರವನ್ನು ಸಂಯಮದಿಂದ ಮುಕ್ತ ಚರ್ಚೆಯ ಮೂಲಕ ಸರಿಪಡಿಸಿಕೊಳ್ಳಿ. * ಆರ್ಥಿಕ ಸಾಧಕ ಬಾಧಕಗಳನ್ನು ಅರಿತು ಪಟ್ಟಣದಲ್ಲಿ ಮನೆ ಮಾಡಿ. * ಜೀವನವೆಂಬುವುದು ಎತ್ತರದ ಅಡ್ಡಗೋಡೆಯಿದ್ದಂತೆ. ಹತ್ತುವುದು ಕಷ್ಟ. ಹತ್ತಲು ಸಾಧನಗಳನ್ನು ಕಂಡುಕೊಳ್ಳಿ ಎಂಬೆಲ್ಲಾ ಮನೋ ವೈದ್ಯ ವಿಶ್ಲೇಷಣೆಯನ್ನು ನೀಡಿ ಮನೆಯವರಿಗೆ ಅವಳ ಮನೋವ್ಯಾಧಿಯ ಚಲನವನ್ನ (Psycho Dynamics) ವಿವರಿಸಿ, ಖಿನ್ನತೆಗೆ ಸಂಬಂಧಿಸಿದ ಔಷಧಿಯನ್ನು ನೀಡಿದೆ.
ಹದಿನೈದು ದಿನಗಳ ನಂತರ ಬಂದ ಆಕೆ, ‘ಥ್ಯಾಂಕ್ಸ್ ಡಾಕ್ಟ್ರೇ ನಾನು ಬದುಕುತ್ತೀನಿ ಅಂತ ನಂಬಿಕೆಯೇ ಇರಲಿಲ್ಲ. ಈಗ ಚೆನ್ನಾಗಿದ್ದೀನಿ’ ಅಂದಳು.
ಸ್ನೇಹಿತರೇ, ಬಹು ದಿನಗಳಿಂದ ವಾಸಿಯಾಗದ ಎದೆ, ಬೆನ್ನು, ಮೈಕೈ ನೋವು, ನರ ಸೆಳೆತ, ತಲೆ ತಿರುಗು, ಕೈ ಕಾಲು ನಡುಗುವುದು, ಎದೆ ಬಡಿದುಕೊಳ್ಳುವುದು, ಗಾಬರಿಯಾಗುವುದು, ನಿದ್ರೆ ಬಾರದಿರುವುದು, ಅತಿಯಾದ ಯೋಚನೆ, ಸದಾ ಚಿಂತೆ ಕಾಡುವುದು, ಮೂರ್ಛೆ ಬೀಳುವುದು, ಬೇಡವಾದ ವಿಚಾರಗಳು ಪುನರಾವರ್ತಿಸುವುದು, ದುಶ್ಚಟಗಳನ್ನು ಬಿಡಲು ಆಗದಿರುವುದು, ಲೈಂಗಿಕ ಅಡಚಣೆ ಮತ್ತು ದಾಂಪತ್ಯ ಸಮಸ್ಯೆಗಳು, ಮೈಮೇಲೆ ದೆವ್ವ, ಭೂತ, ದೇವರು ಬರುವುದು, ಇಲ್ಲದ ಧ್ವನಿ ಕೇಳಿಸುವುದು, ಆಕೃತಿಗಳು ಕಾಣಿಸುವುದು, ಅತಿಯಾದ ಅನುಮಾನ ಕಾಡುವುದು, ಕೆಲಸ ಬಿಟ್ಟು ಕೂರುವುದು, ಅರ್ಥವಿಲ್ಲದ, ಅತಿಯಾದ ಮತ್ತು ಒಬ್ಬರಿಗೊಬ್ಬರೇ ಮಾತನಾಡಿಕೊಳ್ಳುವುದು. ಇಂತಹವು ಖಿನ್ನತೆ ಮತ್ತು ಮಾನಸಿಕ ರೋಗ ಲಕ್ಷಣಗಳು. ಈ ಮೇಲ್ಕಂಡ ಲಕ್ಷಣಗಳುಳ್ಳವರು ಕಂಡರೆ ಕೂಡಲೇ ಹತ್ತಿರದ ಮನೋ ವೈದ್ಯರಲ್ಲಿ ತೋರಿಸಿ.
‘Prevention is better than cure’ ಒಳ್ಳೇಯದಲ್ಲವೇ ?
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್