ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಮನೆಯೇ ದೇವಾಲಯ
ಎಂದಿನಂತೆ ಚಿಕಿತ್ಸಾಲಯದಿಂದ ಬಂದು ಮಧ್ಯಾಹ್ನದ ಊಟ ಮುಗಿಸಿ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯುತಿದ್ದೆ. ಪಕ್ಕದ ಮನೆಯಾಕೆ ಕಿರುಚಿದ ಶಬ್ದ ಮತ್ತು ನನ್ನ ಗೆಳೆಯ ಅರಚಿದ ಧ್ವನಿ ಕೇಳಿತು. ಬೆಚ್ಚಿದೆ, ಆತ ಹೋಗು ನಿಮ್ಮಪ್ಪನ ಮನೆಗೆ, ಏನು ಹೊತ್ಕೊಂಡು ಬಂದಿದ್ದೀಯ? ಹೇಳಿದಂಗೆ ಕೇಳ್ಕೊಂಡು ಇರೊದಾದ್ರೆ ಇರು, ಇಲ್ಲದಿದ್ರೆ ಜಾಗ ಖಾಲಿ ಮಾಡು ಎಂದು ಆರ್ಭಟಿಸುತ್ತಿದ್ದ.
ಸ್ನೇಹಿತರೇ, ಸಾಮಾನ್ಯವಾಗಿ ಅವರ ಮನೆ ನೋಡು, ಗಂಡ ಹೆಂಡತಿ ಎಷ್ಟು ಅನ್ಯೋನ್ಯವಾಗಿದ್ದಾರೆ, ಸುಖವಾಗಿದ್ದಾರೆ. ಒಂದಿನವೂ ಜಗಳ ಆಡಿಲ್ಲ ಎಂಬುದನ್ನು ಶೇ. 2-3 ಮನೆಯಲ್ಲಿ ಕೇಳಿದ್ದೇವೆ. ಹಾಗಿದ್ದರೆ ಶೇ. 97 ಜನರ ಮನಸ್ಸು ಸರಿಯಿದೆಯೇ? ಇದರ ಅರ್ಥ ಅದಲ್ಲ. ಅಂದರೆ ನಾವಿಲ್ಲಿ ನೋಡುವುದು ಮನೋಕ್ಲೇಶ. ಈ ಕ್ಲೇಶವು ನೆಮ್ಮದಿಯ ಬಾಳಿಗೆ ಹಾನಿಕರ ಅಷ್ಟೆ. ಇದರಲ್ಲಿ ನಾವು ಬುದ್ಧಿ ವಿಕಲ್ಪವನ್ನು ನೋಡುವುದಿಲ್ಲ. ಆದರೆ ಸುಂದರವಾದ ಬದುಕು ಕುಸಿಯುತ್ತಾ, ಕುಂಟುತ್ತಾ, ತೆವಳುತ್ತಾ, ಏಳುತ್ತಾ, ಬೀಳುತ್ತಾ ಸಾಗುವುದು. ಇಂತಹ ಸಮಯದಲ್ಲಿ ಹತ್ಯೆ, ಆತ್ಮಹತ್ಯೆ, ವಿಚ್ಛೇದನೆಯಂತಹ ಅನಾಹುತಗಳೂ ಆಗಬಹುದು. ಅಸಂಬದ್ಧ ಅಸಹಜ ನರಕಾತ್ಮಕ ಜೀವನದಂತಹ ಅನೇಕ ಸಮಸ್ಯೆಗಳು ಪವಿತ್ರವಾದ ಬದುಕನ್ನು ಮೂರಾಬಟ್ಟೆ ಮಾಡಿಬಿಡುತ್ತವೆ. ಈ ಕುರಿತಂತೆ ಒಂದು ಆತ್ಮಾವಲೋಕನ ಮಾಡೋಣ.
ಕವಿ ತಿಮ್ಮ ಅವರು, ಮನೆಯನ್ನು ‘ಮನೆಯೇ ಮಂದಿರ’ ಅಂದರು. ಮೌನ ಮುನಿಗಳು ಆಸ್ತಿಕರಾದ್ದರಿಂದ ‘ನನ್ನ ಮನೆ ಅಲ್ಲಿದೆ, ಇಲ್ಲಿ ಇರುವೆನು ಸುಮ್ಮನೆ’ ಅಂದರು. ಪ್ರೊ. ನಿರ್ವಾಣರವರು, ‘ಸಮಾಜ… ಮನೆಯೆಂಬುದು ಒಂದು ಜೀವನದ unit’ ’ ಅಂದರು. ಯೋಗಿಯೊಬ್ಬ ‘ಮನೆಯೆಂಬುದೇ ಶೂನ್ಯ’ ಅಂದ. ಪ್ರೇಮಿಗಳ ಪ್ರಕಾರ ‘ಮನೆಯೊಂದು Honey ಮನೆ. ಸಿಹಿ ಇದ್ದರೆ Moon.. ಕಾರವಾದರೆ Sun’.’. ಡಾ. ಹುಚ್ಚುರಾವ್ರವರು ‘ಮನೆಯೆಂಬುದೊಂದು ನಿಗೂಢ ಕಣಜ’ ಅಂದರು.
ಆದರೆ ನನಗೆ,
ಜೀವನದಲ್ಲಿ ಸುಖ ಕಾಣುವ ಹಂಬಲ ಮದುವೆ ಆದೆ, ಏನೂ ಕಾಣಲಿಲ್ಲ ಮನೆ ಕಟ್ಟಿದೆ, ಏನೂ ಕಾಣಲಿಲ್ಲ ಹಾಗಿದ್ದರೆ ನಾನು ಏನು ಕಂಡೆ? ಕಂಡಿದ್ದು ಖಾಲಿ ಖಾಲಿ.

ಹೌದು, ಮನೆ ಎಂಬುದು ಎಲ್ಲರ ಕನಸಿನ ಕೂಸು. ಹಣ ಕೂಡಿಸಿ, ಸಾಲ ಮಾಡಿ, ಕಷ್ಟಪಟ್ಟು ಮನೆ ಕಟ್ಟಿಸುತ್ತೇವೆ ಮತ್ತು ನನ್ನ ಸ್ವಂತ ಮನೆ ಎಂಬ ಗರ್ವದಲ್ಲಿ ಮನೆ ಪ್ರವೇಶಿಸುತ್ತೇವೆ. ಸುಖ, ದುಃಖ, ನೆಮ್ಮದಿ, ಸಂತೋಷ, ಬೇಸರ ಹೀಗೆ ಹೆಚ್ಚಿನ ಎಲ್ಲದ್ದಕ್ಕೂ ಮನೆಯೇ ಸಾಕ್ಷಿ.
ಜೀವನದ ಎಲ್ಲಾ ಘಟ್ಟಗಳಲ್ಲಿ ಏರುಪೇರು ಸಹಜ. ಕುಟುಂಬದಲ್ಲಿ ಈಗ ಸಾಮಾನ್ಯವಾಗಿ ಗಂಡ, ಹೆಂಡತಿ, ಮಕ್ಕಳು ಸೇರಿದಂತೆ 3 ರಿಂದ 5 ಜನರ ವಾಸ. ಎಲ್ಲರೂ ಒಂದೇ ರಕ್ತದವರಾಗಿದ್ದರೂ ಪಾವಿತ್ರತೆಯ ಕೊಂಡಿ ಹಾಳಾಗುವುದಕ್ಕೆ ಮತ್ತು ಬಲವರ್ಧನೆಯಾಗುವುದಕ್ಕೆ, ನೆಮ್ಮದಿ ಕಂಡುಕೊಳ್ಳುವುದಕ್ಕೆ ನಿಗೂಢವಾದ ಕಾರಣ ಯಾವುದು ಎಂಬುದಕ್ಕೆ ಈ ಕೆಳಗಿನ ಸಮೀಕರಣವನ್ನು ಗಮನಿಸೋಣ.
ಒಬ್ಬರಿಗೆ ಸಿಹಿ ವಚನ – ಇನ್ನೊಬ್ಬರಿಗೆ ಕಹಿ ವಚನ. ಹೆಂಡತಿ “ಬೇಡ” ಅಂದ್ರೆ – “ಸುಮ್ನಿರೆ ನಾನು ಗಂಡಸು” ಎಂಬ ಅಧಿಪತ್ಯ.
ಸ್ನೇಹಿತರೇ, ಈ ಸಮೀಕರಣಕ್ಕೆ ಅನುಗುಣವಾದ ಅನೇಕ ಸಂದರ್ಭಗಳನ್ನು, ಉದಾಹರಣೆಗಳನ್ನು ನೋಡಬಹುದು. ಜೀವನದಲ್ಲಿ ಅಹಂಕಾರದ ನಡೆ ನುಡಿ ಮನೆಯ ನೆಮ್ಮದಿಯೆಂಬ ಪಾವಿತ್ರತೆಯನ್ನು ಹಾಳು ಮಾಡುತ್ತದೆ.
‘ಯಾಕೆ ಹೀಗಾಡುತ್ತೀರಿ? ನಾನೇನು ಮೇಕಪ್ ಸಾಮಾನಿಗೆ ಹಣ ಕೇಳಿದೆನೆ? ನಾನೂ ದುಡಿಯುತ್ತಿಲ್ಲವೆ?’ ಎಂಬ ಸಮಾನತೆಯ ಮಾತು. ಹಿಂದೆಲ್ಲ ಹೆಣ್ಣಿನ ಜವಾಬ್ದಾರಿ ಮನೆಯ ನಿರ್ವಹಣೆ ಮಾತ್ರ. ಈಗ ಅವಳು ಹೊರ ಹೋಗಿ ದುಡಿಯುತ್ತಾಳೆ. ಆದ್ದರಿಂದ ಈಕೆ ಸ್ವತಂತ್ರ ಬೇಡುತ್ತಾಳೆ. ಅಹಂ ಎಂಬ ಪೆಡಂಭೂತ ಮನಸ್ಸಿನಲ್ಲಿ ಆವರಿಸಿದರೆ ಘರ್ಷಣೆಯುಂಟಾಗಿ ನೆಮ್ಮದಿಗೆ ಭಂಗ ತರುತ್ತದೆ.
ಇಂತಹ ಹಲವು ಉದಾಹರಣೆಗಳನ್ನು ಗಮನಿಸಬಹುದು. ‘
ಅಮ್ಮ, ನಾನು ನಿನ್ನ ಹೊಟ್ಟೆಯಲ್ಲಿ ಹುಟ್ಟಿಲ್ವೆ?’ ಎಂದು ಕೇಳಿದರೆ ‘ಬಾಯಿ ಮುಚ್ಚೆ. ಅವನು ಹುಡುಗ’ ಅನ್ನುತ್ತಾಳೆ. ಇದನ್ನು ಅಜ್ಞಾನದ ಪರಮಾವಧಿ ಎನ್ನಬಹುದು. ಆತ ಅಮ್ಮನನ್ನು ನೋಡಿಕೊಳ್ಳುವುದು ಅಷ್ಟರಲ್ಲೇ ಇದೆ. ಮಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ‘ತಾನು ಹುಟ್ಟಿದ್ದೇ ತಪ್ಪಾಯ್ತೆ? ಇದೊಂದು ಶಾಪವೇ? ಚಾಕರಿಗಾಗಿ ಮಾತ್ರ ಹುಟ್ಟಿದೆನೆ? ಯಾಕೆ ಈ ತಾರತಮ್ಯ? ನಂದೇನು ತಪ್ಪಿದೆ? ಎಂದೆಲ್ಲ ಯೋಚಿಸುವುದು ಸಹಜ.
ಇಂತಹ ಪರಿಸರದಲ್ಲಿ ಅವಳಿಗೆ ಸುಖ ನೆಮ್ಮದಿ ಸಂತೋಷವೆಂಬುದೆಲ್ಲ ಮರೀಚಿಕೆ. ಕೆಲವರ ಸ್ಥಿತಿಯಂತೂ ಹೇಳತೀರದು. ಗರ್ಭದಲ್ಲಿ ಬೆಚ್ಚಗೆ ಮಲಗಿದ್ದಾಗಲೇ ಅಪ್ಪ, ಅಮ್ಮ, ಅತ್ತೆ, ಮಾವ ಎಂಬ ಪಿಶಾಚಿಗಳು ಹೆಣ್ಣೆಂದು ತಿಳಿದಾಗ ಅಲ್ಲೇ ಮುಗಿಸದ ಸಹಸ್ರಾರು ಘಟನೆಗಳಿವೆ. ಇದಕ್ಕೆಲ್ಲ ಮುಖ್ಯ ಕಾರಣ ಅಂದ್ರೆ ಬಿಗಿಯಿಲ್ಲದ ಕಾನೂನು ವ್ಯವಸ್ಥೆ ಅನ್ನಬಹುದು.

ಇನ್ನೊಂದು ಪ್ರಮುಖವಾದ ಅಂಶ ಗಮನದಲ್ಲಿರಬೇಕು. ಹೆಣ್ಣಾಗಲಿ ಗಂಡಾಗಲಿ, ಎರಡು ಮಕ್ಕಳಿವೆ ಅಂದ್ರೆ ಇಬ್ಬರನ್ನೂ ಸಮಾನ ರೀತಿಯಲ್ಲಿ ಪ್ರೀತಿಯಿಂದ ಕಾಣಬೇಕು. ಹಿರಿಯ ಮಗ ಮಂದ ಗತಿ. ರಗಳೆ ಕಮ್ಮಿ. ಕಲಿಕೆ ಮತ್ತು ತಿಳುವಳಿಕೆಯಲ್ಲೂ ನಿಧಾನಗತಿ. ಪದೇಪದೆ ಹೇಳಿದರೆ ವಿಪರೀತ ಕೋಪ. ‘ನೀನು ದಡ್ಡ. ನಿನ್ನ ತಮ್ಮ ಬುದ್ಧಿವಂತ’ ಎಂಬ ಹೋಲಿಕೆಯ ನಿಂದನೆ. ಇವುಗಳು ಅವನನ್ನು ಇನ್ನೂ ಘಾಸಿಗೊಳಿಸುತ್ತವೆ. ಹೆತ್ತವರು ಎರಡು ಮಕ್ಕಳನ್ನು ತಮ್ಮ ಎರಡು ಕಣ್ಣುಗಳು ಎಂದು ಭಾವಿಸಿ ಸಮಾನತೆ ತೋರದಿದ್ದಲ್ಲಿ ನೆಮ್ಮದಿ ಮತ್ತು ಒಡಕು ಕಟ್ಟಿಟ್ಟ ಬುತ್ತಿ. ಇಬ್ಬರು ಮಕ್ಕಳಲ್ಲಿ ಸಮಾನತೆ ಇರಲು ಸಾಧ್ಯವಿಲ್ಲ. ನಡೆ ನುಡಿಗಳಲ್ಲಿ ಅಂತರವಿರುತ್ತದೆ. ಆದರೆ ಅಪ್ಪ ಅಮ್ಮರ ಪ್ರೀತಿ ಒಂದೇ ಇರಬೇಕು.
ಅಮ್ಮ ‘ಬಟ್ಟೆ ಒಗೆಯುತ್ತಿದ್ದೀನಿ, ಒಲೆ ಮೇಲೆ ಹಾಲಿಟ್ಟಿದ್ದಿನಿ, ನೋಡು’ ಅಂದ್ರೆ, ಮಗಳು ‘ಓದುತ್ತಾ ಇದ್ದೀನಿ, ಕರಿಬೇಡಮ್ಮ’ ಅನ್ನುತ್ತಾಳೆ. ಮನೆಯೆಂಬುದು ರಂಗಮಂಟಪ. ಕುಟುಂಬದವರೆಲ್ಲಾ ಪಾತ್ರಧಾರಿಗಳು. ನಾಟಕದ ಯಶಸ್ಸು ಎಲ್ಲಾರ ಸರಿಯಾದ ನಟನೆಯೆಂಬ ಕರ್ತವ್ಯದಲ್ಲಿ ಅಡಗಿದೆ. ಅವರವರ ಜವಾಬ್ದಾರಿಯಾದ ಅಪ್ಪನ ಸಂಪಾದನೆ ಮತ್ತು ನಿಭಾಯಿಸುವಿಕೆ, ಅಮ್ಮನ ಮನೆಯ ಪಾಲನೆ ಮತ್ತು ನಿರ್ವಹಣೆ. ಮಗನ ಶಿಕ್ಷಣ ಮತ್ತು ಅಪ್ಪನಿಗೆ ಸಹಾಯ. ಮಗಳ ಓದು ಮತ್ತು ಅಮ್ಮನ ಕೆಲಸದಲ್ಲಿ ಕೈಜೋಡಿಸುವುದು. ಹೀಗೆ ಅವರವರ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ಮನೆಯೊಂದು ನಂದಗೋಕುಲ. ಇಲ್ಲದಿದ್ದರೆ ಗೋಳಿನ ನರಕ ಯಾತನೆಯಾಗುತ್ತದೆ.
ಒಬ್ಬರಿದ್ದಂತೆ ಇನ್ನೊಬ್ಬರು ವ್ಯಕ್ತಿತ್ವದಲ್ಲಾಗಲಿ ವರ್ಚಸ್ಸಿನಲ್ಲಾಗಲಿ ನಡವಳಿಕೆಯಲ್ಲಾಗಲಿ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ವಿಭಿನ್ನತೆ, ವಿಶಿಷ್ಟತೆ ಇರುತ್ತದೆ. ಅದನ್ನು ಅರ್ಥ ಮಾಡಿಕೊಂಡು ಕಡಿಮೆ ಇರುವುದನ್ನು ಹೆಚ್ಚಾಗಿಯೂ, ಹೆಚ್ಚಿರುವುದನ್ನು ಕಡಿಮೆಯಾಗಿಯೂ ಮಾಡಿಕೊಂಡು ಸಮಾನತೆಯನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಂದನ್ನೂ ವಿವೇಕಯುತವಾಗಿ ವಿಮರ್ಶಾತ್ಮಕವಾಗಿ ಪರಾಮರ್ಶಿಸಿ ನೋಡಬೇಕು. ಆಗ ಕುಟುಂಬದಲ್ಲಿ ದೈಹಿಕವಾಗಿ ಮಾನಸಿಕವಾಗಿ ವ್ಯವಹಾರಿಕವಾಗಿ ನೆಮ್ಮದಿ ಸಿಗುತ್ತದೆ. ಜೀವನದಲ್ಲಿ ನೆಮ್ಮದಿಗಿಂತ ಇನ್ನೇನು ಬೇಕು ಹೇಳಿ?
ಮುಂದುವರೆಯುವುದು…..!
– ಡಾ|| ಎ.ಎಂ. ನಾಗೇಶ್

