
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಗೀಳೆಂಬ ಗೋಳು ಕಾಡಿದಾಗ
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ರಾಷ್ಟ್ರ ಮಟ್ಟದ ಸಮ್ಮೇಳನಗಳು ಮತ್ತು ವಿಚಾರ ಸಂಕಿರಣಗಳು ನಡೆಯುತ್ತಿರುತ್ತವೆಯಾದರೂ ನಾವು ಸಾಮಾನ್ಯವಾಗಿ ದೂರದ, ನೋಡದ ಸ್ಥಳಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇವೆ. ಈ ಬಾರಿ ನನ್ನ ಕುಟುಂಬದವರೊಂದಿಗೆ ಹೊರ ರಾಜ್ಯಕ್ಕೆ ಹೋಗಲು ತೀರ್ಮಾನಿಸಿದೆ. ಕಾರಣ, ಅಲ್ಲಿ ನನ್ನ ಆತ್ಮೀಯ ಸ್ನೇಹಿತ ನರ ಮತ್ತು ಮಾನಸಿಕ ಆಸ್ಪತ್ರೆಯನ್ನು ನಡೆಸುತ್ತಿದ್ದನು. ಅವನನ್ನು ನೋಡಿಬರುವ ಆಸೆ ಬಹಳ ದಿನಗಳಿಂದಿತ್ತು.
ನಾನು ಮೊದಲೇ ಕರೆ ಮಾಡಿ ತಿಳಿಸಿದ್ದರಿಂದ ಆ ಸಂಜೆ ಮನೆಗೆ ಆಮಂತ್ರಿಸಿದ್ದ. ನನ್ನ ಶ್ರೀಮತಿ ‘ಸಮ್ಮೇಳನದಲ್ಲಿಯೇ ಸಿಗುತ್ತಾರಲ್ಲ, ಮತ್ತೇಕೆ ಮನೆಗೆ ಹೋಗಿ ಅವರಿಗೆ ತೊಂದರೆ ಕೊಡುವುದು’ ಎಂದು ಆಕ್ಷೇಪಿಸಿದಳು. ಅವನು ಯಾವುದೇ ಕಾರ್ಯಕ್ರಮಗಳಲ್ಲೂ ಭಾಗವಹಿಸುವುದಿಲ್ಲ ಎಂಬುದು ಸ್ನೇಹಿತರಿಂದ ತಿಳಿದಿತ್ತು. ಅದಕ್ಕೆ ಕಾರಣವನ್ನು ಯಾರೂ ಹೇಳಿರಲಿಲ್ಲ. ಪೂರ್ವ ಯೋಜನೆಯಂತೆ ಆತನ ಆಸ್ಪತ್ರೆಯ ಕಡೆ ಹೊರಟೆವು.
ನನಗೆ ಕಾಲೇಜು ದಿನಗಳು ನೆನಪಾಗತೊಡಗಿದವು. ಬಹಳ ಅಚ್ಚುಕಟ್ಟು, ಶಿಸ್ತುಬದ್ಧ ಜೀವನ. ಕೊಠಡಿಯೊಳಗೂ ಯಾವ್ಯಾವ ವಸ್ತುಗಳು ಎಲ್ಲಿರಬೇಕೋ ಅಲ್ಲಲ್ಲಿಯೇ ಇರಬೇಕು. ಸ್ವಲ್ಪ ಮುಂಗೋಪಿ, ಸದಾ ಶುಭ್ರವಾದ ಬಟ್ಟೆಗಳನ್ನೇ ಧರಿಸುತ್ತಿದ್ದ. ಸುತ್ತಲಿನ ಪರಿಸರವೂ ಹಾಗೇ ಇರಬೇಕೆಂದು ಬಯಸುತ್ತಿದ್ದ. ಸ್ವಚ್ಛತೆ ಮತ್ತು ಶುದ್ಧತೆಯನ್ನು ಕಾಪಾಡುತ್ತಿದ್ದ. ಓದುವುದರಲ್ಲಿಯೂ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ. ಅವನು ಎಂ.ಡಿ. (ಸ್ನಾತಕೋತ್ತರ ಪದವಿ) ಮುಗಿಸಿ ಹೊರ ರಾಜ್ಯದಲ್ಲಿ ನೆಲೆಸಿದ್ದರಿಂದ, ನಾನೂ ನನ್ನ ವೃತ್ತಿಯಲ್ಲಿ ನಿರತನಾಗಿದ್ದರಿಂದ ನಮ್ಮಿಬ್ಬರ ಭೇಟಿಗೆ ಬಹಳ ದಿನಗಳ ಅಂತರವಾಗಿತ್ತು. ಇವನ್ನೆಲ್ಲಾ ಯೋಚಿಸುತ್ತಿರುವಾಗಲೇ ನಮ್ಮ ವಾಹನ ಅವನ ಆಸ್ಪತ್ರೆ ತಲುಪಿತು. ಸ್ವಾಗತಕಾರಿಣಿಗೆ ನಮ್ಮ ಪರಿಚಯ ತಿಳಿಸಿದ್ದರಿಂದ ಆಕೆ ಒಳ ಹೋಗಿ ಹೇಳಿದಳು. ನನ್ನ ಸ್ನೇಹಿತನ ಹೆಂಡತಿಯೇ ಬಂದು ಒಳಗೆ ಕರೆದುಕೊಂಡು ಹೋದಳು. ಈಕೆ ಕೂಡ ಮನಶಾಸ್ತ್ರಜ್ಞೆ. ನಮ್ಮ ಜ್ಯೂನಿಯರ್ ಸಹ. ಅಲ್ಲಿಯೇ ಪ್ರೀತಿ ಹುಟ್ಟಿ ಮದುವೆಯಾದವರು.
ಸುಮಾರು ನಲವತ್ತು ಹಾಸಿಗೆಯುಳ್ಳ ಆಸ್ಪತ್ರೆಯ ಒಡೆಯನ ಸಲಹಾ ಕೊಠಡಿಗೆ ಕಾಲಿಡುತ್ತಿದ್ದಂತೆ ಆಶ್ಚರ್ಯ ಕಾದಿತ್ತು. ಹೆಂಡತಿಯ ಪಕ್ಕದ ಛೇರ್ನಲ್ಲಿ ಅಲ್ಲಾಡದೆ ಗೊಂಬೆಯ ಹಾಗೆ ಕೂತಿದ್ದಾತನೇ ನನ್ನ ಸ್ನೇಹಿತ. ನಾನಾಗಿಯೇ ಹಸ್ತಲಾಘವಕ್ಕಾಗಿ ಹಸ್ತ ನೀಡಿದರೆ ನಿಧಾನ ಗತಿಯಲ್ಲಿ ಅವನು ಕೈ ಚಾಚಿದ. ಹೆಂಡತಿ ಬೇಸರದಿಂದಿದ್ದುದು ನಮ್ಮ ಗಮನಕ್ಕೆ ಬಂತು. ನಾವು ಬೇಸರದಿಂದಲೇ ಸಮ್ಮೇಳನದ ಕಡೆ ಹೊರಟೆವು.

ಅದೇ ಬೇಸರದಿಂದ ಇನ್ನೊಬ್ಬ ಸ್ನೇಹಿತನೊಂದಿಗೆ ಎರಡು ಪೆಗ್ ವಿಸ್ಕಿ ಹೀರಿದ ನಂತರ ಆತನನ್ನು ಕೆಣಕಿದೆ. ಆಗ ಎಲ್ಲವನ್ನೂ ಹೇಳತೊಡಗಿದ. ಎಂ.ಡಿ. ಮಾಡಿದ ನಂತರ ಖಾಸಗಿ ವೈದ್ಯಕೀಯ ಸಂಸ್ಥೆಯೊಂದರಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿದ ಈತ ಬಹು ಬೇಗ ಹೆಸರುವಾಸಿಯಾದ. ಅದಕ್ಕೆ ಕಾರಣವೆಂದರೆ, ಮೊದಲೇ ಹೇಳಿದಂತೆ ಅತಿಯಾದ ಕಾಳಜಿ, ಕರ್ತವ್ಯ ನಿಷ್ಠೆ ಹಾಗೂ ಪ್ರತಿ ಮೂರು ದಿನಕ್ಕೊಮ್ಮೆ ರೋಗಿಯ ಸಂಬಂಧಿಕರಿಗೆ ಕರೆ ಮಾಡಿ ಯೋಗಕ್ಷೇಮ ಮತ್ತು ಗುಣಮುಖದ ಬಗ್ಗೆ ವಿಚಾರಿಸುವುದು.
ಇವೆಲ್ಲದರಿಂದ ರೋಗಿಗಳ ಸಂಖ್ಯೆ ಒಂದು ವರ್ಷದಲ್ಲಿಯೇ ಇಮ್ಮಡಿಸಿತು. ಇವನು ಅತಿ ಶಿಸ್ತು ಮತ್ತು ನಾಜೂಕಿನವನಾಗಿದ್ದರಿಂದ ಆ ಸಂಸ್ಥೆಯಲ್ಲಿ ಮುಂದುವರಿಯಲು ಬಿಡಲಿಲ್ಲ. ಮನೆ ಕಡೆ ಆರ್ಥಿಕವಾಗಿ ಸ್ಥಿತಿವಂತರಾಗಿದ್ದರಿಂದ ಆಸ್ಪತ್ರೆ ಕಟ್ಟಿಸಿದರು. ಇಪ್ಪತ್ತು ವರ್ಷಗಳ ಅನುಭವದಲ್ಲಿ ರೋಗಿಗಳು ಹೆಚ್ಚಾಗಿದ್ದರು. ಸದಾ ಅತಿಯಾದ ಮುತುವರ್ಜಿ, ರೋಗಿಗಳ ಹಿತ ಬಯಸುವುದು, ಶಿಸ್ತು, ಶುಚಿತ್ವ, ಕೋಪ, ಉದ್ರೇಕ, ಸ್ವಲ್ಪ ತಪ್ಪಿಗೂ ಸಿಬ್ಬಂದಿಯ ಮೇಲೆ ರೇಗುವುದು ಇಂತಹ ನಡವಳಿಕೆಯಿಂದ ಸುಧಾರಿಸಲು ಹೆಂಡತಿಗೆ ಸಾಕಾಗಿ ಹೋಯಿತು. ವಿಚ್ಛೇದನವನ್ನು ಬಯಸಿದ್ದಳು. ಅವಳೂ ಸಹ ಸೈಕಾಲಜಿಸ್ಟ್ ಆದ್ದರಿಂದ ಹೇಗೋ ನಿಭಾಯಿಸುತ್ತಿದ್ದಳು. ಐದಾರು ವರ್ಷಗಳಲ್ಲಿ ಇವನ ವರ್ತನೆ ಇನ್ನೂ ಬಿಗಡಾಯಿಸಿದ್ದರಿಂದ ಮನೋ ರೋಗದ ಔಷಧಗಳಿಗೆ ಮಾರು ಹೋಗಬೇಕಾಯಿತು ಎಂದು ವಿವರಿಸಿದರು.
ಅವನಲ್ಲಿ ನಿದ್ರಾಹೀನತೆ * ಪದೇಪದೆ ದಿನದಲ್ಲಿ ಏಳೆಂಟು ಬಾರಿ ರೋಗಿಗಳಿಗೆ ಕರೆ ಮಾಡಿ ವಿಚಾರಿಸಿ ಆತ್ಮ ನಿವೇದನೆ ಕಡಿಮೆ ಮಾಡಿಕೊಳ್ಳುವುದು. * ಕೋಪ, ಹೊಡೆಯುವುದು ಮತ್ತು ಸಾಯಿಸುವೆನೆಂದು ರೌದ್ರಾವತಾರ ತಾಳುವುದ. * ಗಾಬರಿ, ಆತಂಕ, ಚಡಪಡಿಸುವಿಕೆ, ಊಟ ಮಾಡದಿರುವುದು, ಸದಾ ಚಿಂತೆ ಮಾಡುವುದು, ಕೇಳಿದ್ದನ್ನೇ ಕೇಳುವುದು, ಪದೇಪದೆ ಕೈ ತೊಳೆಯುವುದು, ತಾನು ಹೇಳಿದಂತೆಯೇ ನಡೆಯಬೇಕು ಅನ್ನುವುದು. * ಸುಮ್ಮನೆ ಕುಳಿತಲ್ಲಿಯೇ ಕುಳಿತಿರುವನು, ಹೆಂಡತಿ, ಮಕ್ಕಳ ಕಡೆ ಗಮನ ಕಡಿಮೆ, ಸಾಯುತ್ತೇನೆ ಅನ್ನುವನು, ಒಂದೆರಡು ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದ. ಅನುಮಾನದಂತಹ ಲಕ್ಷಣಗಳಿದ್ದರಿಂದ ಮನೋವೈದ್ಯರು ಪರೀಕ್ಷಿಸಿ, ವಿದ್ಯುತ್ ಕಂಪನದ ಜೊತೆಗೆ ಗೀಳು ಹಾಗೂ ಬುದ್ಧಿ ವಿಕಲ್ಪತೆಗೆ ಸಂಬಂಧಪಟ್ಟ ಔಷಧಿಗಳನ್ನು ನೀಡಿದ್ದರಿಂದ ಗೊಂಬೆಯ ಹಾಗಿದ್ದ.
ಮನೋ ವ್ಯಾಕುಲತೆಯನ್ನು ಬುದ್ಧಿ ವಿಕಲ್ಪ ಎಂಬುದಾಗಿಯೂ ಕರೆಯಬಹುದು (Schizo affective disorder) ಸ್ವಚ್ಛತೆ, ಶುಚಿತ್ವ, ದೈವತ್ವ, ಲೈಂಗಿಕತೆ ಮತ್ತು ಅದರ ವಿಚಾರಗಳು, ಮೌಢ್ಯತ್ವ, ಹರಕೆ, ವಾಸ್ತು, ಎಣಿಕೆ, ಅನುಮಾನ, ಯೋಚನೆ, ಇಚ್ಛೆ, ಭಾವನೆ, ಮನಸ್ಸಿಗೆ ಹಿಡಿಸದ್ದು, ಪುನಃ ಪುನಃ ಕಾಡುವುದು, ಭಯ, ನಿದ್ರಾಹೀನತೆ, ಆತಂಕ, ಕಸಿವಿಸಿಗಳನ್ನು ಗೀಳು ಅಥವಾ ಎಣಿಕೆ ಕಾಯಿಲೆ ಎನ್ನುವರು (Obsessive compulsive disorder) ಈ ತೊಂದರೆಯು ನರವ್ಯೂಹದೊಳಗಿನ ನರ ರಸ ಉತ್ಪಾದನೆಗಳಲ್ಲಿ ನ್ಯೂನತೆ ಕಂಡಾಗ ಆಗುವಂತಹದ್ದು. ಇದನ್ನು ಸರಿಪಡಿಸಲು ಔಷಧಿ, ನಡವಳಿಕೆಯ ಚಿಕಿತ್ಸೆ, ವಾಕ್ಚಿಕಿತ್ಸೆ ಇತ್ಯಾದಿಗಳಿವೆ.
ಇನ್ನೊಂದು ನಿಮಗೆ ವಿಚಿತ್ರವೆನಿಸಿದರೂ ಪರವಾಗಿಲ್ಲ. ಈ ಘಟನೆಯನ್ನು ಹೇಳ ಬಯಸುತ್ತೇನೆ. ಎರಡನೇ ವರ್ಷದಲ್ಲಿ ಬಿ.ಇ. ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯ ಕೊರಗೆಂದರೆ, ‘ನಾನು ಪುಸ್ತಕ ಹಿಡಿದ ತಕ್ಷಣ ನನ್ನ ಕಣ್ಣಿಗೆ ಶಿಶ್ನವು ಪ್ರತ್ಯಕ್ಷವಾಗುತ್ತದೆ ಮತ್ತು ಸುಂದರವಾದ ಹೆಣ್ಣು ದೇವರ ಚಿತ್ರಗಳನ್ನು ನೋಡಿದಾಗ ನನಗೆ ಆ ದೇವತೆಯ ಜೊತೆ ಸಂಭೋಗಿಸುವ ಯೋಚನೆಗಳು ಬರುತ್ತವೆ. ಎಷ್ಟೇ ನಿಯಂತ್ರಿಸಲು ಪ್ರಯತ್ನಿಸಿದರೂ ಆಗುವುದಿಲ್ಲ. ಹಾಗಾಗಿ ಜಿಗುಪ್ಸೆ, ಆತ್ಮಹತ್ಯೆಯ ಆಸೆ, ಗಮನ ಮತ್ತು ಏಕಾಗ್ರತೆ ಇಲ್ಲ. ಪರೀಕ್ಷೆ ಹತ್ತಿರ ಬರುತ್ತಿದೆ, ನಿದ್ರೆ ಸುಳಿಯುತ್ತಿಲ್ಲ ಎಂದು ನೊಂದು ನುಡಿದ.
ಅವನನ್ನು ಪರೀಕ್ಷಿಸಿದ ನಾನು, ಗೀಳು ಬಾಧೆ ಕಾಡುತ್ತಿರುವುದನ್ನು ತಿಳಿದು ಔಷಧಿಯನ್ನು ಕೊಟ್ಟೆ. ಒಂದು ತಿಂಗಳ ನಂತರ ಬಂದ ಆ ವಿದ್ಯಾರ್ಥಿಯು ಸಾಕಷ್ಟು ಸುಧಾರಿಸಿದ್ದ. ನಂತರ ಮೂರು ವರ್ಷಕ್ಕೆ ಬೇಕಾದ ಔಷಧಿಗಳನ್ನು ಶಿಫಾರಸ್ಸು ಮಾಡದೆ ತೆಗೆದುಕೊಳ್ಳಲಾರಂಭಿಸಿದೆ. ಬಿ.ಇ.ಯಲ್ಲಿ ಒಳ್ಳೆಯ ಅಂಕ ಪಡೆದು ಈಗ ಹೊರ ದೇಶದಲ್ಲಿ ನೆಲೆಸಿರುವನು. ಮೊನ್ನೆ ನನ್ನ ಚಿಕಿತ್ಸಾಲಯಕ್ಕೆ ಇದ್ದಕ್ಕಿದ್ದಂತೆ ಬಂದು ಸಾರ್, ಅಂದು ನೀವು ನನ್ನನ್ನು ಬದುಕಿಸಿದಿರಿ. ನಿಮ್ಮಿಂದಾಗಿ ನಾನು ಇಂದು ಇಷ್ಟರಮಟ್ಟಿಗೆ ಇದ್ದೀನಿ ಎಂದು ಖುಷಿಯಿಂದ ಹೇಳಿದಾಗ, ಒಳ್ಳೆಯ ಶಿಕ್ಷಕನಿಗೆ ಉತ್ತಮ ಯಶಸ್ವಿ ವಿದ್ಯಾರ್ಥಿಯನ್ನು ಕಂಡಾಗ ಆದಷ್ಟು ಸಂತೋಷವಾಯಿತು.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್