
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಬದುಕು ನೀರಾಗಿದ್ದರೆ ಸುಖ
ಏಳೆಂಟು ವರ್ಷಗಳ ಹಿಂದಿನ ಘಟನೆ. ಸುಮಾರು ಮೂವತ್ತರ ವಯೋಮಾನದ, ವೃತ್ತಿಯಲ್ಲಿ ಗುತ್ತಿಗೆದಾರನಾಗಿದ್ದ (ಸರ್ಕಾರಿ ಕೆಲಸಗಳನ್ನು ಪಡೆಯುವಾತ). ಒಂದು ವರ್ಷದ ಮಗುವಿರುವ ಸಂಸಾರಸ್ಥನಾಗಿದ್ದ. ಸಿವಿಲ್ ಇಂಜಿನಿಯರಿಂಗ್ ಪದವೀಧರ. ಕುಟುಂಬದ ಏಕೈಕ ಕುಡಿಯಾಗಿದ್ದ. ಪ್ರಾಮಾಣಿಕ ವ್ಯಕ್ತಿಯಾಗಿದ್ದ. ಯಾರಿಗೂ ನೋವು ಮತ್ತು ತೊಂದರೆ ಕೊಡದ ನಡವಳಿಕೆಯ, ಕೀಳರಿಮೆ ಇಲ್ಲದ, ನಾಚಿಕ ಸ್ವಭಾವದವನಾಗಿದ್ದ. ಕಾರ್ಯನಿಷ್ಠೆ ಅಗಾಧವಾಗಿದ್ದ ಈತನಿಗೆ ಸರ್ಕಾರಿ ಕೆಲಸದಲ್ಲಿ ಆಸಕ್ತಿ ಇರಲಿಲ್ಲ. ಸದಾ ಉಲ್ಲಾಸಭರಿತನಾಗಿರುತ್ತಿದ್ದ.
ಇವನು ಮದುವೆ ಆದ ಕೆಲವೇ ವರ್ಷಗಳಲ್ಲಿ ಏಕಾಂಗಿತನ ಬಯಸುವನು. ಸಿಟ್ಟು ಮತ್ತು ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಡಿಮೆ. ಗುತ್ತಿಗೆಯ ಅರ್ಜಿ ನಮೂನೆಗಳನ್ನೂ ಸಹ ತುಂಬಿ ನೊಂದಾಯಿಸುತ್ತಿರಲಿಲ್ಲ. ಸದಾ ಸಪ್ಪೆ ಮೋರೆ ಹಾಕಿರುವುದು, ನಿದ್ರಾಹೀನತೆ, ಚಡಪಡಿಸುವಿಕೆ, ವಿನಾಕಾರಣ ಕೋಪ, ಬದುಕುವ ಆಸೆ ಕುಗ್ಗಿದ್ದನ್ನು ಗಮನಿಸಿದ ಹೆಂಡತಿ ಮತ್ತು ಪೋಷಕರು ಇಲ್ಲದ ದೇವರಿಗೆ ಮೊರೆ ಹೋಗಿ ಹರಕೆ ಹೊತ್ತು ಸುಸ್ತಾದರು. ಅವನಿಗೆ ಸರ್ಕಾರಿ ಕೆಲಸ ಕೊಡಿಸುವ ಪ್ರಯತ್ನವೂ ನಡೆಯಿತು. ಎಲ್ಲವೂ ನಿಷ್ಪ್ರಯೋಜನವಾದವು.
ಅವನು ತನ್ನ ಮನೋ ಕೊರಗನ್ನು ನೀಗಿಸಿಕೊಳ್ಳಲು ಮದ್ಯಕ್ಕೆ ದಾಸನಾಗಿಬಿಟ್ಟ. ಈ ದುಶ್ಚಟವನ್ನು ಅವನೇ ಕಲಿತು, ಅವನ ನೋವಿಗೆ ಆತನೇ ಮದ್ದು ಕಂಡುಕೊಂಡಿದ್ದ. ಕುಡಿದ ಅಮಲಿನಲ್ಲಿ ಮಾಡಿದ ದಾಂಧಲೆಗಳು ಜ್ಞಾಪಕಕ್ಕೆ ಬರುತ್ತಿರಲಿಲ್ಲ ಮತ್ತು ಒಮ್ಮೆ ಕುಡಿಯಲು ಶುರು ಮಾಡಿದರೆ ಗಂಟೆಗೊಮ್ಮೆ ಮದ್ಯ ಬೇಕಾಗುತ್ತಿದ್ದ. ಹಣವಿಲ್ಲದ ಸಮಯದಲ್ಲಿಯೂ ಸ್ವಾಭಿಮಾನ ಬಿಡದೆ ಬುದ್ಧನಾಗುತ್ತಿದ್ದ.
ಸ್ನೇಹಿತರ ಸಲಹೆ ಮೇರೆಗೆ ಆತನ ಮಾವ ಬಂದು ನನ್ನಲ್ಲಿ ವಿಚಾರವನ್ನೆಲ್ಲ ತಿಳಿಸಿ ನೊಂದುಕೊಂಡರು. ಅವನು ಯಾವುದೇ ಚಿಕಿತ್ಸೆಗೆ ಒಪ್ಪುತ್ತಿರಲಿಲ್ಲವಾದರೂ ಅವನ ಗೆಳೆಯರು ಮನವೊಲಿಸಿ ಕರೆತಂದರು. ಸ್ನೇಹಿತರ ಮಾತೆಂದರೆ ಆತನಿಗೆ ಬಲು ಪ್ರೀತಿ. ಅದೇ ಮಾತು ಹೆಂಡತಿಯಿಂದ ಬಂದರೆ ರೌದ್ರಾವತಾರ ತಾಳುತ್ತಿದ್ದ. ಅವನ ಆಪ್ತ ಸಮಾಲೋಚನಾ ಸಮಯದಲ್ಲಿ ಪರೀಕ್ಷಿಸಿದಾಗ ನನಗೆ ಲಭಿಸಿದ ಮಾಹಿತಿಗಳೆಂದರೆ, ಜಿಗುಪ್ಸೆ, ಇದರಿಂದ ಖಿನ್ನತೆ, ಸರ್ಕಾರಿ ಗುತ್ತಿಗೆಗಳನ್ನು ಪಡೆಯುವಾಗ ಅದರ ಹಿಂದಿರುವ ಕೈವಾಡ, ಕೈಚಳಕ ಪ್ರಕ್ರಿಯೆಯಗಳೇ ಈ ಜಿಗುಪ್ಸೆಗೆ ನಾಂದಿ ಎಂಬುದನ್ನು ಅವನ ಅಂತರಾಳದ ಸುಪ್ತ ಮನಸ್ಸಿನಲ್ಲಿ ಕಂಡೆ. ಅನುಮೋದನೆಗಳ ಹಿಂದಿರುವ ಹಿಂಸೆಗಳು, ಅಡಚಣೆಗಳು, ಬೇಡಿಕೆಗಳು, ಲಂಚಗುಳಿತನ ಮುಂತಾದವುಗಳೆಲ್ಲವೂ ಇವನಿಗೆ ಅಸಹ್ಯವಾಗಿ ಕಾಣತೊಡಗಿ ಬೇಸರಗೊಂಡು ಮದ್ಯ ವ್ಯಸನಿಯಾಗಿಬಿಟ್ಟಿದ್ದ.

ಆತನಿಗೆ ಆಪ್ತ ಸಲಹೆ ನೀಡಿ, ಮಿತ್ರರಿಗೆ ಮನೋ ವಿಶ್ಲೇಷಣೆಯನ್ನು ತಿಳಿಸಿ, ಖಿನ್ನತೆಗೆ ಸಂಬಂಧಿಸಿದ ಔಷಧಿಗಳನ್ನು ನೀಡಿ ಪೋಷಕರು ಮತ್ತು ಹೆಂಡತಿಯನ್ನು ಕರೆತರಲು ಹೇಳಿ 15 ದಿನಗಳ ನಂತರ ಬರುವಂತೆ ಸೂಚಿಸಿದೆ.
ನಂತರ ನನ್ನ ಮನಸ್ಸನ್ನು ಪದೇಪದೆ ಕಾಡತೊಡಗಿದ ವಿಚಾರ ಪ್ರಾಮಾಣಿಕತೆ. ಅವನೆಲ್ಲಾ ಸಮಸ್ಯೆಗಳಿಗೆ ಪ್ರಾಮಾಣಿಕತೆ ಮುಳುವಾದರೆ, ಅಪ್ರಾಮಾಣಿಕತೆಯೇ ಔಷಧಿಯಲ್ಲವೇ ಎನಿಸಿತು. ಮನೋ ವೈದ್ಯರ ಆಪ್ತ ಸಲಹೆಯಲ್ಲಿ ಸುಲಭವಾಗಿ ಪಕ್ಷಕ್ಕೆ ಪ್ರತಿಪಕ್ಷವೆಂಬಂತೆ ಹೇಳಿಬಿಡುತ್ತೀವಿ. ಅಂದರೆ ಒಬ್ಬ ವ್ಯಕ್ತಿಗೆ ನಕಾರಾತ್ಮಕ ಚಿಂತೆ ಬಂದರೆ ಸಕಾರಾತ್ಮಕವಾಗಿ ಚಿಂತಿಸು ಎನ್ನುತ್ತೇವೆ. ಪ್ರಸ್ತುತದಲ್ಲಿ ಇದೇ ಸಿದ್ಧಾಂತವನ್ನು ಅವನಲ್ಲಿ ಬೋಧಿಸಬಹುದೇ? ಅಂದರೆ ಅಪ್ರಾಮಾಣಿಕನಾಗು ಎನ್ನಬಹುದೇ? ಇದು ಸಮಂಜಸವಲ್ಲ.
ಇಲ್ಲಿ ಧ್ಯಾನ ಕುರಿತು ಒಂದೆರಡು ಮಾತು ಹೇಳಲಿಚ್ಛಿಸುತ್ತೇನೆ. ಧ್ಯಾನವು ಕಣ್ಣು ಮುಚ್ಚಿ ಮಾಡುವ ಒಂದು ಕ್ರಿಯೆ ಅಲ್ಲ. ಹಾಗೇನಾದರೂ ಮಾಡಿದರೆ ಧ್ಯಾನವು ಜಡ ಸಮಾಧಿಗೆ ಸಮ. ಲೌಕಿಕ ಪ್ರಪಂಚವು ತಟಸ್ಥವಾಗಿರದೇ ಯಾವಾಗಲೂ ಅದರ ಧರ್ಮವನ್ನು ಪರಿಪಾಲಿಸಿ ಹೊಸ ಹೊಸ ಲಕ್ಷಣಗಳನ್ನು ಹೊರ ಹೊಮ್ಮಿಸುತ್ತಿರುತ್ತದೆ. ಇಂತಹ ಸಂಚಲನಾಶೀಲ ವಸ್ತು ನಿಷ್ಠೆಗಳಲ್ಲಿಯೂ ನಿಷ್ಠೆಗಳ ವ್ಯತ್ಯಾಸಗಳು ಸಹಜ. ಈ ವ್ಯತ್ಯಾಸಗಳಿಗೆ ಹೊಂದಿಕೊಳ್ಳುವುದೇ ಇದರ ಮೂಲ ತಿರುಳು. ಹೊಂದಿಕೊಳ್ಳುವಂತಹ ಅರಿವಿನ ಜ್ಞಾನವೇ ಧ್ಯಾನ (Meditation).
ಇದರಲ್ಲೇ ಆತನಿಗೆ ಎಡವಟ್ಟು ಆಗಿದ್ದು. ದಿನ ನಿತ್ಯ ಆಗುವ ವ್ಯತ್ಯಾಸಕ್ಕೆ ಈತನ ಪ್ರಾಮಾಣಿಕತೆ ಉರುಳಾಯಿತು. ಆಗುತ್ತಿರುವ ಲೌಕಿಕ ಬದಲಾವಣೆಗೆ ಹೊಂದಾಣಿಕೆ ಕೊರತೆಯಿಂದ ಸುರಪಾನ ದಾಸನಾದ. ವಂಚನೆ ಮಾಡುವುದು ಬೇಡ, ಸಂಪೂರ್ಣ ಪ್ರಾಮಾಣಿಕನಾಗದೆ, ಕೊಂಚ ಬದಲಾವಣೆಯಾಗಿದ್ದರೆ ಇವನು ಸ್ವಸ್ಥನೂ, ಸಾಮಾನ್ಯನೂ ಆಗಿರುತ್ತಿದ್ದನೇನೋ! ವ್ಯವಹಾರಗಳ ಏರುಪೇರುಗಳಿಗೆ ಇವನ ಆತ್ಮವು ಸ್ಪಂದಿಸದೇ ಇರುವುದರಿಂದ ಈ ಸಮಸ್ಯೆ ಇವನಲ್ಲಿ ತಲೆದೋರಿತ್ತು.
ಮರ್ನಾಲ್ಕು ವರ್ಷಗಳು ಕಳೆದರೂ ಆತನ ಮಾಹಿತಿ ಇಲ್ಲವಾದ್ದರಿಂದ ಅವನನ್ನು ಮರೆತುಬಿಟ್ಟಿದ್ದೆ. ಆತನ ಹೆಂಡತಿ ನನ್ನಲ್ಲಿಗೆ ಬಂದು ‘ಡಾಕ್ಟೆç, ಕುಡಿತ ಬಿಡಿಸುವುದಕ್ಕೆ ಮಾತ್ರೆ ಇದೆಯೇ?’ ಎಂದು ಕೇಳಿದಳು. ಒಳ್ಳೆಯದಕ್ಕಲ್ಲವೇ ಎಂದು ಬರೆದು ಕೊಟ್ಟೆ.
ಕೆಲವು ದಿನಗಳ ನಂತರ ದಿನಪತ್ರಿಕೆ ತಿರುವಿ ಹಾಕುವಾಗ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಭಾವಚಿತ್ರ ನೋಡಿದಾಗ ಅವನದೇ ನೆನಪಾಯಿತು. ಮನಸ್ಸಿನಲ್ಲಿ ಬೇಸರದ ತುಣುಕೊಂದು ಮಿಂಚಿ ಮಾಯವಾಯಿತು.
ಯಥೇಚ್ಛವಾಗಿ ಹಣ ಮಾಡಬೇಕು ಎಂಬ ಆಸೆ ಇಲ್ಲದಿದ್ದರೂ ಸ್ವಲ್ಪ ಅನುಸರಿಸಿದ್ದರೆ ಸಂಸಾರ ಸಾಗಿಸಲು ತೊಂದರೆ ಕಾಣುತ್ತಿರಲಿಲ್ಲ. ಇದನ್ನೇ ಜೀವನ ಕಲೆ ಅನ್ನುವುದು. ಜೀವನವು ನೀರಿನ ಹಾಗಿದ್ದರೆ ಸುಖಮಯ ಸಂಸಾರ. ಬಂಡೆಯನ್ನು ಸವೆಸುವ ಶಕ್ತಿ ನೀರಿಗಿದೆ. ಸುತ್ತಿಗೆಯಿಂದ ನೀರಿಗೆ ಹೊಡೆದರೆ ಪೆಟ್ಟಾಗುವುದಿಲ್ಲ. ಆದರೆ ಕಲ್ಲು ಬಂಡೆಗೆ ಹೊಡೆದರೆ ಪುಡಿ ಪುಡಿಯಾಗುತ್ತದೆ. ಇದೇ ಜೀವನದ ಗುಟ್ಟು.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್