
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಸಂಬಂಧ ಭಾವನಾತ್ಮಕವಾದುದು
ಸಂಬಂಧವೆಂಬ ಬಂಧನವು ಭಾವನಾತ್ಮಕವಾದುದು. ಇದು ಭಾವ ಭರಿತವಾದ್ದರಿಂದ ನೋವು, ನಲಿವು, ಸುಖ, ದುಃಖಗಳಿಂದ ಕೂಡಿರುತ್ತದೆ. ಬಂಧನದ ಕೊಂಡಿ ಬಿಡಿಸಲಾಗದ ಗಂಟು. ಮಾನವನ ಈ ಸಂಬಂಧವು ಅತಿ ಶ್ರೇಷ್ಠವಾದುದು. ಪ್ರಾಣಿ ಸಂಕುಲದಲ್ಲಿ ಈ ಸಂಬಂಧವನ್ನು ಕೆಲವೇ ಜೀವಿಗಳಲ್ಲಿ ಮಾತ್ರ ನೋಡಲು ಸಾಧ್ಯ. ಇಲ್ಲಿ ಅವುಗಳ ಮೆದುಳಿನ ಬೆಳವಣಿಗೆಯ ಮೇಲೆ ಅದು ಅವಲಂಬಿಸಿರುತ್ತದೆ. ಉದಾಹರಣೆಗೆ ಆನೆ, ಗೊರಿಲ್ಲಾ, ಚಿಂಪಾಂಜಿ ಇವುಗಳ ಸಂಬಂಧವನ್ನು ಅನೇಕ ವರ್ಗಗಳಲ್ಲಿ ವಿವರಿಸಲಾಗಿದ್ದರೂ ಇದರಿಂದಲೇ ಎಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ.
ಒಡ ಹುಟ್ಟಿದವ ಎಂಬುದು ಸಮಾಜಶಾಸ್ತç ಜ್ಞಾನವಾದ. ರಕ್ತವನ್ನು ಹಂಚಿಕೊಂಡು ಹುಟ್ಟಿರುವನೆಂಬುದು ಜೀವಶಾಸ್ತçಜ್ಞನ ತರ್ಕ. ಆದರೆ ತಾಯಿಗೆ ತನ್ನ ಒಡಲಿನ ಕುಡಿ. ಈ ಕುಡಿಯೇ ಒಂದು ರೀತಿಯ ಜಿಗುಟು ಅಥವಾ ಅಂಟು. ಇದನ್ನು ಆಂಗ್ಲ ಭಾಷೆಯಲ್ಲಿ Chemistry ಎನ್ನುವರು.
ಈ ವಾಸನೆಯನ್ನು ನಾವು ಅನುಬಂಧ ಅಂತಲೂ ಕರೆಯಬಹುದು. ಮನುಷ್ಯರಲ್ಲಿ ವಾಸನೆ ಅಂದ ತಕ್ಷಣ ಅದು ಹೊರ ಸೂಸುವುದಿಲ್ಲ. ಅದನ್ನು ಅರಿಯಲು ಸೂಕ್ಷ್ಮವಾದ ಗ್ರಹಿಕೆಯನ್ನು ಹೀರುವ ಸಾಧನವಿಲ್ಲ (Receptors). . ಹಾಗಿದ್ದರೆ ಅವುಗಳು ಎಲ್ಲಿ ಅಡಿಗಿವೆ? ಅದೇ Neo Encephalon (ಸಮಾಜದ ಅರಿವಿಗೆ ಹೊಸದಾಗಿ ಬೆಳೆದಿರುವ ಮೆದುಳಿನ ಪಟಲ). ಪರಿಸರದ ಸಮಾಜ ತಜ್ಞರ ಪ್ರಕಾರ ಮೇಲೆ ಹೇಳಿದ ಸಿದ್ಧಾಂತವನ್ನು ತಳ್ಳಿ ಹಾಕಿ, ಹುಟ್ಟಿದ ಮಗುವನ್ನು ತಾಯಿಯಿಂದ ಬೇರ್ಪಡಿಸಿ, ಪ್ರಾಣಿಗಳ ಮಡಿಲಲ್ಲಿ ಸಾಕಿದರೆ ಅನುಬಂಧವಾಗುತ್ತದೆ ಎಂಬುದನ್ನು ಅನೇಕ ಸಂಶೋಧನೆಗಳಿಂದ ನಿದರ್ಶಿಸಿದ್ದಾರೆ.
ವಾಸ್ತವದಲ್ಲಿ ವಿಜ್ಞಾನಿಗಳು ಏನೇ ಸಿದ್ಧಾಂತಗಳನ್ನು ಹೇಳಿದರೂ, ನಾನೊಬ್ಬ ಮನೋ ವೈದ್ಯನಾಗಿರುವುದರಿಂದ, ಈ ಅನುಬಂಧದ ಸ್ಥಾನ ಚಿತ್ತದ ಮನೋಭಾವನಾ ಕ್ಷೇತ್ರದ್ದು ಎಂದು ಹೇಳುವೆನು.
ಹೇಗೆಂದರೆ, ಈ ಸಂಬಂಧವನ್ನು ನನ್ನ ಕಲ್ಪನಾ ಸಿದ್ಧಾಂತದಡಿ ವಿವರಿಸುವೆನು. ಅಂಗ್ರೇಜಿಯಲ್ಲಿ ಸಂಬಂಧವನ್ನು Relationship ಎನ್ನುವರು.
ಇದನ್ನು ವಿಸ್ತರಿಸಿದಾಗ ನಮಗೆ Relay-Emotion-Ship ಎಂಬುದಾಗಿ ಕಾಣುವುದು. ಇದರಿಂದ ನಮಗೆ ಅರ್ಥವಾಗುವುದು Relationship is nothing but relay of emotion in a ship. . ಮನೆ, ಹಳ್ಳಿ, ಊರು, ನಗರ, ರಾಜ್ಯಗಳೆಲ್ಲವೂ ನೌಕೆಯೇ. ನಾವೆಲ್ಲರೂ ಈ ನೌಕೆಯ ಸವಾರರು. ನೌಕೆಯ ಒಳಗಿದ್ದಾಗ ನಾವೆಲ್ಲಾ ಒಡನಾಡಿಗಳು. ಈ ಒಡನಾಟದಲ್ಲಿ ಭಾವನೆಯೇ ಕೊಂಡಿ. ಇದು ಸಂಬಂಧಿಯಾಗಿ ಪರಿಣಮಿಸುವುದು. ಇಂತಹ ಮನಸ್ಥಿತಿಯನ್ನು Stock home syndrome ನಲ್ಲಿ ಕಂಡಿರುವಂತಾಗಿದೆ. ಈ ಕಾರಣದಿಂದಲೇ ನಾನು ಸಂಬಂಧವೆಂಬುದನ್ನು ಮನಸ್ಥಿತಿ ಅನ್ನುವುದು.

ಈ ಸಿದ್ಧಾಂತದಿಂದಲೇ ಇಂದು ಒಲಿಂಪಿಕ್ ಕ್ರೀಡೆಯಲ್ಲಿ ರಿಲೇ ((Relay) ) ಓಟವನ್ನು ಸೇರಿಸಲ್ಪಟ್ಟಿರುವುದು. ಈ ರಿಲೇ ಓಟ ಎಷ್ಟು ರೋಚಕತೆಯನ್ನು ಹೊಂದಿರುವುದೋ, ಹಾಗೆಯೇ ಈ ಭಾವನಾತ್ಮಕ ಸಂಬಂಧಗಳು ಕೂಡ. ಸಕಾರಾತ್ಮಕ ಸಂಬಂಧ ಭಾವಗಳು ಮಾನವನ ಏಳಿಗೆ, ಮನೋಲ್ಲಾಸ ಜೀವನದ ಅಭಿವೃದ್ಧಿಗೆ ಸಹಕಾರ ಒದಗಿಸುವುದು. ನಕಾರಾತ್ಮಕ ಸಂಬಂಧಗಳು ನರಕಕ್ಕೆ ಸಮಾನ.
ಮಕ್ಕಳು ತಾಯಿಯ ಮಮತೆಯ ಕುಡಿ ಅನ್ನುವರು. ತಾಯಿಯ ಈ ಮಮತೆಗೆ ಏನು ಕಾರಣವೆಂದರೆ, ತಾಯಿ ಗರ್ಭ ಧರಿಸಿದ ಕ್ಷಣದಿಂದಲೇ Hypothalamus-Pitutary-Adrenel axis ಎಂಬ ನರವ್ಯೂಹ ಉತ್ತೇಜನಗೊಂಡು Oxytocin ಎಂಬ ಹಾರ್ಮೋನನ್ನು ಗ್ರಂಥಿಯಿಂದ ಪಸರಿಸುವುದರಿಂದ ಮಮತೆ ಎಂಬ ಭಾವನಾತ್ಮಕ ಮನಸ್ಸು ತಾಯಿಗೆ ಬರುವುದು. ಇದರಲ್ಲಿ ಅನೇಕ ಕಾರಣಗಳಿಂದ ದೋಷಮುಕ್ತವಾಗಿ Oxytocin ದ್ರವದಲ್ಲಿ ಏರುಪೇರಾದರೆ ಮನೋ ನ್ಯೂನ್ಯತೆಗಳಿಂದ ಹಿಡಿದು ಮನೋ ವಿಕಲತೆಯವರೆಗೂ ಆ ತಾಯಿಯಲ್ಲಿ ಮನೋ ತೊಂದರೆಗಳನ್ನು ಕಾಣಬಹುದು.
ಉದಾಹರಣೆಗೆ Post partum blue ಹಾಗೂ Post partum psychosis ಎಂಬ ಕಾಯಿಲೆಗಳು. ಈ ಲಕ್ಷಣಗಳಲ್ಲಿ ತಾಯಿ ಮಮತೆ ಕಾಣುವುದಿಲ್ಲ.
ಇದಕ್ಕೆ ಸಂಬಂಧಪಟ್ಟಂತೆ ನನ್ನಲ್ಲಿಗೆ ಇತ್ತೀಚೆಗೆ ಬಂದು ವಾಸಿಯಾದಂತಹ ರೂಪಾಂತರ ಘಟನೆಯೊಂದನ್ನು ವಿವರಿಸುವೆನು.
ಸುಮಾರು ಮೂವತ್ತು ವರ್ಷದ, ಮೂರನೇ ಮಗುವಿನ ಎರಡು ತಿಂಗಳ ಬಾಣಂತಿಯನ್ನು ಅವಳ ಬದಲಾದ ನಡವಳಿಕೆಯನ್ನು ಗಮನಿಸಿದ ಗಂಡ ನನ್ನಲ್ಲಿಗೆ ಕರೆತಂದು ವಿವರಿಸಿದ. ‘ಮಗುವನ್ನು ಗೋಣಿ ಚೀಲದೊಳಗೆ ಹಾಕಿ ಬೇಯಿಸಿದ್ದರಿಂದ ಮಗು ಪೂರ್ತಿ ಸುಟ್ಟು ಸತ್ತುಹೋಯ್ತು. ನಂತರ ಈಕೆಯೂ ಆತ್ಮಹತ್ಯೆಯ ಅಂತ್ಯದಲ್ಲಿದ್ದಳು. ನಾನು ತಕ್ಷಣ ನೋಡಿ ಬದುಕಿಸಿದೆ’ ಅಂದನು. ಇದನ್ನು ನಾವು Extended Suicide ಎನ್ನುವೆವು.
ಈ ತರಹದ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನೀವೂ ಗಮನಿಸಿರಬಹುದು. ಇವುಗಳನ್ನು ಬುದ್ಧಿ ವಿಕಲ್ಪ ಅನ್ನಬಹುದು. ಈ ಕಾಯಿಲೆಯಲ್ಲಿ ಮಗು ತನ್ನದಲ್ಲ ಎಂಬ ಕಲ್ಪನೆ, ಹಾಲುಣಿಸದೆ ಇರುವುದು, ನಿದ್ರಾಹೀನತೆ, ಆತ್ಮಹತ್ಯೆ ಮತ್ತು ಹತ್ಯೆ ವಿಚಾರಗಳು ಬರುವುದು, ಉದ್ವಿಗ್ನತೆ, ಖಿನ್ನತೆ, ಅಸಹಜವಾಗಿ ವರ್ತಿಸುವುದು, ಆಹಾರ ಸೇವಿಸದಿರುವುದು ಇಂತಹ ಲಕ್ಷಣಗಳಿರುತ್ತವೆ. ಆಕೆ ನನ್ನ ಮೂರು ತಿಂಗಳ ಔಷಧೋಪಚಾರದಲ್ಲಿ ಗುಣಮುಖಳಾದಳು.
ನನ್ನಲ್ಲಿಗೆ ಬಂದ ಇನ್ನೊಂದು ದಂಪತಿಗಳಲ್ಲಿ ಗಂಡನ ದೂರೆಂದರೆ, ‘ಹೆಂಡತಿ ತನ್ನೆಲ್ಲಾ ಕೋಪವನ್ನು ಈ ಎಳೆಗೂಸಿನ ಮೇಲೆ ತೀರಿಸಿಕೊಳ್ಳುವಳು’ ಎಂಬುದು. ನಾನು ಏನು ಮಾಡ್ತೀನಿ ಅಂತ ಗೊತ್ತಾಗಲ್ಲ ಸಾರ್, ಅರಿವಿಲ್ಲದೆ ನನ್ನ ಮಗುವಿಗೆ ಸಿಕ್ಕಾಪಟ್ಟೆ ಹೊಡ್ದುಬಿಡ್ತೀನಿ ಎಂಬುದು ಹೆಂಡತಿಯ ಅಳಲು. ಆಕೆಯ ಸಿಟ್ಟು ನಿರ್ದೋಷಿತವಾದದ್ದು. ಆದರೆ ಕಾರಣಗಳು ನೂರಾರಿರುತ್ತವೆ.
ಇತ್ತೀಚೆಗೆ ಮಾಧ್ಯಮದಲ್ಲಿ ನೋಡಿದ `ಫಾಲಾಕ್’ ಕಂದಮ್ಮನ (Battered Baby Syndrome) ಹೃದಯ ವಿದ್ರಾವಕ ಸ್ಥಿತಿ ಮಾತ್ರ ಹಲವಾರು ಘಟನೆಗಳನ್ನು ಕೇಳಿದ್ದರೂ ನನ್ನನ್ನು ನಿದ್ರೆಗೆಡಿಸಿದ್ದು ನಿಜ.
ಈ ಅಂಕಣಕ್ಕೆ ಫಾಲಾಕ್ ಕಂದಮ್ಮಳೇ ಕಾರಣ. ಸಮಾಜ, ವಿಜ್ಞಾನ, ಇಂತಹ ಘಟನೆಗಳನ್ನು ತಡೆಯುವತ್ತ ಗಮನ ಹರಿಸಬೇಕಿದೆ. ನಮ್ಮ ನಿಮ್ಮ ಪ್ರಯತ್ನವೂ ಅದೇ ಆಗಿರಲಿ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್