
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಕರ್ಮ ಸಿದ್ಧಾಂತ
ಒಮ್ಮೆ ಮೌನಿ ಮಹಾಮುನಿಗಳಿಗೆ ಬುದ್ಧಿವಂತ ಶಿಷ್ಯನೊಬ್ಬ ಸಿಕ್ಕಿ ತನ್ನ ಸಂಶಯವನ್ನು ವ್ಯಕ್ತಪಡಿಸುತ್ತಾ ‘ಗುರುಗಳೇ ಬಹಳ ದಿನಗಳಿಂದ ಒಂದು ಅನುಮಾನ ನನ್ನನ್ನು ಕಾಡುತ್ತಿದೆ. ಅದನ್ನು ಮಾರ್ಗದರ್ಶನೋಪಾದಿಯಲ್ಲಿ ನಿವಾರಿಸಬೇಕು’ ಅನ್ನುತ್ತಾ ದೀರ್ಘ ಪ್ರಶ್ನೆಯೊಂದನ್ನು ಮುಂದಿಟ್ಟ. ಈ ವಿಶ್ವವು ನಾಟಕ ಮಂದಿರ. ನಾವೆಲ್ಲ ಆ ಪರಮಾತ್ಮ ಆಡಿಸಿದಂತೆ ಆಡುವ ಪಾತ್ರಧಾರಿಗಳು. ಬಹುತೇಕ ಪಾತ್ರಗಳಿಗೆ ನಾಟಕಕಾರ ನಾಟಕದ ಕರ್ತೃ ಮೊದಲೇ ನಿಯೋಜಿಸಲ್ಪಟ್ಟ ಮತ್ತು ಉರು ಹೊಡೆಯಲ್ಪಟ್ಟ ನಟನೆ ಹಾಗೂ ಸಂಭಾಷಣೆಯನ್ನು ಹೇಳಿಕೊಟ್ಟಿರುತ್ತಾರೆ.
ಆ ರೀತಿಯಲ್ಲೇ ಎಲ್ಲಾ ಪಾತ್ರಧಾರಿಗಳು ಮಾಡಬೇಕಾಗುತ್ತದೆ. ಇಲ್ಲಿ ಎಲ್ಲಾ ಎಲ್ಲರೂ ಪೂರ್ವ ನಿಯೋಜಿತ ಧರ್ಮಕರ್ಮವನ್ನು ಮಾಡಬೇಕಾಗುತ್ತದೆ. ಹೀಗಿರುವಾಗ ನಮ್ಮ ಪರಿವರ್ತನೆ ಅಥವಾ ಸಂದರ್ಭಾನುಸಾರ ನಡವಳಿಕೆ ಎಷ್ಟರ ಮಟ್ಟಿಗೆ ತರ್ಕಬದ್ಧ? ಇದನ್ನು ಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತವೆಂದು ಕರೆಯುವರು. ಈ ಕರ್ಮವನ್ನು ದೇವರು ಮೊದಲೇ ಬರೆದಿಟ್ಟಿರುವುದರಿಂದ ನಿಮ್ಮ ಧ್ಯಾನ ತತ್ವ ಎಷ್ಟು ಸಮಂಜಸ?’ ಎಂದ.
ಈ ಪ್ರಶ್ನೆಯನ್ನು ಕೇಳಿದ ಮುನಿಗಳು ಮುಗುಳ್ನಕ್ಕು ‘ಸಮಂಜಸವಾದ ಪ್ರಶ್ನೆಯನ್ನೇ ಕೇಳಿದ್ದೀಯ. ಇದನ್ನು ನಾನು ದುರದೃಷ್ಟಕರವೆನ್ನುತ್ತೇನೆ. ಈ ಜಗತ್ ಬ್ರಹ್ಮಾಂಡವು ಸೃಷ್ಟಿಕರ್ತನಿಂದ ನಿರ್ಮಿಸಲ್ಪಟ್ಟ, ಜೀವ ನಿರ್ಜೀವದ ವಸ್ತುಗಳನ್ನು ಪೂರ್ವನಿಯೋಜಿತ ಸಿದ್ಧಾಂತದಡಿ ಸಮಯವನ್ನು ನಿರ್ಧರಿಸಿ ಸೃಷ್ಟಿ ನಾಶಕ ಎನ್ನುವುದು ಎಷ್ಟು ಸರಿ? ನಾನು ಈ ಪೂರ್ವನಿಯೋಜಿತ ಅಂದರೆ ನಮ್ಮ ನಾಶ ಮತ್ತು ಅಸ್ತಿತ್ವವನ್ನು ಭಗವಂತನು ನಮ್ಮ ಹಣೆಯ ಮೇಲೆ ಬರೆದಿರುವನು ಎಂಬುದನ್ನು ಸಿದ್ಧಾಂತವಾಗಿ ನೋಡುವವನೇ ಹೊರತು ಸಾಧನೆಯ ಮಾಪನವಾಗಿ ಅಲ್ಲ. ಇದು ನಿಜವಾದರೆ ನನ್ನ ಮತ್ತೊಬ್ಬ ಪ್ರೀತಿಯ ಶಿಷ್ಯ ಗುಂಡನ ಹೆಂಡತಿಯ ಪ್ರಕಾರ ಪಲಾಯನವಾದವೆಂಬಂತೆ ಕಾಣುವುದು. ಸಾಧನ ಮಾಪನ ಚೌಕಟ್ಟಿನಲ್ಲಿ ತರ್ಕಿಸಿದಾಗ ಪೂರ್ವನಿಯೋಜನೆ ನನಗೆ ಕನಸಾಗಿ ಕಾಣುವುದು.
ವರ್ತಮಾನದಲ್ಲಿ ಇದು ನಿಜವೆಂದು ತಿಳಿದರೆ, ನಮ್ಮನ್ನು ಗುರುತಿಸುವವರು ಯಾರು? ನಮ್ಮನ್ನು ಪ್ರೀತಿಸುವವರು ಯಾರು? ಎಲ್ಲೆಡೆ ಮೋಸ ಮಾಡುವವರೇ ಕಾಣುವರು. ಕಾರಣವಿಷ್ಟೆ. ನಾನು ನಿರ್ದಿಷ್ಟ ಸಮಯದಲ್ಲಿ ಕರ್ಮಾನುಸಾರ ಎರಡು ವರ್ಷಗಳಲ್ಲಿ ಸಾಯುವೆನು ಅಂದುಕೊಳ್ಳೋಣ. ಆಗ ನೀವೆಲ್ಲಾ ಏನು ಮಾಡುವಿರಿ? ಆದಷ್ಟು ಬೇಗ ಹೆಚ್ಚು ಹಣವನ್ನು ಇವರ ಹತ್ತಿರ ಲಪಟಾಯಿಸಬೇಕು ಎಂದು ಯೋಚಿಸುವಿರಿ. ಇದನ್ನೇ ಸ್ವಾರ್ಥ ಸಿದ್ಧಾಂತ ಅನ್ನುವುದು.

ಬೃಹತ್ ಬ್ರಹ್ಮನಿಗೆ ನಾವು ಯಾರು? ನಾವು ಇದ್ದರೆಷ್ಟು, ಹೋದರೆಷ್ಟು? ಅವನೇನಾದರೂ ಹೇಳಿದ್ದಾನೆಯೇ ನೀನು ಇಷ್ಟು ವರ್ಷಗಳಿದ್ದು ಪಾಪ ಪುಣ್ಯಗಳನ್ನು ಮಾರ್ಪಾಟು ಮಾಡಿ ಬಾ ಎಂದು? ಇವೆಲ್ಲಾ ಕೇವಲ ನಮ್ಮ ಭ್ರಮೆಯಷ್ಟೆ. ಈ ಭ್ರಮೆಯನ್ನು ನಾನು ಕನಸು ಎನ್ನುವೆನು.
ಮೌಢ್ಯಗಳನ್ನು ಒಳಗೊಂಡ ಓ ಮೂರ್ಖ ಶಿಷ್ಯಂದಿರೆ, ನನ್ನ ಈ ಮಾತುಗಳನ್ನು ಗಮನವಿಟ್ಟು ಕೇಳಿ. ಮಗು ಹುಟ್ಟಿದ ತಕ್ಷಣ ಈ ಪ್ರಪಂಚಕ್ಕೆ ಏನು ಕೊಡಬಲ್ಲದು? ಕೊಡಬೇಕಾಗಿರುವುದು ನಾವು. ಆ ಮಗುವಿಗೆ ಮಮತೆ, ಪ್ರೀತಿ, ವಾತ್ಸಲ್ಯ, ಕರುಣೆ, ಆಹಾರ ಮತ್ತು ತಾಯಿ ತೆಕ್ಕೆಯ ಬಿಸಿ. ಇವುಗಳನ್ನು ಕೊಡದಿದ್ದರೆ ಮಗು ಸಾಯುವುದು ಖಚಿತ. ಶಾರೀರಿಕವಾಗಿ ಅಲ್ಲ, ಮಾನಸಿಕವಾಗಿ ಮಗುವಿಗೆ ಇವೆಲ್ಲವು ಅರಿವಿಲ್ಲದೆ ಸಿಗುತ್ತಿರುತ್ತವೆ. ಆಗತಾನೇ ಹುಟ್ಟಿದ ಹಾಲ್ಗೂಸು ಸ್ವಾಭಾವಿಕವಾಗಿ ಅಸಹಾಯಕ ಮುಗ್ಧ. ಅದಕ್ಕೆ ಸಹಾಯ ಅನಿವಾರ್ಯ. ಆದರೆ ಇತರೇ ಜೀವಿಗಳಿಗೆ ಪ್ರಪಂಚದಲ್ಲಿ ಸಹಾಯ ಅಥವಾ ಆಸರೆ ಅಷ್ಟೊಂದು ಅಗತ್ಯವಿಲ್ಲ. ಮಗುವಿಗೆ ಪ್ರೀತಿ ತೋರಿಸುತ್ತಾರೆ. ಆಹಾರದ ಕೊರತೆ ಇಲ್ಲ. ಬಟ್ಟೆಗಳಿಂದ ಹೊದಿಸಿರುತ್ತಾರೆ ಅನ್ನುವುದೆಲ್ಲಾ ಸೂಕ್ಷ್ಮ ಮನಸ್ಸಿನಲ್ಲಿ ಕೇಂದ್ರೀಕೃತಗೊಂಡಿರುತ್ತದೆ.
ದೊಡ್ಡವನಾಗಿ ಬೆಳೆದು ಯೌವನಾವಸ್ಥೆಗೆ ಬಂದರೂ ಸಹ ಈ ಲೌಕಿಕ ಜಗತ್ತನ್ನು ಸುಪ್ತ ಮನಸ್ಸಿನಲ್ಲಿ ಕಾದುಕೊಳ್ಳುವವನಾಗಿರುತ್ತಾನೆ. ಈ ಸುವ್ಯವಸ್ಥೆಯು ಯುವಕನಿಗೆ ಅರಿವಾದಾಗ ಭ್ರಮನಿರಸನಗೊಳ್ಳುತ್ತಾನೆ. ಅವನ ಚಿಂತನಾ ಲೋಕವು ಅರಿಯದೇ ಹೋದಾಗ ಮತ್ತು ಹತ್ತಾರು ಬಾಧೆಗಳು ಸೃಷ್ಟಿಗೊಂಡಾಗ ಅವನಲ್ಲಿ ಅನೇಕ ಪ್ರಶ್ನೆಗಳು ಹುಟ್ಟುವುದು ಸಹಜ. ನಾನು ಜನಿಸಿದ್ದಾದರೂ ಏಕೆ? ನನಗೆ ಜನ್ಮವಿತ್ತವರು ಯಾರು? ನಾನು ಬದುಕಲೇಬೇಕ? ನನ್ನ ಅಸ್ತಿತ್ವವೇನು? ಜೀವನದ ಉದ್ದೇಶವೇನು? ಎಂದೆಲ್ಲಾ ಕಾಡುತ್ತವೆ. ಇವಕ್ಕೆಲ್ಲಾ ನನ್ನ ಉತ್ತರವೆಂದರೆ ‘ನಿನ್ನ ಹುಟ್ಟು, ಜೀವನ ಉದ್ದೇಶ ರಹಿತವಾದುದು’. ಮಗುವಿನ ಎಲ್ಲಾ ಆಶೆಗಳನ್ನು ನೆರವೇರಿಸಬಹುದು. ಆದರೆ ಅವನ ಯೌವನಾವಸ್ಥೆಯ ಅಭಿಲಾಶೆಗಳನ್ನು ತೀರಿಸುವುದು ಸುಲಭದ ಮಾತಲ್ಲ. ಭ್ರಮನಿರಸನಗೊಂಡ ಯುವಕನ ಸುಪ್ತ ಮನಸ್ಸಿನಲ್ಲಿ ಇಂತಹ ಅನುಮಾನದ ಪ್ರಶ್ನೆಗಳು ಸಹಜ.
ಒಂದು ಯಂತ್ರವನ್ನು ಸೃಷ್ಟಿಸುವುದು ಪೂರ್ವ ನಿಯೋಜಿತ ಉದ್ದೇಶಕ್ಕೆ ಮಾತ್ರ. ಆದರೆ ಪುರುಷ ಸೃಷ್ಟಿ ಚೇತೋಹಾರಿ. ಮನೋಲ್ಲಾಸ, ಹೃದಯ ಉದಾರಿತನ, ನೀರಿನಂತೆ ನಿಷ್ಠ ಕಮಲ ತತ್ವ ಸಂಚಲನ ಪ್ರವೃತ್ತಿ. ಅಂತರಾಳದ ಶ್ರೀಮಂತಿಕೆ ಈ ಸೃಷ್ಟಿಯನ್ನು ಮತ್ತು ಸೃಷ್ಟಿಕರ್ತನನ್ನು ಕೊಂಡಾಡುವುದು ಇತ್ಯಾದಿ ಇವೆಲ್ಲವೂ ವ್ಯಕ್ತಿಯ ಧ್ಯಾನ ಸಾಧನಗಳಾಗಿರುತ್ತವೆ ಅನ್ನುವುದನ್ನು ಮರೆಯಬಾರದು.
ಹೌದು, ಈ ಪ್ರಪಂಚ ಒಂದು ಬೃಹತ್ ಅದ್ಭುತವಾದ ಮಾಯಾ ನಾಟಕರಂಗ. ಪಾತ್ರಧಾರಿಗಳಿಗೆ ನಿರ್ದಿಷ್ಟವಾದ ಕಾರ್ಯ ಪ್ರವೃತ್ತಿಗಳಿರುತ್ತವೆ. ಒಮ್ಮೆ ಯೋಚಿಸಿ. ಈ ವಿಸ್ಮಯ ಲೋಕ ರಂಗದಲ್ಲಿ ಎಲ್ಲರೂ ಪೂರ್ವ ನಿಯೋಜಿತ ನಾಟಕ ಅಭಿನಯಿಸಿದ್ದರೆ, ಅದು ನಾಟಕವೆನಿಸುತ್ತಿತ್ತೇ ಹೊರತು ಜೀವನವೆನಿಸಿಕೊಳ್ಳುತ್ತಿರಲಿಲ್ಲ. ಈ ಕಾರಣದಿಂದ ಜೀವನ ನಾಟಕದಲ್ಲಿ ಕರ್ಮಸಿದ್ಧಾಂತ ಅಪ್ರಸ್ತುತ. ನಾಟಕವೆಂಬುದೊಂದು ಕಾಲ್ಪನಿಕ ಕನಸಿನ ಜಗತ್ತು. ಕುಟುಂಬ ಎಂಬುದು ಅಣುಗಾತ್ರದ ನಾಟಕ ವೇದಿಕೆ. ನಾವು ನೋಡುವ ನಾಟಕ ಕೆಲವು ಗಂಟೆಗಳಿಗೆ ಸೀಮಿತ. ಸತ್ಯತೆಯು ಸೂತ್ರಧಾರಿಯ ಕನಸಿನ ಲೋಕಕ್ಕೆ ಹೋಲುತ್ತದೆ.
ಆದರೆ ನಮ್ಮ ನಾಟಕ ಸತ್ಯ, ಸುಳ್ಳು, ನೋವು, ನಲಿವು, ಕಷ್ಟ ಸುಖಗಳ ಪಾತ್ರಗಳಲ್ಲಿ ಅಭಿನಯಿಸುವುದು ಸತ್ಯವೆಂಬಂತೆ ಕಂಡರೂ ನಿಜವಾಗಿರುವುದಿಲ್ಲ. ಗಂಡ ಹೆಂಡತಿ ಪಾತ್ರಧಾರಿಗಳು. ಇವರ ವರ್ತಮಾನದ ವ್ಯಾಪಾರ ವೃತ್ತಿ ಕಾರ್ಯಕ್ಕೆ ಸಮನಾಗಿರುತ್ತದೆ. ಕೆಲವು ದಿನಗಳವರೆಗೆ ಈ ಸಿದ್ಧಾಂತ ಅನ್ವಯವಾಗುತ್ತದೆ. ಆದರೆ ಜೀವನದ ನಾಟಕದಲ್ಲಿ ಏರುಪೇರು ಸಹಜ. ಆದರೆ ಸಂಸಾರದಲ್ಲಿ ಗಂಡ, ಹೆಂಡತಿ, ಮಕ್ಕಳು ಎಲ್ಲರೂ ಅವರವರ ಕರ್ತವ್ಯ ಅರಿತು ಮಾಡಿದರೆ ಏರುಪೇರು ನಶಿಸಿ ಸಮಾನತೆ ಇರುತ್ತದೆ. ಈ ಸಮಯದಲ್ಲಿ ಒಳಗೊಂಡ ವೃತ್ತಿ ಪೂರ್ವ ನಿಯೋಜಿತ ಕರ್ಮ ಸಿದ್ಧಾಂತದಲ್ಲಿ ಅಪ್ರಸ್ತುತ ಗಂಡಸು ಯಜಮಾನ ಎಂದು ಬೀಗುವ ಹಾಗಿಲ್ಲ ಹೆಂಡತಿ ಅಬಲೆ ಅನ್ನುವ ಅಗತ್ಯವಿಲ್ಲ. ಹಾಗಿದ್ದಲ್ಲಿ ಪರಿವರ್ತನೆಯೇ ಜೀವನದ ಸಾಧನೆಯ ಮಾಪನವಾಗಿರುತ್ತದೆ. ಇಂತಹ ಸ್ಥಿತಿಗೆ ಧ್ಯಾನವೆಂದು ಕರೆಯುವೆವು.
ಶಿಷ್ಯರೇ, ಈಗ ತಿಳಿಯಿತಲ್ಲ? ಧ್ಯಾನವೆಂದರೆ ಕಣ್ಣು ತೆರೆದು ಸಹಜವಾಗಿ ಪರಿವರ್ತನೆಯಾಗಬಹುದು. ಕಣ್ಣು ಮುಚ್ಚಿ ಧ್ಯಾನ ಮಾಡಿದರೆ ಅಸಹಜ ಜಡ ಧ್ಯಾನವೆಂದು ಕರೆಸಿಕೊಳ್ಳುವುದು.
ಈ ನನ್ನ ಶಿಷ್ಯ ಗುಂಡ, ಇಲ್ಲಿಯವರೆಗೂ ಪರಿವರ್ತನಾ ಸಾಧನೆಯನ್ನು ತಿಳಿದಿದ್ದರೂ ಅವನ ಹೆಂಡತಿಯ ಮುಂದೆ ಅನುಷ್ಠಾನಕ್ಕೆ ತರದೆ ಇರುವುದರಿಂದ ಶಿಷ್ಯನಾಗೇ ಉಳಿದಿರುವನು. ಆಕೆಯನ್ನು ಇದರ ಬಗ್ಗೆ ವಿಚಾರಿಸಿದರೆ ನಮ್ಮ ಯಜಮಾನರು ಪಲಾಯನ ಸಿದ್ಧಾಂತದಲ್ಲಿ Enlightened Master ಎಂದು ಅಸಹನೆ ತೋಡಿಕೊಳ್ಳುವಳು.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್