
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಆಚರಣೆಗೆ ಕಾರಣಗಳು
ಅಪಸ್ಮಾರಕ್ಕೆ ಔಷಧಿ ನೀಡಿ ಚೇತರಿಸಿಕೊಂಡಿದ್ದ ಹದಿನೈದರ ಹರೆಯದ ವಿದ್ಯಾರ್ಥಿಯೊಂದಿಗೆ ಪೋಷಕರು ಮರು ಪರೀಕ್ಷೆಗಾಗಿ ಒಂದು ಸಂಜೆ ಬಂದರು. ಸಲಹಾ ಕೊಠಡಿಯೊಳಗೆ ಕಾಲಿಡುತ್ತಿದ್ದಂತೆ ಅವರ ಮುಖದಲ್ಲಿ ಮಂದಹಾಸವಿದ್ದುದರಿಂದ ಆತ ಗುಣಮುಖನಾಗಿರುವುದನ್ನು ಅರಿತೆನು. ಕೆಲವು ವರ್ಷ ಮಾತ್ರಗಳು ತೆಗೆದುಕೊಂಡ. ನಂತರ ಆತ ಮತ್ತೆ ಔಷಧಿ ಸೇವಿಸುವ ಅಗತ್ಯವಿಲ್ಲ ಮತ್ತು ಈ ಖಾಯಿಲೆ ಮತ್ತೆ ಮರುಕಳಿಸುವುದಿಲ್ಲ ಎಂಬುದು ತಾಯಿ ಮತ್ತು ರೋಗಿಯು ಸಂತೋಷವಾಗಿರುವುದಕ್ಕೆ ಕಾರಣವಾಗಿತ್ತು. ತಾಯಿ ಶಿಕ್ಷಕಿ, ತಂದೆ ವ್ಯಾಪಾರಸ್ಥರು, ಈಶ್ವರನ ಭಕ್ತರಾದ ಕಾರಣದಿಂದ ಎಲ್ಲರ ಹಣೆಯ ಮೇಲೆ ವಿಭೂತಿ ಪಟ್ಟೆಗಳು ರಾರಾಜಿಸುತ್ತಿದ್ದವು.
ಅವರ ಕುಶಲೋಪರಿಗಳನ್ನೆಲ್ಲಾ ವಿಚಾರಿಸಿದ ನಂತರ ಆಕೆ ಶಿಕ್ಷಕಿಯಾದ್ದರಿಂದ ಆ ವಿಭೂತಿ ಧಾರಣೆಯ ಉದ್ದೇಶ ಮತ್ತು ಪ್ರಾಮುಖ್ಯತೆಯನ್ನು ಕುತೂಹಲಕ್ಕಾಗಿ ಕೇಳಿದೆ. ಅದಕ್ಕೆ ‘ಭಕ್ತಿಗಾಗಿ’ ಎಂದು ಉತ್ತರಿಸಿದರು. ನನಗೆ ಅದು ಸಮಂಜಸವೆನಿಸಲಿಲ್ಲ. ‘ಶಿವಪುರಾಣದ ಪ್ರಕಾರ ಮೂರು ಲೋಕಗಳ ಅಧಿಪತಿಯಾದ ಶಿವನು ವಿಭೂತಿಧಾರಿಯೂ, ಮೂರು ನೇತ್ರಗಳ ಹೊಂದಿದ ಶಿವನು ತ್ರಯಂಬಕನು. ಮೂರು ಗುಣಗಳ ಹೊಂದಿದ ತ್ರಿಶೂಲಧರಿಯೂ, ಇಡೀ ವಿಶ್ವದ ಜೀವಿ ಸಂಕುಲಕ್ಕೆ ಗಂಗೆದಾರನು ಹಾಗೂ ವೇಗ, ತೀಕ್ಷ್ಣತೆ ಮತ್ತು ಶಕ್ತಿಯ ಸಂಕೇತ ಹೊಂದಿದ ಹುಲಿ ಚರ್ಮದ ಮೇಲೆ ಆಸನವಾದ ಶಿವನ ಕುರಿತು ಹೇಳಿ, ಹಣೆಯ ಮೇಲಿನ ವಿಭೂತಿ ಶಿವನ ಗುಣಗಾನಗಳ ಸೂಚಿ ಎಂದೆ. ಇದನ್ನೆಲ್ಲಾ ಗ್ರಹಿಸಿದ ಆ ಪೋಷಕರು ತೆರೆದ ಬಾಯಿ ಮತ್ತು ಕಣ್ಣುಗಳಿಂದ ತದೇಕಚಿತ್ತವಾಗಿ ನೋಡುತ್ತಾ ಮನದೊಳಗೆ ಈ ಮನೋ ವೈದ್ಯರು ಇದನ್ನೆಲ್ಲಾ ತಿಳಿದಿರುವವರೇ ಎಂಬ ಆಶ್ಚರ್ಯಕರ ಭಾವನೆ ವ್ಯಕ್ತಪಡಿಸಿದ್ದನ್ನು ಮನಗಂಡೆ. ಮುಂದಿನ ಸಲಹೆಯ ಸಮಯವನ್ನು ಪಡೆದು ನಮಸ್ಕಾರ ಹೇಳಿ ಹೊರಟು ಹೋದರು.
ಆಗ ಹಬ್ಬಗಳ ಸಮಯವಾದ್ದರಿಂದ ‘ಹೋಳಿ’ ನನ್ನ ಮನದಾಳವನ್ನು ಕದಡಲು ಶುರುವಾಯ್ತು. ಹಬ್ಬದ ಸಂಭ್ರಮ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ದ್ವೇಷ, ದಳ್ಳುರಿ, ಇರಿತ ಹಾಗೂ ಕೊಲೆಯಂತಹ ಪೈಶಾಚಿಕ ಕೃತ್ಯಗಳು ನಡೆಯುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ವಾಸ್ತವವಾಗಿ ಈ ಹೋಳಿಯ ವಿಶೇಷತೆಯೇನು? ಇದರ ಹಿಂದಿರುವ ವೈಜ್ಞಾನಿಕ ಹಿನ್ನೆಲೆ ಏನು? ಈ ಕುರಿತಂತೆ ವಿಶ್ಲೇಷಿಸಲು ಪ್ರಯತ್ನಿಸುವೆನು.
‘ಬಣ್ಣಾ ಬಣ್ಣಾ ನನ್ನ ಒಲವಿನ ಬಣ್ಣ, ನನ್ನ ಒಲುಮೆಯ ಬಣ್ಣ’ ಎಂದು ಹಾಡಿದ ಸವ್ಯಸಾಚಿ ಎಡಗೈ ಕಪ್ಪ ತೋರಿಸುತ್ತಾ ಹಾಡಿ ನೃತ್ಯವನ್ನು ಮಾಡಿದ ಶ್ರೇಷ್ಠ ನಟ ದಿವಂಗತ ವಿಷ್ಣುವರ್ಧನ್ರನ್ನು ಮರೆಯಲು ಸಾಧ್ಯವಿಲ್ಲ. ಅಂತಹ ಸಾಲುಗಳನ್ನು ರಚಿಸಿದ ಸಾಹಿತಿಗೆ ಎಷ್ಟು ನಮಸ್ಕಾರಗಳನ್ನು ಹೇಳಿದರೂ ಕಡಿಮೆಯೇ.

ಈ ಹೋಳಿ ಹಬ್ಬವನ್ನು ಬಣ್ಣದ ಹಬ್ಬವೆಂದು ಕರೆಯುತ್ತೇವೆ. ಇದರಲ್ಲಿ ರತಿ-ಮನ್ಮಥರ ಪಾತ್ರ ಮಹತ್ವದ್ದಾಗಿದೆ. ಈಶ್ವರನನ್ನು ಸೃಷ್ಟಿಕರ್ತನೆಂದು ಹೇಳುತ್ತೇವೆ. ಹಾಗೆಯೇ ಕುಲ ನಾಶಕನೂ ಹೌದು. ಅವನು ಸದಾ ಸೌಮ್ಯನೂ, ನಿರ್ಗುಣ ಸಂಪನ್ನನೂ ಮತ್ತು ನಿರ್ವಿಕಾರನೂ ಹೌದು. ಇವನಿಗೆ ಕೋಪ ಅಪರೂಪ. ಆದರೆ ಬಂತೆಂದರೆ ಸರ್ವನಾಶ. ಇವನ ಮುಂಗೋಪದಲ್ಲಿ ರೌದ್ರಾವತಾರದ ನರ್ತನವನ್ನು ಹೀಗೆ ಬರೆಯಬಹುದೇನೋ:
ಡಂ ಡಂ ಡಂ ಡಂ ಡಂ ಡಂ ಡಂ ಡಂ ಬುಡುಬುಡಿಕೆಯ ನಾದಂ
ಡ್ರೀಕ್ ಡ್ರೀಕ್ ಕ್ರೊಯ್ ಕ್ರೋಯ್ ಡಮರುಗ ಶಬ್ಧಂ
ಓಂಕಾರ ಓಂಕಾರ ನಾದ ವಿನೋದಂ
ಹರ ಹರ ನಟ ಭಯಂಕರ ನೃತ್ಯಂ
ಗಟ ಗಟ ವಿಟ ವಿಟ ಅಟ್ಟ ಘರ್ಜನಾದೇಶಂ
ಪಟ ಪಟ ಕಟ ಕಟ ಕಣ್ಗಳ ಭಾವನಾ ವಿದೋಶಂ
ಹವ ಹವ ಝರ ಝರ ಬಾಹುಗಳ ಜೇಂಕಾರಂ
ನಯ ವಿನೂತನ ಭಾವಾ ಅಂಗ ನಾಭಿ ಮರ್ದನಂ
ತಕತೈ ತಕತೈ ತಕ ತಕ ತೈ ತೈ
ರುದ್ರ ತಾಂಡವ ನರ್ತನಂ
ಕಲಿಯುಗದಿ ಕಲಿ ಸಂಹಾರಂ
ಓಂ ನಮೋ ಈಶ
ಓಂ ನಮೋ ಹರಿ ಹರೀಶ
ಓಂ ನಮೋ ಪಾರ್ವತೀಶಾ
ಯುಗೇ ಯುಗೇ…
ಮುಂಗೋಪಕ್ಕೆ ಇವನ ನರ್ತನವು ಇಷ್ಟಾದರೆ, ನಿಜವಾದ ಸಿಟ್ಟಿಗೆ ಏನು ತಾನೆ ಉಳಿಯುವುದು? ಇದನ್ನು ಅರಿತ ಪಾರ್ವತಿ ಮತ್ತು ಅನೇಕ ದೇವಾನುದೇವತೆಗಳು ಹೆದರಿ ನಡುಗಿ ರತಿ ಮನ್ಮಥರನ್ನು ಸೃಷ್ಟಿಸಿ ಶಿವನ ಕೋಪವನ್ನು ತಣ್ಣಗಾಗಿಸಲು ರಂಗುರಂಗಿನ ಮೋಹಿನಿಯರ ಮನಮೋಹಕ ದೃಶ್ಯ, ಕಾವ್ಯ ಮತ್ತು ನರ್ತನದ ಮೂಲಕ ಇವನ ಸಿಟ್ಟನ್ನು ಧಾತುವಿನ ರೂಪದಲ್ಲಿ ಹೊರ ಹಾಕಿದ್ದನ್ನು ಮಹಾತಾಯಿ ಪಾರ್ವತಿಯು ತನ್ನ ಮಡಿಲಲ್ಲಿ ತುಂಬಿ ಜೀವೋದ್ಧಾರಕಳಾದಳು ಎಂಬುದಾಗಿ ವೇದಗಳ ತಂತ್ರ ಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ. ಶಿವನ ಮೂಂಗೋಪಕ್ಕೆ ರತಿ ಮನ್ಮಥರು ದಹಿಸಿದರು ಎಂಬ ಪ್ರತೀತಿ ಕೂಡ ಇದೆ.
ಈ ಕಾಮ ದಹನದ ಕಥೆಯ ಸಂಕೇತವಾಗಿ, ಶಿವನ ಸಿಟ್ಟಿನಿಂದ ಸರ್ವ ಜೀವಸಂಕುಲಗಳು ನಶಿಸುವುದನ್ನು ತಪ್ಪಿಸಿದ ಸಲುವಾಗಿ ಈ ಹೋಳಿ ಹಬ್ಬವನ್ನು ಬಣ್ಣದ ಹಬ್ಬವೆಂದು ಹಿಂದೂ ಸಂಪ್ರದಾಯದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ಸ್ನೇಹಿತರೇ, ಭಾರತವೆಂದರೆ ಹಲವು ಧರ್ಮದ, ಜಾತಿಯ, ಸಂಸ್ಕೃತಿಯ ವಿವಿಧ ಆಚಾರ ವಿಚಾರಗಳ ವೈವಿಧ್ಯಮಯ ನಾಡು. ಇಂತಹ ದೇಶದಲ್ಲಿ ಬಣ್ಣದಿಂದ ಯಾವುದೇ ನಿರ್ದಿಷ್ಟ ಧರ್ಮವನ್ನು ಜಾತಿಯನ್ನು ಗುರುತಿಸಲಾಗದು. ಈ ಬಣ್ಣವೂ ಸಹ ಹೃದಯ, ಸಹಬಾಳ್ವೆ, ಸಹ ಭಾವನೆ ಮತ್ತು ಸಕಾರಾತ್ಮಕವಾಗಿ ಸಕಾಲಿಕವಾಗಿದ್ದು ಈ ಹಬ್ಬ ಆಚರಣೆಯಿಂದ ಸೃಜನಶೀಲರಾಗೋಣ, ಪರಸ್ಪರ ಹತ್ತಿರವಾಗೋಣ ದೇಶದ ಏಕತೆಯ ಮತ್ತು ಏಳಿಗೆಗಾಗಿ ಶ್ರಮಿಸೋಣ ಅಲ್ಲವೇ?
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್