ಮನಸು ಮೃದಂಗ
(ಲೇಖನಗಳ ಸಂಕಲನ)
ಭಾವ ಬಂಧನ
ರಾಜಧಾನಿಯ ಮುಖ್ಯ ಪ್ರಾಧಿಕಾರ ಒಂದರಲ್ಲಿ ಮೊದಲನೆ ದರ್ಜೆ ನೌಕರಳಾಗಿ ಕೆಲಸ ಮಾಡುತ್ತಿದ್ದಾಕೆ ತನ್ನ ಮಗಳನ್ನು ಆಪ್ತ ಸಮಾಲೋಚನೆಗೆಂದು ನನ್ನ ಬಳಿ ಕರತಂದಿದ್ದರು. ಹದಿನಂಟನೇ ವರ್ಷ ಸಮೀಪಸುತ್ತಿದ್ದ ಈಕೆ ಇಬ್ಬರ ಹೆಣ್ಣುಮಕ್ಕಳಲ್ಲಿ ಮೂದಲನೆಯವಳು. ತಾಯಿ ಸಮಾಜ ಶಾಸ್ತ್ರ ಪದವೀಧರೆ ಹಾಗು ಬುದ್ದಿವಂತೆ. ಈಕೆ ತನ್ನ ಮಕ್ಕಳ ಮನಸ್ಸುಗಳನ್ನು ಚೆನ್ನಾಗಿ ಅರತಿದ್ದವಳು. ಮಕ್ಕಳಿಗೆ ತಾಯಿಯ ಒಳ್ಳೆಯ ವಾಕ್ಯಗಳು ಅಥವ ನುಡಿಗಳು ಬೈಗುಳದಂತೆ ಕೇಳಸತಿದ್ದವು. ನನಗೆ ಈ ಸಮಯದಲ್ಲಿ “ಹಿತ್ತಲ ಗಿಡ ಮದ್ದಲ್ಲಾ” ಎನ್ನೊಗಾದೆ ನೆನಪಿಗೆ ಬಂತು.
ಈ ತಾಯಿ ತನ್ನ ಮಗಳ ಪದವಿ ಪೂರ್ವ ಗಣಿತ ಹಾಗು ಭೌತಶಾಸ್ತ್ರಗಳ ಅಂಕಗಳನ್ನ ಗಮನಿಸಿ ಮಗಳ ಇಷ್ಟವಿಲ್ಲದ ವಾಣಿಜ್ಯಶಾಸ್ತ್ರದ ಮೊದಲನೇ ವರ್ಷಕ್ಕೆ ಪದವಿ ಕಾಲೇಜಿಗೆ ಸೇರಿಸಿದ್ದರು.
ಮಗಳಿಗೆ ತನ್ನ ಸ್ನೇಹಿತರ “ಯಾಕೆ ನೀನು ಬಿ.ಇ ಸೇರಬಾರದಿತ್ತು” ಎಂಬ ಮಾತು ವೇದ ವಾಕ್ಯವಾಯಿತು. ದಿನ ನಿತ್ಯ ಅಮ್ಮನಿಗೆ ಮಗಳಿಂದ ಬೆಳಿಗ್ಗೆ ಹಾಗು ಸಾಯಂಕಾಲ ಮಾತಿನ ಮಂಗಳಾರತಿ ಸುರುವಾಯಿತು. ಅಮ್ಮನ ತಿಳಿಪಡಿಸುವ ಪ್ರಯತ್ನಗಳು ವಿಫಲ ಆದವು. ಕೆಲವು ತಿಂಗಳುಗಳೇ ಸರಿದರೂ ಮಗಳು ಸರಿಹೋಗಲಿಲ್ಲ. ಇದರ ಜೊತೆಯಲ್ಲೇ ಹಟಮಾರಿತನ, ಸಿಡುಕು, ಉದ್ವೇಗ, ಇರಿಸು-ಮುರಿಸು, ನಿದ್ರಾಹೀನತೆ, ಸುಸ್ತು, ಗಮನ ಹಾಗು ಏಕಾಗ್ರತೆಗಳ ಕೊರತೆ, ಊಟ ಬಿಡುವುದು, ಕೈಮಣಿಯನ್ನು ಬ್ಲೇಡಿನಿಂದ ಗೀರಿಕೊಳ್ಳುವುದು ( self mutilation behavior ) ಕೇಳಿದರೆ ಆತ್ಮ ಹತ್ಯೆಯ ಬೆದರಿಕೆಯನ್ನು ಒಡ್ಡುವದು, ತಾಯಿಯ ಮೃದು ಭಾವನೆಗಳನ್ನ ಅರಿತು ತನ್ನ ನಡವಳಿಕೆಯಿಂದ ತಾಯಿಯ ಮನಸ್ಸನ್ನು ನೋಯಿಸುತ್ತದ್ದಳು. ಆಕೆಗೆ ಖಿನ್ನತೆ ಆವರಿಸಿದ್ದರಿಂದ ಆಕೆಯ ಅಮ್ಮ ನನ್ನ ಬಗ್ಗೆ ಸ್ನೆಹಿತೆಯೊಬ್ಬೊಳಿಂದ ತಿಳಿದು ಮಗಳಿಗೆ ಸರಿಯಾದ ಸಲಹೆ ಮತ್ತು ಚಿಕಿತ್ಸೆ ಸಿಗುತ್ತೆನ್ನುವ ಬರವಸೆಯೊಂದಿಗೆ ನನ್ನಲ್ಲಿಗೆ ಕರೆತಂದಿದ್ದಳು.
ಆಕೆಯನ್ನು ಪರೀಕ್ಷಿಸಿದ ನಾನು ಅವಳಲ್ಲಿ ನರ ರಚನಾತ್ಮಕ ನ್ಯೂನತೆಗಳಲ್ಲಿ ಒಂದಾದ ಕಲಿಕೆಯ ನ್ಯೂನತೆ ಅಥವ “DYSLEXIA” ದಿಂದ ಬಳಲುತ್ತಿರುವುದನ್ನು ತಿಳಿದುಕೊಂಡೆ. ಸ್ವಾಭಾವಿಕವಾಗಿ ತನ್ನ ಗಣಿತ ಹಾಗು ಭೌತಶಾಸ್ತ್ರದಲ್ಲಿ ಉತ್ಕೃಷ್ಠ ಅಂಕಗಳನ್ನು ಪಡೆಯುವುದರಲ್ಲಿ ಹಿಂದೆ ಉಳಿಯವಳು. ಈ ಸಮಸ್ಯೆಯನ್ನು ಮನೋ ವೈಜ್ಞಾನಿಕ ರಿತ್ಯ ವಿಸ್ತಾರವಾಗಿ ಈಕೆಯ ತಾಯಿಗೆ ತಿಳಸಿದೆ. ಆಕೆಯ ಮಗಳ ಜೊತೆ ಆತ್ಮಸಮಾಲೋಚಸಿ ಖಿನ್ನತಗೆ ಔಷಧಿಯನ್ನು ನೀಡಿದೆ. ನಂತರ ತಾಯಿಯನ್ನು ಲೋಕಾರೂಡಿಯಾಗಿ “ನಿಮ್ಮ ಆಫಿಸ್ ಹೇಗಿದೆ” ಎಂದು ಕೇಳಿದೆ.

“ದಿನ ಬೆಳಗಾದರೆ ಅನೇಕ ಮದುವೆ ಆದ ಹೆಂಗಸರು ತಮ್ಮ ತಮ್ಮ ಬಂಧುಗಳ ಜೊತೆ ಹಿಂಡಿಂಡಾಗಿ ನಮ್ಮ ಆಫಿಸ್ಗೆ ಬರುತ್ತಾರೆ ಸಾರ್. ನಮ್ಮ ಮೇಡಮ್ಮು ತುಂಬಾ ಸ್ತ್ರೀ ಡಾಕ್ಟ್ರೇ ಸಾರ್. ಅವರ ಟೇಬಲ್ ಮೇಲೆ ಅಹವಾಲುಗಳ ಮಹಾ ಪೂರವೆ ಇರುತ್ತೆ, ಆದರೆ ಅವುಗಳಲ್ಲಿ ಕೆಲವು ದೂರುಗಳನ್ನು ಮಾತ್ರ ದಾಖಲಿಸುತ್ತಾರೆ ಸರ್” ಎಂದಳು. ಅದರೆ ಬಾಕಿ ದೂರು? “ಶೇಕಡ ಎಪ್ಪತ್ತು ಭಾಗ, ಅವರ ದೂರುಗಳು ನಿರಾಧಾರ, ಬಾಸ್ ಪ್ರಕಾರ ಮಹಿಳೆಯರು ಇಲ್ಲದ ತಲ್ಲಣಗಳನ್ನು ಸೃಷ್ಠಿ ಮಾಡಿ ಗಂಡಂದಿರು ಅವರಿಗೆ ಮಾನಸಿಕ ಹಾಗು ದೈಹಿಕ ಹಿಂಸೆ ನೀಡುತ್ತಿದ್ದಾರೆನ್ನುವ ಕಂಪ್ಲೆಂಟ್ ಗಳನ್ನು ಸಾರಾಸಗಟಾಗಿ ನಿರಾಕರಿಸುವರು ಸಾರ್” ಅಂದಳು.
ಅದೇ ದಿನ ರಾತ್ರಿ ಆ ಖಡಕ್ ಪ್ರಾಧಿಕಾರಿಣಿಯನ್ನು ಮನದಲ್ಲೆ ನೆನೆಯುತ್ತಿದ್ದಾಗ ಹದಿನೈದು ವರ್ಷಗಳ ಹಿಂದೆ ನಡೆದ ನನ್ನ ವೃತ್ತಿ ಜೀವನದ ಒಂದು ಅನುಭವ ಜ್ಞಾಪಕಕ್ಕೆ ಬಂತು. ಸುಮಾರು ಮುವತ್ತೈದು ವರ್ಷಗಳ ಪ್ರಾಯದ ಎರಡು ಮಕ್ಕಳ ತಂದೆ ನನ್ನ ಬಳಿ ಸಲಹೆಗೆಂದು ಬಂದಿದ್ದರು. ಒಳ್ಳೆಯ ಮೈಕಟ್ಟು, ಆರು ಮಕ್ಕಳಲ್ಲಿ ನಾಲ್ಕನೆಯವರು, ವ್ಯಾಪರಸ್ಥ, ಸಾಂಪ್ರದಾಯಿಕ ದೊಡ್ಡ ಕುಟಂಬದಿಂದ ಬಂದವರು. ಲಜ್ಜೆ ಸ್ವಭಾವದ ಇವರಿಗೆ ಮೊದಲಿನಿಂದಲು ಸ್ನೇಹಿತರ ಜೊತೆ ಒಡನಾಟ ತೀರಾ ವಿರಳ. ಹತ್ತನೆ ತರಗತಿಯನ್ನು ಕಷ್ಟಪಟ್ಟು ಓದಿದರೂ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ನಪಾಸು.

ವೃತ್ತಿ ವ್ಯಾಪಾರವಾದ್ದರಿಂದ ತಂದೆಯ ಜೊತೆ ಸಹಭಾಗಿಯಾಗಿ ವ್ಯಾಪರವನ್ನು ಮಾಡುತಿದ್ದರು. “ಹುಟ್ಟುವಾಗ ಅಣ್ಣ ತಮ್ಮಂದಿರು, ಬೆಳೆದಂತೆ ದಾಯಾದಿಗಳು” ಎನ್ನುವ ನಾಣ್ನುಡಿಯನ್ನು ಅರಿತಿದ್ದ ತಂದೆ ತನ್ನ ಕುಟುಂಬ ಸ್ಪೋಟವಾಗುವ ಮುನ್ನವೆ ಅವರ ಆಸ್ತಿಯನ್ನು ವಿಭಜಿಸಿ ಇವರ ಮಕ್ಕಳಿಗೆ ಅವರ ಅವರ ವೃತ್ತಿಗೆ ಲಗತ್ತಾದ ಅಂಗಡಿಗಳನ್ನು ಬರೆದು ಕೊಟ್ಟಿದ್ದರು. ಇವರಿಗೆ ನಗರದಿಂದ ಬಂದ ಹೆಂಡತಿ ಪದವೀಧರೆ ಮತ್ತು ಸ್ಪುರದ್ರೂಪಿ, ಮುಂಗೋಪಿ, ತೋರ್ಪಡಿಕೆ, ಇತರ ಗಂಡಂದಿರನ್ನು ಹೋಲಿಸಿ ನಿಂದಿಸುವ ಪ್ರವೃತ್ತಿ ಅದರಲ್ಲೂ ತನ್ನ ಭಾವನನ್ನು (ಪೊಲೀಸ್ ಅಧಿಕಾರಿ) ಹೋಲಿಸಿ ಗಂಡನಿಗೆ ಅತೀವ ನಿಂದನೆ ಮಾಡುವುದು ಈಕೆಯ ದಿನ ನಿತ್ಯದ ಕರ್ತವ್ಯವಾಗಿತ್ತು.
ವ್ಯಾಪರಿ ಮನೋಭಾವ ಹೊಂದಿರುವ ಈಕೆಗೆ ಚಿಕ್ಕ ವಯಸ್ಸು, ಆಕೆ ಪದವಿ ಓದುತ್ತಿರುವಾಗಲೆೆ ಮದುವೆಯಾಯಿತು. ಗಂಡ ಹೆಂಡತಿಯರ ಬಾಂಧವ್ಯ ಅಷ್ಠಕ್ಕಷ್ಟೆ. ಮಕ್ಕಳ ಮುಂದೆ ಜಗಳ, ಗಂಡ ಕೂತರೂ, ನಿಂತರೂ, ಹೊರಗೆ ಹೋದರೂ, ಒಳಗೆ ಇದ್ದರೂ, ಮಾತನಾಡಿದರೂ, ಸುಮ್ಮನಿದ್ದರೂ, ದುಡಿದರೂ ಮತ್ತು ದುಡಿಯದೆ ಇದ್ದರೂ ಆಕೆ ಹಿಯ್ಯಾಳಿಸುವುದು ಹಾಗೂ ನಿಂದಿಸುವುದು ನಿರಂತರವಾಗಿತ್ತು.
ಇವರು ಮೊದಲಿನಿಂದಲೂ ನಿಧಾನ, ಗಾಬರಿ, ಅಳಲು, ಹಿಂಜರಿಕೆ, ಅಲ್ಪ ಮುಂದಾಳತ್ವ, ಹೆದರಿಕೆ, ಕೀಳರಿಮೆ, ನಕಾರಾತ್ಮಕ ಚಿಂತನೆ ಹಾಗು ಭಾವನೆಗಳನ್ನ ಹೊಂದಿದವರಾದ್ದರಿಂದ ನನ್ನ ಹತ್ತಿರ ಸಲಹೆ ಮತ್ತು ಆತ್ಮಸಮಾಲೋಚನೆಗೆಂದು ಬಂದಿದ್ದರು. ನಾನು ಅವರಿಗೆ ಆತ್ಮಸಮಾಲೋಚನೆಯನ್ನು ನೀಡುತ್ತಿದ್ದ ಸಮಯದಲ್ಲಿ ಹೆಂಡತಿಯನ್ನು ಕರೆತರಲು ತಿಳಿಸಿದ್ದೆ. ಆದರೆ ಇವರ ಹೆಂಡತಿಯ ನಿಕೃಷ್ಠ ಮನೋಭಾವನೆ ಇರಬಹುದೇನೊ ತಿಳಿಯದು, ಇವರಿಗೆ ಆಕೆಯನ್ನು ನನ್ನ ಬಳಿ ಕರೆತರಲು ಹರಸಾಹಸ ಮಾಡಿದರೂ ಕೊನೆಗೂ ಕರೆತರಲು ಸಾಧ್ಯವಾಗಲೇಲಿಲ್ಲ.
ಕೆಲವು ವರ್ಷಗಳು ನನ್ನ ಹತ್ತಿರ ಔಷಧಿಗಳನ್ನು ಸೇವಿಸಿ ಗುಣವನ್ನು ಕಂಡಿದ್ದಂರಿಂದ ನನ್ನ ನುಡಿ ಇವರಿಗೆ ಹಿತವೆನಿಸುತಿತ್ತು. ಮತ್ತು ನನ್ನ ಬಗ್ಗೆ ಗಾಢವಾದ ನಂಬಿಕೆಯಿತ್ತು. ಒಮ್ಮೆ ಹೆಂಡತಿ ಬರದೇ ಇರುವ ಕಾರಣವನ್ನು ಕೇಳಿದಾಗ “ಸಾರ್, ನನ್ನ ಹೆಂಡತಿಗೆ ‘ಹುಚ್ಚು ಡಾಕ್ಟರ್ ಹತ್ತಿರ ಹೋದರೆ ತನಗೆ ಹುಚ್ಚಿಯ ಹಣೆಪಟ್ಟಿ ಕಟ್ಟುವರು’ ಎನ್ನುವ ಮೌಢ್ಯ ಮತ್ತು ಮೂಡತನ ಸಾರ್” ಎಂದಿದ್ದರು.
ಹೌದು, ನೋಡಿ ಮನೋ ವೈದ್ಯರ ಬಳಿ ಸಲಹೆ ನಿಮಿತ್ತ ಹೋದರೆ ಆತನನ್ನು ಹುಚ್ಚನೆಂದು ಜನ ಆಡಿಕೊಳ್ಳುತ್ತಾರೆನ್ನುವ ಭಯ ಇಂದಿಗೂ ಬಹುತೇಕ ಜನರನ್ನು ಕಾಡುತ್ತಿದೆ.
ಕೆಲವು ತಿಂಗಳ ಕಾಲ ನಿಗದಿತ ವೇಳೆಗೆ ಬರದಿದ್ದನ್ನು ಗಮನಿಸಿ ಸರಿಹೋದರೆನೋ ಅಂದು ಕೊಂಡಿದ್ದೆ. ಒಂದು ದಿವಸ ಮತ್ತೆ ಅದೇ ಗಾಬರಿ, ಆತಂಕ, ಭಯ, ನಿರುತ್ಸಾಹದಿಂದ ಪ್ರತ್ಯಕ್ಷರಾದರು. ವಿಚಾರಿಸಿದಾಗ “ನನ್ನ ಹೆಂಡತಿ ಮಾತ್ರೆಗಳನ್ನು ಬಿಸಾಡಿ, ನನಗೆ ಈ ಸ್ಥಿಥಿಗೆ ತರಲು ಕಾರಣವಾಗಿದ್ದಾಳೆ ಸಾರ್” ಅಂದರು. ಮಾತ್ರೆಗಳನ್ನು ನಿಲ್ಲಿಸಿದ ನಂತರ ಖಿನ್ನತೆಗೆ ಒಳಗಾಗಿ ಅಂಗಡಿಯನ್ನು ಮುಚ್ಚಿರುವರು, ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣದ ಇವರು ಕುಟುಂಬ ಸಮೇತ ನಗರದ ಹಾದಿ ಹಿಡಿದಿದ್ದರು. ಊರಿನಲ್ಲೆ ಇರಿ ಎನ್ನುವ ನನ್ನ ಸಲಹೆ ಫಲಿಸಲಿಲ್ಲ.
ಅನೇಕ ವರ್ಷಗಳು ಕಳೆದಿರಬಹುದು, ಅವರೊಬ್ಬರೇ ಸಾವರಿಸಿಕೊಂಡು, ತೂರಾಡುತ್ತಾ, ಮೆಲ್ಲಗೆ ನನ್ನ ಸಲಹಾ ಕೊಠಡಿಯೊಳಗೆ ಬಂದರು. ನೋಡಿದ ತಕ್ಷಣ ಇವರ ಗುರುತನ್ನು ಅರಿಯದವನಾದೆ. ಮಾಂಸ ಖಂಡಗಳು ಸೆಟದಿದೆ, ಮಾತನಾಡಲು ಆಗುತ್ತಿಲ್ಲ, ಸ್ವಲ್ಪ ಜೊಲ್ಲು ಸುರಿಯುತ್ತಿದೆ, ಕೈ ಕಾಲು ನಡುಗುತ್ತಿವೆ, ನಿತ್ರಾಣ ಕಂಡುಬರುತ್ತಿದೆ ಮತ್ತು ಹತ್ತಿರ ಭಯ ಇವರಲ್ಲಿ ಆವರಿಸಿದೆ. ಕಾರಣ ಕೇಳಿದೆ.
ತಡವರಿಸುತ್ತಾ ಉತ್ತರಿಸತೊಡಗಿದರು “ಸಾರ್, ನಗರದಲ್ಲಿ ವಾಸಿಸುತ್ತಿದ್ದೇವೆ. ನಮ್ಮ ವಿರಸ ಬಿಗಡಾಯಿಸಿ ಆಕೆಯನ್ನು ಅನುಮಾನಿಸಿದ್ದರಿಂದ ಮತ್ತು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪ್ಪಿದ್ದರಿಂದ ನನ್ನನು ಮನೋ ವೈದ್ಯರಲ್ಲಿ ತೋರಿಸಿದ್ದಾರೆ, ಆ ಸಮಯದಲ್ಲಿ ನಾನು ನನ್ನ ನಿಯಂತ್ರಣವನ್ನು ಕಳೆದುಕೊಂಡಿದ್ದೆ, ಮಾತ್ರೆಗಳ ಪರಿಣಾಮವೇನೊ ಈ ಪರಿ ಆಗಿದ್ದೇನೆ” ಎಂದರು.
ನಡೆದಿದ್ದು ಏನೆಂದರೆ ಇವರ ಹೆಂಡತಿಯ ಒಡನಾಟ ತನ್ನ ಪೊಲೀಸ್ ಆಫೀಸರರ ಜೊತೆ ಜಾಸ್ತಿ ಇದ್ದಿದ್ದರಿಂದ ಇವರಿಗೆ ಸ್ವಾಬಾವಿಕವಾಗಿ ಹೆಂಡತಿಯನ್ನು ಅನುಮಾನಿಸಲು ತೊಡಗಿದರು, ಇದನ್ನು ಹೆಂಡತಿಯ ಜೊತೆ ಪ್ರಶ್ನಿಸಿ ವಾಗ್ವಾದಕ್ಕೆ ಇಳಿದಾಗ ಒಮ್ಮಿಂದ್ ಒಮ್ಮೆಲೆ ದೊಡ್ಡ ಆಸ್ಪತ್ರೆಗೆ ಕರದೊಯ್ದು ಇವರ ಇಚ್ಚೆಯ ವಿರುದ್ದವಾಗಿ ಔಷಧಿಯನ್ನು ಕೊಡಸಿದ್ದರು. ಪ್ರಾಯಷಃ ಇವರ ಈ ಸ್ಥಿತಿ ಅವರಿಗೆ ಕೊಡಸಿದ ಮಾತ್ರೆಗಳಿಂದ ಆಗಿರಬಹುದು. ಅರಿಯಲು ಇವರು ಮಾತ್ರೆಗಳನ್ನ ತಂದಿರಲಿಲ್ಲ. ಮನೋವಿಕಲತೆಗೆ ನೀಡುವ ಔಷಧಿಗೆ ಅಡ್ಡಪರಿಣಾಮದಿಂದ ಆದ E P S (extra pyramidal symptoms- ಮಾಂಸ ಖಂಡಗಳ ಸೆಳೆತ) ಇದಾಗಿತ್ತು. ಮಾತ್ರೆಗಳನ್ನು ನಿಲ್ಲಿಸ ಹೇಳಿ, ಇ.ಪಿ.ಎಸ್ ಗೆ ಔಷಧಿಯನ್ನು ನೀಡಿ ಏಳು ದಿವಸ ಬಿಟ್ಟು ಬರಲು ತಿಳಿಸಿದೆ. ಬಂದವರು “ಸಾರ್ ನಾನು ಚೆನ್ನಾಗಿದ್ದೆನೇ” ಅಂದರು.
ಅವರಿಗೆ ಜೀವನದ ಕೆಲವು ಕಾರ್ಯ ತತ್ವಗಳನ್ನು ತಿಳಿಸಿ ಆಪ್ತಸಲಹೆ ನೀಡಿ, ಗುಳಿಗೆಗಳೊಂದಿಗೆ ಬೀಳ್ಕೊಟ್ಟೆ. ಕೆಲವು ವರ್ಷಗಳ ನಂತರ ಬಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವದಾಗಿಯೂ, ಕೊಂಚ ಸಂಬಳದಲ್ಲೇ ತೃಪ್ತಿ ಕಂಡು, ಮನೆಯವರು ಯಾವುದೇ ತಂಟೆ ತಕರಾರಿಗೆ ತಲೆ ಕೆಡಿಸಿಕೊಳ್ಳದೆ ಇದ್ದೀನೆಂದು ಹೇಳಿ ಧನ್ಯವಾದಗಳನ್ನು ತಿಳಿಸಿ ಹೋದರು. ಇವತ್ತಿನವರೆಗೂ ಅವರ ವಿಷಯ ತಿಳಿದಿಲ್ಲ, ಎಲ್ಲವೂ ಸರಿಯಿದೆ ಎಂದು ಅಂದುಕೊಳ್ಳೋಣ.
ಓದುಗರೆ ಈಗ ಹೇಳಿ ಈ ಗಂಡಸು ಯಾವ ಪ್ರಾಧಿಕಾರದ ಮುಂದೆ ತನ್ನ ಅಳಲನ್ನು ತೋಡಿಕೊಳ್ಳಬೇಕು? ಸ್ತ್ರೀ ವಾದ ಮತ್ತು ಸ್ತ್ರೀಅಧಿಪತ್ಯಗಳೇ ಸ್ತ್ರೀ ಸಬಲೀಕರಣಕ್ಕೆ ಅಳತೆಗೋಲಾದರೆ ಅನೇಕ ಗಂಡಸರಲ್ಲಿ ನರ ರಚನಾತ್ಮಕ ಹಾಗೂ ನರ ಭೌತಿಕ ತೊಂದರೆಗಳಿಂದ ಉಂಟಾದ ಮನೋ ನಡವಳಿಕೆ ಮತ್ತು ನ್ಯೂನತೆಗಳಿಗೆ ಮಾನದಂಡಗಳು ಯಾವುದು? ಇಂತಹ ಮನೋ ದೌರ್ಬಲ್ಯಗಳನ್ನ ಹೆಂಗಸರಲ್ಲು ನೋಡಬಹದು.
ಈ ನ್ಯೂನತೆಗಳಿಗೆ ಒಳಗೊಂಡ ಅನೇಕ ಗಂಡಸರು ಮಾದಕ ದ್ರವ್ಯ ಹಾಗು ಮದ್ಯ ವ್ಯಸನಿಗಳಾಗಬಹುದು. ಹೆಂಗಸರು, ಮೇಲೆ ತಿಳಿಸಿದ ನಡುವಳಿಕೆಗಳನ್ನ ಹೊಂದಿರುವವರಿಗೆ ಸಕಾರಾತ್ಮಕ “ಪರಿವರ್ತನೆಯೇ” ದಾರಿ. ಅಂದರೆ ಮಧುರಭಾವ, ತಾಳ್ಮೆಯ ಅವಲೋಕನ ಮತ್ತು ಅರಿತು ಸರಿಪಡಿಸುವ ಸಾದನಗಳೇ ಪರಿವರ್ತನಾ ಆಯಾಮಗಳು. ಇದನ್ನೆ ಇಂದು ಜನರು “ಯೋಗ”ವೆಂದು ಕರಯುವುದು.
ಕರುಣೆ, ಕ್ಷಮೆ, ಅನುಭೂತಿ, ಅನುಕಂಪ, ಭಾವಾಸ್ಪರ್ಷ, ಹೊಂದಾಣಿಕೆ, ಹುರಿದುಂಬಿಸವುದು, ನಂಬಿಕೆ, ವಿಶ್ವಾಸ, ಅಭಿವ್ಯಕ್ತಿಯ ಸ್ವಾತಂತ್ರ, ಸಂಸ್ಕಾರ, ಸಂತೃಪ್ತಿ ಮತ್ತು ಸಕಾರಾತ್ಮಕ ಚಿಂತನೆಗಳೆಲ್ಲವು ಮಾನವನ ಪರಿವರ್ತನೆಗೆ ಪೂರಕ ಹಾಗು ನಾಂದಿ.
ಕುಚೋಧ್ಯೆ, ಹಿಯ್ಯಾಳಿಕೆ, ಏರುಧ್ವನಿ, ಹೋಲಿಕೆ, ಬಂಧನಗಳೆಲ್ಲವೊ ಮಾನವನಿಗೆ ನರಕ ಸದೃಶ ಮತ್ತು ಮನುಷ್ಯನ ಬಾಳು ಹಾಳು. ಕಟುಂಬದ ವ್ಯವಸ್ಥೆಯಲ್ಲಿ ಹಾಗು ಭಾವ ಬಂಧನದಲ್ಲಿ “ಮುಕ್ತ ಚರ್ಚೆ”ಯೇ ಶ್ರೇಷ್ಠವಾದ ಮತ್ತು ಅತ್ಯುತ್ತಮವಾದ ಮಾನದಂಡ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

