ಮನಸು ಮೃದಂಗ
(ಲೇಖನಗಳ ಸಂಕಲನ)
ಭವಿಷ್ಯವೆಂದರೆ….!
ಮನುಷ್ಯನ ಸೃಷ್ಟಿ ಕಷ್ಟದಲ್ಲೇ ಎನ್ನುವದು ಬಹುತೇಕರ ಅಭಿಪ್ರಾಯ. ಹುಟ್ಟಿನಿಂದ ಸಾಯುವವರೆಗು ಮಾನವನಿಗೆ ಕಷ್ಟವು ಬೆಂಬಿಡದ ಭೂತ. ಸಹಜವಾಗಿ ಮಾನವನಿಗೆ ಇಂತಹ ಕಷ್ಟಗಳು ಸಾವಿರಾರು. ಅವನ ಜೀವನದಲ್ಲಿ ಈ ಅಡೆ ತಡೆಗಳನ್ನ ಮೀರಲೇ ಬೇಕು, ಇಲ್ಲಾವಾದಲ್ಲಿ ಅವನ ಅಧೋಗತಿಗೆ ತಾನೇ ಕಾರಣ ಕರ್ತನಾಗುತ್ತಾನೆ. ಇಂತಹ ಅವಿಭಾಜ್ಯ ತೊಂದರೆಗಳನ್ನು ದಾಟಬೇಕಾದರೆ ಬೆವರು ಸುರಿಸಬೇಕು, ಜ್ಞಾನವಂತನಾಗಬೇಕು, ವಿವೇಕ ಉಳ್ಳವನಾಗಿರಬೇಕು. ಇದರ ಜೂತೆಯಲ್ಲೇ ಇವನು ಆತ್ಮವಿಶ್ವಾಸವನ್ನು ಹೂಂದಿ ಸಂಯಮ ಚಿತ್ತವನ್ನು ಬೆಳಸಬೇಕು.
ನೂರಾರು ಕತೆಗಳಲ್ಲಿ ಒಂದಾದ “ಸಾಸಿವೆ ಕಾಳು” ವಿನ ಕತೆ, ಅಂದರೆ ಕಷ್ಟವಿಲ್ಲದ ಮನೆಯ ಸಾಸಿವೆ ಕಾಳು ಹುಡಕಿದರೆ ಸಿಗುವದೇ? “ಎಲ್ಲರ ಮನೆಯಲ್ಲೂ ದೋಸೆ ತೂತು” ಗಾದೆಗೆ ಹೋಲಿಸಬಹುದುದಲ್ಲವೇ. ಆಧುನಿಕ ಮೂಢ ಮಾನವನು ಇಲ್ಲದ ದೇವರಿಗೆ ಮೊರೆ ಹೋಗುವ ಕಾರಣ “ದೇವರೆ ನನಗೆ ಕಷ್ಟವನ್ನು ಕೊಡದಿರು”ಎಂದು.
ಆದೇ ಜ್ಞಾನವಂತ ಅಥವ ಬುದ್ದಿವಂತ ಮಾನವನು ದೇವರಲ್ಲಿ ಬೇಡುವುದಾದರು ಏನು? “ದೇವರೇ ಕಷ್ಟವನ್ನು ನೀಡು, ಆದರೆ ಪರಿಹಾರದ ದಾರಿಯನ್ನು ಸಹ ದಯಪಾಲಿಸು” ಎಂದು.
ಕಣ್ಣಿದ್ದೂ ಕುರುಡ ಮನುಷ್ಯನು ಈ ಸಹಜ ಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಸೋಗಲಾಡಿ ಕಾವಿದಾರಿಗಳ ಸಹವಾಸ ಮಾಡಿ, ಇದ್ದದ್ದನ್ನು ಕಳೆದುಕೊಂಡು, ಇಲ್ಲದ ಬವನೆಗೆ ತುತ್ತಾಗಿ ಅವರು ಕೂಟ್ಟ ಭವಿಷ್ಯ ಪಂಚಾಮೃತ ಒಮ್ಮೊಮ್ಮೆ ಪಾಷಾಣಾ ಬಿಂದುವಾಗಿ ನರಕ ಯಾತನೆಯನ್ನು ಅನುಭೋಗಿಸುವನು.
ಇಲ್ಲಿ ನನ್ನ ಪ್ರಶ್ನೆಯೆಂದರೆ “ಭವಿಷ್ಯಕ್ಕೆ ಭವಿಷ್ಯವಿದೆಯೇ”. ಭವಿಷ್ಯವು ಬ್ರಹ್ಮನ ಮೂರು ಆಯಾಮಗಳಲ್ಲಿ ಒಂದಾದ ಕಾಲ , ಇನ್ನೆರಡು ಯಾವುದೆಂದರೆ ದ್ರವ್ಯ ಮತ್ತು ಆಕಾಶ ಅಥವ ಜಗ. ನಾವು ಕಾಲವನ್ನು ವಿಂಗಡಿಸಿದಾಗ ಭೂತ , ವರ್ತಮಾನ ( ಹಾಗು ಭವಿಷ್ಯ ಗಳನ್ನ ಕಾಣುವೆವು. ನನ್ನ ಪ್ರಕಾರ ವರ್ತಮಾನ ಕಾಲ ಇಲ್ಲ. ವರ್ತಮಾನ ಕಾಲವಿದ್ದರೂ ಇದು ‘ತಕ್ಷಣಕ್ಕೆ ಮಾತ್ರ ಸೀಮಿತ. ಅಂದರೆ ಕ್ಷಣ ಸತ್ಯ, ವರ್ತಮಾನ ಮಿಥ್ಯ. ಈ ವಿಚಾರವಾಗಿ ಕುರಿತಂತೆ ನನ್ನ ವೇದಾಂತದ ಸಿದ್ದಾಂತ ಕಾರಣವನ್ನು ತಿಳಿಯಬೇಕೆಂದರೆ ‘ಕ್ಷಣವು’ ಸಹ ಅಸತ್ಯವೇ. ಈ ಹೊತ್ತಿನ ಕ್ಷಣ ಅದೇ ಹೊತ್ತಿಗೆ ಕ್ಷಣವಾಗಿ ಉಳಿಯುವುದಿಲ್ಲ ಎನ್ನುವದೇ ಸತ್ಯ.
ಈ ಭೂಮಿ ನಿರಂತರವಾಗಿ ಸಂಚಲನಾ ವೃತ್ತಿಯನ್ನು ಹೊಂದಿರುವುದಾಗಿರುತ್ತೆ. ಇಡೀ ಸೌರ ವ್ಯೂಹವೇ ಸಂಚಲನಾ ಮಯಿಯಾಗಿರುತ್ತದೆ. ಇಂತಹ ಸಮಯದಲ್ಲಿ “ಭವಿಷ್ಯ”ವಾದರೂ ಎಲ್ಲಿ? ನಮ್ಮ ಎಲ್ಲಾ ಭವಿಷ್ಯ ಪ್ರಶ್ನೆಗಳಿಗೆ ಭವಿಷ್ಯದ ಉತ್ತರಗಳು ಪ್ರಸ್ಥುತದಲ್ಲಿ ಅಪ್ರಸ್ಥುತವೆಂದಂತಾಯಿತು. ಒಬ್ಬ ಮೂಡ ತನ್ನ ಭವಿಷ್ಯವಾಣಿಯನ್ನು ಕೇಳಿ ಜೀವನದಲ್ಲಿ ಕಾರ್ಯವೃತ್ತಿಯನ್ನು ಮರೆತರೆ ಇವನಿಗೆ ಮುಂದೆ ನರಕ ಕಟ್ಟಿಟ್ಟ ಬುತ್ತಿ.
ಪ್ರಗತಿಯೇತರ ಜ್ಞಾನವುಳ್ಳ ಮಾನವನಿಗೆ ಕಾಯಕವೇ ಮಾನದಂಡ. ಗುರಿ ಒಂದೆ ಅಲ್ಲದೆ ಅನೇಕ ಸಮಾಧಾನಕರ ಗುರಿಗಳನ್ನು ಹೊಂದಿದ್ದಾದರೆ ಮಾನವನು ಸಕಾರಾತ್ಮಕವಾದ ದುಡಿಮೆಯ ನಿಲುವನ್ನು ಕಂಡುಕೊಳ್ಳಲು ಸಾಧ್ಯ. ವೈಜ್ಞಾನಿಕವಾಗಿ ಭವಿಷ್ಯವಾಣಿಯಲ್ಲಿ ಎರಡು ವಿಧ. ಒಂದು ಘನ ಸಾಂದ್ರತೆಗೆ ಒಳಗಾಗಿರುವದು, ಇನ್ನೊಂದು ಮನಸ್ಸಿನ ಕಲ್ಪಿತ ಲೋಕಕ್ಕೆ ಸಂಭಂದ ಪಟ್ಟಿದ್ದು.
ಮೊದಲನೆಯ ವಿಚಾರದ ಉದಹಾರಣೆ “ಪ್ರಳಯ”, ಎರಡನೆ ವಿಷಯದ ಉದಾಹರಣೆ “ಸಾವು”. ಕಾಲ ಕಳದಂತೆ, ಸಮಯ ಹತ್ತಿರವಾದಂತೆ ಮತ್ತು ಕ್ಷಣ ಸಮೀಪಸಿದಂತೆ ಪ್ರಳಯ ಭವಿಷ್ಯಗಳು ಪಲಾಯನವಷ್ಠೇ, ಆದರೆ ಸಾವು ಮಾತ್ರ ಶತಸಿದ್ಧ. ಭವಿಷ್ಯವಾಣಿಯ ಪ್ರಳಯದ ಭಯವನ್ನು ಬಿಟ್ಟು ನಾವು ಸಾವನ್ನು ಆಲಂಗಿಸಿದರೆ ನಮ್ಮ ವಿಕಲ್ಪಾ ಭಯಾ ದೂರವಾಗಿ ಸಕಾರಾತ್ಮಕ ಚಿಂತನೆಗಳನ್ನ ಬೆಳಗುವಂತಾದರೆೆ ನಾವುಗಳು ಆನಂದಮಯಿ ಆಗುವದರಲ್ಲಿ ಸಂದೇಹವೇ ಬೇಡ.
ಇಂದಿನ ಸಮಾಜದ ಊರ್ದ್ವಮುಖಿ ಬೆಳವಣಿಗೆಯಲ್ಲಿ ತಾಂತ್ರಿಕ ವಿಜ್ಞಾನ ಮುಂದುವರೆದಂತೆ, ಚಿತ್ರ ವಿಚಿತ್ರ ಬಣ್ಣಗಳಿಂದ ಈ ಪ್ರಪಂಚದಲ್ಲಿ ಮನುಷ್ಯನ ಮನಸ್ಸು ಬೇಯುತ್ತಿರುವದು ಸಹಜ. ನಾವು ನಮ್ಮ ಮೋಜಿಗೆ ವಿಪರೀತ ವಾಹನಗಳನ್ನು ಕರೀದಿಸಿ ಈ ವಾಹನಗಳಿಂದ ಉಗುಳುವ ಇಂಗಾಲದ ಡೈ ಆಕ್ಸೈಡ್ ನಮ್ಮ ಪುಪ್ಪಸ ಹಾಗು ಮೆದುಳನ್ನು ಬೇಯಿಸುವುದರಲ್ಲಿ ಆಶ್ಚರ್ಯವೇನಿಲ್ಲ, ಆದರೆ ಮಾನವನ ಮನೋ ಧಗೆಯಿಂದ ಉಂಟಾಗುವ ಸಮಾಜದ ಅವ್ಯವಸ್ಥೆಗಳು ಹಾಗೂ ಇವನ ದೈಹಿಕ ಮತ್ತು ಮಾನಸಿಕ ಬೆಂಕಿಯ ಉಗಮಗಳನ್ನು ನಂದಿಸುವುದಾದರು ಹೇಗೆ? ಈ ಬೆಂಕಿಗಳೇ ಇಂದಿನ ಮನೋ ದೈಹಿಕ ಕಾಯಲೆಗಳಾಗಿವೆ. ಇದನ್ನು ಈ ದಿನಗಳಲ್ಲಿ PSYCHO SOMATIC ಕಾಯಲೆಗಳೆಂದು ಮನೋ ವೈದ್ಯ ಶಾಸ್ತ್ರ ದಲ್ಲಿ ನಮೂದಿಸಲಾಗಿದೆ.
ಅನೇಕ ವೇಳೆ ನಮ್ಮ ಗಾಬರಿಯುಕ್ತ ಮನೋ ವೇದನೆಗಳಿಗೆ ಆರ್ಥಿಕ ವ್ಯವಸ್ಥೆ ಮತ್ತು ಹೊಂದಾಣಿಕೆಗಳ ವೈಫಲ್ಯಗಳೇ ಕಾರಣಗಳೆನ್ನಬಹುದು. ವೈಪರಿತ್ಯವೆಂದರೆ ಆರ್ಥಿಕ ಮುಗ್ಗಟ್ಟಿನಿಂದ ಉದ್ಬವಗೊಂಡ ಮಾನಸಿಕ ತೊಂದರೆಗಳಿಗೆ ಯಾರೂ ಕೂಡ ತಮ್ಮ ಮೂಗನ್ನು ತೂರಿಸವುದಿಲ್ಲ. ಆದರೆ ನಮ್ಮ ದೇಶದಲ್ಲಿ ಎಲ್ಲರು ಬುದ್ದಿವಂತರಾದ್ದರಿಂದ ಹೊಂದಾಣಿಕೆ ವಿಷಯಕ್ಕೆ ಬಂದರೆ ಎಲ್ಲರು ನಾನು ಮತ್ತು ತಾನು ಮುಂದೆಂದೂ ಸಮಾಲೋಚನಾ ಮುಖಿಗಳಾಗಿ ಬಿಡುವರು. ಈ ಮಟ್ಟಿಗೆ ಅವೈಜ್ಞಾನಿಕ ಜ್ಯೋತಿಷ್ಯ, ತಂತ್ರ, ಮಂತ್ರ, ಹೋಮ, ಹವನ, ಗುಪ್ತ ಸಮಾಲೋಚನೆಗಳು ಹೇರಳವಾಗಿ ನಮ್ಮಲ್ಲಿ ಲಭ್ಯವಿರುತ್ತೆ. ಶೇಕಡ ಅರವತ್ತರಿಂದ ಹಿಡಿದು ಎಪ್ಪತ್ತರವರೆಗೂ ತಮ್ಮ ತಮ್ಮ ಮನೋ ನ್ಯೂನತೆಗಳಿಗೆ ತಾವೇ ಕಾರಣಗಳನ್ನು ಹುಡುಕಿ ಸರಿಹೋಗಿ ಬಿಡುವರು. ಉಳಿದವರು ವೃತ್ತಿಪರ ವೈದ್ಯರಲ್ಲಿ ತೋರಿಸುವ ಮುನ್ನ ಮೂಢನಂಬಿಕೆಗಳಿಗೆ ಶರಣಾಗುವರು. ಇಲ್ಲಿ ನಾವು ಗಮನಿಸಬೇಕಾದ ವಿಷಯ, ಜ್ಯೋತಿಷ್ಯಯರ ಶನಿ, ರಾಹು ಮತ್ತು ಕೇತುಗಳ ಗ್ರಹ ಬದಲಾವಣೆ, ನಿಜವಾಗಿಯೂ ನಾನು ಇಲ್ಲಿ ಹೇಳಬೇಕಂದರೆ ಇಂತಹ ರೋಗಿಗಳಲ್ಲಿ ರೋಗ ಬದಲಾವಣೆ ತಂದಿರವಂತಾದ್ದು ಕಾಲವಷ್ಟೇ . ಅಂದರೆ “ತಾಳ್ಮೆ”ಯೇ ಇಲ್ಲಿ ಕೆಲಸ ಮಾಡಿರುವುದು. ಜ್ಯೋತಿಷಿಗಳು ಹೇಳುವ ‘ವರ್ಷ ಗ್ರಹ ಬದಲಾವಣೆ’ ವೈಜ್ಞಾನಿಕವಾಗಿ ಕಾಲಕ್ಕೆ ಸರಿ ತೂಗಬಹುದೆಂಬುದು ಸರಿ. ಆದರೆ ನಮ್ಮ ರೋಗಕ್ಕೆ ಕಾರಣ ಈ ಗ್ಪ್ರಹ ಬದಲಾವಣೆಯ ತಿತಿಗತಿಗಳಲ್ಲ ಎನ್ನುವುದು ನನ್ನ ವಾದ.
ಓದುಗರೇ ನಾವು ಇಲ್ಲಿ ತಿಳಿಯುವದಿಷ್ಠೆ, ಕಾಲವೆ ನಮ್ಮ ದೈಹಿಕ, ಮಾನಿಸಿಕ ಮತ್ತು ಭವಿಷ್ಯಗಳ ಕನಸನ್ನ ನಿರ್ದರಿಸಿ ಒಳಿತನ್ನು ತರಬಲ್ಲದು. ಈ ಕಾರಣದಿಂದರಬಹುದು “ ಕಾಲ ಅತ್ಯಮೂಲ್ಯ, ಸರಿಯಾಗಿ ಈ ಕಾಲವನ್ನ ಉಪಯೋಗಿಸು” ಎಂಬ ಮುತ್ತಿನಂತಹ ನಾಣ್ನುಡಿ ಅಧ್ಯಾಪಕರಿಂದ ಮೂಡಿರುವುದು. ಹಾಗಿದ್ದರೆ ಜ್ಯೋತಿಷಿಗಳ ವಾಣಿಜ್ಯ ವ್ಯವಹಾರ? ಬರಿ ಬುರುಡೆಯಷ್ಟೆ. ತಮ್ಮ ತಮ್ಮ ಕಾಲವನ್ನು ಅಥವ ಸಮಯವನ್ನು ಯಾವುದೇ ಮಾನವ ಅತ್ಮಾಭಿಮಾನದಿಂದ, ಆತ್ಮವಿಶ್ವಾಸದಿಂದ ಪರಿಗಣಸಿ ಸಕಾರಾತ್ಮಕವಾಗಿ ಉಪಯೊಗಿಸತ್ತಾರೊ ಅಂತವರಲ್ಲಿ ತಮ್ಮ ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರವನ್ನ ಕಂಡು ತಮ್ಮ ತೊಂದರೆಗಳನ್ನ ಕಮ್ಮಿ ಮಾಡಿಕೊಳ್ಳುವರು. ವೇದಾಂತದಲ್ಲಿ ಕಷ್ಟವೆನ್ನುವುದು ಕ್ಷಣ ಮಾತ್ರ, ನಿರಂತರವಲ್ಲ ಎನ್ನುವುದನ್ನು ನಾವುಗಳು ತಿಳಿದ್ದಿದ್ದೇವೆ.

ಹೊಂದಾಣಿಕೆಯ ಅರ್ಥವು “ಒಂದಾಗು” ಎಂದು. ಇದನ್ನೆ ಅದ್ಯಾತ್ಮದಲ್ಲಿ “ಯೋಗ” ವೆನ್ನುವರು. ಹೊಂದಾಣಿಕೆಗೆ ಎರಡು ನಿರ್ದಿಷ್ಟ ಪಥಗಳು ಇವೆ. ಮೂದಲನೆಯದು “ಒಳ” ಅಥವ ಅಂತರಂಗ ಪಥ, ಎರಡನೆಯದು “ಹೊರ” ಅಥವ ಬಾಹ್ಯರಂಗ ಪಥ. ಈ ಬಾಹ್ಯರಂಗ ಪಥಗಳಲ್ಲಿ ಮತ್ತೆ ಎರಡು ಪಥಗಳನ್ನ ಕಾಣಬಹುದು. ಒಂದು, ಪ್ರಕೃತಿ ಜೊತೆಯಲ್ಲಿ ಹೊಂದಾಣಿಕೆ, ಎರಡನೆಯದು ಜೀವ ವೈವಿದ್ಯಗಳ ಜೊತೆ ಹೊಂದಾಣಿಕೆ. ನಮ್ಮ ದುರಾದೃಷ್ಟವೇನೊ ಅರಿಯದು, ಪ್ರಕೃತಿಯ ನಿಸ್ಥಂತು ಜೊತೆಗಿನ ಹೊಂದಾಣಿಕೆ ಬಲ್ಲವನಿಗೆ ಮಾತ್ರ ಸೀಮಿತವಾಗಿದೆ. ಈ ಸಾಮರಸ್ಯವನ್ನು ಅರಿಯಲಾಗದ್ದರಿಂದ ನಮ್ಮ ಭೂಮಿ ತಾಯಿಗೆ ದ್ರೋಹವನ್ನು ಬಗೆಯುತ್ತಿದ್ದೇವೆ. ಇದೇ ಮುಂದುವರೆದಲ್ಲಿ ಈ ಮಾಹಾ ತಾಯಿ ತನ್ನ ಸೀರೆಯ ಒಡಲಲ್ಲಿ ನಮ್ಮನ್ನು ಸಂರಕ್ಷಿಸತ್ತಿರುವಳಾದರೂ ಅದೇ ಆಕೆಯ ಸೆರಗನ್ನು ಜಾರಿಸಿ ನಮ್ಮನ್ನು ಏಕಾ ಏಕಿ ಪಾತಳಕ್ಕೆ ದೂಡುವುದರಲ್ಲಿ ಸಂಶಯವಿಲ್ಲ. ಜೀವ ಜಂತುಗಳ ಜೊತೆ ನಮ್ಮ ಹೊಂದಾಣಿಕೆ ಸ್ವಲ್ಪ ತಾರತಮ್ಯದಿಂದ ಕೊಡಿರುತ್ತೆ. ಈ ವಿರುದ್ದ ವರ್ತನೆ ತರ್ಕಕ್ಕೆ ಅಕ್ಷರಶಃ ವೈರುತ್ಯವಾಗಿದೆ.
ನಾವು ಪ್ರಾಣಿಗಳಿಗೆ ಕೊಡುವ ಭಾವನೆಗಳನ್ನು ಮಾನವರಿಗೆ ನೀಡವುದಿಲ್ಲ. ಬಹುಶಃ ಎಲ್ಲಾ ಪ್ರಾಣಿಗಳಿಗೂ ಮಾನವನನ್ನು ಕಂಡರೆ ಭಯವೇ, ಆದರೆ ಅಡೆ ತಡೆಯಿಲ್ಲದ ಪ್ರಾಣಿಗಳ ಮೇಲಿನ ನಮ್ಮ ದಬ್ಬಾಳಿಕೆಯಿಂದ ಅವುಗಳು ನಮ್ಮನ್ನು ಕಚ್ಚುವಂತಾಗಿವೆ. ಮಾನವನು ಒಳಗೆ ಹೋಗಲಿ, ಹೊರಗೆ ಇಲಿ ಎಂಬಂತೆ ಕುಟುಂಬದೊಳಗಿನ ಗಂಡ ಹೆಂಡಿರ ವಿಚಾರವೇ ನನ್ನ ಈ ಚಿಂತನದ ಪ್ರಧಾನ ವಸ್ತು.
‘ಜಗಳವಿಲ್ಲದ ಮನೆಯೇ ಇಲ್ಲ ಎನ್ನುವುದಾದರೆ ಆ ಮನೆ ಮನೆಯೆನಿಸಿಕೊಳ್ಳುವುದಿಲ್ಲ. ಜಗಳವಿಲ್ಲದ ಮನೆ ಜಡ ಮತ್ತು ಬರಡು. ಮೌನವೇ ಮನೆಯನ್ನು ಆವರಿಸಿದ್ದರೆ ಆ ಮನೆ ಸ್ಮಶಾನ ಸದೃಶ. ದಂಪತಿಗಳ ಸಂಬಂಧ ಮೌನ ಮತ್ತು ಶಬ್ದಗಳ ಮಿಶ್ರಣಗಳಿಂದ ಕೂಡಿರಬೇಕು. ಇಬ್ಬರ ಮಧ್ಯೆಯ ಮೌನದಲ್ಲಿ ಶಬ್ದ ಹಾಗು ಶಬ್ದದಲ್ಲಿ ಮೌನವನ್ನು ಕಂಡು ಅರಿಯಬೇಕು. ಅಂದರೆ, ಮೌನದಲ್ಲಿ ಶರಣು ಹಾಗು ಶಬ್ದದಲ್ಲಿ ಮುಕ್ತ ಚರ್ಚೆ ಆಗಬೇಕು. ಇದು ಸುಲಭದ ಮಾತಲ್ಲ, ಸಹಾಭಾಳ್ವೆ, ಸಹಭಾಗಿತ್ವ, ಸಹಚಿಂತನೆ, ಸಹಭಾವನೆ, ಸಹಸ್ಪಂದನೆಗಳೆಲ್ಲವು ಸಕಾರಾತ್ಮದ ಕೌಟುಂಬಿಕ ಜೀವನದ ಪೂರಕಗಳು.
ಸಹಚಿತ್ತವೇ ಇದರ ಮಾನದಂಡ. ಶಬ್ದ ಹಾಗು ಮೌನಗಳು ಮನೆಯ ಚೌಕಟ್ಟಿನಲ್ಲಿ ಇದ್ದರೆ ಒಳಿತು, ಇಲ್ಲವಾದಲ್ಲಿ ಶಬ್ದ ಮಾಲಿನ್ಯ ಕಂಡಿತ. ಇವೆರೆಡರ ಮಧ್ಯೆ ದಂಪತಿಗಳ ಸಹವಿವೇಕತನದಲ್ಲಿ ಉತ್ಪತ್ತಿಯಾದ ರಸವನ್ನ ಸೇವಿಸಿ, ರಸ ನಿಮಿಷಗಳನ್ನು ಅನುಬೋಗಿಸಿ ಎಚ್ಚೆತ್ತು ಆಳಿಸುವಂತರಾದರೆ ಮನೆಯ ಮುಂದೆ ಸೇರುವಾ ಜನರನ್ನು ದೂರ ಕಳಿಸಬಹುದು. ಅಹಂಗಳನ್ನು ಕೊನೆಯ ಮೂಲೆಯಲ್ಲಿ ಇಟ್ಟು ಸೌಹಾರ್ದದಿಂದ ವರ್ತಿಸಿದರೆ ಮನೆಯು ನಂದಾ ದೀಪ ಆಗುವುದರಲ್ಲಿ ಎರಡು ಮಾತಿಲ್ಲ. ಜಗಳಗಳು ನಾರಿ ಮಣಿಯರ ಈಗಿನ ವಸ್ತ್ರ ವಿನ್ಯಾಸದಂತಿರಬೇಕು, ಅಂದರೆ ಅರಚಾಟ ಹಾಗು ಕಿರಚಾಟ ಅಲ್ಪವಾಗಿರಬೇಕು. ಜಗಳಗಳ ಸತ್ಯಾ ಸತ್ಯತೆಗಳನ್ನು ಹುಡಕಬೇಕಾದರಾಗಿರಬೇಕು. ಅಹಂ ಎಂಬುಗಳ ಕೊಂಬನ್ನು ನಿರ್ಧಾಕ್ಷನ್ಯವಾಗಿ ಮುರಿದು ಎಸೆಯುವಂತರಾಗಬೇಕು. ಹುಡಿಕಿದ ಕಾರಣಗಳನ್ನು ತಿಳಿದು, ಸಂಯೋಜಿಸಿ, ಪರಿಷ್ಕರಿಸಿ, ವಿವೇಕಿಸಿ ತರ್ಕಿಸುವಂತವರಾಗಬೇಕು. ಅವಮಾನವನ್ನು ತೊರೆದು, ಅಪನಂಬಿಕೆಗಳನ್ನು ದೂರವಿಟ್ಟು, ಅವಲಂಬನೆಯನ್ನು ಬೆಳೆಸಿ, ಆಕರ್ಷಿತರಾಗಿ ಚಿತ್ತ ಭಾವ ಬಂಧನದ ಬೆಸುಗೆಯ ಸೃಜನ ಶೀಲ ದಂಪತಿಗಳೆನ್ನಿಸಿಕೊಳ್ಳಬೇಕು. ದಾಂಪತ್ಯ ಯಶಸ್ವಿಯಾಗಬೇಕು, ಆ ಮೂಲಕ ವಿಚ್ಚೆದನೆಯ ಪದವನ್ನೇ ಕಿತ್ತುಹಾಕಬೇಕೆನ್ನುವುದೇ ನನ್ನ ಚಿಂತನೆ.
ನೆರೆಮನೆ ನೆಂಟರೂಬ್ಬರ ಇಬ್ಬರು ಗಂಡು ಮಕ್ಕಳು ಹೊರ ದೇಶದಲ್ಲಿ ವಾಸ್ಥವ್ಯ ಹೂಡಿದ್ದಾರೆ. ಆದ್ದರಿಂದ ಅವರ ತಾಯಿಗೆ ವಾಸಿ ಆಗದ ಮೂಳೆ ಮತ್ತು ಕೀಲು ಕಾಯಿಲೆಗೆ ನೋಡಿಕೊಳ್ಳುವವರು ಯಾರು? ಎಂಬುದರ ವಿಚಾರವಾಗಿ ನನ್ನ ಮತ್ತು ನನ್ನ ಹೆಂಡತಿಯ ಚರ್ಚೆಯ ವಿಷಯವಾಗಿತ್ತು. ನಮ್ಮ ಈ ತರ್ಕ ಕೊನೆಗೆ ವಾದ, ಪ್ರತಿ ವಾದಗಳಿಗೆ ತಿರಿಗಿತು. ನನ್ನ ಅರ್ಧಾಂಗಿ “ಅಯ್ಯೋ, ಇವರ ಮಕ್ಕಳು ಇಲ್ಲೆ ಇದ್ದಿದ್ದರೆ ಅವರ ಭವಿಷ್ಯದ ಗತಿ”? ಭವಿಷ್ಯದ ಬಗ್ಗೆ ಅಲ್ಪ ತಿಳಿದ ನಾನು ವಾಗ್ವಾದಕ್ಕೆ ನಿಂತೆ. ನಮ್ಮ ಸಹನೆಗಳು ಮಿತಿ ಮೀರಿ ಶಬ್ದ ಮಾಲಿನ್ಯಗೊಂಡು ಅಕ್ಕ ಪಕ್ಕ ಕಿವಿಗಳು ನೆಟ್ಟಗಾಗಿ ನಮ್ಮ ಮನೆಯ ದಿಕ್ಕಿಗೆ ತಿರುಗಿದವು. ಸುಮಾರು ನಿಮಿಷಗಳೇ ಕಳೆದಿರಬಹುದು, ಕೊನೆಗೆ ತರ್ಕ, ವಾದ, ವಿವಾದಗಳ ಕುರುಕ್ಷೇತ್ರ ತಣ್ಣಗಾಗಿ ನನ್ನನ್ನು ಕಾಡಿದ ವಿಷಯ “ಭವಿಷ್ಯ”. ನನ್ನವಳ “ಅವರ ಮಕ್ಕಳು ಇಲ್ಲೆ ಇದ್ದಿದ್ದರೆ ಹೊರ ದೇಶದ ಕನಸು ನನಸಾಗಿಯೇ ಉಳಿಯುತ್ತಿತ್ತೇನೋ..” ನುಡಿ ಜ್ಞಾಪಕಕ್ಕೆ ಬಂದಿದ್ದು.
ಓದುಗರೆ ಇಲ್ಲಿ ಗಮನಿಸಬೇಕಾದ ವಿಷಯ “ಭವಿಷ್ಯ” ಅಂದರೆ “ಕನಸಾ?” ಅಥವ “ನನಸಾ?”. ಒಂದು ಈಡೇರುವುದು, ಮತ್ತೊಂದು ಈಡೇರದೇ ಇರುವುದು. ಈಡೇರುವುದು ಆ ಮಕ್ಕಳ ಅಮೇರಿಕ ವಾಸ್ಥವ್ಯ, ಈಡೇರದೇ ಇರುವುದು ತಾಯಿಯನ್ನು ನೋಡಿಕೊಳ್ಳದೆÉ ಇರುವುದು. ನಮಗೆ ತಿಳಿದಿರುವುದು ಆರು ಆಯಾಮಗಳಷ್ಠೆ, ಈ ದಂಪತಿಗಳಿಗೆ ಏಳನೇ ಆಯಾಮದ ಅರಿವೇನಾದರು ಇದ್ದಿದ್ದರೆ ಮಕ್ಕಳ ಕನಸು ನನಸಾಗಿಯೇ ಉಳಿದು ಪೋಷಕರಿಗೆ ಆಸರೆಯಾದರೂ ಸಿಗುತ್ತಿತ್ತೇನೋ……..?
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

