ಮನಸು ಮೃದಂಗ
(ಲೇಖನಗಳ ಸಂಕಲನ)
ಮೂಢನಂಬಿಕೆ ಎಷ್ಟು ಸರಿ
ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯವು ಇತ್ತೀಚೆಗಷ್ಟೆ ಅಯ್ಯಪ್ಪ ಜ್ಯೋತಿಯನ್ನು ಪ್ರಶ್ನಿಸಿ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ನಿರಾಕರಿಸಿ, ದೇಶದ ಬಹುತೇಕ ಜನರ ಭಾವನೆಗಳ ವಿರುದ್ದವಾಗಿ ತೀರ್ಪು ನೀಡಿ ತಿಲಾಂಜಲಿ ಇಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಿಸಬೇಕಾದ್ದು ಆದ್ಯ ಕರ್ತವ್ಯ ಎನ್ನೋಣ.
ಪಕ್ಷ ಹಾಗು ಪ್ರತಿಪಕ್ಷ ರಾಜಕಾರಣದ ಗುದ್ದಾಟದಲ್ಲಿ ಈಗಿನ ವಿಷಯ “ಮೂಢನಂಬಿಕೆ”ಯ ವಿಚಾರವನ್ನು ಸಮಸ್ತ ನಾಗರೀಕರು ತಮ್ಮ ಭಾವನೆಗಳ ವಿರುದ್ದದ ಅರ್ಥದಲ್ಲಿ ನೋಡಬಾರದು. ಮಾನವನು ಶ್ರೇಷ್ಠಜೀವೀಯಾದ್ದರಿಂದ ಅನಾಗರೀಕ ಮನಸ್ಸನ್ನು ತೊರೆದು ಮಾನವೀಯತೆ ದೃಷ್ಠಿಯಿಂದ ಮೂಢನಂಬಿಕೆ ಅಥವಾ ಮೌಡ್ಯತೆಯನ್ನು ನೋಡಬೇಕೇ ವಿನಃ ದೇವ ಮನೋಭಾವನೆಗಳಿಗೆ ದಕ್ಕೆ ಎಂದು ಬಾವಿಸಬಾರದು. ಆಸ್ತಿಕ ಮತ್ತು ನಾಸ್ತಿಕರ ತರ್ಕಗಳು ಮತ್ತು ವಾದಗಳು ಇಂದಿನ ಸೃಷ್ಠಿ ಅಲ್ಲ. ಮಾನವ ಜನ್ಮ ತಾಳಿದ ಆದಿಕಾಲದಿಂದಲೂ ನೆಡೆದು ಬಂದಂತ ಚರ್ಚಾ ವಿಷಯವಾಗಿದೆ. ಇದೇ ತರಹದ ಚರ್ಚೆಯನ್ನು “ಮೊಟ್ಟೆ ಮೊದಲ ಅಥವಾ ಕೋಳಿ ಮೊದಲ” ಅನ್ನೋ ಚರ್ಚೆಗೆ ಹೋಲಿಸಬಹುದು. ಇಂತಹ ಚರ್ಚೆಗಳಿಂದ ಯಾರಿಗೆ ಲಾಭ? ನಾವು ಇಂತಹ ಚರ್ಚೆಗಳಿಗೆ ಇಳಿದು ವಿನಾಕಾರಣ ನಮ್ಮ ಅಮೂಲ್ಯವಾದ ಸಮಯವನ್ನು ಮತ್ತು ನಮ್ಮ ನಿರ್ಮಲವಾದ ಮನಸ್ಸುಗಳನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಆದಿ ಶಂಕರಾಚಾರ್ಯರು “ಭಜ ಗೋವಿಂದ ಭಜ ಗೋವಿಂದ ಭಜ ಗೋವಿಂದಂ ಮೂಢಮತೆ”ಯಲ್ಲಿ ಗೋವಿಂದನನ್ನು ಸ್ಮರಿಸುವುದನ್ನು ಬಿಟ್ಟು ನಮ್ಮ ಒಳಗಿನ ಮೂಢತೆಯನ್ನು ಅರಿಯುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಆತ್ಮೀಯರೆ “ನಂಬಿಕೆ” ಯ ಪದಕ್ಕೆ ಎಲ್ಲಾದರು ಸರಿಯಾದ ಅರ್ಥವಿದೆಯೇ? ನಾನೊಂದು ಅರ್ಥವಿತ್ತರೆ ಮತ್ತೊಬ್ಬರು ಇನ್ನೊಂದು ಅರ್ಥ ನೀಡುವರು. ನಂಬಿಕೆಯನ್ನು ಮಾನಸಿಕ, ಸಾಮಾಜಿಕ, ಮತ್ತು ಕಾನೂನಿನ ಚೌಕಟ್ಟಿನಲ್ಲಿ ನೋಡಬೇಕು. ಇದರಂತೆಯೇ “ಮೂಢನಂಬಿಕೆ” ಎಂದರೆ ಏನು? ಈ ಪ್ರಶ್ನೆಗೂ ಸರಿಯಾದ ಉತ್ತರವು ಸಿಗದು. ಈ ಕಾರಣದಿಂದ ನಮ್ಮ ಪ್ರಜ್ಞೆಯನ್ನು ಜ್ಞಾನೀಕರಿಸಿ ನಂಬಿಕೆ ಮತ್ತು ಮೂಢನಂಬಿಕೆಯನ್ನು ಗ್ರಹಿಸಿ ಸಮಾಜದಲ್ಲಿ ಉತ್ತಮರಾಗುವ ದೃಷ್ಠಿಕೋನವನ್ನು ಹೊಂದಿ, ವಿವೇಕಿಸಿ, ವಿಮರ್ಶಿಸಿ ಅರ್ಥವನ್ನು ಹುಡುಕಿ ನಡೆದುಕೊಳ್ಳಬೇಕು.
ಆಸ್ತಿಕ ಅಥವಾ ನಾಸ್ತಿಕನಾದರು ಎಂದೆಂದಿಗೂ ಭಗವಂತನಿಲ್ಲ ಎನ್ನುವುದಿಲ್ಲ. ನನ್ನ ದೃಷ್ಠಿಯಲ್ಲಿ ಭಗವಂತನೆಂದರೆ “ಯಾರ ದಯೆಯಿಂದ ವರವನ್ನು ನೀಡಿ ರುಜುವಾದಿಸುತ್ತಾರೊ ಅವರೇ ಭಗವಂತ (ದ- ದಯೇ, ವ-ವರ, ರು- ರುಜುವಾದಿಸುವುದು)”, ಈ ನನ್ನ ವಾದ ಸರಿಯಾಗಿದೆ ಅನ್ನುವುದಾದರೆ ಒಬ್ಬ ನೀತಿವಂತ ರಾಜಕಾರಣಿ ಬಡವರಿಗೆ ಕ್ಷೇಮಾಭಿವೃದ್ದಿಯನ್ನು ದಯಪಾಲಿಸಿದರೆ ಅವನೇ “ದೇವರು” ಒಬ್ಬ ಶ್ರೀಮಂತ ತನ್ನ ಕೈಗಾರಿಕಾ ಹೂಡಿಕೆಯಿಂದ ಸಾವಿರ ಕೆಲಸಗಾರರಿಗೆ ಅನ್ನದಾತನಾಗುತ್ತಾನೋ ಅವನೇ ದೇವರು. ಹೀಗಿರುವಾಗ ಒಬ್ಬ ರಾಜಕಾರಣಿಯೋ ಅಥವಾ ಕೈಗಾರಿಕೋದ್ಯಮಿಯೋ ರುಜು ಮಾಡಿ ಇತರರಿಗೆ ಸಮರ್ಥರಾಗುತ್ತಾರೋ ಆಗ ಅವರು ದೇವತಾ ಸ್ವರೂಪವನ್ನು ಪಡೆಯುತ್ತಾರೆ. ಅಂದರೆ ಅವರಿಗೆ ಜೀವವಿದೇ ಎಂದರ್ಥವಾಯಿತು.

ಆಸ್ತಿಕನಾದವನು ಭಗವಂತನನ್ನು ವೈಜ್ಞಾನಿಕ ದೃಷ್ಠಿಯಲ್ಲಿ ಪ್ರತಿಪಾದಿಸಬೇಕು. ನಾಸ್ತಿಕನು ಅದೇ ಭಗವಂತನನ್ನು ವೈಜ್ಞಾನಿಕ ದೃಷ್ಠಿಯಲ್ಲಿ ಅಲ್ಲಗಳೆಯಬೇಕು. ಇಂದಿನ ವೈಜ್ಞಾನಿಕ ಯುಗದಲ್ಲಿ ದೇವರ ಕಣವನ್ನು ಪ್ರಯೋಗಾಲಯದಲ್ಲಿ ಹುಡುಕ ಹೊರಟ ನಾವು ‘ಭಗವಂತ’ ಇಲ್ಲ ಎನ್ನುವುದು ಎಷ್ಟು ಸರಿ? ಹಾಗೆಯೇ ಭಗವಂತನು ಇದ್ದರೆ ಅಪರಾದವನ್ನು ಮಾಡಿದವರಿಗೆ ಕ್ಷಣಾರ್ದದಲ್ಲೆ ದೇವ ಪ್ರತ್ಯಕ್ಷನಾಗಿ ಶಿಕ್ಷೆಯನ್ನು ಕೊಡಬಾರದೇಕೆ? ನಮ್ಮ ನೆರೆದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಸಂಹರಿಸಬಾರದೇಕೆ? ವಾಮಾಚಾರ, ಭೂತ ಪ್ರೇತಗಳಿದ್ದರೆ ನಾವು ಅವನ್ನು ಆಹ್ವಾನ ಮಾಡಿ ಅಮೇರಿಕಾದಂತಹ ದೊಡ್ಡಣ್ಣನಂತವರನ್ನು ವಶೀಕರಣ ಮಾಡಬಹುದಲ್ಲವೇ? ವರ್ತಮಾನ ಕಾಲದಲ್ಲಿ ಇವೆಲ್ಲವೂ ಕೇವಲ ಕಾಲ್ಪನಿಕ. ಇಂತಹ ಕಥೆಗಳು ಅತೀಮಾನುಷ (ಫಿಕ್ಷನ್) ಕಥೆಗಳಲ್ಲಿ ಮಾತ್ರ ಸಾದ್ಯವಷ್ಟೆ.
ಈ ಚಿಂತನವನ್ನು ಬರೆಯುವ ಉದ್ದೇಶ ನಾನು ಒಬ್ಬ ಮನೋ ವೈದ್ಯನಾಗಿ ನನ್ನಲ್ಲಿ ಬರುವಂತಹ ಅನೇಕ ಮಾನಸಿಕ ರೋಗಿಗಳ ಬವಣೆಗಳನ್ನು ತಿಳಿಸುವ ಉದ್ದೇಶವಷ್ಠೆ. ನಮ್ಮಲ್ಲಿ ಅಕ್ಷರ ಜ್ಞಾನ ಕೊರತೆ ಹಾಗೂ ಮೂಢತ್ವವೇ ಹೇರಳವಾಗಿ ಇರುವುದು. ಹಲವರು ಮಾನವ ದೇವರು ಎಂದು ಎನ್ನಿಸಿಕೊಂಡವರು ಅಮಾಯಕರ ಮನಸ್ಸುಗಳನ್ನು ಜರ್ಜರಿತ ಮಾಡಿ ಇದರಿಂದ ಇಲ್ಲದ ಆರ್ಥಿಕ ಸಮಸ್ಯೆಗಳಿಗೆ ಬಲಿಯಾಗುಸುತ್ತಾರೆ. ವೈಯಕ್ತಿಕವಾಗಿ ನಿಜವಾಗಿಯೂ ಇದೊಂದು ಘೋರ ಕೃತ್ಯ ಅನಿಸುತ್ತದೆ. ಇಲ್ಲದ ಜ್ಯೋತಿಷ್ಯ, ವಾಮಾಚಾರ, ತಂತ್ರ, ಮಾಟ ಮಂತ್ರ ಅಂತೆಲ್ಲಾ ಅಲ್ಲಾಡಲೂ ಬಿಡದೇ ಗಂಟೆ ಗಟ್ಟಲೆ ಪೂಜೆ ಮಾಡಿಸಿ, ಆರ್ಥಿಕ, ಮಾನಸಿಕ ಹಾಗು ದೈಹಿಕವಾಗಿ ಸಮಸ್ಯೆಗಳನ್ನು ಒಡ್ಡಿ ಅರಿಯದೇ ಇರುವ ಇಂತಹ ಮುಗ್ಧರಿಗೆ ದೇಶ ಪರ್ಯಟನೆ ಮಾಡಿಸಿ ದೇವಸ್ಥಾನಗಳಲ್ಲಿ ಭಗವಂತನನ್ನು ನೋಡಿ ಎನ್ನುವವರನ್ನು ವಿರೋಧಿಸಬೇಕಲ್ಲವೆ?.
ಹಿಂದು ಧರ್ಮದಲ್ಲಿ ಉಪನಿಷತ್, ಗ್ರಂಥ, ವೇದ, ಪುರಾಣಗಳೆಲ್ಲವೂ ಜೀವನ ತತ್ವಗಳ ಹಾಗೂ ಜ್ಞಾನಾರ್ಜನೆಯ ಬಂಡಾರವೇ ಹೊರತು ಮೌಢ್ಯತೆ ಅಥವಾ ಮೂಡತನ ಅಲ್ಲ. ಭಾಗವತದಲ್ಲಿ ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ಹೇಳಿದ್ದು ಹೋಮ ಸಂದೇಶ, ತನ್ನ ಭಯವನ್ನು ಬೆಂಕಿಯಲ್ಲಿ ಸುರಿದು ಪವಿತ್ರನಾಗು ಎಂದಷ್ಟೆ. ನನ್ನ ಸಿದ್ದಾಂತದಲ್ಲಿ “ಹೋಮ” ಎಂದರೆ ಹೊಗೆಯ ಮಂಥನವೆಂದು. ಜೀವ ಎಂದಾಕ್ಷಣ ಕಿರು ಹೊಗೆ ಇರಲೇ ಬೇಕು. ಇಲ್ಲವಾದರೆ ಆ ವ್ಯಕ್ತಿ ಸತ್ತಂತೆ. ಈ ನಮ್ಮ ಕಿರು ಹೊಗೆಯಿಂದ ಈ ಬ್ರಹ್ಮಾಂಡದಲ್ಲಿ ಅಡಗಿರೊ ಜ್ಞಾನ ಬಂಡಾರವನ್ನು ಮಂಥನ ಮಾಡಿದ ಪಕ್ಷದಲ್ಲಿ ನಮಗೆ ವೈಜ್ಞಾನಿಕ ಹೋಮ ಅರಿವಾಗುವುದು. ಇಲ್ಲದ ಭಯ ಹುಟ್ಟಿಸಿ ಹೋಮ ಮಾಡಿಸುವ ಜ್ಯೋತಿಷ್ಯರಿಗೆ ಕಡಿವಾಣ ಬೇಡವೇ?
ನಮ್ಮ ಪರಂಪರೆಯನ್ನು ಆದಿಕಾಲದಿಂದಲೂ ಹಿಂದು ಧರ್ಮದಲ್ಲಿ ಆಚಾರ, ವಿಚಾರಗಳನ್ನು ಯಾರೂ ಮೌಢ್ಯತೆ ಅಥವಾ ಮೂಢನಂಬಿಕೆಗಳು ಎಂದು ಹೇಳುವುದಿಲ್ಲ. ಅಂತಹ ಕುರುಡು ಆಚರಣೆಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು ಅದನ್ನೇ ವ್ಯವಹಾರವನ್ನಾಗಿಸಿಕೊಂಡು ಯಾವ ಲೆಕ್ಕಕ್ಕೂ ಸಿಗದೆ, ಕರವನ್ನು ಕಟ್ಟದೇ ಇರುವಂತಹವರನ್ನು ಕಾನೂನಿನ ಅಡಿ ತಂದು ಶಿಕ್ಷೆಗೆ ಗುರಿಪಡಿಸುವುದು ಒಳಿತು. ಹೀಗೇನಾದರು ಸರ್ಕಾರ ಮಾಡಿದ್ದೇ ಆದರೆ ಮೌಢ್ಯತೆಯ ವಿರುದ್ದ ಹೋರಾಡಿ ಹತ್ಯೆಗೆ ಈಡಾದ ಅನೇಕರಿಗೆ ನಾವು ನ್ಯಾಯ ದೊರಕಿಸಿ ಕೊಟ್ಟಂತಾಗುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ.
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ


[…] ಮೂಢನಂಬಿಕೆ ಎಷ್ಟು ಸರಿ […]