ಕೆ.ಆರ್.ಪೇಟೆ,ಜ.27: ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವು ಗಟ್ಟಿಯಾಗಿದೆ. ಸೈನಿಕರಂತಹ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸಿದ್ದಾರೆ. ಆದರೆ ಸಚಿವ ಎನ್.ಚೆಲುವರಾಯಸ್ವಾಮಿ ಅವರು ನಮ್ಮ ಪಕ್ಷದಲ್ಲಿ ಶಾಸಕ, ಮಂತ್ರಿ ಸೇರಿದಂತೆ ಎಲ್ಲಾ ಅಧಿಕಾರ ಅನುಭವಿಸಿ ಹೋಗಿದ್ದು, ಈಗ ಜೆಡಿಎಸ್ ಮುಗಿಸುವ ಮಾತನಾಡುತ್ತಿದ್ದಾರೆ. ಇದು ಸಾಧ್ಯವಿಲ್ಲದ ಮಾತಾಗಿದೆ.
2028ಕ್ಕೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಭಾರೀ ಅಂತರದಿಂದ ಸೋಲುವ ಭಯವಿದೆ. ಅದಕ್ಕಾಗಿ ಬೇರೆ ಕ್ಷೇತ್ರವನ್ನು ಹುಡುಕುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ನೇತೃತ್ವದಲ್ಲಿ ನಡೆದ ಜೆಡಿಎಸ್ ಪಕ್ಷದ 25ನೇ ವರ್ಷದ ಬೆಳ್ಳಿಹಬ್ಬ ಮಹೋತ್ಸವ ಹಾಗೂ ವಿವಿಧ ಪಕ್ಷಗಳಿಂದ ನೂರಾರು ಮುಖಂಡರ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಮತ್ತು ಜೆಡಿಎಸ್ ಪಕ್ಷದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಕಾರ್ಯಕರ್ತರು ನೀಡಿದ ಆತ್ಮೀಯ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಅವರು ಮಂಡ್ಯ ಜಿಲ್ಲೆಯಿಂದ ಜೆಡಿಎಸ್ ಪಕ್ಷವನ್ನು ಹೊಡೆದೋಡಿಸಿ ಎಂದು ಅವರ ಯುವಕರಿಗೆ ಕರೆ ನೀಡಿರುವುದನ್ನು ನೋಡಿದರೆ ಅವರಿಗೆ ನಮ್ಮ ಪಕ್ಷದ ಮೇಲಿರುವ ಭಯವನ್ನು ತೋರಿಸುತ್ತದೆ. ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದು 2028 ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪಂಚ ಗ್ಯಾರಂಟಿಗಳನ್ನು ನಿಗದಿತ ಸಮಯಕ್ಕೆ ನೀಡದೆ ರಾಜ್ಯ ಸರ್ಕಾರವು ಅಳಿತಪ್ಪಿದೆ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಡುವಿನ ಅಧಿಕಾರದಾಸೆಯ ಹಗ್ಗ ಜಗ್ಗಾಟದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ನೆನೆಗುದಿಗೆ ಬಿದ್ದಿವೆ ಎಂದು ಟೀಕಿಸಿದರು.
2028ಕ್ಕೂ ಹೆಚ್.ಟಿ.ಮಂಜು ನಮ್ಮ ಪಕ್ಷದ ಅಭ್ಯರ್ಥಿ: ಮಂಡ್ಯ ಜಿಲ್ಲೆಯು ಜೆಡಿಎಸ್ ಪಕ್ಷದ ಭದ್ರಕೋಟೆ ಎಂಬುದನ್ನು 2028ರ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಲಿದೆ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾದ ಹೆಚ್.ಟಿ.ಮಂಜು ಅವರನ್ನೇ ಮತ್ತೊಮ್ಮೆ ಅಭ್ಯರ್ಥಿ ಮಾಡಲಾಗುವುದು. ಮತ್ತೊಮ್ಮೆ ಗೆದ್ದು ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಜೆಡಿಎಸ್ ರೈತರು ಹಾಗೂ ಬಡವರ ಪಕ್ಷವಾಗಿರುವುದರಿಂದ ಜಿಲ್ಲೆಯ ಜನತೆಯ ಮನಸ್ಸು ಹಾಗೂ ಮನೆಗಳಲ್ಲಿ ಶಾಶ್ವತವಾಗಿ ನೆಲೆಸಿದೆ. ಮಂಡ್ಯ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಕುಮಾರಣ್ಣ ಅವರು ಕೇಂದ್ರದ ಸಚಿವರಾಗಿ ಇಡೀ ದೇಶವೇ ಮೆಚ್ಚುವಂತೆ ದಕ್ಷ ಪ್ರಾಮಾಣಿಕ ಆಡಳಿತ ನೀಡುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಶಾಸಕ ಎಚ್.ಟಿ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕಿನ ಗಡಿಗ್ರಾಮ ಅಶೋಕನಗರದಿಂದ ಕೆ.ಆರ್.ಪೇಟೆ ಪಟ್ಟಣ ಮತ್ತು ಹರಿಹರಪುರದ ಮಾರ್ಗವಾಗಿ ಮಡುವಿನಕೋಡಿ ವರೆವಿಗೂ ಯುವ ಜೆಡಿಎಸ್ ವತಿಯಿಂದ ಬೃಹತ್ ಬುಲೆಟ್ ಬೈಕ್ ರ್ಯಾಲಿ ಮೂಲಕ ಬರಮಾಡಿಕೊಳ್ಳಲಾಯಿತು.

ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರ 38ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ 38ಕೆ.ಜಿ ಬೃಹತ್ ಗಾತ್ರದ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಿಖಿಲ್ ಕುಮಾರಸ್ವಾಮಿ ಮತ್ತು ಹೆಚ್.ಟಿ.ಮಂಜಣ್ಣ ಅವರಿಗೆನಿಖಿಲ್ ಕುಮಾರಸ್ವಾಮಿ ಅವರನ್ನು ಬೃಹತ್ ಗಾತ್ರದ ಕೊಬ್ಬರಿ ಕಾಯಿ ಮತ್ತು ಮಂಡ್ಯ ಬೆಲ್ಲದ ಹಾರವನ್ನು ಹಾಕಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ರಾಜ್ಯ ಜೆಡಿಎಸ್ ವಕ್ತಾರ ಅಶ್ವಿನ್ ಕುಮಾರ್, ರಾಜ್ಯ ಸಹಕಾರ ಮಹಾಮಂಡಲದ ರಾಜ್ಯ ನಿರ್ದೇಶಕರಾದ ಚೋಳೇನಹಳ್ಳಿ ಪುಟ್ಟಸ್ವಾಮೀಗೌಡ, ಎಸ್.ಎಲ್.ಮೋಹನ್, ಜೆಡಿಎಸ್ ಚಿಕ್ಕಮಗಳೂರು ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ರಾಜೇನಹಳ್ಳಿ ಕುಮಾರಸ್ವಾಮಿ, ತಾಲ್ಲೂಕು ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಆರ್.ರಘು, ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಬಲ್ಲೇನಹಳ್ಳಿ ರಾಮಚಂದ್ರನ್, ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ಮಹಾದೇವೇಗೌಡ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ನಾಗೇಶ್, ಎಸ್.ಆರ್.ದಿನೇಶ್, ಮದ್ದಿಕ್ಯಾಚಮನಹಳ್ಳಿ ಸಂದೇಶ್, ತಾಲ್ಲೂಕು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್, ಜಿಲ್ಲಾ ದಿಶಾ ಕಮಿಟಿ ಸದಸ್ಯ ನರಸನಾಯಕ್, ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ನಿರ್ದೇಶಕರಾದ ಮಲ್ಲೇನಹಳ್ಳಿ ಮೋಹನ್, ಹೆಚ್.ಟಿ.ಲೋಕೇಶ್, ನಾಗರಘಟ್ಟ ದಿಲೀಪ್ ಕುಮಾರ್, ಬೊಮ್ಮೇನಹಳ್ಳಿ ಮಂಜುನಾಥ್, ಕೊರಟೀಕೆರೆ ದಿನೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಲ್ಲೂಕು ಜೆಡಿಎಸ್ ಮಹಿಳಾ ವಿಭಾಗದ ಅಧ್ಯಕ್ಷೆ ರೇಖಾ, ಪ್ರಧಾನ ಕಾರ್ಯದರ್ಶಿ ರತಿಮಹಾದೇವ್, ಮುಖಂಡರಾದ ತಾ.ಪಂ.ಮಾಜಿ ಅಧ್ಯಕ್ಷ ಮೆಣಸ ಮಹಾದೇವೇಗೌಡ, ಜಿ.ಪಂ.ಮಾಜಿ ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ, ತಾ.ಪಂ.ಮಾಜಿ ಸದಸ್ಯ ಚಿಕ್ಕಗಾಡಿಗನಹಳ್ಳಿ ಸೋಮಶೇಖರ್, ಕೆ.ಟಿ.ಚಂದ್ರೇಗೌಡ, ಗಂಜಿಗೆರೆಕೊಪ್ಪಲು ರಾಮಕೃಷ್ಣೇಗೌಡ, ಅತೀಕ್ ಅಹಮದ್, ಮದ್ದಿಕ್ಯಾಚಮನಹಳ್ಳಿ ಸಂದೇಶ್, ಚಿಕ್ಕೋಸಹಳ್ಳಿ ನಾಗೇಶ್, ಅಗ್ರಹಾರಬಾಚಹಳ್ಳಿ ಲೋಕೇಶ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉದ್ಯಮಿ ಮಡುವಿನಕೋಡಿ ಎಂ.ಆರ್.ಮನು ಸೇರಿದಂತೆ ನೂರಾರು ವಿವಿಧ ಪಕ್ಷಗಳ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
– ಶ್ರೀನಿವಾಸ್ ಆರ್.
