ಹಾಸನ, ಫೆಬ್ರವರಿ 27: ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬರ ಶವ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆಯ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.
ಹಣಕಾಸು ವಿಚಾರಕ್ಕೆ ಸಂಬಂಧಿಸಿ ಸ್ನೇಹಿತರೇ ಹತ್ಯೆ ಮಾಡಿ ಶವವನ್ನು ಕೆರೆಗೆ ಎಸೆದಿದ್ದಾರೆ ಎಂದು ಮೃತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ತಾಲ್ಲೂಕಿನ ಅಂತನಹಳ್ಳಿ ಗ್ರಾಮದ ಜಗದೀಶ್ (44) ಮೃತ ವ್ಯಕ್ತಿ. ಸಮೀಪದ ಮಲ್ಲವ್ವನಘಟ್ಟ ಗ್ರಾಮದ ಕೆರೆಯಲ್ಲಿ ಬುಧವಾರ ಸಂಜೆ ಶವ ಪತ್ತೆಯಾಗಿದೆ.
ಮೃತನ ಸಂಬಂಧಿಕರ ಆರೋಪದ ಪ್ರಕಾರ, ಅಂತನಹಳ್ಳಿಯ ಬಸವರಾಜ್ ಹಾಗೂ ಮಂಜೇಗೌಡ ಮತ್ತು ಮಲ್ಲವ್ವನಘಟ್ಟದ ಸೋಮಶೇಖರ್ ಹಾಗೂ ದಿಲೀಪ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಜಗದೀಶ್ ಅವರು ಬಸವರಾಜ್ ಮತ್ತು ಮಂಜೇಗೌಡರಿಂದ ಸಾಲ ಪಡೆದಿದ್ದು, ಹಣ ಹಾಗೂ ಬಡ್ಡಿ ವಿಚಾರಕ್ಕೆ ಸಂಬಂಧಿಸಿ ಆರೋಪಿಗಳು ಪದೇಪದೆ ಪೀಡಿಸುತ್ತಿದ್ದರು ಎನ್ನಲಾಗಿದೆ.
ಹಣ ಬಡ್ಡಿ ನೀಡಿದರೆ ‘ಪಾರ್ಟಿ’ ಕೊಡಿಸಬೇಕೆಂದು ಒತ್ತಾಯಿಸುತ್ತಿದ್ದರೆಂದು ಕುಟುಂಬಸ್ಥರು ದೂರಿದ್ದಾರೆ. ಬುಧವಾರವೂ ಆರೋಪಿಗಳು ಜಗದೀಶ್ ಅವರನ್ನು ಕರೆದೊಯ್ದು ಕಂಠಪೂರ್ತಿ ಮದ್ಯಪಾನ ಮಾಡಿಸಿ ಹತ್ಯೆಗೈದು ಬಳಿಕ ಶವವನ್ನು ಕೆರೆಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೂ ಆರೋಪಿಗಳು ತಾವೇ ಫೋನ್ ಮೂಲಕ “ಕೆರೆಗೆ ಬಿದ್ದಿದ್ದಾರೆ” ಎಂದು ಮಾಹಿತಿ ನೀಡಿದ್ದರೆಂದು ತಿಳಿದುಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ನಡೆಸಿದಾಗ ಕೆರೆಯಲ್ಲಿ ಶವ ಪತ್ತೆಯಾಗಿದೆ.
ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮನಕಲುಕುವಂತಿತ್ತು. ಘಟನೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
