ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಅಭಿವೃದ್ಧಿ, ನೀರಾವರಿ ಯೋಜನೆಗಳು ಮತ್ತು ಮೂಲಸೌಕರ್ಯ ವೃದ್ಧಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ಅಂಗೀಕರಿಸಲಾಗಿದೆ.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:
-
ಭದ್ರಾ ಮೇಲ್ದಂಡೆ ಯೋಜನೆ:
ತುಮಕೂರು ಶಾಖಾ ಕಾಲುವೆ ಕಾಮಗಾರಿಗಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 271 ಎಕರೆ ಜಮೀನು ಖರೀದಿಸಲು ₹77.35 ಕೋಟಿ ವೆಚ್ಚಕ್ಕೆ ಅನುಮೋದನೆ. -
ಬೇಡ್ತಿ ನದಿ ನೀರಾವರಿ:
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ 107 ಕೆರೆಗಳನ್ನು ಬೇಡ್ತಿ ನದಿಯಿಂದ ನೀರು ಎತ್ತಿ ತುಂಬಿಸುವ ₹179.50 ಕೋಟಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ. -
ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ:
ಹಾವೇರಿ ಜಿಲ್ಲೆಯ ಬ್ಯಾಡಗಿ ಮತ್ತು ಹಾನಗಲ್ ತಾಲೂಕುಗಳ 137 ಕೆರೆಗಳನ್ನು ತುಂಬಿಸಲು ₹115.60 ಕೋಟಿ ವೆಚ್ಚಕ್ಕೆ ಅನುಮೋದನೆ. -
ಪುರಸಭೆಗಳ ಮೇಲ್ದರ್ಜೆಗೇರಿಕೆ:
ವಿಜಯಪುರ ಜಿಲ್ಲೆಯ ಸಿಂದಗಿ, ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿನ ಯಲ್ಲಮ್ಮ ಹಾಗೂ ಬೀದರ್ ಜಿಲ್ಲೆಯ ಹೂಮ್ನಾಬಾದ್ ಪುರಸಭೆಗಳನ್ನು ನಗರಸಭೆಗಳಾಗಿ ಮೇಲ್ದರ್ಜೆಗೇರಿಸಲು ತೀರ್ಮಾನ. -
ಮಾದರಿ ಕಾಲೋನಿಗಳ ಅಭಿವೃದ್ಧಿ:
ರಾಜ್ಯದ 22 ವಿಧಾನಸಭಾ ಕ್ಷೇತ್ರಗಳ ಅಲ್ಪಸಂಖ್ಯಾತರ ವಸತಿಗ್ರಾಮಗಳನ್ನು ಮಾದರಿ ಕಾಲೋನಿಗಳಾಗಿ ಅಭಿವೃದ್ಧಿಪಡಿಸಲು ₹398 ಕೋಟಿ ಅಂದಾಜು ವೆಚ್ಚಕ್ಕೆ ಅನುಮೋದನೆ. -
ಧಾರ್ಮಿಕ ಸೌಧ ನಿರ್ಮಾಣ:
ಬೆಂಗಳೂರು ನಗರದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸ್ವಂತ ಕಟ್ಟಡ “ಧಾರ್ಮಿಕ ಸೌಧ”ವನ್ನು ₹27.70 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ.
ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಈ ನಿರ್ಧಾರಗಳು ರಾಜ್ಯದ ಮೂಲಸೌಕರ್ಯ, ನೀರಾವರಿ ಹಾಗೂ ನಗರಾಭಿವೃದ್ಧಿ ಕ್ಷೇತ್ರಗಳಿಗೆ ಹೊಸ ಚೇತನ ನೀಡಲಿವೆ.

