ಮಾರ್ಚ್ 21 – 1953 ಓಶೋ ತಮ್ಮ ಜ್ಞಾನೋದಯದ ದಿನವೆಂದು ಉಲ್ಲೇಖಿಸಿದ್ದಾರೆ.
ಈ ಹೇಳಿಕೆ ಕೇವಲ ಒಂದು ವೈಯಕ್ತಿಕ ಘಟನೆ ಅಲ್ಲ ˌ ಅದು ಜ್ಞಾನೋದಯ ಎಂಬುದರ ಬಗ್ಗೆ ಆಳವಾದ ಚರ್ಚೆಗೆ ದಾರಿ ತೆರೆದಿದೆ. ಯಾಕೆಂದರೆ “ಜ್ಞಾನೋದಯ” ಎಂಬ ಪದವನ್ನು ನಾವು ಸಾಮಾನ್ಯವಾಗಿ ಒಂದು ಮಹತ್ತರ ಸಾಧನೆ, ಒಂದು ಅಂತಿಮ ಗುರಿ, ಅಥವಾ ಅಲೌಕಿಕ ಅನುಭವ ಎಂದು ಕಲ್ಪಿಸಿಕೊಂಡಿದ್ದೇವೆ. ಆದರೆ ಆಧ್ಯಾತ್ಮಿಕ ಪರಂಪರೆಯೊಳಗೆ ನೋಡಿದರೆ, ಈ ಕಲ್ಪನೆ ಬಹಳ ಸಂಕೀರ್ಣ ಮತ್ತು ಕೆಲವೊಮ್ಮೆ ತಪ್ಪು ಅರ್ಥಗಳನ್ನೂ ಒಳಗೊಂಡಿದೆ.
ಜ್ಞಾನೋದಯವನ್ನು ಸಾಧನೆ ಅಥವಾ ಧ್ಯಾನದ “ಗುರಿ” ಎಂದು ನೋಡುವುದು ಸಾಮಾನ್ಯ.
ಆದರೆ ಯು.ಜಿ. ಕೃಷ್ಣಮೂರ್ತಿ ಅವರಂತಹವರು ಇದನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತಾರೆ. ಅವರ ಪ್ರಕಾರ ಇದು ಸಾಧನೆಯ ಫಲವಲ್ಲ; ಇದು “ನೈಸರ್ಗಿಕ ವಿಕೋಪ” — ಅಂದರೆ ಅಕಸ್ಮಾತ್ ಸಂಭವಿಸುವ ಆಂತರಿಕ ಪರಿವರ್ತನೆ. ಇದನ್ನು ಯೋಜಿಸಲು ಸಾಧ್ಯವಿಲ್ಲ, ನಿಯಂತ್ರಿಸಲು ಸಾಧ್ಯವಿಲ್ಲ.
ಇದೇ ವಿಚಾರವನ್ನು ಬೇರೆ ದೃಷ್ಟಿಯಿಂದ ನೋಡಿದರೆ, ಜ್ಞಾನೋದಯವು ಒಂದು ಮೌನದ ಮಹಾಸ್ಪೋಟದಂತೆ. ಹೊರಗೆ ಶಾಂತವಾಗಿರುವ ವ್ಯಕ್ತಿಯೊಳಗೆ ಏಕಾಏಕಿ ಒಂದು ಆಳವಾದ ಬದಲಾವಣೆ ನಡೆಯುತ್ತದೆ. ಇದು ಹೊರಗಿನ ಪ್ರಯತ್ನದಿಂದ ಉಂಟಾಗುವುದಿಲ್ಲ; ಇದು ಒಳಗಿನ ಶೂನ್ಯತೆಯ ಗಾಢತೆಯಿಂದ ಉದ್ಭವಿಸುತ್ತದೆ. ವಿಜ್ಞಾನದಲ್ಲಿ ಶೂನ್ಯದಿಂದಲೇ ಸೃಷ್ಟಿ ಸಂಭವಿಸುತ್ತದೆ ಎಂಬಂತೆ, ಮಾನವನೊಳಗಿನ ಮೌನದಿಂದಲೇ ಹೊಸ ಅರಿವು ಮೂಡುತ್ತದೆ.
ಈ ಸ್ಥಿತಿಯಲ್ಲಿ “ನಾನು” ಎಂಬ ಕೇಂದ್ರ ದುರ್ಬಲವಾಗುತ್ತದೆ ಅಥವಾ ಕರಗುತ್ತದೆ. ಆಗ ನಡೆಯುವ ಕ್ರಿಯೆಗಳು ವೈಯಕ್ತಿಕವಾಗಿರುವುದಿಲ್ಲ. ಮಾತುಗಳು ಬರುತ್ತವೆ, ಬರಹಗಳು ಮೂಡುತ್ತವೆ, ಕವಿತೆಗಳು ಹುಟ್ಟುತ್ತವೆˌ ನರ್ತನ ಆಗುತ್ತದೆ… ಸೃಜನಶೀಲತೆ ಹರಿಯುತ್ತದೆ — ಆದರೆ “ನಾನು ಮಾಡುತ್ತಿದ್ದೇನೆ” ಎಂಬ ಭಾವನೆ ಕಡಿಮೆಯಾಗುತ್ತದೆ.
ಆದರೆ ಇಲ್ಲಿ ಒಂದು ಮಹತ್ವದ ವಿಚಾರ ಗಮನಿಸಬೇಕು. ಜ್ಞಾನೋದಯ ಎಂಬ ಪದವನ್ನು ಎಲ್ಲ ಪರಂಪರೆಗಳೂ ಒಪ್ಪಿಕೊಂಡಿಲ್ಲ. ಜೆನ್ ಪರಂಪರೆಯಲ್ಲಿ, ಉದಾಹರಣೆಗೆ, ಜ್ಞಾನೋದಯದ ಬಗ್ಗೆ ಹೆಚ್ಚು ಮಾತನಾಡುವುದೇ ಇಲ್ಲ. ಅಲ್ಲಿ ನೇರ ಅನುಭವ ಮುಖ್ಯ. ಪದಗಳ ಮೂಲಕ ಅದನ್ನು ನಿರ್ವಚಿಸುವುದನ್ನು ಅವು ತಿರಸ್ಕರಿಸುತ್ತವೆ. ಇದೇ ರೀತಿಯಾಗಿ, ಬುದ್ದ ತಮ್ಮ ಜೀವನದಲ್ಲಿ “ನಾನು ಜ್ಞಾನೋದಯ ಹೊಂದಿದ್ದೇನೆ” ಎಂದು ಘೋಷಣೆ ಮಾಡಲಿಲ್ಲ. ಅವರು ತಮ್ಮ ಅನುಭವವನ್ನು “ಬೋಧಿ” — ಅಂದರೆ ಜಾಗೃತಿ ಎಂದು ಮಾತ್ರ ಸೂಚಿಸಿದರು.
ಇತಿಹಾಸದಲ್ಲಿ ನಂತರ, ಅವರ ಅನುಭವಕ್ಕೆ “ಜ್ಞಾನೋದಯ” ಎಂಬ ಮೌಲ್ಯವನ್ನು ನೀಡಲಾಯಿತು. ಅವರ ಸಾವಿನ ನಂತರ ಹಲವು ವರ್ಷಗಳ ಕಾಲ, ಈ ಕಲ್ಪನೆ ರೂಪುಗೊಂಡಿತು. ಬುದ್ದ ಕಾಲದಲ್ಲಿ ˌ ಬುದ್ದನ ಪೂರ್ವದಲ್ಲಿ ಅಥವಾ ವೇದ ಉಪನಿಷತ್ ದಲ್ಲಿ ಈ “ಜ್ಞಾನೋದಯ” ಎಂಬ ಪರಿಕಲ್ಪನೆ ಕಾಣುವುದಿಲ್ಲ. ಸೂಫಿಗಳಲ್ಲಿ “ಪನ್ಹಾ” ಎಂಬುವುದು ಜ್ಞಾನೋದಯದ ಪರ್ಯಾಯವಲ್ಲ. ಪನ್ಹಾ ಎಂದರೇ ಪ್ರೇಮದಲ್ಲಿ ಮುಳುಗುವುದು. ಪಾಶ್ಚಮಾತ್ಯ ದೇಶದ ಫಿಲಾಸಫಿಯಲ್ಲಿ ಈ ಜ್ಞಾನೋದಯದ ಕುರಿತು ಉಲ್ಲೇಖ ಕಾಣುವುದಿಲ್ಲ. ಸಾಕ್ರೇಟಿಸ್ ˌ ಪ್ಲೇಟೋˌ ಅರಿಸ್ಟಾಟಲ್ ˌ ಗೆಲಿಲಿಯೋˌ ಡೆಕಾಟ್ರˌ ಕಾಂಟ್ ˌ ಹೆಗೆಲ್ ..ಮುಂತಾದವರು ಎಲ್ಲಿಯೂ “ಜ್ಞಾನೋದಯ”ದಂತ ಸ್ಥಿತಿ ಬಗ್ಗೆ ಉಲ್ಲೇಖಿಸಿಲ್ಲ.
ಅಧುನಿಕ ತತ್ವಶಾಸ್ತ್ರದ ಪಿತಾಮಹ ಎನ್ನಿಸಿಕೊಳ್ಳುವ ಅತೀ ಹೆಚ್ಚು ಜನರನ್ನು ಪ್ರಭಾವಿಸಿರುವ ಕಾರ್ಲ ಮಾರ್ಕ್ಸ ˌ ಸಿಗ್ಮಂಡ್ ಪ್ರಾಯ್ಡ್ ಮತ್ತು ಫೆಡರಿಕ ನಿತ್ಸೆ ಇವರುಗಳ ಪ್ರಥಮದಲ್ಲಿ “ದೇವರ” ಅಸ್ತಿತ್ವವನ್ನೆ ಅಲ್ಲಗಳೆದರು. ಹೀಗಾಗಿ “ಗುರು” “ಜ್ಞಾನೋದಯ” ಎಂಬಂಥದು ಇಲ್ಲವೇ ಇಲ್ಲ ಇವರ ತತ್ವಶಾಸ್ತ್ರದಲ್ಲಿ. ಹೀಗಾಗಿ ಇದೊಂದು ಭೌತವಾದಿ ತತ್ವಶಾಸ್ತ್ರ ಎನ್ನಬಹುದು.
ಹಾಗಾದ್ರೆ ˌ ಈ “ಜ್ಞಾನೋದಯ” ಎಲ್ಲಿಂದ ಬಂತು. ಇದೂ ಬುದ್ದ ನಂತರˌ ಐದು ನೂರುˌ ಸಾವಿರ ವರ್ಷಗಳ ನಂತರ ಬುದ್ದನನ್ನು “ಜ್ಞಾನೋದಯ” ಅಥವಾ Enlighten ಎಂದು ಕರೆಯ ತೊಡಗಿದರು.
ಇದೇ ಸಂದರ್ಭದಲ್ಲಿ ಒಂದು ವಿಭಜನೆಯೂ ಹುಟ್ಟಿತು — ಆರಾಧಿಸುವವನು ಮತ್ತು ಆರಾಧಿಸಲ್ಪಡುವವನು ಬೇರೆ ಎಂಬ ಭಾವನೆ. “ನಾನು” ಮತ್ತು “ಅವನು” ಎಂಬ ವಿಭಜನೆ ಹೆಚ್ಚಾಯಿತು.
ಆದರೆ ಬುದ್ದ ಅಥವಾ ಇತರ ಅನೇಕ ಜ್ಞಾನಿಗಳು ಈ ಅನುಭವವನ್ನು “ಉನ್ನತ ಹಂತ” ಎಂದು ಹೇಳಲಿಲ್ಲ. ಅವರು ಅದನ್ನು ಒಂದು ನಿರಂತರ ಚಲನೆ ಮೂಲಕದ ಪರಿಪಕ್ವತೆˌ ಒಂದು ಬೆಳವಣಿಗೆ — ಎಂದು ಮಾತ್ರ ಸೂಚಿಸಿದರು.
ಈ ಹಿನ್ನೆಲೆಯಲ್ಲಿ ಓಶೋ ಅವರ ನಿಲುವು ವಿಭಿನ್ನವಾಗಿದೆ. ಅವರು ತಮ್ಮ ಅನುಭವವನ್ನು ಸ್ಪಷ್ಟವಾಗಿ ಹಂಚಿಕೊಂಡರು. ಅದನ್ನು “ಜ್ಞಾನೋದಯ” ಎಂದು ಕರೆಯಲು ಹಿಂಜರಿಯಲಿಲ್ಲ. ಆದರೆ ಅದೇ ಸಮಯದಲ್ಲಿ, ಅವರು ಅದನ್ನು ನಿರಾಕರಿಸುವ ಧೈರ್ಯವನ್ನೂ ತೋರಿಸಿದರು.
“ಅದು ಇದೆ” ಎಂದರು…
“ಅದು ಇಲ್ಲ” ಎಂದರು…
ಅವರು ಅನುಭವವನ್ನು ಹೇಳಿದರೂ,
ಅದರ ಮೇಲೆ ಯಾವುದೇ ಸಿದ್ಧಾಂತದ ಕಟ್ಟಡ ನಿರ್ಮಿಸಲಿಲ್ಲ. ಅವರ ಉದ್ದೇಶ ಒಂದು —
ಸಾಮಾನ್ಯ ಮನುಷ್ಯನಿಗೆ ಆಂತರಿಕ ಸಾಧ್ಯತೆಯನ್ನು ನೆನಪಿಸುವುದು. ಅವರಿಗಾಗಿ ಅವರು ಕೆಲವೊಮ್ಮೆ ಪದಗಳನ್ನು ಬಳಸಬೇಕಾಯಿತು. ಅವರಿಗಾಗಿ ಅವರು ತಮ್ಮ ಅನುಭವವನ್ನು ಘೋಷಿಸಬೇಕಾಯಿತು.
ಇದು ಒಂದು ಅಪಾಯಕರ ನಿರ್ಧಾರವೂ ಹೌದು.
ಯಾಕೆಂದರೆ ಸಮಾಜ ಬಹಳ ಬಾರಿ ಇಂತಹ ಘೋಷಣೆಗಳನ್ನು ವಿರೋಧಿಸುತ್ತದೆ.
ಇದೇ ರೀತಿ ಅನ್ಹಲ ಹಕ್ “ಅಹಂ ಬ್ರಹ್ಮಾಸ್ಮೀಃ” ಘೋಷಿಸಿದ ಸೂಫಿಯನ್ನು ಕೊಲ್ಲಲಾಯಿತ್ತು…
“ನಾನು ಜ್ಞಾನೋದಯ” ಹೊಂದಿದವನು ಎಂಬುವುದು ಅತ್ಯಂತ ಅಪಾಯಕಾರಿ ಸ್ವಯಂ ಘೋಷಣೆ. ಅದನ್ನು ಓಶೋ ದೈರ್ಯದಿಂದಲೆ ಮೈಮೇಲೆ ಏಳೆದುಕೊಂಡರು..ಅದೂ ಮೂರ್ಖತೆ ವಾದವಾಗಿ ಬಳಸ ತೊಡಗಿದಾಗ ಅವರೆ ಅದನ್ನು ನಿರಾಕರಿಸಿದರು ಕೂಡಾ.
ಇತಿಹಾಸದಲ್ಲಿ ಓಶೋರಂತೆ ಹಲವಾರು ಮಿಸ್ಟಿಕ್ಗಳು ತಿರಸ್ಕಾರˌ ವಿರೋಧವನ್ನು ಎದುರಿಸಿದ್ದಾರೆ. ನಾನು ದೇವರ ಮಗˌ ದೇವರ ಸಂದೇಶ ವಾಹಕ…ಎಂಬುವವರು ಅಪಾಯ ಎದುರಿಸಿದ್ದಾರೆ… ಕಾರಣˌ ಸಾಮಾನ್ಯರು ಸಾಮಾನ್ಯರಂತೆ ಮಾತ್ನಾಡಿದಾಗ ಜನಗಳು ಅವರನ್ನು ಒಪ್ಪುವುದಿಲ್ಲ. ಗೊಲ್ಲ ಕೃಷ್ಣನನ್ನು ಯಾರು ಒಪ್ಪುವುದಿಲ್ಲ. ಭಗವಾನ ಕೃಷ್ಣನನ್ನು ಒಪ್ಪುತ್ತಾರೆ. ಹೀಗಾಗಿ ಕೆಲವರು ಈ ಅಪಾಯ ತಿಳಿದು ಜನರಿಗೆ “ಧರ್ಮ” ಸಂದೇಶಕ್ಕಾಗಿ ಅಪಾಯಕಾರಿಯಾಗಿ “ಅವತಾರ”ಗಳನ್ನು ಎಳೆದುಕೊಳ್ಳುತ್ತಾರೆ.
ಜ್ಞಾನೋದಯದ ಬಗ್ಗೆ ಇನ್ನೊಂದು ಮುಖ್ಯ ತಪ್ಪು ಕಲ್ಪನೆ ಇದೆ — ಅದು ಒಂದು ಶಾಶ್ವತ, ನಿರಂತರ ಆನಂದಭರಿತ ಸ್ಥಿತಿ ಎಂದು. ಆದರೆ ಅನೇಕ ಅನುಭವಗಳು ಹೇಳುವುದೇನೆಂದರೆ, ಇದಕ್ಕೆ ಮುಂಚೆ ಒಂದು ಆಳವಾದ ಏಕಾಂತ, ದುಃಖ, ಮತ್ತು ಒಳಗಿನ ಸಂಘರ್ಷ ಇರುತ್ತದೆ. ಈ ಸಂಘರ್ಷವೇ ವ್ಯಕ್ತಿಯನ್ನು ತನ್ನೊಳಗೆ ತಳ್ಳುತ್ತದೆ. ಅಲ್ಲಿ ಮೌನ ಹುಟ್ಟುತ್ತದೆ.
ಆ ಮೌನದಲ್ಲೇ ಪರಿವರ್ತನೆ ಸಾಧ್ಯವಾಗುತ್ತದೆ.
ಕೊನೆಯಲ್ಲಿ, ಒಂದು ಸ್ಪಷ್ಟ ಅರಿವು ಅಗತ್ಯ:
ಜ್ಞಾನೋದಯವು ಒಂದು ಗುರಿ ಅಲ್ಲ.
ಅದು ಒಂದು ಲೇಬಲ್ ಅಲ್ಲ.
ಅದು ಒಂದು ಸ್ಥಾನಮಾನವೂ ಅಲ್ಲ.
ಅದು ಸಂಭವಿಸಬಹುದಾದ ಒಂದು ಆಂತರಿಕ ಘಟನೆ —
ಅದು ಮೌನದ ಆಳದಲ್ಲಿ ಮೂಡುವ ಒಂದು ಅರಿವು.
ಮಾರ್ಚ್ 21 ನಮಗೆ ಈ ಸ್ಮರಣೆಯನ್ನು ಕೊಡುತ್ತದೆ:
ಹೊರಗಿನ ಹುಡುಕಾಟಕ್ಕಿಂತ ಒಳಗಿನ ಮೌನ ಮುಖ್ಯ.
ಪದಗಳಿಗಿಂತ ಅನುಭವ ಮುಖ್ಯ. ಸಿದ್ಧಾಂತಗಳಿಗಿಂತ ಜಾಗೃತಿ ಮುಖ್ಯ. ಅಂತಿಮವಾಗಿ ಹೇಳುವುದಾದರೆ:
ಜ್ಞಾನೋದಯವನ್ನು ಹುಡುಕುವುದಕ್ಕಿಂತ,
ಅದಕ್ಕೆ ಅಡ್ಡಿಯಾಗಿರುವ ಮನಸ್ಸಿನ ಗದ್ದಲವನ್ನು ಗಮನಿಸುವುದು ಮುಖ್ಯ.
ಮೌನ ಬಂದಾಗ —
ಏನಾದರೂ ಸಂಭವಿಸಬಹುದು.
ಅದನ್ನು ಕೆಲವರು “ಜ್ಞಾನೋದಯ” ಎಂದು ಕರೆಯುತ್ತಾರೆ.
ಕೆಲವರು ಕರೆಯುವುದೇ ಇಲ್ಲ.
ಆದರೆ ಅದು ಹೆಸರಿಗಿಂತ ದೊಡ್ಡದು.
ಶಿಕ್ಷಕ
ಗುರು
ರಹಸ್ಯದರ್ಶಿ
ಇವುಗಳಲ್ಲಿ ಬಹಳ ಅಂತರವಿದೆ…
ಇದರಲ್ಲಿ ಮನುಷ್ಯನ ಪ್ರಯತ್ನದಿಂದ ಏನಾದ್ರೂ ನೀವು ಇವುಗಳಲ್ಲಿ ಒಂದಾಗಬಹುದು. ಶಿಕ್ಷಕˌ ಗುರುˌ ರಹಸ್ಯದರ್ಶಿ ಒಂದೇಯಾಗುವುದು ಓಶೋರವರಿಗೆ ಮಾತ್ರ ಸಾಧ್ಯವಾಯಿತ್ತು. ಜೆ.ಕೆ. ಕೃಷ್ಣಮೂರ್ತಿ ಒಬ್ಬ ರಹಸ್ಯದರ್ಶಿ ಆದರೇ ಆತ “ಗುರು”ವಾಗಲಿಲ್ಲ. ಬಸವಣ್ಣ ಗುರು ˌ ಮಾರ್ಗದರ್ಶಕˌ ಸಮಾಜ ಸುಧಾರಕ ಆದರೆˌ ಅಲ್ಲಮ ಮತ್ತು ಅಕ್ಕ ರಹಸ್ಯ ದರ್ಶಿಗಳು. ಅವರಿಗೆ “ಸ್ವಯಂ” ಸುಧಾರಣೆ ಹೊರತು ಬೇರೆ ಯಾವ ಉದ್ದೇಶವು ಹೆಚ್ಚು ಕಾಣುವುದಿಲ್ಲ.
ಶಿಕ್ಷಕ ಬಹಿರಂಗ ತೋರುವನು
ಗುರು ಅಂತರಂಗ ತೋರವನು
ರಹಸ್ಯದರ್ಶಿಗೆ ನಿಗೂಢ ಸತ್ಯಗಳ ರಹಸ್ಯ ದರ್ಶನವಾಗಿರುತ್ತದೆ.
ಜಗತ್ತಿನ ಎಲ್ಲ ಕಾಲದ ಅಚ್ಚರಿಯೆಂದರೆ ˌ ಸಾಮಾನ್ಯವಾಗಿ ರಜನೀಶ ಎಂಬ ಹೆಸರು ಕುಟಂಬದವರಿಗೆˌ ಜಗತ್ತಿಗೆ ಶಿಕ್ಷಕರಾಗಿ ಆಚಾರ್ಯ ರಜನೀಶˌ ಗುರುವಾಗಿ ಭಗವಾನ ರಜನೀಶ್ ಒಬ್ಬ ರಹಸ್ಯದರ್ಶಿ ˌ ಮಿಸ್ಟಿಕಾಗಿ ಓಶೋ …ಎಲ್ಲಾ ಅವತಾರಗಳನ್ನು ತಾಳಿˌಮಾನವ ವಿಕಸನದ ಎಲ್ಲಾ ಮಾರ್ಗ ತೋರಿˌ ಈ ಭೂಮಿ ಮೇಲೆ ನಡೆದು ಹೋದರು ಎಂಬುವುದು ಎಲ್ಲ ಕಾಲದ ಮತ್ತು ಬೆರಗು.
✍️*ಜಯದೇವ ಪೂಜಾರ*
7676870233
