ಹಾಸನ: ಎಟಿಎಂಗೆ ಹಣ ತುಂಬುವ ಖಾಸಗಿ ಸಂಸ್ಥೆಯ ಸಿಬ್ಬಂದಿಯಿಂದಲೇ ಕೋಟ್ಯಂತರ ರೂಪಾಯಿ ದುರುಪಯೋಗ ನಡೆದಿರುವ ಪ್ರಕರಣ ಹಾಸನದಲ್ಲಿ ಬೆಳಕಿಗೆ ಬಂದಿದೆ. ಸುಮಾರು 3 ಕೋಟಿ 40 ಲಕ್ಷ 28 ಸಾವಿರ ರೂ. ಹಣ ನಾಪತ್ತೆಯಾಗಿರುವುದಾಗಿ ಆರೋಪ ಕೇಳಿಬಂದಿದೆ.
ಫೆಬ್ರವರಿ 18 ಹಾಗೂ 19ರಂದು ಸಂಸ್ಥೆಯ ಆಡಿಟ್ ನಡೆಸಿದ ವೇಳೆ ಹಣ ದುರುಪಯೋಗವಾಗಿರುವುದು ಪತ್ತೆಯಾಗಿದೆ.
ಸಂಸ್ಥೆಯ ಸಿಬ್ಬಂದಿಗಳಾದ ನಂದೀಶ್ ಬಿ.ಎಲ್ ಮತ್ತು ಮಧುಕುಮಾರ್ ಎಂ.ಪಿ ವಿರುದ್ಧ ಹಣ ಕದ್ದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ತನಿಖೆ ಆರಂಭವಾಗಿದೆ.
ಸಿಎಂಎಸ್ (CMS) ಸಂಸ್ಥೆಯ ಹಾಸನ ಶಾಖೆಯಲ್ಲಿ ಈ ಗೋಲ್ಮಾಲ್ ನಡೆದಿರುವುದಾಗಿ ಹೇಳಲಾಗುತ್ತಿದೆ. ಹಾಸನ ಬ್ರಾಂಚ್ ಮ್ಯಾನೇಜರ್ ರಾಜು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, 18 ಎಟಿಎಂಗಳಿಗೆ ಹಾಕಬೇಕಾದ ಹಣವನ್ನು ಹಾಕಿದಂತೆ ದಾಖಲೆ ಸೃಷ್ಟಿಸಿ ಹಣವನ್ನು ಲಪಟಾಯಿಸಿರುವ ಆರೋಪ ಇದೆ.
ರಾಜು ನೀಡಿದ ದೂರನ್ನು ಆಧರಿಸಿ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
