ರಾಚಿ: ಪಾಕಿಸ್ತಾನದ ಪ್ರಮುಖ ನಗರವಾದ ಕರಾಚಿನಲ್ಲಿ ಭಾರಿ ಸ್ಫೋಟ ಸಂಭವಿಸಿ ಕನಿಷ್ಠ 16 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಈ ಸ್ಫೋಟವು ಶಂಕಿತ ಅನಿಲ ಸೋರಿಕೆಯಿಂದ ಉಂಟಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಸುಮಾರು 14 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಮಾಹಿತಿ ಪ್ರಕಾರ, ಗುರುವಾರ ಬೆಳಿಗ್ಗೆ ಕರಾಚಿಯ ಓಲ್ಡ್ ಸೋಲ್ಜರ್ ಬಜಾರ್ ಪ್ರದೇಶದಲ್ಲಿರುವ ವಸತಿ ಕಟ್ಟಡದ ಮೊದಲ ಮಹಡಿಯಲ್ಲಿ ಬೆಳಿಗ್ಗೆ ಸುಮಾರು 4:30ರ ವೇಳೆಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ಸಮಯದಲ್ಲಿ ನಿವಾಸಿಗಳು ಸೆಹ್ರಿ ಊಟಕ್ಕಾಗಿ ಎಚ್ಚರವಾಗಿದ್ದರೆಂದು ತಿಳಿದುಬಂದಿದೆ. ಪಾಕಿಸ್ತಾನದಲ್ಲಿ ಇಂದು ರಮಝಾನ್ ಮೊದಲ ದಿನ ಆಚರಿಸಲಾಗುತ್ತಿದೆ.
ಸ್ಫೋಟದ ತೀವ್ರತೆಯಿಂದ ಕಟ್ಟಡದ ಒಂದು ಭಾಗ ಶಿಥಿಲಗೊಂಡು ಕುಸಿದಿದ್ದು, ರಕ್ಷಣಾ ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಇದುವರೆಗೆ 14 ಶವಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರಲ್ಲಿ 2 ರಿಂದ 17 ವರ್ಷದೊಳಗಿನ ಒಂಬತ್ತು ಮಕ್ಕಳು ಸೇರಿರುವುದು ದುಃಖಕರ ಸಂಗತಿ. ಗಾಯಗೊಂಡವರಲ್ಲಿಯೂ ಏಳು ಮಕ್ಕಳು ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಿವೆ.
