ಹಾಸನ: ದಿವ್ಯಾಂಗರಿಗೆ ನೆರವಾಗುವ ಉದ್ದೇಶದಿಂದ ಉಚಿತ ಕೃತಕ ಕೈ-ಕಾಲು ಜೋಡಣೆಯ ಬೃಹತ್ ಶಿಬಿರವನ್ನು ಹಾಸನದ ಏಪ್ರಿಲ್ 10, 11 ಮತ್ತು 12ರಂದು ಹಾಸನದ ಬಿ.ಎಂ ಬೈಪಾಸ್ ರಸ್ತೆಯಲ್ಲಿರುವ ರಾಜೀವ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಹಾಸನ ಹೊಯ್ಸಳ ಸಂಸ್ಥೆಯ ಮೋಹನ್ ಅವರು ತಿಳಿಸಿದರು.
ರೋಟರಿ ಸಂಸ್ಥೆ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು ಕಳೆದ ಅನೇಕ ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಭಾರತದಲ್ಲಿ ರೋಟರಿ ಸಂಸ್ಥೆಗೆ 120 ವರ್ಷಗಳು ಪೂರ್ಣಗೊಂಡ ಹಿನ್ನೆಲೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರೋಟರಿ ಕ್ಲಬ್ ಹಾಸನ ಹೊಯ್ಸಳ, ರಾಜೀವ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಎನ್ಎಸ್ಎಸ್ ವಿಭಾಗ, ರೋಟರಿ ಬೆಂಗಳೂರು ಸೌತ್ ಪೆರೇಡ್, ರೋಟರಿ ಬೆಂಗಳೂರು ಲೇಕ್ ಸೈಡ್, ಶ್ರೀ ಭಗವಾನ್ ಮಹಾವೀರ್ ವಿಕಲಾಂಗ ಸಹಾಯತಾ ಸಮಿತಿ ಜೈಪುರ್ (BMVSS), ಇನ್ನರ್ ವೀಲ್ ಕ್ಲಬ್ ಆಫ್ ಹಾಸನ ಹೊಯ್ಸಳ ವೈಸಿರಿ, ಇನ್ನರ್ ವೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಹಾಗೂ ಭಾರತ ಸೇವಾ ದಳ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಶಿಬಿರ ನಡೆಯಲಿದೆ. ಶಿಬಿರದಲ್ಲಿ ದಿವ್ಯಾಂಗರಿಗೆ ಸ್ಥಳದಲ್ಲಿಯೇ ಪರೀಕ್ಷೆ ನಡೆಸಿ ಅವರಿಗೆ ಅಗತ್ಯವಿರುವ ಕೃತಕ ಕಾಲುಗಳನ್ನು ತಯಾರಿಸಿ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ಇದಲ್ಲದೆ ಕೃತಕ ಕೈಗಳು (ಮುಂಗೈ) ಹಾಗೂ ಪೋಲಿಯೋ ಪೀಡಿತರಿಗಾಗಿ ಕ್ಯಾಲಿಪರ್ಸ್ಗಳನ್ನೂ ಸಂಪೂರ್ಣ ಉಚಿತವಾಗಿ ವಿತರಿಸಲಾಗುವುದು. ಹೊರ ಜಿಲ್ಲೆಯಿಂದ ಬರುವ ಫಲಾನುಭವಿಗಳಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9844046527, 9449644267, 9844067588, 9964480071, 8749044223, 9483359018, 7899301010 ಹಾಗೂ 9448450681 ಸಂಖ್ಯೆಗಳನ್ನ ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಮೋಹನ್, ವಿಜಯಕುಮಾರ್, ಡಾ. ರವಿ ಕುಮಾರ್, ಸೋಮೇಶ್, ರಾಣಿ, ವಿನೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
