ಚನ್ನರಾಯಪಟ್ಟಣ: ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ವತಿಯಿಂದ ಕೆಂಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಸೆಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಹೈ ಸ್ಕೂಲ್, ಕೆಂಬಾಳು ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೆಂಬಾಳು ಇವರ ಸಹಯೋಗದಲ್ಲಿ ಈ ಶಿಬಿರ ನಡೆಯಿತು.
ಶಿಬಿರವನ್ನು ಕೆಂಬಾಳು ಪಿ.ಡಿ.ಒ ಶ್ರೀ ದೇವರಾಜು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೆ ಇಂತಹ ಆರೋಗ್ಯ ಸೇವೆಗಳು ಅತ್ಯಂತ ಅಗತ್ಯವಾಗಿದ್ದು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ನಮ್ಮ ಗ್ರಾಮದಲ್ಲಿ ಶಿಬಿರ ಆಯೋಜಿಸಿರುವುದು ಸಂತೋಷದ ವಿಚಾರ. ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಪರವಾಗಿ ಸಂಸ್ಥೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕದ ಕಾರ್ಯದರ್ಶಿ ಶ್ರೀ ಜಬಿವುಲ್ಲಾ ಬೇಗ್ ಅವರು, “ಸೆಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಹೈ ಸ್ಕೂಲ್ನ ಸಹಕಾರದೊಂದಿಗೆ ಕೆಂಬಾಳು ಗ್ರಾಮ ಪಂಚಾಯಿತಿಯಲ್ಲಿ ಹಲವಾರು ತಜ್ಞ ವೈದ್ಯರ ನೆರವಿನಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ನೆರವು ನೀಡುವುದಾಗಿದೆ. ಗ್ರಾಮೀಣ ಭಾಗದ ಜನತೆಗೆ ಉಚಿತ ಆರೋಗ್ಯ ಸೇವೆ ಒದಗಿಸುವುದು ನಮ್ಮ ಧ್ಯೇಯ” ಎಂದು ತಿಳಿಸಿದರು.
ಈ ಶಿಬಿರದಲ್ಲಿ ಸುಮಾರು 153ಕ್ಕೂ ಹೆಚ್ಚು ಸಾರ್ವಜನಿಕರಿಗೆ ಉಚಿತವಾಗಿ ರಕ್ತದೊತ್ತಡ (ಬಿ.ಪಿ), ಶುಗರ್ ಪರೀಕ್ಷೆ, ಕಣ್ಣಿನ ತಪಾಸಣೆ, ಹೃದಯ ತಪಾಸಣೆ, ಸ್ತ್ರೀರೋಗ ತಜ್ಞರ ಸಲಹೆ, ಮೂಳೆ ಮತ್ತು ಕೀಲು ತಜ್ಞರ ಸೇವೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳು ಒದಗಿಸಲಾಯಿತು. ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆ ಕುರಿತು ಮಾರ್ಗದರ್ಶನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸೆಂಟ್ ಜಾನ್ಸ್ ಸ್ಕೂಲ್ ಗಂಡಸಿಯ ಎನ್.ಎಸ್.ಎಸ್ ಅಧಿಕಾರಿಯಾದ ಶ್ರೀ ದುರ್ಗಪ್ಪ, ನ್ಯೂ ಸ್ಪರ್ಶ ಆಸ್ಪತ್ರೆ ಚನ್ನರಾಯಪಟ್ಟಣದ ಮೋಹನ್ ಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಮಹೇಶ್ ಹಾಗೂ ಶ್ರೀ ಉದಯಶಂಕರ್, ಕೆಂಬಾಳು ಗ್ರಾಮಸ್ಥರಾದ ಶ್ರೀ ಸ್ವಾಮಿಗೌಡ, ಕೆಂಬಾಳು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸೆಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಹೈ ಸ್ಕೂಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದರೊಂದಿಗೆ, ಆರಂಭಿಕ ಹಂತದಲ್ಲೇ ರೋಗಗಳನ್ನು ಪತ್ತೆಹಚ್ಚಲು ಸಹಕಾರಿ ಎಂಬ ಅಭಿಪ್ರಾಯ ವ್ಯಕ್ತವಾಯಿತು.
– ಮಂಜುನಾಥ್ ಐ.ಕೆ
