ಬೆಂಗಳೂರು: ರಾಜ್ಯದ ನಿರುದ್ಯೋಗಿ ಯುವಜನತೆಗೆ ಕರ್ನಾಟಕ ಪೊಲೀಸ್ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದೆ. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 8,176 ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ಹಸಿರು ನಿಶಾನೆ ತೋರಿಸಿದ್ದು, ಈ ಕುರಿತು ಡಿಜಿ ಮತ್ತು ಐಜಿಪಿ ಕಚೇರಿಯಿಂದ ಅಧಿಕೃತ ಆದೇಶ ಹೊರಬಿದ್ದಿದೆ.
ಹುದ್ದೆಗಳ ವಿವರ ಇಂತಿದೆ:
ಪೊಲೀಸ್ ಇಲಾಖೆಯು ಹಂಚಿಕೆ ಮಾಡಿರುವ ತಾತ್ಕಾಲಿಕ ಹುದ್ದೆಗಳ ವರ್ಗೀಕರಣ ಹೀಗಿದೆ:
| ಕ್ರ.ಸಂ | ಹುದ್ದೆಯ ಹೆಸರು | ಕಲ್ಯಾಣ ಕರ್ನಾಟಕ | ಕಲ್ಯಾಣ ಕರ್ನಾಟಕೇತರ | ಒಟ್ಟು ಹುದ್ದೆಗಳು |
| 1 | ನಾಗರಿಕ ಪೊಲೀಸ್ ಕಾನ್ಸ್ಟೆಬಲ್ (ಸಿವಿಲ್) | 610 | 3500 | 4110 |
| 2 | ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ (APC) | 275 | 1375 | 1650 |
| 3 | ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೆಬಲ್ (KSRP) | 532 | 1500 | 2032 |
| 4 | ಪೊಲೀಸ್ ಕಾನ್ಸ್ಟೆಬಲ್ (KSISF) | 364 | – | 364 |
| 5 | ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ (DSI) | 05 | 15 | 20 |
| ಒಟ್ಟು | 1,786 | 6,390 | 8,176 |
ಮೀಸಲಾತಿಯಲ್ಲಿ ಮಹತ್ವದ ಬದಲಾವಣೆ
ಪರಿಶಿಷ್ಟ ಜಾತಿ (SC) ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಹಾಗೂ ಪರಿಶಿಷ್ಟ ಪಂಗಡ (ST) ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ ಹೆಚ್ಚಿಸಿರುವ ಸರ್ಕಾರದ ಆದೇಶ ಮತ್ತು ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶಗಳನ್ನು ಪರಿಗಣಿಸಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ತುರ್ತು ಕ್ರಮಕ್ಕೆ ಸೂಚನೆ
ನೇಮಕಾತಿ ವಿಭಾಗಕ್ಕೆ ಹುದ್ದೆಗಳ ವರ್ಗೀಕರಣದ ಅಂತಿಮ ವಿವರವನ್ನು ಸಲ್ಲಿಸಲು ಮಾರ್ಚ್ 5, 2026ರವರೆಗೆ ಕಾಲಾವಕಾಶ ನೀಡಲಾಗಿದೆ. ಎಲ್ಲಾ ಘಟಕದ ಅಧಿಕಾರಿಗಳು ರೋಸ್ಟರ್ ಬಿಂದುಗಳ ಅನ್ವಯ ಹುದ್ದೆಗಳನ್ನು ಮರು ಪರಿಶೀಲಿಸಿ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕ ಮತ್ತು ಐಜಿಪಿ ಆದ ಡಾ|| ಎಂ. ಎ. ಸಲೀಂ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಹಳ ದಿನಗಳಿಂದ ನೇಮಕಾತಿ ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದ್ದು, ಶೀಘ್ರದಲ್ಲೇ ಅಧಿಕೃತ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.


