ಹಾಸನ: ನಗರದಲ್ಲಿ ಮನೆ ಕಳ್ಳತನ ಪ್ರಕರಣಗಳು ಆತಂಕ ಮೂಡಿಸುತ್ತಿರುವ ನಡುವೆ, ಸದಾಶಿವನಗರದಲ್ಲಿ ನಡೆದ ದೋಚಾಟದಿಂದ ಭದ್ರತಾ ವ್ಯವಸ್ಥೆಗಳೇ ಪ್ರಶ್ನೆಗೆ ಒಳಗಾಗಿವೆ. ಖಾಸಗಿ ಬ್ಯಾಂಕ್ ಉದ್ಯೋಗಿ ನವೀನ್ ಅವರ ಮನೆಯಲ್ಲಿ ಗುರುವಾರ ರಾತ್ರಿ ಖದೀಮರು ಬೀಗ ಮುರಿದು ನುಗ್ಗಿ, ಸುಮಾರು ಒಂದು ಕೆಜಿ ಚಿನ್ನ ಹಾಗೂ ₹15 ಲಕ್ಷಕ್ಕೂ ಹೆಚ್ಚು ನಗದು ದೋಚಿ ಪರಾರಿಯಾಗಿದ್ದಾರೆ.
“ಮನೆಗೆ ಬೀಗ – ಕಳ್ಳರಿಗೆ ಅವಕಾಶ”
ವರ ಮಹಾಲಕ್ಷ್ಮಿ ಹಬ್ಬದ ನಿಮಿತ್ತ ಬ್ಯಾಂಕ್ ಲಾಕರ್ನಿಂದ ತಂದಿದ್ದ ಕೋಟ್ಯಾಂತರ ಮೌಲ್ಯದ ಚಿನ್ನ–ಬೆಳ್ಳಿ ಆಭರಣಗಳ ಜೊತೆಗೆ ಹೊಸ ಮನೆ ಕಾಮಗಾರಿಗೆ ಇಟ್ಟಿದ್ದ ನಗದು ದೋಚಲಾಗಿದೆ. ನವೀನ್ ದಂಪತಿ ಆ ರಾತ್ರಿ ತಮ್ಮ ಪತ್ನಿಯ ತಾಯಿ ಮನೆಯಲ್ಲಿ ತಂಗಿದ್ದನ್ನು ಕಳ್ಳರು ಗಮನಿಸಿ, ಸುಲಭವಾಗಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಳಿಗ್ಗೆ ಮನೆಗೆ ಬಂದಾಗ ಕೃತ್ಯ ಬೆಳಕಿಗೆ
ಇಂದು ಬೆಳಿಗ್ಗೆ 8 ಗಂಟೆ ವೇಳೆಗೆ ನವೀನ್ ದಂಪತಿ ಮನೆಗೆ ಬಂದಾಗ ಬಾಗಿಲು ಒಡೆದು ಬಿದ್ದಿದ್ದು, ಒಳಗೆ ಎಲ್ಲಾ ಚಿನ್ನಾಭರಣ ಮತ್ತು ನಗದು ಮಾಯವಾಗಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಶ್ವಾನ ದಳ – ಬೆರಳಚ್ಚು ತಜ್ಞರು
ಘಟನೆಯ ಮಾಹಿತಿ ತಿಳಿದ ಕೂಡಲೇ ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರ ತಂಡವು ಸ್ಥಳಕ್ಕೆ ಬಂದು ಸುಳಿವು ಶೋಧಿಸಿದೆ.
ಕಳ್ಳತನ ಪ್ರಕರಣಗಳ ಹೆಚ್ಚಳ ಆತಂಕ
ಇತ್ತೀಚಿನ ದಿನಗಳಲ್ಲಿ ಹಾಸನ ನಗರದಲ್ಲಿ ಮನೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಾಗರಿಕರಲ್ಲಿ ಆತಂಕ ಉಂಟಾಗಿದೆ. “ಪ್ರತಿದಿನ ಕಳ್ಳತನ – ಪೊಲೀಸರ ಪೆಟ್ರೋಲಿಂಗ್ ಎಲ್ಲಿದೆ?” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

[…] […]