Donald Trump : ಪಾಕಿಸ್ತಾನದ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ಸಿದ್ಧವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಈ ನಿಟ್ಟಿನಲ್ಲಿ ಒಪ್ಪಂದಕ್ಕೂ ಸಹಿ ಹಾಕಲಾಗಿದೆ ಎಂದು ಘೋಷಿಸಿದ್ದಾರೆ. ಭಾರತಕ್ಕೆ ಭಾರಿ ಸುಂಕ ವಿಧಿಸಿದ ಬೆನ್ನಲ್ಲೇ ಪಾಕ್ ಜತೆಗಿನ ವ್ಯವಹಾರ ಘೋಷಿಸಿರುವುದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಸದ್ಯದ ಒಪ್ಪಂದದಡಿಯಲ್ಲಿ ತೈಲ ನಿಕ್ಷೇಪಗಳನ್ನು ಅಭಿವೃದ್ಧಿ ಪಡಿಸುವ ಕೆಲಸವನ್ನು ಯಾವ ಕಂಪನಿಗೆ ನೀಡಬೇಕೆಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ. ಒಂದಲ್ಲ ಒಂದು ದಿನ ಪಾಕಿಸ್ತಾನ, ಭಾರತಕ್ಕೆ ತೈಲವನ್ನು ಮಾರಾಟ ಮಾಡುತ್ತದೆ ಎಂದು ಟ್ರಂಪ್ ತಮ್ನ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್ ಮೂಲಕ ಹೇಳಿದ್ದಾರೆ.
ಇನ್ನು ಟ್ರಂಪ್ ಅವರ ಈ ಹೊಸ ನಿರ್ಧಾರವು ಭಾರತಕ್ಕೆ ಹಿನ್ನಡೆಯಾಗುವ ಸೂಚನೆಗಳಿವೆ. ಭಾರತೀಯ ಆಮದುಗಳ ಮೇಲೆ ಶೇ. 25 ರಷ್ಟು ಸುಂಕ ಮತ್ತು ಹೆಚ್ಚುವರಿ ದಂಡವನ್ನು ವಿಧಿಸಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನಕ್ಕೆ ತನ್ನ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ನಾವು ಪಾಕಿಸ್ತಾನದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಅದರ ಮೂಲಕ ಪಾಕಿಸ್ತಾನ ಮತ್ತು ಅಮೆರಿಕ ತಮ್ಮ ವಿಶಾಲವಾದ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡುತ್ತವೆ. ಈ ಪಾಲುದಾರಿಕೆಯನ್ನು ಮುನ್ನಡೆಸುವ ತೈಲ ಕಂಪನಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಯಾರಿಗೆ ಗೊತ್ತು, ಬಹುಶಃ ಅವರು ಒಂದು ದಿನ ಭಾರತಕ್ಕೆ ತೈಲವನ್ನು ಮಾರಾಟ ಮಾಡುತ್ತಾರೆ ಎಂದು ಟ್ರಂಪ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇನ್ನು ಅಮೆರಿಕವನ್ನು ಸಂತೋಷಪಡಿಸಲು ಬಯಸುವ ಹಲವು ದೇಶಗಳ ನಾಯಕರೊಂದಿಗೆ ಮಾತನಾಡಿದ್ದೇನೆ. ಹಲವು ದೇಶಗಳು ಸುಂಕಗಳನ್ನು ಕಡಿಮೆ ಮಾಡುವುದಾಗಿ ಅಮೆರಿಕಕ್ಕೆ ಭರವಸೆ ನೀಡುತ್ತಿವೆ. ಇದು ದೇಶದ ವ್ಯಾಪಾರ ಕೊರತೆಯನ್ನು ಬಹಳವಾಗಿ ಕಡಿಮೆ ಮಾಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

[…] […]