ಬೆಂಗಳೂರು: ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ವಿಧಿಸಿರುವ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಬೆಂಗಳೂರುನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಂತ ವಾತಾವರಣ ನಿರ್ಮಾಣವಾಗಿದ್ದು, ಸರ್ವಾಧಿಕಾರಿ ಮನೋಭಾವ ಕಾಂಗ್ರೆಸ್ಸಿಗರ ಡಿಎನ್ಎಯಲ್ಲೇ ಇದೆ ಎಂದು ಕಿಡಿಕಾರಿದರು.
ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದ್ದು, ಅದನ್ನು ನಿರ್ಬಂಧಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್ ಹಾಗೂ ಏಳು ಕೋಟಿ ಕನ್ನಡಿಗರು ಪತ್ರಕರ್ತರ ಜೊತೆಗಿದ್ದಾರೆ ಎಂದು ಹೇಳಿದ ಅವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದರು.
ಮಾಧ್ಯಮಗಳ ಮೇಲೆ ಅನಗತ್ಯ ಒತ್ತಡ ತರುವ ಕ್ರಮಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಹಾನಿಕಾರಕವಾಗಿದ್ದು, ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದು ಅವರು ಆಗ್ರಹಿಸಿದರು.
