
ಹಾಸನ: ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪ್ರಪಥಮ ಬಾರಿಗೆ ಫೆ.8ರಂದು ಗಾಂಧಿ ಭವನ ಹಾಗೂ ಯೂತ್ ಹಾಸ್ಟೆಲ್ ನಲ್ಲಿ ಹಮ್ಮಿಕೊಂಡಿರುವ ಮೆಗಾ ಆರೋಗ್ಯ ಶಿಬಿರದ ಸದುಪಯೋಗವನ್ನು ಜಿಲ್ಲೆಯ ಸಮಸ್ತ ಪತ್ರಕರ್ತರು ಹಾಗೂ ಅವರ ಕುಟುಂಬದವರು ಸದುಪಯೋಗ ಪಡಿಸಿಕೊಳ್ಳುವಂತೆ ಪತ್ರಕರ್ತ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ಮನವಿ ಮಾಡಿದರು.
ನಗರದಲ್ಲಿಂದು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಆದಿಚುಂಚನಗಿರಿ ವಿವಿ-ಆಸ್ಪತ್ರೆ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಗೂ ಪತ್ರಿಕ ವಿತರಕರು ಮತ್ತು ಕುಟುಂಬ ಸದಸ್ಯರಿಗೆ ಬೃಹತ್ ಆರೋಗ್ಯ ಶಿಬಿರವನ್ನು ಫೆ.8ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ರವರೆಗೆ ಆಯೋಜಿಸಲಾಗಿದೆ. ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ, ಬೆಂಗಳೂರಿನ ಕಿಮ್ಸ್, ನಿಮ್ಹಾನ್ಸ್, ಕಿದ್ವಾಯಿ, ಮಂಗಳೂರಿನ ಯೆನೇಪೋಯ ಹಾಗೂ ಹಾಸನದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಸಹಕಾರ ಇದೆ. ಉಚಿತ ವೈದ್ಯಕೀಯ ತಪಾಸಣೆ ಇದೆ, 100ಕ್ಕೂ ಹೆಚ್ಚು ವೈದ್ಯರು ಹಾಗೂ ಸಿಬ್ಬಂದಿ ಭಾಗವಹಿಸಲಿದ್ದಾರೆ.
ಉಚಿತವಾಗಿ ಇಸಿಜಿ, ರಕ್ತಪರೀಕ್ಷೆ ಏಕೋ ಪರೀಕ್ಷೆ ಜೊತೆಗೆ ಔಷಧಿಯನ್ನೂ ಉಚಿತವಾಗಿ ನೀಡಲಾಗುವುದು. ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು ಮಸೂರ ಅಳವಡಿಕೆ ವ್ಯವಸ್ಥೆ ಇದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಸಹ ಮಾಡಲಾಗಿದ್ದು, ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.
ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಉಪಾಧ್ಯಕ್ಷ ಕೆ.ಎಂ. ಹರೀಶ್, ಖಜಾಂಚಿ ಕುಮಾರ್, ಕಾರ್ಯದರ್ಶಿ ಪಿ.ಎ. ಶ್ರೀನಿವಾಸ್, ಸಿ.ಬಿ. ಸಂತೋಷ್ ಹಾಜರಿದ್ದರು.