
ಬೆಂಗಳೂರು-ಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತ ಕ್ರಮಗಳ ಪ್ರತಿಬಂಧಕ) ವಿಧೇಯಕಕ್ಕೆ ಕರ್ನಾಟಕ ವಿಧಾನಸಭೆ ಅನುಮೋದನೆ ನೀಡಿದೆ.
ಸಿಎಂ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಎಚ್. ಕೆ. ಪಾಟೀಲ್ ಅವರು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತ ಕ್ರಮಗಳ ಪ್ರತಿಬಂಧಕ) ವಿಧೇಯಕವನ್ನು ಮಂಡಿಸಿದರು.
ಕೆಲ ಸಾಲ ವಸೂಲಿ ಸಂಸ್ಥೆಗಳು, ನೋಂದಾಯಿತ ಹಣಕಾಸು ಸಂಸ್ಥೆಗಳು ಸಾಲ ವಸೂಲಿಗೆ ಕಠಿಣ ಕ್ರಮಕ್ಕೆ ಮುಂದಾಗಿದ್ದರಿಂದ ಸಾಲಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಮೈಕ್ರೋ ಫೈನಾನ್ಸ್ ಪಾಶಕ್ಕೆ ಸಿಲುಕಿ ಸಾವಿರಾರು ಮಂದಿ ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. 19 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಚಿವರು ವಿವರ ನೀಡಿದರು.
ನೋಂದಾಯಿತವಲ್ಲದ ಸಂಸ್ಥೆಗಳು, ಲೇವಾದೇವಿದಾರರು ಇತರರ ಮೂಲಗಳಿಂದ 40,000 ಕೋಟಿ ಸಾಲ ವಿತರಣೆಯಾಗಿದೆ ಎಂದು ಅಧ್ಯಯನದ ಮೂಲಕ ಗೊತ್ತಾಗಿದೆ. ಈ ಪೈಕಿ ಬಹುದೊಡ್ಡ ಪ್ರಮಾಣದ ಕಪ್ಪುಹಣದ ಹೂಡಿಕೆಯಾಗಿದೆ ಎಂದು ಅವರು ಹೇಳಿದರು.
ಈ ಹೂಡಿಕೆ ಶೇಕಡಾ 50ರಷ್ಟು ಲಾಭ ತಂದುಕೊಡಲಿದೆ ಎಂಬಂತಹ ವ್ಯವಹಾರವಾಗಿದೆ. ಬಡ್ಡಿ, ಮೀಟರ್ ಎಂದು ಹೇಳಿ ಅಂತಿಮವಾಗಿ ಆಸ್ತಿಯನ್ನೇ ನುಂಗುವ ಯತ್ನಗಳೂ ನಡೆಯುತ್ತಿವೆ. ಇಂತಹ ಶಕ್ತಿಗಳಿಗೆ ಕಡಿವಾಣ ಹಾಕಲು ಈ ಕಾಯ್ದೆ ಸಮರ್ಪಕವಾಗಿ ಬಳಕೆಯಾಗಲಿದೆ ಎಂದು ಹೇಳಿದರು.
ಸಹಕಾರ ಸಂಘಗಳು, ಬ್ಯಾಂಕುಗಳು ಹಾಗೂ ಸೌಹಾರ್ದ ಸಹಕಾರ ಸಂಘಗಳನ್ನು ಈ ವಿಧೇಯಕದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮನವಿಯ ಮೇರೆಗೆ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಿ ಸದನದಲ್ಲಿ ಮಂಡಿಸಲಾಗಿದೆ.
ನೂತನ ಪ್ರಸ್ತಾಪಿತ ಕಾಯ್ದೆಯಲ್ಲಿ ದಂಡ ಮತ್ತು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಹಿಂದೆ ದಂಡ ರೂ. 1000/- ದಿಂದ ರೂ. 10000/-ವರೆಗೆ ಇತ್ತು. ಆರು ತಿಂಗಳ ವರೆಗೆ ಇದ್ದ ಶಿಕ್ಷೆಯನ್ನು 10 ವರ್ಷಗಳ ವರೆಗೆ ಏರಿಸಲಾಗಿದೆ. ಅದೇ ರೀತಿ ದಂಡವನ್ನು ಐದು ಲಕ್ಷ ರೂ.ಗೆ ಏರಿಸಲಾಗಿದೆ.