ರಾಮನಾಥಪುರ: ರೈತರಿಗೆ ಅನುಕೂಲ ಕಲ್ಪಿಸುವ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ತಾನು ಸಚಿವನಾಗಿದ್ದ ಅವಧಿಯಲ್ಲಿ ಹಾಲಿಗೆ ಲೀಟರ್ಗೆ ₹5 ಸಹಾಯಧನ ಹೆಚ್ಚಿಸಲಾಗಿತ್ತು ಎಂದು ಹೈನುಗಾರಿಕೆ ಮಾಜಿ ಸಚಿವರು ಹಾಗೂ ಅರಕಲಗೂಡು ಶಾಸಕ ಎ. ಮಂಜು ತಿಳಿಸಿದ್ದಾರೆ.
ರಾಮನಾಥಪುರ ಸಮೀಪದ ಬಿದರಮೊಳ್ಳೆಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು. ಖಾಸಗಿ ಡೈರಿಗಳಿಗೆ ಅವಲಂಬಿತರಾಗದೆ ಸಹಕಾರ ಸಂಘಗಳ ಮೂಲಕ ಹಾಲು ನೀಡುವ ಮೂಲಕ ಸರ್ಕಾರದ ಸಹಾಯಧನ ಪಡೆಯುವಂತೆ ಮನವಿ ಮಾಡಿದರು.
ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿರುವುದಾಗಿ ತಿಳಿಸಿದ ಅವರು, ರಾಮನಾಥಪುರ, ಕೊಣನೂರು ಮತ್ತು ಹಳ್ಳಿಮೈಸೂರು ಹೋಬಳಿಗಳಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗಿದೆ ಎಂದು ಹೇಳಿದರು. ಗಾಂಧಿನಗರದ ದಿವಾಕರ್ ಅವರನ್ನು BLA-1 ಆಗಿ ನೇಮಕ ಮಾಡಲಾಗಿದೆ. ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚು ಜೆಡಿಎಸ್ ಸದಸ್ಯತ್ವ ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಹೊನ್ನವಳ್ಳಿ ಸತೀಶ್, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಪುಟ್ಟಸೋಮಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶರಣ್ ಎಂ.ಎನ್. ಕುಮಾರಸ್ವಾಮಿ,ರಾಮನಾಥಪುರ
