ಬೆಂಗಳೂರು: ಶಿಕ್ಷಕರು ಪದೋನ್ನತಿ ಪಡೆಯಲು ಕನಿಷ್ಠ 12 ವರ್ಷಗಳ ಸೇವಾವಧಿ ಪೂರೈಸಿರಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಹೊಸ ಅಧಿಸೂಚನೆ ಹೊರಡಿಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರ ಬಡ್ತಿ ಕುರಿತಂತೆ ಈ ಮಾರ್ಗಸೂಚಿ ಪ್ರಕಟಿಸಲಾಗಿದೆ. ಹೊಸ ನಿಯಮದ ಪ್ರಕಾರ ಮೂರು ಹುದ್ದೆಗಳಿದ್ದಲ್ಲಿ ಎರಡು ಹುದ್ದೆಗಳು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗೂ ಒಂದು ಹುದ್ದೆ ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಮೀಸಲಿರುತ್ತದೆ.
ಪದೋನ್ನತಿಗೆ ಪರಿಗಣಿಸಲು ಎರಡು ವೃಂದದ ಶಿಕ್ಷಕರೂ ಕನಿಷ್ಠ 12 ವರ್ಷಗಳ ಸೇವಾವಧಿ ಪೂರ್ಣಗೊಳಿಸಿರಬೇಕು ಎಂದು ಸೂಚಿಸಲಾಗಿದೆ.
ನಿಯಮದಂತೆ 1ರಿಂದ 5ನೇ ತರಗತಿಗೆ ಪಾಠ ಮಾಡುವ ಶಿಕ್ಷಕರು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (NCTE) ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರಬೇಕು. 6 ಮತ್ತು 7ನೇ ತರಗತಿಗಳಿಗೆ ಪಾಠ ಮಾಡಲು ಸಂಬಂಧಿತ ವಿಷಯದಲ್ಲಿ ಪದವಿ ಪಡೆದಿರಬೇಕು ಎಂದು ಹೇಳಲಾಗಿದೆ.
ಒಂದು ವೃಂದದಲ್ಲಿ ಅರ್ಹ ಶಿಕ್ಷಕರು ಲಭ್ಯವಿಲ್ಲದಿದ್ದಲ್ಲಿ, ನಿಯಮಾನುಸಾರ ಇತರ ವೃಂದದ ಅರ್ಹ ಶಿಕ್ಷಕರನ್ನು ಜೇಷ್ಠತಾ ಪಟ್ಟಿಯ ಆಧಾರದಲ್ಲಿ ಪದೋನ್ನತಿಗೆ ಪರಿಗಣಿಸಬಹುದು. ಪ್ರೌಢಶಾಲಾ ಶಿಕ್ಷಕರನ್ನು ಗ್ರೇಡ್–2 ವೃಂದ ಹುದ್ದೆಗೆ ಬಡ್ತಿಗೆ ಪರಿಗಣಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
