ಹಾಸನ, ಆಗಸ್ಟ್ 15, 2025: ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿದ ಷಡ್ಯಂತ್ರ ಆರೋಪದ ಕುರಿತು ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. “ಅವರು ಯಾವ ಸಂದರ್ಭದಲ್ಲಿ ಆ ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅದರ ಹಿನ್ನೆಲೆ ಮತ್ತು ಮುನ್ನೆಲೆಯ ಮಾಹಿತಿ ನನಗಿಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಒಬ್ಬ ಸಚಿವನಾಗಿ ಇಷ್ಟೇ ಹೇಳಬಲ್ಲೆ – ಎಸ್ಐಟಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದಾರೆ ಎಂಬ ವಿಶ್ವಾಸ ನನಗಿದೆ. ಅವರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಯಾರಾದರೂ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ, ತಪ್ಪಿಲ್ಲದವರನ್ನು ಖುಲಾಸೆ ಮಾಡಲಾಗುತ್ತದೆ. ನಂತರ ನಮ್ಮ ಬೇರೆ ಕೆಲಸಗಳತ್ತ ಗಮನ ಹರಿಸುತ್ತೇವೆ,” ಎಂದರು.
ಪಕ್ಷದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದ ನಿಲುವು ವ್ಯಕ್ತಪಡಿಸಿದ ಕೃಷ್ಣಭೈರೇಗೌಡ, “ನಾನು ಇನ್ನೊಬ್ಬರ ಪರವಾಗಿ ಕಾಮೆಂಟ್ ಮಾಡುವುದಿಲ್ಲ. ಎಸ್ಐಟಿ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾವು ಮಾತನಾಡಿದರೆ ತನಿಖೆಗೆ ಅಡ್ಡಿಯಾಗಬಹುದು. ತನಿಖೆ ಹೆಚ್ಚು ಕಾಲ ಹಿಡಿಯುವಂತಿಲ್ಲ, ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ,” ಎಂದು ಹೇಳಿದರು.
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ವಜಾ ವಿಚಾರದಲ್ಲಿ ಷಡ್ಯಂತ್ರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅದು ಪಕ್ಷದ ತೀರ್ಮಾನ. ರಾಜಣ್ಣ ಅವರು ನನ್ನ ಆಪ್ತರು ಮತ್ತು ಸ್ನೇಹಿತರು. ವೈಯಕ್ತಿಕವಾಗಿ ಅವರು ನನ್ನ ಶ್ರೇಯೋಭಿವೃದ್ಧಿಯನ್ನು ಬಯಸುವವರು. ಪಕ್ಷದ ತೀರ್ಮಾನಕ್ಕೆ ನಾವು ಗೌರವ ನೀಡಿದ್ದೇವೆ. ಅವರ ವಿಷಯದಲ್ಲಿ ನಾನು ಹೇಳಬೇಕಾದ ಅಗತ್ಯವಿಲ್ಲ,” ಎಂದು ತಿಳಿಸಿದರು.
ರಾಜಣ್ಣ ಅವರ ರಾಜಕೀಯ ಭವಿಷ್ಯದ ಬಗ್ಗೆ ಪ್ರಶ್ನೆ ಕೇಳಿದಾಗ, “ಅವರು ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ದೆಹಲಿಗೆ ತೆರಳಿ ಪಕ್ಷದ ನಾಯಕರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಮುಂದೆ ಏನಾಗುತ್ತದೆ ನೋಡೋಣ. ಅದನ್ನು ವಿಶ್ಲೇಷಿಸುವುದು ನನ್ನ ಸಂಸ್ಕೃತಿಯಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ,” ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದರು.
