ಹಾಸನ, ಜೂನ್ 20 : ಬೇಲೂರು-ಹಾಸನ ರೈಲ್ವೆ ಮಾರ್ಗ ಅಭಿವೃದ್ಧಿಗೆ 503 ಎಕರೆ ಭೂಮಿ ಹಸ್ತಾಂತರ ಮಾಡುವ ಕಾರ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ. ಸೋಮಣ್ಣ ಅವರು ಜಿಲ್ಲಾ ಹಾಗೂ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರೈಲ್ವೆ, ಕೆಪಿಟಿಸಿಎಲ್, ರೈಟ್ಸ್ ಸಂಸ್ಥೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ರೈಲ್ವೆ ಇಲಾಖೆ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಆರಂಭಿಸಿ ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಕೆಪಿಟಿಸಿಎಲ್ ಅಧಿಕಾರಿಗಳಿಗೆ ವಿದ್ಯುತ್ ಲೈನ್ ಹಾಗೂ ಸಬ್ಸ್ಟೇಷನ್ಗಳ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಯಿತು. ಸಕಲೇಶಪುರ ರೈಲ್ವೆ ಮಾರ್ಗದ ಭೂಕುಸಿತ ಸಮಸ್ಯೆಯನ್ನು ನಾಲ್ಕು ತಿಂಗಳೊಳಗೆ ಪರಿಹರಿಸಬೇಕು ಎಂಬ ಒತ್ತಾಯ ಮಾಡಿದ ಸಚಿವರು, “ರೈಲ್ವೆ ಜನಜೀವನದ ನಡಿಗೆ – ಅಧಿಕಾರಿಗಳು ಹೆಚ್ಚು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು,” ಎಂದು ತಿಳಿಸಿದರು.
ಸಕಲೇಶಪುರ–ಸುಬ್ರಮಣ್ಯ ರೈಲ್ವೆ ಮಾರ್ಗದ ಸವಾಲುಗಳನ್ನು ಮನಗಂಡ ಸಚಿವರು, 57 ಟನಲ್, 700 ಸೇತುವೆಗಳನ್ನು ಹೊಂದಿರುವ ಈ ಮಾರ್ಗಕ್ಕೆ ಪ್ರತ್ಯೇಕ ಡಿಪಿಆರ್ ಸಿದ್ಧಪಡಿಸಿ 2026ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈಲ್ವೆ ನಿಲ್ದಾಣಗಳ ಆಧುನೀಕರಣ ಕುರಿತು ಅವರು ವಿವರ ನೀಡುತ್ತಾ:
-
ಅರಸೀಕೆರೆ – ₹34 ಕೋಟಿ
-
ಹಾಸನ – ₹22 ಕೋಟಿ
-
ಸಕಲೇಶಪುರ – ₹26 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಗಡಿತ್ತಿದ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಸಂಸದ ಶ್ರೇಯಸ್ ಪಟೇಲ್ ಅವರು ಅರಸೀಕೆರೆಯಿಂದ ಮೈಸೂರು ನಡುವೆ ಹೆಚ್ಚುವರಿ ಪ್ಯಾಸೆಂಜರ್ ರೈಲು ಸೇರಿದಂತೆ ಹೊಸ ರೈಲು ಮಾರ್ಗದ ಅಗತ್ಯತೆ, ಕಡೂರು–ಬೀರೂರು ನಿಲ್ದಾಣಗಳ ದುರಸ್ಥಿ ಕುರಿತು ಸಚಿವರಲ್ಲಿ ಮನವಿ ಸಲ್ಲಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಅವರು ಹಾಸನ–ಸೋಲಾಪುರ ಎಕ್ಸ್ಪ್ರೆಸ್ ರೈಲಿಗೆ ಶ್ರವಣಬೆಳಗೊಳ, ಚನ್ನರಾಯಪಟ್ಟಣ ಹಾಗೂ ಹಿರಿಸಾವೆ ನಿಲ್ದಾಣಗಳಲ್ಲಿ ನಿಲುಗಡೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಮುಂಬೈ ರೈಲು ವಾರದಲ್ಲಿ 3 ದಿನ ಸಂಚರಿಸಿದರೆ ಚನ್ನರಾಯಪಟ್ಟಣ ಜನತೆಗೆ ಅನುಕೂಲವಾಗಿತ್ತದೆ ಎಂದು ಹೇಳಿದರು.
ಶಾಸಕ ಸಿಮೆಂಟ್ ಮಂಜು ಅವರು ಆಲೂರು ನಿಲ್ದಾಣದ ಆಧುನಿಕೀಕರಣ, ಶಾಸಕ ಎಚ್.ಕೆ. ಸುರೇಶ್ ಅವರು ಭೂಸ್ವಾಧೀನದ ವೇಳೆ ರೈತರಿಗೆ ದುಪ್ಪಟು ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಹಾಗೂ ಹಲವು ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಹಾಸನ ನಗರದಲ್ಲಿ ಗಿಡಗಳ ಬೆಳವಣಿಗೆಗೆ ಅಡ್ಡಿಯಾಗಿರುವ ತಂತಿ ಬೇಲಿ ತೆರವುಗೆ ಮಲೆನಾಡು ರಕ್ಷಣಾ ಸೇನೆ ಮನವಿ
