ಹಾಸನ-ಬೇಲೂರು ರೈಲ್ವೆ ಮಾರ್ಗದ ಭೂಹಸ್ತಾಂತರಕ್ಕೆ ಸಚಿವ ಸೋಮಣ್ಣ ಸೂಚನೆ: ಯೋಜನೆ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ

ಬೇಲೂರು-ಹಾಸನ ರೈಲ್ವೆ ಮಾರ್ಗದ ಅಭಿವೃದ್ಧಿಗಾಗಿ 503 ಎಕರೆ ಭೂಮಿಯನ್ನು ತಿಂಗಳೊಳಗೆ ರೈಲ್ವೆ ಇಲಾಖೆಗೆ ಹಸ್ತಾಂತರಿಸುವಂತೆ ಕೇಂದ್ರ ಸಚಿವ ವಿ. ಸೋಮಣ್ಣ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ರೈಲ್ವೆ, ಕೆಪಿಟಿಸಿ‌ಎಲ್‌, ರೈಟ್ಸ್ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಯೋಜನೆ 2 ವರ್ಷದಲ್ಲಿ ಪೂರ್ಣಗೊಳ್ಳಬೇಕೆಂದು ತಿಳಿಸಿದರು. ಸಕಲೇಶಪುರ ಭಾಗದ ಭೂಕುಸಿತ ಸಮಸ್ಯೆ 4 ತಿಂಗಳಲ್ಲಿ ಬಗೆಹರಿಸಲು ಹಾಗೂ ಹೊಸ ರೈಲು ಮಾರ್ಗಗಳಿಗಾಗಿ ಡಿಪಿಆರ್ ತಯಾರಿಸಲು ಸೂಚಿಸಿದರು. ಹಾಸನ, ಅರಸೀಕೆರೆ, ಸಕಲೇಶಪುರ ರೈಲ್ವೆ ನಿಲ್ದಾಣಗಳ ಆಧುನಿಕೀಕರಣಕ್ಕೆ ಕೋಟಿ ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಕ್ರಮ ಜರುಗಿಸಲಾಗಿದೆ. ಶಾಸಕರು ಹಾಗೂ ಸಂಸದರು ರೈಲು ನಿಲ್ದಾಣಗಳ ಸುಧಾರಣೆ, ಹೊಸ ರೈಲು ಮಾರ್ಗ ಮತ್ತು ರೈತರಿಗೆ ಭೂಪರಿಹಾರದ ಹೆಚ್ಚುವರಿ ಕೊಡಿಸಲು ಮನವಿ ಸಲ್ಲಿಸಿದರು.