ಐತಿಹಾಸಿಕ ಬೇಲೂರು ಪಟ್ಟಣದ ಹೃದಯಭಾಗದಲ್ಲಿರುವ ಪುರಸಭೆ ಆವರಣದ ಶ್ರೀ ವರಸಿದ್ದಿ ವಿನಾಯಕ ದೇವಾಲಯದಲ್ಲಿ ಇಂದು ಮುಂಜಾನೆ ನಡೆದ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಕೃತ ಮನಸ್ಸಿನ ಕಿಡಿಗೇಡಿಗಳು ಗಣೇಶನ ವಿಗ್ರಹಕ್ಕೆ ಎರಡು ಚಪ್ಪಲಿಗಳನ್ನು ದಾರದಿಂದ ಕಟ್ಟಿ ಹಾರದಂತೆ ಹಾಕಿ ಅವಮಾನಿಸಿದ ಘಟನೆ ಬೆಳಕಿಗೆ ಬಂದಿದೆ.
ದೇವರ ದರ್ಶನಕ್ಕೆ ಮುಂಜಾನೆ ಬಂದ ಭಕ್ತರು ಈ ಕೃತ್ಯವನ್ನು ನೋಡಿ ಬೆಚ್ಚಿಬಿದ್ದು ತಕ್ಷಣ ದೇವಾಲಯದ ಸಮಿತಿಯವರಿಗೆ ಮಾಹಿತಿ ನೀಡಿದರು. ಬಳಿಕ ಘಟನೆಗೆ ಸಂಬಂಧಿಸಿದಂತೆ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ಅವಮಾನಕಾರಿ ಕೃತ್ಯದಿಂದ ಪಟ್ಟಣದ ಜನರಲ್ಲಿ ತೀವ್ರ ಆಕ್ರೋಶ ಉಂಟಾಗಿದ್ದು, ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ದೇವಾಲಯ ಹಾಗೂ ಪುರಸಭೆ ಆವರಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಬೇಲೂರು ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೃತ್ಯಕ್ಕೆ ಹೊಣೆಗಾರರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಘಟನೆ ಸ್ಥಳದಲ್ಲಿ ಭಕ್ತರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಕೂಡಿಕೊಂಡಿದ್ದು, ವಿಕೃತ ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.
