ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರು ಸಮಗ್ರ ಶಿಕ್ಷಣ ಕರ್ನಾಟಕ (SSK) ಮತ್ತು WWF India ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಮಿಷನ್ ಪ್ರಕೃತಿ: ತರಗತಿಯಿಂದ ಸಂರಕ್ಷಣೆಯತ್ತ” ಕಾರ್ಯಕ್ರಮದಲ್ಲಿ ರಾಜ್ಯದ ಹತ್ತು ಅತ್ಯುತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ನಗರದ ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್, WWF ಇಂಡಿಯಾದ ಸಿಇಒ ಕರಣ್ ಭಲ್ಲಾ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದುವುದಕ್ಕಿಂತ ವಿಷಯವನ್ನು ಆಳವಾಗಿ ಅರ್ಥೈಸಿಕೊಳ್ಳುವತ್ತ ಗಮನ ಹರಿಸಬೇಕು. ಅರಿವು ಮೂಡಿದರೆ ಫಲಿತಾಂಶ ಸ್ವಯಂ ಉತ್ತಮವಾಗುತ್ತದೆ ಎಂದು ಹೇಳಿದರು. ತ್ಯಾಜ್ಯ ನಿರ್ವಹಣೆ ಕುರಿತು ಜಪಾನ್ನ ಉದಾಹರಣೆ ನೀಡಿದ ಅವರು, ಅಲ್ಲಿ ಜನರು ತಮ್ಮ ಕಸವನ್ನು ತಾವೇ ಜವಾಬ್ದಾರಿಯಿಂದ ವಿಲೇವಾರಿ ಮಾಡುವ ಶಿಸ್ತನ್ನು ನಾವು ಸಹ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಂದಿನ ವರ್ಷದಿಂದ 1ರಿಂದ 10ನೇ ತರಗತಿಯವರೆಗೆ ‘ನೈತಿಕ ವಿಜ್ಞಾನ’ (Moral Science) ಪಠ್ಯಪುಸ್ತಕವನ್ನು ಪರಿಚಯಿಸಲಾಗುವುದು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಶಿಕ್ಷಣದ ಮೊದಲ ಮೆಟ್ಟಿಲು ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲಾ ಶಿಕ್ಷಕರ ಮೆರಿಟ್ ಮತ್ತು ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಸಚಿವರು, ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿರುವ ಬಿಸಿಯೂಟ, ರಾಗಿಮಾಲ್ಟ್, ಹಾಲು, ಮೊಟ್ಟೆ/ಬಾಳೆಹಣ್ಣು, ಪಠ್ಯಪುಸ್ತಕ ಹಾಗೂ ಸಮವಸ್ತ್ರ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ನಾಗಭೂಷಣ್ ಮತ್ತು ರೆಹಮಾನ್ ಬಿ. ತಮ್ಮ ಮಿಷನ್ ಪ್ರಕೃತಿ ಅನುಭವಗಳನ್ನು ಹಂಚಿಕೊಂಡು, ಪರಿಸರ ಸಂರಕ್ಷಣೆ ಹಾಗೂ ವನ್ಯಜೀವಿ ರಕ್ಷಣೆಯ ಮಹತ್ವವನ್ನು ವಿವರಿಸಿದರು. ಪ್ರಶಸ್ತಿ ವಿಜೇತ ಶಾಲೆಗಳು ಇಲ್ಲಿ ಕಲಿತ ವಿಚಾರಗಳನ್ನು ಇತರ ವಿದ್ಯಾರ್ಥಿಗಳಿಗೂ ಹಂಚಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಪ್ರಶಸ್ತಿ ಪಡೆದ ಶಾಲೆಗಳು:
- ಜಿ.ಎಂ.ಪಿ.ಎಚ್.ಎಸ್, ಎಮ್ಮಿಗನೂರು, ಬಳ್ಳಾರಿ
- ಜಿ.ಕೆ.ಎಚ್.ಪಿ.ಎಸ್, ಕಾತ್ರಾಳ, ಕಾಗವಾಡ, ಬೆಳಗಾವಿ
- ಜಿ.ಎಚ್.ಎಸ್, ಅಲಿಪುರ, ಚಿಕ್ಕಬಳ್ಳಾಪುರ
- ಜಿ.ಎಚ್.ಪಿ.ಎಸ್, ಹಿರೇಗೋಣಿಗೆರೆ, ದಾವಣಗೆರೆ
- ಜಿ.ಎಚ್.ಪಿ.ಎಸ್, ಜೋಡಳ್ಳಿ, ಕಲಘಟಗಿ
- ಕೆ.ಪಿ.ಎಸ್, ಕೋಟೇಶ್ವರ, ಕುಂದಾಪುರ, ಉಡುಪಿ
- ಡಿ.ಕೆ.ಜೆಡ್.ಪಿ, ಅಳಿಯೂರು, ದಕ್ಷಿಣ ಕನ್ನಡ
- ಕೆ.ಎಸ್.ಎಸ್ ಜಿ.ಎಚ್.ಎಸ್, ಹಕ್ಲಾಡಿ, ಬೈಂದೂರು, ಉಡುಪಿ
- ಕೆ.ಜಿ.ಬಿ.ವಿ, ಯಳಂದೂರು, ಚಾಮರಾಜನಗರ
- ಜಿ.ಎಚ್.ಪಿ.ಎಸ್, ಮಲ್ಲೂರು, ಉಡುಪಿ
ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿ ಸಾಧನೆ ಮಾಡಿದ ಶಾಲೆಗಳನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
