ರಾಮನಾಥಪುರ, ಏಪ್ರಿಲ್ 8 (ಆರ್ಎನ್ಪಿ): ರಾಜ್ಯ ಮಟ್ಟದ ಎತ್ತಿನ ಗಾಡಿ ಹಾಗೂ ಎರಡು ಹಲ್ಲು ಕರುಗಳ ಚಕ್ಕಡಿ ಗಾಡಿ ಓಟದ ಸ್ಪರ್ಧೆಗಳು ಯಾವುದೇ ಅವಘಡಗಳಿಲ್ಲದೆ ಸುರಕ್ಷಿತವಾಗಿ ನಡೆಯುವಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮಾಜಿ ಸಚಿವರು ಹಾಗೂ ಶಾಸಕ ಎ. ಮಂಜು ಮನವಿ ಮಾಡಿದರು.
ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಲೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ಯುವಕ ಬಳಗದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟ ಹಾಗೂ ಹಾಲು ಹಲ್ಲು ಮತ್ತು ಎರಡು ಹಲ್ಲು ಕರುಗಳ ಚಕ್ಕಡಿ ಗಾಡಿ ಓಟದ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಸ್ಪರ್ಧೆಗೆ ಚಾಲನೆ ನೀಡಿ ಶುಭ ಹಾರೈಸಿದರು.

ಈ ವೇಳೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಾಳುಗಳು ಹಾಗೂ ಆಯೋಜಕರಿಗೆ ಶುಭಕೋರಿದ ಶಾಸಕ ಎ. ಮಂಜು, ಸಂಪ್ರದಾಯಬದ್ಧ ಗ್ರಾಮೀಣ ಕ್ರೀಡೆಗಳ ಸಂರಕ್ಷಣೆ ಮತ್ತು ಪ್ರೋತ್ಸಾಹಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಮೊಗಣ್ಣ, ರೇವಣ್ಣ, ಟ್ರೋಫಿ ದಾನಿಗಳಾದ ಹೆಚ್.ಎಸ್. ವಿನಯ್, ಶ್ರೀ ಬಸವೇಶ್ವರ ಯುವಕ ಬಳಗದ ಪದಾಧಿಕಾರಿಗಳಾದ ಪ್ರಸನ್ನ, ದರ್ಶನ್, ವೇಣು, ಸೋಮೇಶ್, ಗಜಾನನ, ಪಾಲಕ್ಷ, ಅಭಿಷೇಕ್, ಯಶವಂತ, ರಕ್ಷಿತ್, ಸುಮಂತ್, ರವಿ, ಲೋಕೇಶ್, ಮನು, ಪವನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
– ಕುಮಾರಸ್ವಾಮಿ ಎಂ.ಎನ್.
