ಕೆ.ಆರ್.ಪೇಟೆ,ಮಾ.16: ತಾಲ್ಲೂಕಿನ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಗಳಿಗೆ ನೀರಾವರಿ ಸೌಲಭ್ಯ ಸೌಲಭ್ಯವನ್ನು ಒದಗಿಸುವ ಕಟ್ಟಹಳ್ಳಿ ಬಳಿ ನಿರ್ಮಿಸಲಾಗಿರುವ ಸುಮಾರು 165ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಐಚನಹಳ್ಳಿ ಏತ ನೀರಾವರಿ ಯೋಜನೆಯ ಎರಡನೇ ಹಂತದ ನೀರು ಪೂರೈಸುವ ಪಂಪ್ಹೌಸ್ ಕೇಂದ್ರವನ್ನು ಮೊಸಳೆಕೊಪ್ಪಲು ಬಳಿ ಶಾಸಕ ಹೆಚ್.ಟಿ.ಮಂಜು ವೀಕ್ಷಣೆ ಮಾಡಿ ಆದಷ್ಟು ಬೇಗ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಾಲ್ಲೂಕಿನ ಮೊಸಳೇಕೊಪ್ಪಲು ಗ್ರಾಮದ ಬಳಿ ನಿರ್ಮಿಸಿರುವ ಎರಡನೇ ಹಂತದ ಏತ ನೀರಾವರಿ ಯೋಜನೆಯ ಪಂಪ್ ಹೌಸ್ ಕೇಂದ್ರವನ್ನು ವೀಕ್ಷಣೆ ಮಾಡಿ ನಂತರ ಶೀಳನೆರೆ ಹೋಬಳಿಯ ಭೈರಾಪುರ ಕೆರೆಗೆ ಪ್ರಾಯೋಗಿಕವಾಗಿ ನೀರು ತುಂಬಿಸುವ ಕಾರ್ಯವನ್ನು ಸಣ್ಣ ನೀರಾವರಿ ಅಧಿಕಾರಿಗಳು ಮತ್ತು ಭೈರಾಪುರ ಗ್ರಾಮಸ್ಥರೊಂದಿಗೆ ವೀಕ್ಷಣೆ ಮಾಡಿ ನೀರನ್ನು ಪೋಲು ಮಾಡದಂತೆ ಸಂರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಐಚನಹಳ್ಳಿ ಏತನೀರಾವರಿ ಯೋಜನೆಯನ್ನು ನಮ್ಮ ತಾಲ್ಲೂಕಿನ ಬೂಕನಕೆರೆ ಗ್ರಾಮದ ಸುಪುತ್ರರಾದ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ತವರೂರಿಗೆ ವಿಶೇಷ ಯೋಜನೆ ರೂಪಿಸಬೇಕೆಂಬ ಮಹದಾಸೆಯಿಂದ 165ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಟ್ಟಹಳ್ಳಿ ಬಳಿ ಏತ ನೀರಾವರಿ ಯೋಜನೆಗೆ ತಮ್ಮ ಅಧಿಕಾರದ ಅವಧಿಯಲ್ಲಿ 2020ರಲ್ಲಿ ಚಾಲನೆ ನೀಡಿದ್ದರು. ಇದರ ಮೊದಲ ಅಂತದ ಕಾಮಗಾರಿಯು ಮುಗಿದು ಬೂಕನಕೆರೆ ಹೋಬಳಿಯ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಕಳೆದ ವರ್ಷ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಮತ್ತು ಕ್ಷೇತ್ರದ ಶಾಸಕನಾದ ನಾನು ಸೇರಿ ಉದ್ಘಾಟನೆ ಮಾಡಿದ್ದೆವು. ಈಗ ಎರಡನೇ ಹಂತದ ಏತನೀರಾವರಿ ಯೋಜನೆಯ ಕಾಮಗಾರಿಯು ಮುಕ್ತಾಯಗೊಂಡಿದ್ದು ಉದ್ಘಾಟನೆಗೆ ಸಿದ್ದವಾಗಿದೆ.

ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಮತ್ತು ಸಂಬಂಧಪಟ್ಟ ಸಚಿವರು ಉದ್ಘಾಟನೆಗೆ ಹಸಿರು ನಿಶಾನೆ ತೋರಿದ ಕೂಡಲೇ ದಿನಾಂಕ ನಿಗಧಿಪಡಿಸಿದ ಎರಡನೇ ಹಂತದ ಏತನೀರಾವರಿ ಯೋಜನೆಯನ್ನು ಉದ್ಘಾಟಿಸಲಾಗುವುದು. ಇದರ ಪ್ರಾಯೋಗಿಕ ನೀರು ಹರಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ಅಧಿಕೃತ ಉದ್ಘಾಟನೆಯ ನಂತರ ಶೀಳನೆರೆ ಹೋಬಳಿಯ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದು. ಮಳೆಯಾಶ್ರಿತ ಪ್ರದೇಶವಾಗಿರುವ ಶೀಳನೆರೆ ಮತ್ತು ಬೂಕನಕೆರೆ ಹೋಬಳಿಗಳಿಗೆ ಈ ಏತ ನೀರಾವರಿ ಯೋಜನೆ ವರಧಾನವಾದ ಯೋಜನೆಯಾಗಿದೆ. ಅಂತರ್ಜಲ ಮಟ್ಟ ವೃದ್ದಿಯಾಗಲಿದೆ. ರೈತರ ಕೃಷಿ ಕೊಳವೆ ಬಾವಿಗಳು, ರೈತರ ತೆರೆದ ಬಾವಿಗಳು, ಕುಡಿಯುವ ನೀರಿನ ಮೂಲಗಳಲ್ಲಿ ಅಂತರ್ಜಲ ಮಟ್ಟದ ಹೆಚ್ಚಲಿದೆ. ಕುಡಿಯುವ ನೀರಿಗೆ ಹಾಗೂ ಜನ-ಜಾನುವಾರುಗಳಿಗೆ ಅನುಕೂಲವಾಗಲಿದೆ. ಈ ಏತ ಯೋಜನೆಗೆ ಕಾರಣಕರ್ತರಾದ ಮಾಜಿ ಸಿ.ಎಂ.ಯಡಿಯೂರಪ್ಪ ಹಾಗೂ ಮಾಜಿ ಸಚಿವ ನಾರಾಯಣಗೌಡ ಅವರಿಗೆ ಎರಡೂ ಹೋಬಳಿಯ ಜನತೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಶಾಸಕ ಹೆಚ್.ಟಿ.ಮಂಜು ಹೇಳಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಿರ್ಮಲೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೈರಾಪುರ ಹರೀಶ್, ತಾಲ್ಲೂಕು ಜೆಡಿಎಸ್ ರೈತ ಮೋರ್ಚಾ ಅಧ್ಯಕ್ಷ ಹೆಳವೇಗೌಡ, ಮೊಸಳೇಕೊಪ್ಪಲು ಗ್ರಾಮದ ಯಜಮಾನರುಗಳಾದ ಪಟೇಲ್ ನಿಂಗೇಗೌಡ, ಯಜಮಾನ್ ರಾಮಕೃಷ್ಣೇಗೌಡ, ರಮೇಶ್, ಬಸವೇಗೌಡ, ರಂಗೇಗೌಡ, ಕೆಂಪಣ್ಣ ರವಿ, ಡೇರಿ ತಿಮ್ಮೇಗೌಡ, ನಗುವನಹಳ್ಳಿ ರಾಮಕೃಷ್ಣೇಗೌಡ, ನಾಗೇಗೌಡ, ಅರೆ ರಮೇಶ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಂಜುನಾಥ್, ಶೀಳನೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಸ್ವಾಮೀಗೌಡ, ಜಿಲ್ಲಾ ಜೆಡಿಎಸ್ ಕಾರ್ಯಕಾರಣಿ ಸದಸ್ಯ ಕುರುಬಹಳ್ಳಿ ಕೆ.ಬಿ.ನಾಗೇಶ್, ಜೈನ್ನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಧರಣೇಶ್, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಚಿಕ್ಕಗಾಡಿಗನಹಳ್ಳಿ ಸೋಮಶೇಖರ್, ಗಂಜಿಗೆರೆಕೊಪ್ಪಲು ರಾಮಕೃಷ್ಣೇಗೌಡ, ಶಾಸಕರ ಆಪ್ತ ಸಹಾಯಕ ಪ್ರತಾಪ್, ಧ್ರುವ, ಪ್ರದೀಪ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
