ಈಗಷ್ಟೆ ಕೆಲ ದೇಶಗಳ ನಡುವೆ ತಾತ್ತ್ವಿಕ ಕಾರಣದಿಂದ ಮತ್ತು ತಾತ್ಕಾಲಿಕ ಒಪ್ಪಂದದ ಮೇರೆಗೆ ಯುದ್ಧ ಸ್ಥಗಿತಗೊಂಡಿದೆ. ಈ ದೇಶಗಳ ಪೈಕಿ ಭಾರತವು ಒಂದು. ಇಂದು ಕೃತಕ ಬುದ್ದಿಮತೆ ಮತ್ತು ತಂತ್ರಜ್ಞಾನ ಆಧಾರಿತ ಯುದ್ಧಗಳು ಆಗಿವೆ. ಸೇನೆಯ ನೆಲೆ, ಸಿಡಿಮದ್ದಿನ ತಯಾರಿಕಾ ಘಟಕ, ಮೂಲ ಸೌಕರ್ಯ ಒದಗಿಸುವ ಕೇಂದ್ರ, ಅಣು ಸಂಸ್ಕರಣಾ ಸ್ಥಳ, ಅಣು ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿ ಬಹುದೂರ ಸಾಗಬಲ್ಲ ಕ್ಷಿಪಣಿ ಬಳಿಸಿ ಕರಾರುವಕ್ಕಾಗಿ ದ್ವಂಸ ಮಾಡುವ ಯುದ್ಧ ಇಂದಿನದು. ಇವುಗಳಲ್ಲದೆ ಪರೋಕ್ಷವಾಗಿ ಆರ್ಥಿಕ ದಿಗ್ಬಂಧನ ಮತ್ತು ಮೂಲಸೌಕರ್ಯ ಕಡಿತಗಳಿಂದ ಆ ದೇಶಗಳ ಹಣಕಾಸಿನ ಮುಗ್ಗಟ್ಟು ಸೃಷ್ಟಿಸಿ ಯುದ್ಧವನ್ನು ಕೈಗೊಳ್ಳುತ್ತಾರೆ. ಇಷ್ಟೆ ಅಲ್ಲದೆ ಯಾವ ಕಟ್ಟಡವನ್ನು ಹಾನಿ ಮಾಡದೆ ಇರುವಂತಹ ರಸಾಯನಿಕ ಮತ್ತು ಜೈವಿಕ ಅಸ್ತ್ರಗಳಿಂದ ಮಾನವ ಕುಲವನ್ನೇ ನಾಶ ಮಾಡುವ ಅಸ್ತ್ರಗಳನ್ನು ಕೆಲವು ದೇಶಗಳು ಹೊಂದಿವೆ.
ಯುದ್ಧಗಳು ಮುಂದುವರಿದರೆ ಅಣು ಸಿಡಿಮದ್ದು ಉಪಯೋಗಿಸುತ್ತೇವೆ ಎಂದು ಬೆದರಿಸುವ ರಾಷ್ಟ್ರಗಳು ಇವೆ. ಆದುದರಿಂದ ಇಂತಹ ಯುದ್ಧಗಳಿಗೆ ಭೂ ಮತ್ತು ನೌಕಾಪಡೆಗಳ ಅಗತ್ಯ ಇರುವುದಿಲ್ಲ. ಇನ್ನು ಮುಂದೆ ಮಹಾ ಯುದ್ಧಗಳು ಸೊಳ್ಳೆ ಮತ್ತು ನೊಣಗಳ ಗಾತ್ರದ ಡ್ರೋನ್, ರೋಬೋಟ್ ಸೈನಿಕರು ಮತ್ತು ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಂದ ನಡೆಯಬಹುದು.
ಆದರೆ ಹಿಂದಿನ ಯುದ್ಧಗಳು ಈ ತರಹದ ಯುದ್ದಗಳಲ್ಲ. ಆಗ ಇದ್ದ ಚಕ್ರಾಧಿಪತಿಗಳ ಸಾರ್ವಭೌಮತ್ವ ಮತ್ತು ಶಕ್ತಿ, ಎಷ್ಟು ಸೈನಿಕರು, ಆನೆಗಳು ಮತ್ತು ಕುದುರೆಗಳು (ಅಶ್ವಗಳು) ಅವರುಗಳ ಬಳಿ ಇದ್ದಾವೆ ಎನ್ನುವುದರ ಮೇಲೆ ಇರುತ್ತಿತ್ತು. ಕುದುರೆಗಳು ಎಂದೊಡನೆ ನಮಗೆಲ್ಲಾ ಜ್ಞಾಪಕಕ್ಕೆ ಬರುವ ಅಶ್ವಗಳು “ಅರೇಬಿಯನ್ ಕುದುರೆ”. ಇವುಗಳಲ್ಲಿ ಕೆಲವು ತಳಿಗಳು ಇವೆ. ಅವುಗಳಲ್ಲಿ ಪ್ರಮುಖ ಅಥವಾ ಚಾಲ್ತಿಯಲ್ಲಿರುವ ತಳಿಗಳು “ಈಜಿಪ್ಟಿಯನ್, ಕ್ರಾಬೆಟ್ ಮತ್ತು ಸ್ಪಾನಿಶ್”. ಈ ತಳಿಗಳನ್ನು ಸಾಮಾನ್ಯವಾಗಿ ಕುದುರೆ ರೇಸ್ಗಳಿಗೆ ಬಳಸುತ್ತಾರೆ.
ಸಾಮಾನ್ಯವಾಗಿ ಈ ಕುದುರೆಗಳು ನೋಡಲು ಅಂದವಾಗಿ ಇದ್ದು ಎತ್ತರದ ಮೈ ಕಟ್ಟು ಹೊಂದಿರುತ್ತವೆ. ಈ ತಳಿಗಳನ್ನು ಸ್ಪರ್ಧಾತ್ಮಕ ಓಟಗಳಿಗೆ ಉಪಯೋಗಿಸುತ್ತಾರೆ. ಈ ಜಾತಿಯ ಕುದುರೆ ಬುದ್ದಿ ಮತ್ತು ಚೈತನ್ಯ ಭರಿತವಾಗಿ ಇರುತ್ತಾವೆ. ಕುದುರೆ ರೇಸ್ ನಲ್ಲಿ ಆಸಕ್ತಿ ಹೊಂದಿರುವ ಜನರಿಗೆ ಈ ತಳಿಗಳ ಕುದುರೆಗಳು ಅಚ್ಚು ಮೆಚ್ಚು.

ಅನೇಕರಿಗೆ “ಮಂಗೋಲಿಯನ್ ಕುದುರೆಗಳು” ಜ್ಞಾಪಕ ಬರುವುದೇ ಇಲ್ಲ. ಈ ಕುದುರೆಗಳನ್ನು “ಜೆವಲಸ್ಕಿ (Przewalski) ವೈಲ್ಡ್ ಕುದುರೆ” ಎಂದು ಕರೆಯುತ್ತಾರೆ. ತಿಳಿಸಿದಂತೆ ಈ ಅಶ್ವಗಳು ಮಂಗೋಲಿಯದ ಮಧ್ಯ ಪ್ರಾಂತ್ಯದ ಬೃಹತ್ ಹುಲ್ಲು ಗಾವಲು ಮತ್ತು ಅಲ್ಲಿಯ ,ದಕ್ಷಿಣ ಪ್ರಾಂತ್ಯದ ಗೋಬಿ ಮರುಭೂಮಿಗಳಲ್ಲಿ ಸಾಲು ಸಾಲು ಹಿಂಡುಗಳು ಹಿಂದೆ ಕಾಣಲು ಸಿಗುತ್ತಿದ್ದವು. ಈಗ ಕಾಡು ಕುದುರೆಗಳು ಅವನತಿಯತ್ತ ಸಾಗುತ್ತಿದೆ. ಈ ಕುದುರೆಗಳನ್ನು ಪಳಗಿಸುವುದು ಸುಲಭದ ಮಾತಲ್ಲ.
ಸಾಮಾನ್ಯವಾಗಿ ಈ ಅಶ್ವಗಳು ನೋಡಲು ಕುಳ್ಳಗಿದ್ದು, ಸುಂದರವಲ್ಲದ ಮತ್ತು ಹೊಟ್ಟೆಯ ಭಾಗ ದಪ್ಪವಾಗಿ ಇರುತ್ತವೆ. ಆದರೆ ಈ ಕುದುರೆಗಳ ಶಕ್ತಿಯು ಅಗಾಧವಾಗಿ ಇದ್ದು ಯಾವುದೇ ಹವಾಮಾನ ಮತ್ತು ಭೂ ಪ್ರಾಂತ್ಯಗಳಿಗೆ ಹೊಂದಿಕೊಳ್ಳುತ್ತವೆ.
ಮಂಗೋಲಿಯ ದೇಶ ನಮ್ಮ ಭಾರತ ದೇಶದ ಅರ್ಧದಷ್ಟು ಇದೆ. ಈ ದೇಶ ಮಧ್ಯ ಏಷ್ಯಾ ಪ್ರಾಂತ್ಯದಲ್ಲಿ ಇದ್ದು ತನ್ನ ಉತ್ತರಕ್ಕೆ ರಷ್ಯಾ ಮತ್ತು ದಕ್ಷಿಣ ಭಾಗದಲ್ಲಿ ಚೀನಾ ಇದೆ. ಈ ದೇಶದಲ್ಲಿ ಯಾವುದೇ ತೀರ ಪ್ರದೇಶ ಇಲ್ಲ. ಅಂದರೆ ಯಾವುದೇ ಸಮುದ್ರವು ತನ್ನ ಗಡಿ ಭಾಗದಲ್ಲಿ ಕಂಡು ಬರುವುದಿಲ್ಲ. ಈ ಕಾರಣಕ್ಕೆ “ನೆಲ ಸುತ್ತುವರಿದಿರುವ ಅಥವ Land lock” ಪ್ರದೇಶ ಎಂದು ಕರೆಯುತ್ತಾರೆ.
ಈ ಪ್ರದೇಶದಲ್ಲಿ ಹನ್ನೆರಡನೇ ಶತಮಾನದ ಹಿಂದೆ ಸಹಸ್ರಾರು ಆಲೆಮಾರಿಯ ಪಂಗಡಗಳು ಇದ್ದವು ಎಂಬುದು ಇತಿಹಾಸ. ಈ ಪಂಗಡಗಳೆಲ್ಲವನ್ನು ಒಟ್ಟುಗೂಡಿಸಿದ ಶ್ರೇಯಸ್ಸು ಅಥವ ಗೌರವ “ಚೆಂಗಿಸ್ ಖಾನ್” ಚಕ್ರಾಧಿಪತಿಯ ಪಾಲಾಗುತ್ತದೆ. ಹನ್ನೆರಡನೆ ಶತಮಾನದಲ್ಲಿ ಈ ರಾಜ ಅಲ್ಲಿಯ ಕುದುರೆಗಳನ್ನು ಯುದ್ಧಕ್ಕೆ ಪಳಗಿಸಿ ಸಹಸ್ರಾರು ಅಶ್ವ ಬಲದಿಂದ ಅಂದಿನ ರಷ್ಯಾ ಮತ್ತು ಚೀನಾ ದೇಶಗಳನ್ನು ಒಳಗೊಂಡು ಇಡೀ ಆಗ್ನೇಯ ದೇಶಗಳನ್ನು ವಶ ಪಡಿಸಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿರುವ ಉಲ್ಲೇಖಗಳು ಇತಿಹಾಸ ಪುಟಗಳಲ್ಲಿ ಓದಲು ಸಿಗುವುದು.
ಸೈನ್ಯದ ಸಾಮಾನು ಸರಂಜಾಮುಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಿಸಲು ಆಗದೆ ಮತ್ತು ಅತ್ಯಂತ ಕನಿಷ್ಠ ಉಷ್ಣಾಂಶದ ಹಿಮಾಲಯ ಶ್ರೇಣಿಯನ್ನು ದಾಟುವ ಸಾಹಸ ಮಾಡದೇ ಭಾರತವನ್ನು ಅತಿಕ್ರಮಣ ಮಾಡಲು ಈ ರಾಜನಿಗೆ ಸಾಧ್ಯ ಆಗಲಿಲ್ಲ ಎಂಬದು ಇತಿಹಾಸ ತಜ್ಞರ ವಾದ. ಚೆಂಗಿಸ್ ಖಾನ್ ಮಂಗೋಲಿಯ ದೇಶದ ಸ್ಥಾಪಕ. ಅಲ್ಲಿಯ ಪ್ರಜೆಗಳು ಈತನನ್ನು ಮಂಗೋಲಿಯ ದೇಶದ ಪಿತಾಮಹ ಎಂದು ಕರೆಯುತ್ತಾರೆ.

ಹನ್ನೆರಡನೆ ಶತಮಾನದಲ್ಲಿ ಮಂಗೋಲಿಯ ಸ್ಥಾಪಿತವಾದರೂ ಚೀನಾ ದೇಶದೊಡನೆ ಯುದ್ಧಗಳು ನಿರಂತರವಾಗಿ ನಡೆಯುತಿತ್ತು. ಹಲವಾರು ಚೀನಾರಾಜವಂಶಸ್ಥರ ಅಧೀನದಲ್ಲಿ ಮಂಗೋಲಿಯ ಇತ್ತು. ಇಪ್ಪತ್ತನೆಯ ಶತಮಾನದವರಿಗೂ ಚೀನಾರಾಜವಂಶಸ್ಥರಾದ “ಕ್ವಿಂಗ್ ಡೈನಸ್ಟಿ” ಮಂಗೋಲಿಯವನ್ನು ಆಳುತ್ತಿದ್ದರು. ಅದೇ ಸಮಯದಲ್ಲಿ ರಷ್ಯಾ ದೇಶದಲ್ಲಿ ಸಮಾನವಾದ ಅಥವಾ ಸಮತಾವಾದಗಳ ಆಂತರ್ಯುದ್ದ ಶುರು ಆಗಿ ತಮ್ಮ ಸಮಸ್ಯೆಯನ್ನು ಮರೆಮಾಚಲು ಮಂಗೋಲಿಯ ದೇಶವನ್ನು ಅತಿಕ್ರಮಣ ಮಾಡಿ ಮಂಗೋಲಿಯ ಸೈನ್ಯದೊಂದಿಗೆ ಸೇರಿ ಚೀನಾದ ಕ್ವಿಂಗ್ ರಾಜವಂಶಸ್ಥರನ್ನು ಸೋಲಿಸಿದರು. ಇದೇ ಯುದ್ಧ ಮಂಗೋಲಿಯ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿ 1911 ನೇ ಇಸವಿಯಲ್ಲಿ ಮಂಗೋಲಿಯ ಸ್ವಾತಂತ್ರ ರಾಷ್ಟ್ರವಾಗಿ ಹೊರ ಹೊಮ್ಮಿತು.

ಮಂಗೋಲಿಯ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ ದೇಶದ ಆರ್ಥಿಕ ಸಂಕಷ್ಟ ಅಧಿಕವಾಗಿತ್ತು. ಇಲ್ಲಿಯ ಅಲೆಮಾರಿಗಳು ತಮ್ಮ ಆರ್ಥಿಕ ಸಮಸ್ಯೆಯನ್ನು ಜಾನುವಾರು ಅಥವಾ ಪಶು ಸಂಗೋಪನೆ ಮಾಡಿ ದೇಶದ ಬೊಕ್ಕಸವನ್ನು ತುಂಬುತ್ತಿದ್ದರು. ಮಂಗೋಲಿಯ ಸ್ವಾತಂತ್ರವನ್ನು ಪಡೆದು ದಶತಕವೇ ಕಂಡರೂ ಇಂದಿನ ಆದಾಯ ಶೇಕಡ ನಲವತ್ತರಷ್ಟು ಪಶು ಸಂಗೋಪನೆಯಿಂದಲೇ ಬರುತ್ತಿದೆ. ಈ ಅಲೆಮಾರಿಯ ಪಂಗಡಗಳಲ್ಲಿ ಅತಿ ಹೆಚ್ಚು “ಮಂಗೋಲ್ ಕರ್ಕ”. ಇವರನ್ನು ಬಿಟ್ಟರೆ “ಅರೈಟ್ ಮತ್ತು ಕಝಕ್ಸ್”. ಈ ದೇಶದ ಜನ ಸಂಖ್ಯೆಯು ನಮ್ಮ ಕರ್ನಾಟಕದ ಅರ್ಧದಷ್ಟು ಮಾತ್ರ. ಇವರಲ್ಲಿ ಅಲೆಮಾರಿಗಳ ಸಂಖ್ಯೆ ಶೇಕಡ ಅರವತ್ತರಷ್ಟು. ಇಲ್ಲಿಯ ಮೂಲಸೌಕರ್ಯ ಚೀನಾ ಮತ್ತು ರಷ್ಯಾನ್ನರ ಜತೆಗೂಡಿ ಅಭಿವೃದ್ಧಿಯ ಪತ ಕಾಣುತ್ತಿದೆ. ಖನಿಜ (ನಿಕ್ಕಲ್, ಕಾಪರ್, ಗೋಲ್ಡ್, ಜಮ್ ಸ್ಟೋನ್ಸ್) ಸಂಪನ್ಮೂಲವಿದ್ದರೂ ತನ್ನ ಪಕ್ಕದ ದೇಶಗಳ ರಫ್ತು ಮತ್ತು ಆಮದು ಮೇಲೆ ಅವಲಂಬಿಸಿರುತ್ತದೆ. ಈಗಷ್ಟೆ “ಬ್ಲಾಕ್ ಗೋಲ್ಡ್ (ಕಚ್ಚಾ ತೈಲ) ಸಿಕ್ಕಿ ತನ್ನ ಆರ್ಥಿಕತೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದೆ.

ಸಾಮಾನ್ಯವಾಗಿ ಭಾರತ ದೇಶದ ಪ್ರವಾಸಿಗರು ಈ ದೇಶಕ್ಕೆ ಪ್ರವಾಸಕ್ಕೆಂದು ಹೋಗುವುದು ತೀರಾ ವಿರಳ. ರಷ್ಯಾ ಮತ್ತು ಚೀನಾ ದೇಶದಿಂದ ಅತಿ ಹೆಚ್ಚು ಪ್ರವಾಸಿಗರು ಬರುತ್ತಾರೆ. ನನಗೆ ಅಲ್ಲಿಯ ಅಲೆಮಾರಿಗಳ ಸಂಪ್ರದಾಯ ಮತ್ತು ಸಂಸ್ಕೃತಿ, ಪ್ರಾಚೀನ ಸ್ಥಿತಿಯ ವಾಸ್ತುಶಿಲ್ಪ ವಿನ್ಯಾಸ, ಅಗಾಧವಾದ ಹುಲ್ಲು ಗಾವಲು, ನೈಸರ್ಗಿಕ ಸರೋವರ ಹಾಗೂ ಬೆಟ್ಟ ಗುಡ್ಡಗಳು, ಅಲ್ಲಿಯ ಪ್ರಾಣಿಗಳ (ಸ್ನೋ ಚಿರತೆ, ಬ್ಯಾಕ್ಟ್ರೀಯನ್ ಒಂಟೆ ಮತ್ತು ಕುದುರೆಗಳು) ಹ್ಯಾಬಿಟೇಟಿನ ಕಾಡುಗಳು ಮತ್ತು ಬಹು ಮುಖ್ಯವಾಗಿ ಅಲ್ಲಿಯ ಅಶ್ವಗಳನ್ನು ನೋಡುವ ಬಯಕೆ ಹಿಂದಿನಿಂದ ಇತ್ತಾದರೂ ಇಂದು ಆ ಬಯಕೆ ಈಡೇರಿತು.
ಮುಂದುವರಿಯುವುದು …
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] […]