ಸಿಂಗಾಪುರ, ಬೀಜಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಮಂಗೋಲಿಯ ರಾಜಧಾನಿ “ಉಲಾನ್ ಬಾತಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದ “ಚಿಂಗಿಸ್ ಹಾನ್” ಬಂದು ತಲುಪಿದೆವು. ಭಾರತದಿಂದ ಯಾವುದೇ ನೇರ ವಿಮಾನ (ಹಿಮಾಲಯ ಮತ್ತು ಟಿಬೆಟ್ ಮೇಲೆ ವಿಮಾನ ಹಾರಾಟ ಇರುವುದಿಲ್ಲ) ಮಂಗೋಲಿಯ ದೇಶಕ್ಕೆ ಇಲ್ಲದ ಕಾರಣ ನಾವು ಸುತ್ತಿಕೊಂಡು ಹೋಗಬೇಕಾಯಿತು.
ಸುಮಾರು ಹನ್ನೆರೆಡು ಗಂಟೆಗಳ ಕಾಲ ಪ್ರವಾಸ, ಆದರೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದು ವಿಮಾನದಿಂದ ಇನ್ನೊಂದು ವಿಮಾನಕ್ಕೆ ವರ್ಗಾವಣೆಯ ಸಮಯವೇ ಅರ್ಧ ದಿನ ಆಯಿತು. ಹೇಳಬೇಕೆಂದರೆ ವಯಸ್ಸಾದ ಪ್ರವಾಸಿಗರಿಗೆ ಸ್ವಲ್ಪ ತ್ರಾಸು ಆಗುವುದಂತು ಕಂಡಿತ. ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಾಜಧಾನಿಯಾದ ಉಲಾನ್ ಬಾತಾರ್ ಇಂದ ಸುಮಾರು ಐವತ್ತು ಕಿಲೋಮೀಟರ್ಸ ದೂರದಲ್ಲಿನ ನಿರ್ಜನ ಹುಲ್ಲುಗಾವಲಿನ ಪ್ರಕೃತಿಯ ಸೌಂದರ್ಯ ಮಧ್ಯೆ ಕಟ್ಟಿದ್ದಾರೆ. ಈ ನಿಲ್ದಾಣದ ಸುತ್ತ ಮುತ್ತ ಯಾವುದೇ ಸರಕಾರದ ಅಥವ ಖಾಸಗಿ ಕಟ್ಟಡಗಳು ಇರುವುದಿಲ್ಲ.

ಮಂಗೋಲಿಯ ಪೂರ್ವ ಪಶ್ಚಿಮವಾಗಿ ಸುಮಾರು ಎರಡು ಸಾವಿರ ಐದುನೂರು ಕಿಲೋಮೀಟರ್ಸ ಮತ್ತು ಉತ್ತರ ದಕ್ಷಿಣವಾಗಿ ಒಂದು ಸಾವಿರ ಇನ್ನೂರು ಕಿಲೋಮೀಟರ್ಸ ವಿಸ್ತರಿಸಿದೆ. ಅಂದರೆ ನಮ್ಮ ಭಾರತದ ಅರ್ಧದಷ್ಟು. ಇಲ್ಲಿಯ ಜನಸಂಖ್ಯೆ ಮಾತ್ರ ಮೂರುವರೆ ಕೋಟಿ. ಇದರ ಅರ್ಧದಷ್ಟು ಜನ ರಾಜಧಾನಿಯಾದ ಉಲಾನ್ ಬಾತಾರನಲ್ಲಿ ವಾಸಿಸುತ್ತಾರೆ. ಸುಮಾರು ಐದು ವರ್ಷಗಳಿಂದ ಈ ದೇಶ ಅಭಿವೃದ್ಧಿ ಆಗುತ್ತಿದೆ. ಈ ಹಿಂದೆ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಅತಿ ಕಡಿಮೆ. ಕಾರಣ ಅಲ್ಲಿಯ ಹವಾಮಾನ. ಒಂದು ಅಂದಾಜಿನ ಪ್ರಕಾರ ಚಳಿ ಕಾಲದಲ್ಲಿ- 50 ಡಿಗ್ರಿ ಉಷ್ಣಾಂಶ ಇರುತ್ತದೆ ಎಂದು ಹೇಳಲಾಗಿದೆ. ಬೇಸಿಗೆ ಕಾಲ ಮೂರು ತಿಂಗಳು ಮಾತ್ರ, ಜೂನ್, ಜುಲೈ ಮತ್ತು ಆಗಷ್ಟ. ಇಲ್ಲಿ ರಾತ್ರಿ ಒಂಬತ್ತು ಗಂಟೆಯಾದರೂ ಬೆಳಕು ಇರುತ್ತೆ.
ವ್ಯಾಪಾರ ವ್ಯವಹಾರ ಸಾಯಂಕಾಲ ಆರು ಗಂಟೆಗೆ ಮುಗಿಯುವುದು. ಆರು ಗಂಟೆಯ ನಂತರ ಅತಿ ವೇಗವಾಗಿ ಚಳಿ ಗಾಳಿ ಬೀಸುತ್ತದೆ. ಕೆಲವೊಮ್ಮೆ ಮಳೆ ರಾತ್ರಿ ಪೂರ್ತಿ ಸುರಿಯುತ್ತದೆ. ಆದುದರಿಂದ ಬೇಸಿಗೆ ಸಮಯದಲ್ಲಿ ಮಾತ್ರ ಪ್ರವಾಸಿಗರು ಬರುತ್ತಾರೆ. ಭಾರತದಿಂದ ಪ್ರವಾಸಿಗರು ಹೋಗುವುದು ಅತಿ ವಿರಳ. ನಾವು ಅಲ್ಲಿದ್ದಾಗ ಮುಂಬೈನ ಪ್ರವಾಸಿಗರು ಬಂದಿದ್ದರು. ಈರೋಪ್, ಚೀನಾ ಮತ್ತು ರಷ್ಯ ದೇಶದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕಾರಣ, ಅಲ್ಲಿಯ ಮಂಗೋಲಿಯ ಬಾರ್ಬಿಕ್ಯೂ (ಬೀಫ್, ಗೋಟ್, ಶೀಪ್ ಮತ್ತು ಕ್ಯಾಮಲ್) ತಿನ್ನಲು ಮತ್ತು ಹಾಲಿನಿಂದ ತಯಾರಾದ ವೋಡ್ಕ ಸೇವಿಸಲು. ಶಾಖಾಹಾರಿಗಳಿಗೆ ಇಲ್ಲಿ ವೆಜ್ ಊಟ ಸಿಗುವುದು ಬಹಳ ಕಷ್ಟ. ಈ ಬೇಸಿಗೆಯಲ್ಲಿ ಪ್ರವಾಸಿಗರು ಅಲ್ಲಿಯ ದಸ್ಕತ್ತಾದ (signature) “ಯುರ್ಟ ಅಥವ ಗೆರ್ ಟೆಂಟ್” ನಲ್ಲಿ ಇರಲು ಬಹಳವಾಗಿ ಇಷ್ಟ ಪಡುತ್ತಾರೆ.

ಇವರು ಮಾತನಾಡುವುದು ರಷ್ಯನ್ನರ ತರಹ ಇರುತ್ತದೆ. ಆದರೆ ಸ್ವಲ್ಪ ವಿಭಿನ್ನ. ಇವರ ಲಿಪಿಯೂ ಕೂಡ ರಷ್ಯ ಲಿಪಿಯ ತರಹ. ಬರೆಯುವ ವಿಧಾನ ಮೇಲಿನಿಂದ ಕೆಳಗೆ ಮತ್ತು ಎಡಗಡೆಯಿಂದ ಬಲಕ್ಕೆ. ಇವರ ಲಿಪಿಯ ಅಕ್ಷರಗಳು ಇಪ್ಪತ್ತಾರು. ಇದರಲ್ಲಿ ಸ್ವರಾಕ್ಷರ ಏಳು, ಹದಿನೇಳು ವ್ಯಂಜನಗಳು ಮತ್ತು ಎರಡು ಜಂಟಿ ಸ್ವರಗಳು ಇರುತ್ತದೆ. ಇವರ ಭಾಷೆ ಮತ್ತು ಇಂಗ್ಲಿಷ್ ಉಚ್ಛಾರಣೆ ಅರ್ಥವೇ ಆಗುವುದಿಲ್ಲ. ಮೊದಲನೆಯದಾಗಿ ಈ ದೇಶದ ಪ್ರಜೆಗಳು ಇಂಗ್ಲಿಷ್ ಕಲಿಯುವುದೇ ಇಲ್ಲ.
ಮಂಗೋಲಿಯ ಜನರು ಮೂಲತವಾಗಿ ಅಲೆಮಾರಿಗಳು ಅಥವ ಬುಡಕಟ್ಟಿನ ಜನಾಂಗದವರು. ಆದುದರಿಂದ ಮಂಗೋಲಿಯ ದೇಶವನ್ನು “Land of Nomadics” ಎಂದು ಕರೆಯುತ್ತಾರೆ. ಸುಮಾರು ಇಪ್ಪತ್ತೊಂದು ಬುಡಕಟ್ಟಿನ ಜನಾಂಗದವರು ಈ ದೇಶದಲ್ಲಿ ವಾಸ ಮಾಡುತ್ತಾರೆ. ಅತಿ ಹೆಚ್ಚು ಬುಡಕಟ್ಟಿನ ಜನ ಮಂಗೋಲ್ಸ. ಕೆಲವರು ಕಜಕ್ಸ ಮತ್ತು ಕಿರ್ಗೀಸ್ ಇದ್ದಾರೆ. ಇವರಲ್ಲಿ ಸುಮಾರು ಅರ್ಧದಷ್ಟು ಬುದ್ಧನನ್ನು ಆರಾಧಿಸುತ್ತಾರೆ. ಗ್ರಾಮೀಣ ಆದಿವಾಸಿಗಳು “ಶಮನಿಸಂ” ಅಂದರೆ ” ancesterial spirits” ಮೇಲೆ ನಂಬಿಕೆ ಇಟ್ಟಿರುವರು. ಈ ಪಂಗಡದವರು “nature lovers” ಅಂದರೆ ಪ್ರಕೃತಿಯ ಆರಾಧಕರು. ಉಳಿದವರು ಮುಸ್ಲಿಮರು, ಕ್ರೈಸ್ತರು ಮತ್ತು ಶೇಕಡ .3% ಹಿಂದೂಗಳು. ಇವರು ನಗರ ವಾಸಿಗಳಾಗಿದ್ದು ಶಿವನನ್ನು ಆರಾಧನೆ ಮಾಡುತ್ತಾರೆ.
ಈ ಅಲೆಮಾರಿಯ ಜನಾಂಗದವರ ಜೀವನ ಮತ್ತು ಬದುಕು “ಕುದುರೆ” ಸುತ್ತ ಕಟ್ಟಿಕೊಂಡು ಇರುತ್ತದೆ. ಕುದುರೆ ಇಲ್ಲದೆ ಇವರ ಜೀವನವೇ ಇರುವುದಿಲ್ಲ. ಇವರು ಅಲೆಮಾರಿಗಳಾದ್ದರಿಂದ ಯುರ್ಟ್ (ಟೆಂಟ್) ನ ಸಾಮಗ್ರಿ ಸರಕು ಸಾಗಾಣೆ ಮತ್ತುಇವರ ಸವಾರಿ ವಾಹನವಾಗಿ ಹಾಗು ಮನೆ ಸಾಮಗ್ರಿ, ಅಹಾರ ಹಾಗು ಮೇವು ಒಯ್ಯಲು ಕುದುರೆಗಳು ಬೇಕೇ ಬೇಕು. ಇದರ ಜೊತೆಯಲ್ಲಿ ಯಾಕ್, ಕ್ಯಾಮಲ್, ಡಾಂಕಿ, ಮ್ಯೂಲ್, ಗೋಟ್, ಶೀಪ್ ಮತ್ತು ಕೋಳಿ ಸಾಕುತ್ತಾರೆ.

ಇಲ್ಲಿಯ ಕುದುರೆಗಳು ಮತ್ತು ಒಂಟೆಗಳು ವ್ಯತಿರಿಕ್ತ ಹವಾಮಾನವನ್ನು ಸದೃಢವಾಗಿ ಎದುರಿಸುತ್ತವೆ. ಆದುದರಿಂದ ಅವುಗಳನ್ನು ಅಧಿಕವಾಗಿ ಇಲ್ಲಿಯ ಜನರು ಸಾಕುತ್ತಾರೆ. ಮಂಗೋಲಿಯ ಸಮುದ್ರ ಮಟ್ಟದಿಂದ ಸುಮಾರು ಐದು ಸಾವಿರ ಅಡಿ ಮೇಲೆ ಇದೆ. ಇದರ ಮೇಲ್ಮೈ ಲಕ್ಷಣ ಶೇಕಡಾ ಎಂಬತ್ತು ಭಾಗ ತಳ ಮಟ್ಟದಿಂದ ಕೂಡಿದ್ದು ಹಸಿರು ಹುಲ್ಲಿನ ಹಾಸನ್ನು ಹೊಂದಿದೆ. ರಸ್ತೆಗಳಂತು ನೆಟ್ಟಗೆ ಇದ್ದು ನೂರಾರು ಕಿಲೋಮೀಟರ್ಸ ವಾಹನಗಳಲ್ಲಿ ಸಾಗಬಹುದು. ರಸ್ತೆಗಳು ನಿರ್ಧಿಷ್ಟವಾದ ಮಾರ್ಗದಲ್ಲಿ ಮಾತ್ರ ಇದ್ದಾವೆ. ಇನ್ನುಳಿದ ಮಾರ್ಗಗಳು ಮಣ್ಣಿನ ರಸ್ತೆಗಳು ಆಗಿರುತ್ತವೆ. ಕಾರಣ, ಆ ಸರ್ಕಾರ ಹಸಿರು ಪರಿಸರ ಕಾಪಾಡುವ ಉದ್ದೇಶದಿಂದ ಪಣ ತೊಟ್ಟು ಪ್ರಪಂಚಕ್ಕೆ ಮಾದರಿ ಆಗಿದ್ದಾರೆ. ಅಲ್ಲಿಯ ಭೂ ಪ್ರದೇಶ ಗುಡ್ಡ, ಕಲ್ಲಿನ ಬೆಟ್ಟ ಮತ್ತು ಉತ್ತರಕ್ಕೆ (ರಷ್ಯ ಹೊಂದಿಕೊಂಡಂತ್ತೆ) ಹೋದರೆ “ಕಾಂಗೈ” ಪರ್ವತ ಸಾಲನ್ನು ನೋಡಬಹುದು. ಹಲವಾರು ಪ್ರಾಚೀನ ಶುದ್ಧವಾದ ನೀರಿನ ಸರೋವರಗಳು ಕಾಣಲು ಸಿಗುತ್ತವೆ. ಅದೇ ದಕ್ಷಿಣದಲ್ಲಿ (ಚೀನಾ ಹೊಂದಿಕೊಂಡಂತ್ತೆ) “ಗೋಬಿ” ಮರಳಗಾಡು ಇದೆ.
ನಾವು ಇಳಿದಾಕ್ಷಣ ನಿಲ್ದಾಣದಲ್ಲಿ ಸಂಭ್ರಮವೋ ಸಂಭ್ರಮ. ಅಲ್ಲಿಯ ವಿದ್ಯಾರ್ಥಿಗಳು ಆಸ್ಟ್ರೇಲಿಯ ದೇಶದಲ್ಲಿ ನೆಡೆದ “ವಿಶ್ವ ಮ್ಯಾತ್ಸ (maths) ಒಲಂಪಿಯಾಡ್” ಸ್ಪರ್ಧೆಯಲ್ಲಿ ಭಾರತದಂತೆ ಎಲ್ಲಾ ಮೂರು ಪದಕಗಳನ್ನು ಗೆದ್ದಿದ್ದರು. ನಾನು ಬೆಳ್ಳಿಯ ಪದಕ ಪಡೆದಂತಾ ಸ್ಪರ್ಧಾಳು ಜೊತೆ ನಿಂತು ಫೋಟೋ ತೆಗೆಸಿಕೊಂಡೆ. ನಾವು ಈ ವಿಮಾನ ನಿಲ್ದಾಣದಿಂದ ಸೀದಾ “ಕುದುರೆ ಏರಿದ ಚಿಂಗಿಸ್ ಹಾನ್” ನೂರು ಅಡಿ ಎತ್ತರದ ಪ್ರತಿಮೆಯನ್ನು ನೋಡಲು ಹೊರೆಟೆವು. ಈ ಪ್ರತಿಮೆ “ತಾವ್” ಪ್ರಾಂತ್ಯದಲ್ಲಿ ಇದ್ದು ಸುಮಾರು ನೂರು ಕಿಲೋಮೀಟರ್ಸ ಕ್ರಮಿಸಿ ಸೇರಿದೆವು. ಈ ಚಿಂಗಿಸ್ ಹಾನ್ ಪ್ರತಿಮೆಯ ದೃಷ್ಟಿ ತಾನು ಹುಟ್ಟಿದ ಪ್ರದೇಶದ ಕಡೆ ಇದೆ ಎಂದು ನಮ್ಮ ಗೈಡ್ “ಆಲತಾಂತ್ಗೋಸ್” ತಿಳಿಸಿದಳು. ಆಕೆಯ ಹೆಸರನ್ನು ಹೇಳಲು ಕಷ್ಟ ಪಡುತ್ತಿದ್ದ ನಾವು “ತೂಕ್ಸೋ” ಎಂದು ಕರೆಯುತ್ತಿದ್ದೆವು. ಈ ಪ್ರತಿಮೆಯನ್ನು ಸಾವಿರಾರು ಟನ್ ಸ್ಟೈನ್ಲೆಸ್ ಸ್ಟೀಲ್ ಉಪಯೋಗಿಸಿ ರಚಿಸಿಲಾಗಿದೆ. ಅಂದರೆ, ಯಾವುದೇ ವ್ಯತಿರಿಕ್ತ ಹವಾಮಾನಕ್ಕೂ ಹಾಳು ಆಗಬಾರದೆಂಬ ಕಾರಣಕ್ಕೆ.
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

