ಮಾರನೆ ದಿನ ನಮ್ಮ ಪ್ರವಾಸ “ಯುಗೀ ಸರೋವರ” ದ ಕಡೆ. ಎರೆಡು ಗಂಟೆ ಪ್ರಯಾಣದ ನಂತರ ಮತ್ತು ಇಪ್ಪತ್ತೇಳು ಕಿಲೋಮೀಟರ್ಸ ಮಣ್ಣಿನ ರಸ್ತೆಯ ಮೇಲೆ ಪ್ರಯಾಣಿಸಿ ಈ ಸರೋವರವನ್ನು ಬಂದು ಸೇರಿದೆವು. ಮಂಗೋಲಿಯದಲ್ಲಿ ಹಲವಾರು ಸರೋವರಗಳು ಇದ್ದರೂ ಮಧ್ಯ ಪಶ್ಚಿಮ ಪ್ರಾಂತ್ಯದಲ್ಲಿ ಆಧುನಿಕತೆಯಿಂದ ಕುಲುಷಿತವಾಗದ ಎಕೈಕ ಸರೋವರ ಇದು. ಈ ಸರೋವರ ಸುಮಾರು ಎಂಟು ಕಿಲೋಮೀಟರ್ಸ ಉದ್ದ ಮತ್ತು ಐದು ಕಿಲೋಮೀಟರ್ಸ ಅಗಲ ಇದ್ದು ಅರವತ್ತು ಅಡಿ ಆಳವಿದೆ. ಈ ಸ್ಥಳ ಪ್ರವಾಸಿಗರಿಗೆ ನೆಚ್ಚಿನ ಸುಂದರ ತಾಣ.

ಸರೋವರದ ಸುತ್ತ ವಾಯು ವಿಹಾರ ಮನಸ್ಸಿಗೆ ಹಿತ ಮತ್ತು ಶರೀರಕ್ಕೆ ಶುದ್ಧವಾದ ಆಮ್ಲಜನಕ ಸೇವನೆಯಿಂದ ಆರೋಗ್ಯ. ನಾವು ಅಲ್ಲಿ ಇದ್ದ ದಿನ ಗಾಳಿ ಸುಮಾರು ಅರವತ್ತರಿಂದ ಎಪ್ಪತ್ತು ಕಿಲೋಮೀಟರ್ಸ ವೇಗದಲ್ಲಿ ಬೀಸುತ್ತಿತ್ತು. ನಾವು ನಮ್ಮ ಸಮತೋಲನ ತಪ್ಪಿ ಎಲ್ಲಿ ಹಾರಿ ಹೋಗುತ್ತಿವೋ ಎಂಬ ಭಯ ನಮ್ಮನ್ನು ಕಾಡುತಿತ್ತು. ಇಲ್ಲಿ ಮುಕ್ಕಾಲು ಗಂಟೆಗಳ ಕಾಲ ಸ್ಪೀಡ್ ಬೋಟನಲ್ಲಿ ಸರೋವರದ ಮೇಲೆ ಪ್ರಯಾಣಿಸಿದೆವು. ಇಲ್ಲಿಯ ಸರೋವರದ ಪಕ್ಕದಲ್ಲಿಯೇ ನಮ್ಮ ವಾಸ್ತವ್ಯ ಇತ್ತು.

ಬೆಳಿಗ್ಗೆ ಉಪಾಹಾರ ಮುಗಿಸಿ ನಾವು ಮಂಗೋಲಿಯ ದೇಶದ ಪ್ರಾಚೀನ ರಾಜಧಾನಿಯಾದ “ಕಾರಕೋರಮ್” ನಗರದ ಕಡೆ ಪ್ರಯಾಣ ಬೆಳೆಸಿದೆವು. ಸುಮಾರು ಎರೆಡು ಗಂಟೆಗಳ ಕಾಲ ಪ್ರಯಾಣಿಸಿ ಕಾರಕೋರಮ್ ನಗರವನ್ನು ಬಂದು ಸೇರಿದೆವು. ಇಲ್ಲಿಯ ಸರ್ಕಾರ, ಅಂತರಾಷ್ಟ್ರೀಯ ಪ್ರವಾಸಕ್ಕೆ ಉತ್ತೇಜನ ಕೊಡಲು ಆಡಳಿತಾತ್ಮಕ, ವಾಣಿಜ್ಯ ಮತ್ತು ಆಧುನಿಕ ನಗರವಾಗಿ ಮಾರ್ಪಡಿಸಲು ಚೀನಾ ಸಹಯೋಗತ್ವದೊಂದಿಗೆ ಬ್ಲೂ ಪ್ರಿಂಟ್ ರೆಡಿ ಮಾಡಿದೆ. ಈಗಿರುವ ಚಿಂಗಿಸ್ ಹಾನ್ ವಿಮಾನ ಅಡ್ಡೆಯ ಹತ್ತು ಪಟ್ಟು ದೊಡ್ಡ ವಿಮಾನ ನಿಲ್ದಾಣವನ್ನು ಕಟ್ಟಲು ಯೋಚಿಸಿದೆ. ಹಾಗೇನಾದರೂ ಆದರೆ ಉಲಾನ್ ಬಾತರ್ ನಗರಕ್ಕಿಂತ ಬಹು ದೂಡ್ಡ ನಗರವಾಗಿ ಈ ಕಾರಕೋರಮ್ ನಗರ ಹೊರ ಹೊಮ್ಮುತ್ತದೆ.

ಈ ನಗರದಲ್ಲಿ ಅತಿ ಪ್ರಾಚೀನವಾದ ಬೌದ್ಧ ವಿಹಾರದ ಸಂಕೀರ್ಣವಿದೆ. ಇದನ್ನು ನಿರ್ಮಿಸುವ ಕಾರ್ಯವನ್ನು ಹನ್ನೆರಡನೆ ಶತಮಾನದಲ್ಲಿ ಚಿಂಗೀಸ್ ಹಾನ್ ಶುರು ಮಾಡಿದರೂ ತನ್ನ ಮೊಮ್ಮಕ್ಕಳಾದ “ಅಬ್ಢೀನ್ ಹಾನ್” ಮತ್ತು ಇವರ ರಾಜವಂಶಸ್ತರು ಹದಿನೇಳನೆ ಶತಮಾನದ ಅಂತ್ಯದಲ್ಲಿ “ಎರ್ಡೇನ್ ಜೂ” ಸಂಕೀರ್ಣವನ್ನು ಪೂರ್ಣಗೊಳಿಸಲಾಯಿತು. ಇದರ ವಿಸ್ತಾರ ಚೌಕಟ್ಟಿನ ಆಕಾರ ಇದ್ದು ದಕ್ಷಿಣ ಉತ್ತರ ಹಾಗು ಪೂರ್ವ ಪಶ್ಚಿಮ ಸಾವಿರ ಐದನೋರು ಅಡಿಗಳಷ್ಟು ವಿಸ್ತಾರ ಹೊಂದಿದೆ. ಇದರ ಸುತ್ತ ನೂರೆಂಟು ಸ್ತೂಪ ಒಳಗೊಂಡ ತಡೆ ಗೋಡೆ (ಕಾಂಪೌಂಡ್) ಇದೆ.

ಒಂದು ಹಂತದಲ್ಲಿ ಇಲ್ಲಿ ಎಪ್ಪತ್ತ ನಾಲ್ಕು ಬೌದ್ಧ ವಿಹಾರಗಳು ಇದ್ದವಂತೆ. ಹತ್ತೊಂಬತ್ತನೆಯ ಶತಮಾನದ ಶುರುವಿನಲ್ಲಿ ಕಮ್ಯುನಿಸ್ಟ್ ರಿಂದ ಅನೇಕ ವಿಹಾರಗಳನ್ನು ನಾಶಗೊಂಡಿದೆ ಎಂಬ ಉಲೇಖಗಳು ಇವೆ. ಸಾವಿರ ಒಂಬಯ್ನೂರು ತೊಂಬ್ಬತ್ತತೊಂಬತ್ತರಲ್ಲಿ ಈ ಪ್ರದೇಶವನ್ನು ಯುನೆಸ್ಕೊ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ಮಂಗೋಲಿಯ ಮತ್ತು ಜರ್ಮನ್ ಸಹಭಾಗಿತ್ವದಲ್ಲಿ ಉತ್ಖನನ ಮಾಡಿದ ಮೂರು ಬೌದ್ಧ ವಿಹಾರಗಳನ್ನು ನೋಡಬಹುದು. ಈ ಬೌದ್ಧ ವಿಹಾರಗಳು ಟಿಬೆಟ್ ಮತ್ತು ಮಂಗೋಲಿಯ ವಾಸ್ತು ಶಿಲ್ಪವನ್ನು ಹೊಂದಿದೆ. ಇವುಗಳ ಪಕ್ಕದಲ್ಲಿ ದಲಾಯ್ ಲಾಮಾ ದೇವಸ್ಥಾನ ಇದೆ. ಇಲ್ಲಿ ದಿನ ನಿತ್ಯವೂ ಪೂಜೆ ಮತ್ತು ಮಂತ್ರೊಚ್ಚಾರಣೆ ನೆಡೆಯುತ್ತದೆ.

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಸೃಷ್ಟಿಕರ್ತ ಸೃಷ್ಟಿಸಿದ ವಿಭಿನ್ನ ರೂಪ ರಾಶಿಗಳಿಗೆ ಅವುಗಳ ಹೆಸರುಗಳಿಂದ ನಾವು ಪೂಜೆ ಮಾಡುತ್ತೇವೆ. ಅಂದರೆ ನಮಗೆ ನೂರಾರು ದೇವರುಗಳು. ಇದೇ ತರಹ ಇಲ್ಲಿ “ಬುದ್ಧ” ಒಬ್ಬನೆ, ನಾಮ ಹಲವು. ಇಲ್ಲಿಯ ಬೌದ್ಧ ತತ್ವವು ಶಂಕ್ಯಾಮುನಿ ಇವರಿಂದ ಪ್ರೇರಿತವಾಗಿ ಯಮ, ಧನ್ವಂತರಿ, ನಾಗರಾಜ, ಧರ್ಮಪಾಲ, ಹಯಗ್ರೀವ, ಶ್ರೀದೇವಿ, ಭೂದೇವಿ, ವಜ್ರ ಭೈರವ, ಮಹಾಕಾಲ, ನಾರಾಯಣ, ಢಾಕಿನಿ ಹೀಗೆ ನಮ್ಮಿಂದ ಪೂಜಿಸಲ್ಪಡುವ ದೇವರುಗಳು ಇಲ್ಲಿ ಬುದ್ಧನ ಅವತಾರಗಳಾಗಿವೆ.

ಒಂದು ನೆನಪಿರಲಿ, ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ಭಗವಾನ್ ಬುದ್ಧ ಹುಟ್ಟಿದ್ದು. ಆಗ ಭಾರತ ದೇಶದಲ್ಲಿ ಬೌದ್ಧ ಧರ್ಮ ಹರಡಿತ್ತು. ಬುದ್ದ ಸ್ವರ್ಗಸ್ಥರಾದ ನಂತರ ಭಾರತದಲ್ಲಿ ಧಾರ್ಮಿಕ ಮಾರಣಹೋಮವೇ ನೆಡೆದು ಹೋಯಿತು. ಆಗ ಅನೇಕ ಬಿಕುಗಳು ಸಾವಿನಿಂದ ತಪ್ಪಿಸಿಕೊಳ್ಳಲು ಆಗ್ನೇಯ ಮತ್ತು ಏಷ್ಯಾದ ರಾಷ್ಟ್ರಗಳಿಗೆ ವಲಸೆ ಹೋಗಿ ಬೌದ್ಧ ಧರ್ಮ ಪ್ರಚಾರ ಮಾಡಿದರು. ವಿಪರ್ಯಾಸ ಎಂದರೆ, ತಮ್ಮ ಜೊತೆಯಲ್ಲಿ ಹಿಂದೂ ತತ್ವಗಳನ್ನು ಸಹ ಕೊಂಡು ಹೋದರು.

ಇಲ್ಲಿಯವರಿಗೂ ಸುಮಾರು ಏದು ಸಾವಿರ ರಾಜತಾಂತ್ರಿಕ ಮತ್ತು ಪ್ರಜಾತಾಂತ್ರಿಕ ಯುದ್ದಗಳು ಆಗಿವೆ. ಆದರೆ ಈ ಯುದ್ಧಗಳಿಂದ ಸತ್ತವರು ಕಡಿಮೆ. ಧರ್ಮ ಯುದ್ಧಗಳಲ್ಲಿ ನೆಡೆದ ಮಾರಣಹೋಮವೇ ಅಸಂಖ್ಯಾತ. ಕೋಟ್ಯಾಂತರ ಮುಗ್ಧರು ಧರ್ಮದ ದೌರ್ಜನ್ಯಕ್ಕೆ ಒಳಗಾಗಿ ಪ್ರಾಣ ಬಿಟ್ಟಿರುತ್ತಾರೆ. ಒಮ್ಮೆ ಯೋಚಸಿದರೆ ನಮ್ಮ ಮಾನವೀಯತೆ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಇಂದೇ ಅಲ್ಲವೇ ನಮಗೆ ಸುಸ್ಸಮಯ, “ದೇವರು (God)” ಮತ್ತು “ಮಾನವಿಯತೆ (Humanity)” ಗಳನ್ನು ಆರಿಸಿಕೊಳ್ಳಲು.

ಈಜಿಪ್ಟಿನ ಪಿರಮಿಡ್ಡನ್ನು ಕೆಲವರು ನೋಡಿರಬಹುದು ಅಥವ ಕೇಳಿರಬಹುದು. ಹಾಗೆಯೇ ಚಿಂಗಿಸ್ ಹಾನ್ ಹುಟ್ಟುವ ಮೊದಲೇ ಅಲ್ಲಿಯ ಬುಡಕಟ್ಟಿನ ರಾಜರು ಇದ್ದರು ಎನ್ನುವ ದಾಖಲೆಗಳು ಇಲ್ಲಿ ಇವೆ. ಆಂದಿನ ವಿಚಿತ್ರವಾದ ನಡುವಳಿಕೆ ಏನೆಂದರೆ ಆ ಸಮಯದ ರಾಜ ನಿಶ್ಯಕ್ತನಾದಾಗ ಅಂದರೆ ಇನ್ನೂ ಸಾಯುವುದಕ್ಕೆ ಮುಂಚೆಯೇ ಆ ರಾಜನನ್ನು, ರಾಜನು ಉಪಯೋಗಿಸುತ್ತಿದ್ದ ವಸ್ತುಗಳನ್ನು, ಆತನ ಪ್ರಿಯವಾದ ಜೀವಂತ ಜಾನುವಾರುಗಳನ್ನು, ಜೀವಂತ ಕುದುರೆಯನ್ನು ಸುಮಾರು ಆರು ಅಡಿ ಕೆಳಗೆ ನಾಲ್ಕು ಅಥವ ಐದು ಕೊಠಡಿಗಳನ್ನು ನಿರ್ಮಿಸಿ, ಒಳಗೆ ಇಟ್ಟು ಮಣ್ಣು ಮುಚ್ಚಿ ಸಮಾಧಿ ಮಾಡಿ ಬಿಡುತ್ತಿದ್ದರು.

ಕೆಲವೇ ವರ್ಷಗಳ ಹಿಂದೆ ಇಂತಹ ಸಮಾಧಿಯನ್ನು (ಸುಮಾರು ಇಲ್ಲಿಗೆ ನೂರು ಕಿಲೋಮೀಟರ್ಸ ದೂರದಲ್ಲಿ ಇದೆಯಂತೆ ಮತ್ತು ಈ ಸ್ಥಳದಲ್ಲಿ ಪ್ರವೇಶ ನಿಷೇಧ ಮಾಡಿದ್ದಾರಂತೆ) ಕಂಡುಹಿಡಿದು ಉತ್ಖನನ ಮಾಡಿ ಅಲ್ಲಿಯ ಆವಶೇಷಗಳನ್ನು ಈ ನಗರದ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ ಮತ್ತು ಸಮಾಧಿಯ ಒಂದು ಕೊಠಡಿಯಲ್ಲಿ ಕಂಡ ಚಿತ್ರ ಕಲೆಯ ಪ್ರತಿರೂಪವನ್ನು ಸಹ ತೋರಿಸಲಾಗಿದೆ. ಇಂತಹ ಸಮಾಧಿಗಳು ಹಲವಾರು ಇರಬಹುದೆಂಬ ನಂಬಿಕೆಯಲ್ಲಿ ಇವರ ಸರ್ಕಾರ ಇದೆ. ಈ ಚಿತ್ರ ಕಲೆ ನಮ್ಮ ಅಜಂತಾ ಗುಹೆಗಳಲ್ಲಿ ಕಂಡತೆ ಇವೆ.

ಇಲ್ಲಿಂದ ಮತ್ತೆ ಎರಡು ಗಂಟೆಗಳು ಪ್ರಯಾಣಿಸಿ ಅಲ್ಲಿಯ ಅಲೆಮಾರಿಗಳ ಪರಂಪರೆ ಮತ್ತು ಸಾಂಪ್ರದಾಯಿಕ ಪ್ರದರ್ಶನ ನೋಡಲು “ಮಂಗೋಲ್ ನೊಮಾಡಿಕ್” ಕ್ಯಾಂಪ್ಗೆ ಹೊರಟೆವು. ಈ ಕ್ಯಾಂಪ್ ಗುಡ್ಡದ ಇಳಿಜಾರಿನಲ್ಲಿ ಇದೆ. ಇಲ್ಲಿಯ ಪ್ರಕೃತಿಯ ಸೌಂದರ್ಯ ವರ್ಣಿಸಲು ಅಸಾಧ್ಯ. ಇಲ್ಲಿಯ ಇಳಿಜಾರಿನಿಂದ ಕಣ್ಣು ಹಾಯಿಸಿದರೆ ಎಲ್ಲೆಲ್ಲೂ ಅಚ್ಚು ಹಸಿರಿನ ಹುಲ್ಲು ಗಾವಿಲಿನ ಪ್ರದೇಶ ಕಾಣಿಸುತ್ತಿತ್ತು. ನಾವು ಮತ್ತೆ ಮಂಗೋಲಿಯ ದೇಶದ ಚಿಹ್ನೆಯಾದ ಯುರ್ಟ ಅಥವ ಟೆಂಟ್ಟಲ್ಲಿ ಉಳಿದುಕೊಂಡವಿ. ಇದು ಅಂತಹ ಅತ್ಯಾಧುನಿಕ ಅಲ್ಲದ ಮತ್ತು ದೇಶಿ ವಿನ್ಯಾಸ ಹೊಂದಿರುವ ಈ ಯುರ್ಟ ಆಕರ್ಷಕವಾಗಿ ಕಾಣುತಿತ್ತು. ಈ ಕ್ಯಾಂಪ್ ಕೆಳಗಿನ ಕಣಿವೆಯಲ್ಲಿ ಸುಮಾರು ಎರೆಡು ಗಂಟೆಗಳ ಕಾಲ ನೆಡೆಯುವ ಸಾಂಪ್ರದಾಯಿಕ ಉತ್ಸವ ನೋಡಲು ಹೋದೆವು.
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

