1. ರಾಮಾಯಣದ ಕಥೆಗಳು ಥಾಯ್ ಜನರ ಜೀವನದ ಭಾಗವಾಗಿದೆ; ಥೈಲ್ಯಾಂಡ್ನಲ್ಲಿ ಪ್ರಧಾನಿ ಮೋದಿ

ಇಂದು ಬ್ಯಾಂಕಾಕ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಥಾಯ್ ಪ್ರಧಾನಿ ಪೇಟೊಂಗ್ಟಾರ್ನ್ ಶಿನವಾತ್ರ ಅವರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಉಭಯ ದೇಶಗಳ ನಡುವಿನ ಆತ್ಮೀಯ ಸಂಬಂಧಗಳನ್ನು, ಭಾರತದ ವಿದೇಶಾಂಗ ನೀತಿಯಲ್ಲಿ ಥೈಲ್ಯಾಂಡ್ನ ವಿಶೇಷ ಸ್ಥಾನವನ್ನು ಎತ್ತಿ ತೋರಿಸಿದರು. ಹಾಗೇ, ಭೂಕಂಪದ ಸಮಯದಲ್ಲಿ ಥೈಲ್ಯಾಂಡ್ನಲ್ಲಿ ಸಂಭವಿಸಿದ ಜೀವಹಾನಿಗೆ ಸಂತಾಪ ಸೂಚಿಸಿದರು.
************************************************************************************************
2.ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಐತಿಹಾಸಿಕ: ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗಲ್ಲ – HDD ಶ್ಲಾಘನೆ

ನವದೆಹಲಿ: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2025 ಅಂಗೀಕಾರವನ್ನು ಶ್ಲಾಘಿಸಿದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು, ಈ ಮಸೂದೆ ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಹಿರಿಯ ಸಂಸದ ಮತ್ತು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾ ನೂತನ ವಕ್ಫ್ ಮಸೂದೆಯನ್ನು ಬಲವಾಗಿ ಬೆಂಬಲಿಸಿದರು. ಈ ಕಾಯ್ದೆ ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುವುದಿಲ್ಲ. ಆದರೆ ಆದಾಯ ಮತ್ತು ಆಡಳಿತ ವಿಷಯಗಳಿಗೆ ಕಟ್ಟುನಿಟ್ಟಾಗಿ ಸಂಬಂಧಿಸಿದೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
***************************************************************************
3.ಪಿಡಿಎಸ್ ಮೂಲಕ ಅಡುಗೆ ಎಣ್ಣೆ, ಬೇಳೆಕಾಳು, ಇತರ ಆಹಾರ ಪದಾರ್ಥ ಪೂರೈಸಿ: ಕೇಂದ್ರಕ್ಕೆ ಮುನಿಯಪ್ಪ ಮನವಿ


ನವದೆಹಲಿ: ಸಚಿವ ಕೆ.ಎಚ್. ಮುನಿಯಪ್ಪ ಅವರು ಗುರುವಾರ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ, ರಾಜ್ಯದ ಪಡಿತರ ಚೀಟಿದಾರರಿಗೆ ಅಕ್ಕಿಯೊಂದಿಗೆ ಗೋಧಿ, ಸಕ್ಕರೆ, ಅಡುಗೆ ಎಣ್ಣೆ ಮತ್ತು ಬೇಳೆಕಾಳುಗಳಂತಹ ಹೆಚ್ಚುವರಿ ಆಹಾರ ಪದಾರ್ಥಗಳನ್ನು ವಿತರಿಸುವಂತೆ ಮನವಿ ಮಾಡಿದರು.
ಕೇಂದ್ರ ಸರ್ಕಾರಕ್ಕೆ ನೀಡಿದ ಮನವಿಯಲ್ಲಿ, ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಪಿಡಿಎಸ್ ಫಲಾನುಭವಿಗಳ ಪೈಕಿ ಶೇ. 92 ರಷ್ಟು ಪಡಿತರ ಚೀಟಿದಾರರು ಪಡಿತರ ಅಂಗಡಿಗಳ ಮೂಲಕ ಅಕ್ಕಿ ಜತೆ ಗೋಧಿ, ಸಕ್ಕರೆ, ಅಡುಗೆ ಎಣ್ಣೆ ಮತ್ತು ಬೇಳೆಯನ್ನು ವಿತರಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಎಂದು ರಾಜ್ಯ ಆಹಾರ ಸಚಿವರು ತಿಳಿಸಿದ್ದಾರೆ.
ಇದನ್ನು ಗಮನಿಸಿದರೆ, ಅಕ್ಕಿಯೊಂದಿಗೆ ಹೆಚ್ಚುವರಿ ಆಹಾರ ಪದಾರ್ಥಗಳನ್ನು ಪಡಿತರ ಅಂಗಡಿಗಳ ಮೂಲಕ ವಿತರಿಸುವುದರಿಂದ ಪಡಿತರ ಚೀಟಿದಾರರಿಗೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ ಎಂದು ಅವರು ಹೇಳಿದರು.
****************************************************************************************
4.ಮೇಕೆದಾಟು-ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಕೇಂದ್ರ ಜಲಶಕ್ತಿ ಸಚಿವರಿಗೆ CM ಸಿದ್ದರಾಮಯ್ಯ, DCM ಶಿವಕುಮಾರ್ ಮನವಿ!


ನವದೆಹಲಿ: ಕೇಂದ್ರ ಜಲಶಕ್ತಿ ಸಚಿವ ಸಿ ಆರ್ ಪಾಟೀಲ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್,ರು ಮೇಕೆದಾಟು ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ.
ರಾಜಸ್ಥಾನದ ನಂತರ ಕರ್ನಾಟಕವು ದೇಶದಲ್ಲಿ ಎರಡನೇ ಅತಿದೊಡ್ಡ ಒಣಭೂಮಿ ಪ್ರದೇಶವನ್ನು ಹೊಂದಿದೆ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಕೈಗೊಂಡು ಅನುಷ್ಠಾನಗೊಳಿಸಲಾಗುತ್ತಿರುವ ನೀರಾವರಿ ಯೋಜನೆಗಳು ಕೃಷಿ ಭೂದೃಶ್ಯವನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಕೇಂದ್ರ ಸಚಿವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಯೋಜನೆಗಳಿಗೆ ಅಗತ್ಯವಾದ ಅನುಮತಿಗಳು ಮತ್ತು ಅನುಮೋದನೆಗಳನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಸಿದ್ದರಾಮಯ್ಯ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು.
**************************************************************************************
5.ಪಿಎಫ್ ಹಣ ಹಿಂಪಡೆಯುವಿಕೆ ನಿಯಮ ಸರಳೀಕರಣ

ನವದೆಹಲಿ: ಭವಿಷ್ಯ ನಿಧಿ ಹಣ ಹಿಂಪಡೆಯುವ ವೇಳೆ ಚಂದಾದಾರರು ಇನ್ನು ಮುಂದೆ ಆನ್ಲೈನ್ನಲ್ಲಿ ರದ್ದು ಮಾಡಲಾದ ಚೆಕ್ ಅನ್ನು ಅಪ್ಲೋಡ್ ಮಾಡಬೇಕಿಲ್ಲ. ಜೊತೆಗೆ, ಅವರ ಬ್ಯಾಂಕ್ ಖಾತೆಯನ್ನು ಉದ್ಯೋಗದಾತ ಸಂಸ್ಥೆಯು ದೃಢೀಕರಿಸುವ ಅಗತ್ಯವಿಲ್ಲ ಎಂದು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಗುರುವಾರ ತಿಳಿಸಿದೆ.
ಪ್ರಸ್ತುತ ಚಂದಾದಾರರು ಆನ್ಲೈನ್ ಮೂಲಕ ಭವಿಷ್ಯ ನಿಧಿ ಹಣ ಹಿಂಪಡೆಯಲು ಅರ್ಜಿ ಸಲ್ಲಿಸುವ ವೇಳೆ ಚೆಕ್ ಪ್ರತಿಯ ಫೋಟೊ ಅಪ್ಲೋಡ್ ಮಾಡಬೇಕಿದೆ. ಅಥವಾ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಅಥವಾ ಪಿಎಫ್ ಸಂಖ್ಯೆ ಜೊತೆಗೆ ಜೋಡಣೆ ಆಗಿರುವ ಬ್ಯಾಂಕ್ ಖಾತೆಯ ಪಾಸ್ಬುಕ್ ಪ್ರತಿಯನ್ನು ಅಪ್ಲೋಡ್ ಮಾಡಬೇಕಿದೆ.
ಉದ್ಯೋಗದಾತ ಸಂಸ್ಥೆಯು ಚಂದಾದಾರರು ನಮೂದಿಸುವ ಬ್ಯಾಂಕ್ ಖಾತೆಯ ವಿವರಗಳಿಗೆ ಅನುಮೋದನೆ ನೀಡುವ ಅಗತ್ಯವಿತ್ತು. ಸಂಸ್ಥೆಯು ಇದನ್ನು ದೃಢೀಕರಿಸುವ ಅಗತ್ಯವಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.

