1 Donald Trump ಗೆ ಚೀನಾ ಸಡ್ಡು; ಅಮೆರಿಕ ಉತ್ಪನ್ನಗಳ ಮೇಲೆ ಶೇ.34 ರಷ್ಟು ತೆರಿಗೆ; ಮಾರುಕಟ್ಟೆ ತೀವ್ರ ಕುಸಿತ ಭೀತಿ!

ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಹೆಚ್ಚಳ ಕ್ರಮದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಉಂಟಾಗಿದ್ದು, ಇದರ ಬೆನ್ನಲ್ಲೇ ಇದೀಗ ಚೀನಾ ಕೂಡ ಅಮೆರಿಕಕ್ಕೆ ಸಡ್ಡು ಹೊಡೆದು ನಿಂತಿದೆ.
ವಿದೇಶ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ನಿರ್ಧಾರಕ್ಕೆ ಚೀನಾ ಸರ್ಕಾರ ಕೂಡ ತಿರುಗೇಟು ನೀಡಿದ್ದು, ಅಮೆರಿಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.34ಕ್ಕೆ ಏರಿಕೆ ಮಾಡಿದೆ.
ಆ ಮೂಲಕ ಚೀನಾ ಅಮೆರಿಕದ ಬಳಿಕೆ ತೆರಿಗೆ ಹೆಚ್ಚಳ ಮಾಡಿದ ಮೊದಲ ಪ್ರಮುಖ ದೇಶವಾಗಿದೆ. ಇನ್ನು ಅಮೆರಿಕ ಮತ್ತು ಚೀನಾ ದೇಶಗಳ ತೆರಿಗೆ ಏರಿಕೆಯು ಜಾಗತಿಕ ವ್ಯಾಪಾರ ಯುದ್ಧವು ಮಾರುಕಟ್ಟೆಗಳನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.
*************************************
2.ವಲಸಿಗರು ಮತ್ತು ವಿದೇಶಿಯರ ಮಸೂದೆ’ಗೆ ರಾಷ್ಟ್ರಪತಿ ಅಂಕಿತ: ಇನ್ನು ಇದು ಕಾಯ್ದೆ

ನವದೆಹಲಿ: ‘ವಲಸಿಗರು ಮತ್ತು ವಿದೇಶಿಯರ ಮಸೂದೆ 2025’ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಅಂಕಿತ ಹಾಕಿದ್ದು, ಕೇಂದ್ರ ಈ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈಗ ಇದು ಕಾಯ್ದೆಯಾಗಿದೆ. ಇದರ ಪ್ರಕಾರ, ನಕಲಿ ಪಾಸ್ಪೋರ್ಟ್ ಅಥವಾ ವೀಸಾ ಬಳಸಿ ದೇಶಕ್ಕೆ ಬಂದಿರುವ ಅಥವಾ ದೇಶದಲ್ಲಿ ನೆಲೆಯೂರಿರುವ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಏಳು ವರ್ಷ ಸಜೆ ಮತ್ತು ₹10 ಲಕ್ಷದವರೆಗೂ ದಂಡ ವಿಧಿಸಲು ಅವಕಾಶವಿದೆ. ವಿದೇಶಿಗರ ಚಲನೆ, ವಾಸ್ತವ್ಯ ಕುರಿತು ಕಣ್ಗಾವಲು ಇಡುವುದಕ್ಕೆ ಪೂರಕವಾಗಿ ಹೋಟೆಲ್ಗಳು, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ನರ್ಸಿಂಗ್ ಹೋಂಗಳವರು ವಿದೇಶಿಯರ ಕುರಿತು ಮಾಹಿತಿ ಒದಗಿಸುವುದೂ ಈ ಕಾಯ್ದೆಯಡಿ ಕಡ್ಡಾಯವಾಗಿದೆ.
*********************************************************************************
3.ವಕ್ಫ್ ಮಸೂದೆ ಚರ್ಚೆ: ಸಂಸತ್ ಬಜೆಟ್ ಅಧಿವೇಶನದಲ್ಲಿ ಶೇ.100 ರಷ್ಟು ಉತ್ಪಾದಕತೆ, ಇತಿಹಾಸ ಸೃಷ್ಟಿ!

ನವದೆಹಲಿ: ಎನ್ ಡಿಎ ಸರ್ಕಾರದ ಮೂರನೇ ಅವಧಿಯ ಅತ್ಯಂತ ಪರಿಣಾಮಕಾರಿಯಾದ ಶಾಸನ ಎಂಬ ಹೆಗ್ಗಳಿಕೆಗೆ ಪಾತ್ರವಾದ ವಕ್ಫ್ (ತಿದ್ದುಪಡಿ) ಮಸೂದೆಗೆ ಸಂಸತ್ತಿನ ಅನುಮೋದನೆ ಮತ್ತು ಸಂಸತ್ ನ ಒಳಗೆ ಮತ್ತು ಹೊರಗೆ ಅದು ಸೃಷ್ಟಿಸಿದ ರಾಜಕೀಯ ಬಿಸಿ ಶುಕ್ರವಾರ ಕೊನೆಗೊಂಡ ಬಜೆಟ್ ಅಧಿವೇಶನದ ದ್ವಿತೀಯಾರ್ಧವನ್ನು ವ್ಯಾಖ್ಯಾನಿಸಿದೆ.
ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ವಿರೋಧ ಪಕ್ಷ ಭಾರತ ಬಣಗಳ ನಡುವಿನ ವಾಕ್ಸಮರ, ಪ್ರತಿ-ಪ್ರಹಾರಗಳ ನಡುವೆ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ಶೇ. 100 ಕ್ಕಿಂತ ಹೆಚ್ಚು ಉತ್ಪಾದಕತೆಯನ್ನು ದಾಖಲಿಸಿವೆ.
********************************************************
4.ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸಿ: ಕೇಂದ್ರಕ್ಕೆ ಡಿಕೆಶಿ ಮನವಿ

ನವದೆಹಲಿ: ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶವನ್ನು ಒಳಗೊಂಡ ದಶಕಗಳಷ್ಟು ಹಳೆಯದಾದ ಕೃಷ್ಣಾ ನೀರು ಹಂಚಿಕೆ ವಿವಾದದ ಕುರಿತು ಒಮ್ಮತ ಮೂಡಿಸಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಭೆ ಕರೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ.
“ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಸಂಬಂಧಪಟ್ಟ ರಾಜ್ಯ ಸರ್ಕಾರಗಳೊಂದಿಗೆ ಶೀಘ್ರದಲ್ಲೇ ಸಭೆ ಕರೆಯಲು ಕೇಂದ್ರ ಒಪ್ಪಿಕೊಂಡಿದೆ” ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
*******************************************************************
5.ಮೈಸೂರು ಏರ್ಪೋರ್ಟ್ ರನ್ ವೇ ವಿಸ್ತರಣೆ ಕೆಲಸ ಆರಂಭಿಸಿ: ವಿಮಾನಯಾನ ಸಚಿವರಿಗೆ ಸಿದ್ದರಾಮಯ್ಯ ಮನವಿ ಪತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿ ಮಾಡಿ ಮೈಸೂರು, ಕಲಬುರಗಿ, ವಿಜಯಪುರ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕುರಿತು ಚರ್ಚಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.

