1. ಮತ್ತೆ ಬಡ್ಡಿ ದರ ಕಡಿತ; ಆರ್ಬಿಐ ಸಭೆ ಚರ್ಚೆ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಎರಡು ತಿಂಗಳಿಗೊಮ್ಮೆ ನಡೆಸುವ ಹಣಕಾಸು ನೀತಿ ಸಮಿತಿಯ ಸಭೆ ಸೋಮವಾರ ಪ್ರಾರಂಭವಾಗಿದೆ. ಹಣದುಬ್ಬರ ನಿಯಂತ್ರಿಸಲು, ಆರ್ಥಿಕ ಬೆಳವಣಿಗೆಗೆ ಬಲ ಒದಗಿಸಲು ಬ್ಯಾಂಕ್ ಸಾಲಗಳ ಬಡ್ಡಿ ದರವನ್ನು ಮತ್ತೆ 25 ಮೂಲಾಂಶಗಳಷ್ಟು ಇಳಿಸುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆದಿದೆ.
ಆರು ಸದಸ್ಯರ ಈ ಸಮಿತಿಯು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಕೇಂದ್ರ ಬ್ಯಾಂಕ್ನ ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದಿಂದ ನಿಯೋಜಿತರಾದ ಮೂವರು ವ್ಯಕ್ತಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.
ಬುಧವಾರ ಈ ಸಭೆಯ ನಿರ್ಧಾರಗಳು ಹೊರಬೀಳಲಿವೆ. ಕಳೆದ ಫೆಬ್ರವರಿಯಲ್ಲಿ ನಡೆದ ಸಭೆಯಲ್ಲಿ ಬಡ್ಡಿ ದರವನ್ನು 25 ಮೂಲಾಂಶಗಳಷ್ಟು ಇಳಿಸಲು ನಿರ್ಧರಿಸಲಾಗಿತ್ತು. 2020 ಮೇ ನಂತರದ ಅವಧಿಯಲ್ಲಿ ಅದೇ ಮೊದಲ ಇಳಿಕೆಯಾಗಿತ್ತು. ಈಗ ಮತ್ತೆ ದರ ಇಳಿಕೆ ಆಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
***************************************************
2.ಭಾರತಕ್ಕೆ ಹಸ್ತಾಂತರಿಸದಂತೆ ಮುಂಬೈ ದಾಳಿಯ ಸಂಚುಕೋರ ತಹವ್ವೂರ್ ರಾಣಾ ಸಲ್ಲಿಸಿದ್ದ ಅರ್ಜಿ ವಜಾ! Tahawwur Rana

Tahawwur Rana : ಮುಂಬೈ ಮೇಲೆ 2028ರ ನವೆಂಬರ್ 26ರಂದು ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾಗೆ ಭಾರಿ ಹಿನ್ನಡೆಯಾಗಿದೆ. ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಹಿಡಿಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ರಾಣಾನನ್ನು ಭಾರತಕ್ಕೆ ಮರಳಿ ಕರೆತರಲು ದಾರಿ ಸುಗಮವಾಗಿದೆ.
64 ವರ್ಷದ ರಾಣಾ, ಪ್ರಸ್ತುತ ಲಾಸ್ ಏಂಜಲೀಸ್ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿದ್ದಾನೆ. ತನ್ನನ್ನು ಭಾರತಕ್ಕೆ ಹಸ್ತಾಂತರ ಮಾಡುವುದನ್ನು ತಡೆಯಬೇಕೆಂದು ಕೋರಿ ಕಳೆದ ಫೆಬ್ರವರಿಯಲ್ಲಿ ಒಂಬತ್ತನೇ ಸರ್ಕ್ಯೂಟ್ನ ಸರ್ಕ್ಯೂಟ್ ನ್ಯಾಯಾಧೀಶರಿಗೆ ರಾಣಾ ತುರ್ತು ಅರ್ಜಿಯನ್ನ ಸಲ್ಲಿಸಿದ್ದ. ಆದರೆ, ಕಳೆದ ತಿಂಗಳು ಅದನ್ನು ನಿರಾಕರಿಸಲಾಯಿತು. ಇದಾದ ನಂತರ, ರಾಣಾ ತನ್ನ ತುರ್ತು ಅರ್ಜಿಯನ್ನು ಅಪ್ಡೇಟ್ ಮಾಡಿ, ಅದನ್ನು ಅಮೆರಿಕ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಾಬರ್ಟ್ಸ್ ಅವರಿಗೆ ನಿರ್ದೇಶಿಸುವಂತೆ ಕೋರಿದ್ದ. ಆ ಅರ್ಜಿಯ ವಿಚಾರಣೆ ಏಪ್ರಿಲ್ 4ರಂದು ನಡೆಯಿತು. ಅಂತಿಮವಾಗಿ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.
*********************************************************************************
3.ಕಲುಷಿತ ನೀರು ಕೆರೆಗಳ ಸೇರದಂತೆ ಕ್ರಮ ವಹಿಸಿ: ಅಧಿಕಾರಿಗಳಿಗೆ DCM ಡಿಕೆ.ಶಿವಕುಮಾರ್ ಸೂಚನೆ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಕೆರೆಗಳಿಗೆ ಕಲುಷಿತ ನೀರು ಹರಿಯುವುದನ್ನು ತಡೆಯಲು ಮತ್ತು ಎಲ್ಲಾ ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೋಮವಾರ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೆರೆಗಳ ಸಂರಕ್ಷಣೆ, ಕಸ ವಿಲೇವಾರಿ ಮತ್ತು ಇತರ ವಿಷಯಗಳ ಕುರಿತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡ ಶಿವಕುಮಾರ್ ಅವರು, “ಸಂಸ್ಕರಿತ ನೀರಿನಿಂದ ಕೆರೆಗಳನ್ನು ತುಂಬಿಸುವ ಜವಾಬ್ದಾರಿಯನ್ನು ಬಿಡಬ್ಲ್ಯೂಎಸ್ಎಸ್ಬಿಗೆ ವಹಿಸಲು ನಿರ್ಧರಿಸಲಾಗಿದೆ” ಎಂದು ಹೇಳಿದರು.
***********************************************************************
4.ಬೆದರಿಕೆ ತಂತ್ರ’ಕ್ಕೆ ಬಗ್ಗಲ್ಲ, ಅಂತ್ಯದವರೆಗೂ ಹೋರಾಡಲು ಸಿದ್ಧ: ಟ್ರಂಪ್ ಸುಂಕ ಬೆದರಿಕೆ ಚೀನಾ ತಿರುಗೇಟು

ಬೀಜಿಂಗ್: ಚೀನಾ ಪ್ರತೀಕಾರದ ತೆರಿಗೆ ಹಿಂಪಡೆಯದಿದ್ದರೆ ಆ ರಾಷ್ಟ್ರದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಚೀನಾ ಕಿಡಿಕಾರಿದೆ.
ಟ್ರಂಪ್ ಸುಂಕ ಬೆದರಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಚೀನಾದ ವಾಣಿಜ್ಯ ಸಚಿವಾಲಯವು, ಇದು ಬೆದರಿಕೆಯ ತಂತ್ರವಾಗಿದ್ದು. ನಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಅಂತ್ಯದವರೆಗೂ ಹೋರಾಡಲು ಸಿದ್ಧ ಎಂದು ಹೇಳಿದೆ.
ಚೀನಾ ತೆಗೆದುಕೊಂಡ ಕ್ರಮಗಳು ನಮ್ಮ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಕ್ರಮವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿವೆ. ಅವು ಸಂಪೂರ್ಣ ನ್ಯಾಯಸಮ್ಮತವಾಗಿವೆ. ಆದರೆ, ಪ್ರತಿಯಾಗಿ ಅಮೆರಿಕಾ ನೀಡುತ್ತಿರುವ ಸುಂಕವು ಬೆದರಿಕೆಯ ತಂತ್ರವಾಗಿದ್ದು, ಇದು ಅಮೆರಿಕಾದ ಬ್ಲ್ಯಾಕ್ ಮೇಲ್ ಮಾಡುವ ಸ್ವಭಾವವನ್ನು ಬಹಿರಂಗಪಡಿಸುತ್ತಿದೆ. ನಾವು ಇದನ್ನು ಎಂದಿಗೂ ಒಪ್ಪುವುದಿಲ್ಲ. ಬೆದರಿಕೆ ತಂತ್ರಗಳಿಗೆ ನಾವು ಬಗ್ಗುವುದಿಲ್ಲ. ಈ ನಿಟ್ಟಿನಲ್ಲಿ ಅಂತ್ಯದ ವರೆಗೂ ಹೋರಾಡಲು ಸಿದ್ಧ ಎಂದು ಹೇಳಿದೆ.
****************************************************************
5.ರಾಜ್ಯದ ಬೀದಿ ವ್ಯಾಪಾರಿಗಳ ಕುರಿತು ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ರಾಹುಲ್ ಗಾಂಧಿ ಕಳವಳ!

ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಅವಕಾಶಗಳನ್ನು ಕಲ್ಪಿಸಲು ರಾಜ್ಯ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕದಲ್ಲಿ ಬೀದಿ ವ್ಯಾಪಾರಿಗಳ ಸ್ಥಿತಿಯ ಬಗ್ಗೆ ರಾಹುಲ್ ಗಾಂಧಿ ಮುಖ್ಯಮಂತ್ರಿಗೆ ಬರೆದ ಪತ್ರದ ಮೂಲಕ ಕಳವಳ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ, ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಬೆಂಗಳೂರಿನಲ್ಲಿ 27,655 ಮಾರಾಟಗಾರರನ್ನು ನೋಂದಾಯಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಬೀದಿ ವ್ಯಾಪಾರಿಗಳ ಒಟ್ಟಾರೆ ಯೋಗಕ್ಷೇಮಕ್ಕೆ ಬದ್ಧವಾಗಿದೆ ಮತ್ತು ಅವರ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ ಎಂದು ಸಿಎಂ ಭರವಸೆ ನೀಡಿದ್ದಾರೆ.
*****************************************************************************
6.ಐಪಿಎಲ್ ಬೆಟ್ಟಿಂಗ್ ಪ್ರಮೋಷನ್ ಮಾಡಿದ 40 ಇನ್ಫ್ಲುಯೆನ್ಸ್ರ್ಸ್; ಬಿಸಿ ಮುಟ್ಟಿಸಿದ ಸೈಬರ್ ಪೊಲೀಸರು

ಐಪಿಎಲ್ ಸೀಸನ್ನಲ್ಲಿ ಬೆಟ್ಟಿಂಗ್ ಪ್ರಚಾರ ಮಾಡುತ್ತಿದ್ದ 40ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಗಳ ಮೂಲಕ ಬೆಟ್ಟಿಂಗ್ ಲಿಂಕ್ಗಳನ್ನು ಹಂಚಿಕೊಳ್ಳುತ್ತಿದ್ದ ಇವರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಇದು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
