1.ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಅಮೆರಿಕ ಸುಂಕ: ಚೀನಾದೊಂದಿಗೆ ಒಟ್ಟಾಗಿ ನಿಲ್ಲುವಂತೆ ಭಾರತಕ್ಕೆ ಒತ್ತಾಯ!

ನವದೆಹಲಿ: ಅಮೆರಿಕದ ಸುಂಕಗಳಿಂದ ಎದುರಾಗಿರುವ ಸವಾಲುಗಳನ್ನು ನಿವಾರಿಸಲು ಭಾರತ ಮತ್ತು ಚೀನಾ ಒಂದಾಗಬೇಕು ಎಂದು ನವದೆಹಲಿಯಲ್ಲಿರುವ ಚೀನಾ ರಾಯಭಾರಿ ಕಚೇರಿಯ ವಕ್ತಾರ ಯು ಜಿಂಗ್ ಮಂಗಳವಾರ ಹೇಳಿದ್ದಾರೆ.
“ಚೀನಾ ಮತ್ತು ಭಾರತದ ನಡುವಿನ ಆರ್ಥಿಕ ಮತ್ತು ವ್ಯಾಪಾರ ಸಂಬಂಧ ಗುಣಮಟ್ಟ ಮತ್ತು ಪರಸ್ಪರ ಲಾಭದ ಮೇಲೆ ಸ್ಥಾಪಿತವಾಗಿದೆ. ಅಮೆರಿಕದ ಸುಂಕ ದುರುಪಯೋಗ ದಕ್ಷಿಣ ಎರಡು ಪ್ರಬಲ ರಾಷ್ಟ್ರಗಳಾದ ಚೀನಾ, ಭಾರತದ ಅಭಿವೃದ್ಧಿ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ. ಈ ಸವಾಲುಗಳನ್ನು ಎದುರಿಸಲು ಒಗ್ಗಟ್ಟಾಗಿ ನಿಲ್ಲಬೇಕು” ಎಂದು ಅವರು ಹೇಳಿದರು.
ಚೀನಾದ ಆರ್ಥಿಕತೆಯು ಸ್ಥಿರವಾದ ಬೆಳವಣಿಗೆ ಮತ್ತು ಜಾಗತಿಕ ಸಕಾರಾತ್ಮಕ ಪ್ರಯೋಜನಕಾರಿಯಾದ ದೃಢವಾದ ವ್ಯವಸ್ಥೆಯಿಂದ ಬೆಂಬಲಿತವಾಗಿದೆ. ಚೀನಾ ಆರ್ಥಿಕ ಜಾಗತೀಕರಣ ಮತ್ತು ಬಹುಪಕ್ಷೀಯತೆಯನ್ನು ದೃಢವಾಗಿ ಬೆಂಬಲಿಸುತ್ತದೆ, ಇದು ಜಾಗತಿಕ ಆರ್ಥಿಕ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡಿದೆ ಎಂದು ತಿಳಿಸಿದರು.
**********************************************
2.ವಕ್ಫ್ ಕಾಯ್ದೆ ವಿರುದ್ಧ ಅರ್ಜಿ: ಸುಪ್ರೀಂ ಕೋರ್ಟ್ ಗೆ ಕೇವಿಯಟ್ ಸಲ್ಲಿಸಿದ ಕೇಂದ್ರ, ಏಪ್ರಿಲ್ 15ಕ್ಕೆ ವಿಚಾರಣೆ ಸಾಧ್ಯತೆ

ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆ, 2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಈ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 15 ರಂದು ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಈ ಮಧ್ಯೆ, ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ನಲ್ಲಿ ಕೇವಿಯಟ್ ಸಲ್ಲಿಸಿದ್ದು, ವಕ್ಫ್ ಕಾಯ್ದೆ ವಿಚಾರದಲ್ಲಿ ಯಾವುದೇ ಆದೇಶ ಹೊರಡಿಸುವ ಮುನ್ನ ವಿಚಾರಣೆ ನಡೆಸುವಂತೆ ಕೋರಿದೆ.
ಹೈಕೋರ್ಟ್ಗಳು ಮತ್ತು ಸುಪ್ರೀಂ ಕೋರ್ಟ್ನಲ್ಲಿ ಯಾವುದೇ ಅರ್ಜಿಯ ಬಗ್ಗೆ ವಿಚಾರಣೆ ಮಾಡದೆ ಯಾವುದೇ ಆದೇಶ ಹೊರಡಿಸದಂತೆ ನೋಡಿಕೊಳ್ಳಲು ಕೇವಿಯಟ್ ಅನ್ನು ಸಲ್ಲಿಸಲಾಗುತ್ತದೆ.
ಕಳೆದ ವಾರ ಸಂಸತ್ತು ಅಂಗೀಕರಿಸಿದ ವಕ್ಫ್ (ತಿದ್ದುಪಡಿ) ಕಾಯ್ದೆಗೆ ಏಪ್ರಿಲ್ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿದ್ದು, ಇಂದಿನಿಂದ ಹೊಸ ಕಾಯ್ದೆ ಜಾರಿಗೆ ಬರಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಇಂದು ಅಧಿಸೂಚನೆ ಹೊರಡಿಸಿದೆ.
********************************************************************
3.ಪಕ್ಷದ ಹಲವಾರು ನಾಯಕರು KPCC ಹುದ್ದೆ ರೇಸ್ ನಲ್ಲಿದ್ದಾರೆ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ಕೆಪಿಸಿಸಿ ಉನ್ನತ ಹುದ್ದೆಗೆ ನಾನೂ ಸೇರಿದಂತೆ ಇನ್ನೂ ಹಲವಾರು ನಾಯಕರು ಸ್ಪರ್ಧೆಯಲ್ಲಿದ್ದಾರೆಂದು ಸಚಿವ ಸತೀಶ್ ಜಾರಕಿಹೊಳಿಯವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೊಬ್ಬನೇ ಅಲ್ಲ ಇನ್ನೂ ಹಲವಾರು ನಾಯಕರು ಸ್ಪರ್ಧೆಯಲ್ಲಿದ್ದಾರೆ. ಆದರೆ, ಈ ಬಗ್ಗೆ ಪಕ್ಷದ ಹೈಕಮಾಂಡ್ ಸೂಕ್ತ ಸಮಯಕ್ಕೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
*************************************************************
4. ಸರ್ಕಾರಿ ಜಮೀನು ಒತ್ತುವರಿ ಆರೋಪ: ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ!

ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ನಡುವಿನ ಸಂಘರ್ಷ ಮುಂದುವರೆದಿದೆ. ಈ ಕೇತಗಾನಹಳ್ಳಿ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಂತದ ಕ್ರಮಕೈಗೊಳ್ಳುವುದಿಲ್ಲವೆಂಬ ಮುಚ್ಚಳಿಕೆಯನ್ನು ಇದೀಗ ಸರ್ಕಾರ ಹಿಂಪಡೆದುಕೊಂಡಿದೆ. ಈ ಮೂಲಕ ಕುಮಾರಸ್ವಾಮಿಗೆ ಶಾಕ್ ಕೊಟ್ಟಿದೆ.
*******************************************************************
5.ಜಿಲ್ಲಾ ಸಹಕಾರಿ ಬ್ಯಾಂಕ್ ಹಗರಣ: ಬೆಂಗಳೂರು, ಶಿವಮೊಗ್ಗದಲ್ಲಿ 10 ಕಡೆ ಇಡಿ ದಾಳಿ

ಬೆಂಗಳೂರು: ಜಿಲ್ಲಾ ಸಹಕಾರಿ ಕೇಂದ್ರ(ಡಿಸಿಸಿ) ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಬೆಂಗಳೂರು ಮತ್ತು ಶಿವಮೊಗ್ಗದ 10 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ, ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ತನಿಖಾ ಸಂಸ್ಥೆ ಬೆಂಗಳೂರು ಮತ್ತು ಶಿವಮೊಗ್ಗದ 10 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿದೆ.
ಅಧಿಕಾರಿಗಳ ಪ್ರಕಾರ, ಸಹಕಾರಿ ಬ್ಯಾಂಕಿಗೆ ಸಂಬಂಧಿಸಿದ ಹಣಕಾಸು ಅಕ್ರಮಗಳು ಮತ್ತು ಹಣ ವರ್ಗಾವಣೆಗೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ.
