1.ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ಮಸೂದೆ ರಾಷ್ಟ್ರಪತಿಗೆ ರವಾನಿಸಿದ ಗವರ್ನರ್ ಗೆಹ್ಲೋಟ್


ಬೆಂಗಳೂರು: ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಿದ್ದಾರೆ ಎಂದು ರಾಜಭವನದ ಮೂಲಗಳು ಬುಧವಾರ ತಿಳಿಸಿವೆ.
ಮೂಲಗಳ ಪ್ರಕಾರ, ಗೆಹ್ಲೋಟ್ ಅವರು ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸಿ ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗೆ ಕಳುಹಿಸಿದ್ದಾರೆ.
*****
2.ಕೇಂದ್ರದ ಕೈಗೊಂಬೆಯಾಗಿರುವ EDಯನ್ನು ಮುಚ್ಚಬೇಕು: ಅಖಿಲೇಶ್ ಯಾದವ್
ಭುವನೇಶ್ವರ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಚಾರ್ಜ್ ಶೀಟ್ ಸಲ್ಲಿಸಿದ ಬೆನ್ನಲ್ಲೇ ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬುಧವಾರ EDಯನ್ನು ಮುಚ್ಚಬೇಕು ಎಂದು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶ್ರೀಕಾಂತ್ ಜೆನಾ ಅವರೊಂದಿಗೆ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್ ಅವರು, ಇಡಿ ಕೇಂದ್ರದ ಕೈಗೊಂಬೆಯಾಗಿದ್ದು, ಈಗ ಅದನ್ನು ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡಲು ಮತ್ತು ಅವರ ಧ್ವನಿ ಅಡಗಿಸಲು ಒಂದು ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.
*****
3.ಇದು ಜಾತಿಗಣತಿಯಲ್ಲ, ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ; ಯಾರಿಗೂ ಅನ್ಯಾಯವಾಗಲು ಬಿಡಲ್ಲ: ಸಿಎಂ ಸಿದ್ದರಾಮಯ್ಯ

ಕಲಬುರಗಿ: ಇದು ಜಾತಿಗಣತಿ ಅಲ್ಲ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದರಿಂದ ಯಾರಿಗೂ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ವಿಭಾಗ ಮಟ್ಟದ ಉದ್ಯೋಗ ಮೇಳದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಚಿವರಿಗೆ ಅವಕಾಶ ನೀಡಲಾಗುವುದು. ಇದು ಜನಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಷ್ಟೇ. ಆದರೂ, ಯಾರಿಗೂ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ. ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ಅಭಿಪ್ರಾಯಗಳನ್ನೂ ಆಲಿಸಲಾಗುವುದು ಎಂದು ಹೇಳಿದರು.
*****
4.ಭೋವಿ ಅಭಿವೃದ್ಧಿ ನಿಗಮ ಅಕ್ರಮ: ಕೆಬಿಡಿಸಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಬಂಧಿಸಿದ ED


ನವದೆಹಲಿ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ (ಕೆಬಿಡಿಸಿ) ದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಬುಧವಾರ ಮತ್ತೊಬ್ಬರನ್ನು ಬಂಧಿಸಿದೆ.
ಕೆಬಿಡಿಸಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಆರ್ ಲೀಲಾವತಿ ಅವರನ್ನು ಏಪ್ರಿಲ್ 12 ರಂದು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಲ್ಲಿ ವಿಶೇಷ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಮುಂದೆ ಅವರನ್ನು ಹಾಜರುಪಡಿಸಿ, ಇಡಿ ಕಸ್ಟಡಿಗೆ ಪಡೆಯಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
*****
5.ಸಚಿವರು ತಮ್ಮ ಸಮುದಾಯಗಳ ಪರವಾಗಿ ನಿಲ್ಲುವುದು ಸಾಮಾನ್ಯ: ಸಚಿವ ಸತೀಶ್ ಜಾರಕಿಹೊಳಿ


ಹುಬ್ಬಳ್ಳಿ: ಸಾರ್ವಜನಿಕ ಪ್ರತಿನಿಧಿಗಳು ತಮ್ಮ ಸಮುದಾಯಗಳ ಪರವಾಗಿ ನಿಲ್ಲುವುದು ಸಾಮಾನ್ಯ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಬುಧವಾರ ಹೇಳಿದ್ದಾರೆ.
ಬುಧವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಜಾರಿಗೆ ತರಲು ಕಾಂಗ್ರೆಸ್ ಪಕ್ಷದಲ್ಲಿ ಪರ ಮತ್ತು ವಿರೋಧಗಳಿದ್ದು, ಇಂತಹ ಪರಿಸ್ಥಿತಿ ವೇಳೆ ಸಾರ್ವಜನಿಕ ಪ್ರತಿನಿಧಿಗಳು ತಮ್ಮ ಸಮುದಾಯಗಳ ಪರವಾಗಿ ನಿಲ್ಲುವುದು ಸಾಮಾನ್ಯವಾಗಿದೆ ಎಂದು ಹೇಳಿದರು.
ಯಾವುದೇ ವಿಷಯದ ಕುರಿತು ಯಾವುದೇ ವರದಿ ಬಿಡುಗಡೆಯಾದಾಗಲೆಲ್ಲಾ, ಬೆಂಬಲಿಗರು ಮತ್ತು ವಿರೋಧ ಪಕ್ಷಗಳೆರಡರೊಂದಿಗೂ ಚರ್ಚೆ ನಡೆಸುವುದು ಸಾಮಾನ್ಯ. ವರದಿಯ ಕುರಿತು, ಕೆಲವರು ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೆ, ಇತರರು ಖಾಸಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಸಚಿವ ಸಂಪುಟ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆಂದು ತಿಳಿಸಿದರು.

