ಶುಭೋದಯ
ನೀವು ಸೇವಿಸುವ ಅನ್ನವನ್ನು ಬೇಯಿಸುವ ನೀರು ,
ನಿಮ್ಮ ದುಡಿಮೆಯ ಬೆವರೋ ಅಥವಾ ಬೇರೆಯವರ ಕಣ್ಣೀರೋ !
– ಡಿ.ವಿ.ಜಿ.
*******************************************************************
1.ದೆಹಲಿ ನ್ಯಾಯಮೂರ್ತಿ ವರ್ಗಾವಣೆಗೂ ನಗದು ತನಿಖೆಗೂ ಸಂಬಂಧವಿಲ್ಲ; ಸುಪ್ರೀಂ ಕೋರ್ಟ್
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮ ಅವರ ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆಗೂ ಅವರ ನಿವಾಸದಿಂದ ನಗದು ವಶಪಡಿಸಿಕೊಳ್ಳುವಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಸ್ಪಷ್ಟಪಡಿಸಿದೆ. ಆಂತರಿಕ ವಿಚಾರಣೆಯು ಕಾರ್ಯವಿಧಾನದ ಪ್ರಕಾರ ಪ್ರತ್ಯೇಕವಾಗಿ ನಡೆಯುತ್ತಿದೆ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ದೆಹಲಿ ನಿವಾಸದ ವಿವಿಧ ಕೋಣೆಗಳಲ್ಲಿ ಬೆಂಕಿಯ ನಂತರ ಅಗ್ನಿಶಾಮಕ ದಳದವರು ದೊಡ್ಡ ಪ್ರಮಾಣದ ಹಣವನ್ನು ಪತ್ತೆ ಮಾಡಿದ್ದಾರೆ ಎಂಬ ವರದಿಗಳು ಬಂದ ನಂತರ ವಿವಾದ ಭುಗಿಲೆದ್ದಿತು.

****************************************************
2.ಗೆಜೆಟೆಡ್ ಗ್ರೂಪ್ ಎ ಮತ್ತು ಬಿ ವೃಂದದ ಪರೀಕ್ಷೆ ಮುಂದೂಡಿದ KPSC
KPSC: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) 2023-24ನೇ ಸಾಲಿನ ಗೆಜೆಟೆಡ್ ಗ್ರೂಪ್ ಎ ಮತ್ತು ಬಿ ವೃಂದದ 384 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಿದೆ. ಇದೇ ಮಾರ್ಚ್ 28, 29 ಮತ್ತು ಏ.1, 2ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಶುಕ್ರವಾರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಸರ್ಕಾರ, ಮಾರ್ಚ್ 28, 29 ಮತ್ತು ಏ.1, 2ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಶೀಘ್ರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ವೆಬ್ಸೈಟ್ನಲ್ಲಿ ಮುಂದಿನ ದಿನಾಂಕದ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿಲಾಗುವುದು ಎಂದು ಉಲ್ಲೇಖಿಸಿದ್ದಾರೆ.

*****************************************************************
3.ನಾಗ್ಪುರ ಗಲಭೆ: 3 ಹೊಸ FIR; 105 ಜನರ ಬಂಧನ
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಕೆಲ ದಿನಗಳ ಹಿಂದೆ ನಡೆದ ಗಲಭೆಗೆ ಸಂಬಂಧಿಸಿದಂತೆ ಶುಕ್ರವಾರ 14 ಜನರನ್ನು ಬಂಧಿಸಿ ಮೂರು ಹೊಸ ಎಫ್ಐಆರ್ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಇದರಿಂದಾಗಿ ಬಂಧಿತರ ಸಂಖ್ಯೆ 105ಕ್ಕೆ ಏರಿದೆ.
ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನಾಗ್ಪುರದಲ್ಲಿ ಮಾರ್ಚ್ 17ರಂದು ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ಕಾರಣವಾಗಿತ್ತು. ಕುರಾನ್ ಮತ್ತು ಅದಕ್ಕೆ ಹೊದಿಸಿದ್ದ ವಸ್ತ್ರ ಸುಡಲಾಗಿದೆ ಎಂಬ ವದಂತಿ ಕಾಳ್ಗಿಚ್ಚಿನಂತೆ ಹರಡಿದ ಪರಿಣಾಮ ಗಲಭೆ ನಡೆಸಿದವರು, ಕಲ್ಲು ಹಾಗೂ ಪೆಟ್ರೋಲ್ ಬಾಂಬ್ಗಳನ್ನು ಪೊಲೀಸರತ್ತ ಎಸೆದು, ಹಲವು ವಾಹನಗಳನ್ನು ಸುಟ್ಟು ಹಾಕಿದ್ದರು.

****************************************************
4.ಹನಿ ಟ್ರ್ಯಾಪ್’ ಪ್ರಕರಣ: ಯಾರನ್ನೂ ರಕ್ಷಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ‘ಹನಿ ಟ್ರ್ಯಾಪ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್.ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದು. ಈ ಪ್ರಕರಣದಲ್ಲಿ ತಪ್ಪೆಸಗಿರುವ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ‘ಪರಿಶಿಷ್ಟ ವರ್ಗದ ನಾಯಕರೂ ಆಗಿರುವ ರಾಜಣ್ಣ ಮಾಡಿರುವ ಆರೋಪಕ್ಕೆ ಗೃಹ ಸಚಿವರು ಈಗಾಗಲೇ ಉತ್ತರ ನೀಡಿದ್ದಾರೆ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲೇಬೇಕು. ರಾಜಣ್ಣ ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ ಎಂದು ಪರಮೇಶ್ವರ ಹೇಳಿದ್ದಾರೆ. ಹನಿ ಟ್ರ್ಯಾಪ್ ಯಾರೇ ಮಾಡಿಸಿದರೂ ಅದು ತಪ್ಪು’ ಎಂದರು.

******************************************************
5.ಸಿಎಂ, ಸಚಿವರು, ಶಾಸಕರ ವೇತನ ಶೇ.100ರಷ್ಟು ಹೆಚ್ಚಳ: ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ
ಬೆಂಗಳೂರು: ಮುಖ್ಯಮಂತ್ರಿ ಹಾಗೂ ಎಲ್ಲಾ ಶಾಸಕರಿಗೆ ವೇತನವನ್ನು ಶೇ.100 ರಷ್ಟು ಹೆಚ್ಚಳ ಮಾಡುವ ವಿಧೇಯಕ ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಇದರಿಂದ ಪ್ರತಿ ವರ್ಷ ಖಜಾನೆಗೆ ರೂ. 62 ಕೋಟಿ ಹೊರೆಯಾಗಲಿದೆ ಎನ್ನಲಾಗಿದೆ.

**********************************************************
ಜಾಹೀರಾತು

https://vicharavisthara.com/todays-highlights-from-vichara%f0%9f%8c%8fvisthara-2/
ವಿಚಾರ 🌏 ವಿಸ್ತಾರದ ಇಂದಿನ ಮುಖ್ಯಾಂಶಗಳು

[…] https://vicharavisthara.com/morning-quick-news-time-22-03-2025/ […]