ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ: ಸೇನಾ ಮುಖ್ಯಸ್ಥರ ಹಾಟ್ಲೈನ್ ಮಾತುಕತೆ; ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ!

ನವದೆಹಲಿ: ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕ್ ಗಡಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ದಾಳಿ ಮುಂದುವರೆಸಿರುವಂತೆಯೇ ಇತ್ತ ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಹೌದು.. ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಬುಧವಾರ ಹಾಟ್ಲೈನ್ನಲ್ಲಿ ಚರ್ಚೆ ನಡೆಸಿದ್ದು, ಈ ವೇಳೆ ಪಾಕಿಸ್ತಾನ ಸೇನೆಗೆ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಕುರಿತು ಭಾರತ ಎಚ್ಚರಿಕೆ ನೀಡಿದೆ.
*****
ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ; ಪಾಕಿಸ್ತಾನದ ವಿಮಾನಗಳು, ಮಿಲಿಟರಿ ವಿಮಾನಗಳಿಗೆ ಭಾರತದ ವಾಯುಮಾರ್ಗ ಬಂದ್

India-Pakistan Tensions: ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿಮಾನಗಳು, ಮಿಲಿಟರಿ ವಿಮಾನಗಳಿಗೆ ವಾಯುಪ್ರದೇಶವನ್ನು ಮುಚ್ಚಿದೆ. ಇಂದು ಈ ಬಗ್ಗೆ ಭಾರತ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಪಾಕಿಸ್ತಾನ ಭಾರತದ ವಿಮಾನ ಸಂಸ್ಥೆಗಳಿಗೆ ವಾಯುಮಾರ್ಗವನ್ನು ಬಂದ್ ಮಾಡಿತ್ತು. ಅದಕ್ಕೆ ತಿರುಗೇಟು ನೀಡಿರುವ ಭಾರತ ಕೂಡ ಅದೇ ನಿರ್ಧಾರವನ್ನು ತೆಗೆದುಕೊಂಡಿದೆ. ಪಹಲ್ಗಾಮ್ ದಾಳಿಯ ಉದ್ವಿಗ್ನತೆಯ ನಡುವೆ ಭಾರತವು ಪಾಕಿಸ್ತಾನ ವಿಮಾನಯಾನ ಸಂಸ್ಥೆಗಳಿಗೆ ವಾಯುಪ್ರದೇಶವನ್ನು ಮುಚ್ಚಿದ್ದು, ಮೇ 23ರವರೆಗೆ NOTAM ಹೊರಡಿಸಿದೆ.
****
ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಸೇರಿಸಲು ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ!

ನವದೆಹಲಿ: ಮುಂದಿನ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಜನಗಣತಿಯನ್ನು “ಪಾರದರ್ಶಕ ರೀತಿಯಲ್ಲಿ” ಸೇರಿಸಲಾಗುವುದು ಎಂದು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಬುಧವಾರ ಘೋಷಿಸಿದರು.
ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. “ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯು ಮುಂಬರುವ ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಸೇರಿಸಲು ನಿರ್ಧರಿಸಿದೆ” ಎಂದು ಕೇಂದ್ರ ಸಚಿವರು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಜನಗಣತಿ ಕಾರ್ಯ ಏಪ್ರಿಲ್ 2020 ರಲ್ಲಿ ಪ್ರಾರಂಭವಾಗಬೇಕಿತ್ತು ಆದರೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಯಿತು. 10 ವರ್ಷಗಳ ವೇಳಾಪಟ್ಟಿಯ ಪ್ರಕಾರ ಈ ಕಾರ್ಯ ನಡೆದಿದ್ದರೆ, ವರದಿಯು 2021 ರಲ್ಲಿ ಪ್ರಕಟವಾಗುತ್ತಿತ್ತು.
****
ರಾಷ್ಟ್ರೀಯ ಭದ್ರತಾ ಮಂಡಳಿಯ ಪರಿಷ್ಕರಣೆ: RAW ಮಾಜಿ ಮುಖ್ಯಸ್ಥ ಅಲೋಕ್ ಜೋಶಿ ನೂತನ ಅಧ್ಯಕ್ಷ


ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯನ್ನು (NSAB) ಪರಿಷ್ಕರಿಸಿದೆ, ಸಶಸ್ತ್ರ ಪಡೆಗಳು, ಗುಪ್ತಚರ, ರಾಜತಾಂತ್ರಿಕತೆ ಮತ್ತು ಪೊಲೀಸ್ ಸೇವೆಗಳ ಉನ್ನತ ಮಾಜಿ ಅಧಿಕಾರಿಗಳನ್ನು ಮಂಡಳಿಗೆ ಸೇರಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುತ್ತಿರುವ ವಿಶಾಲವಾದ ರಾಷ್ಟ್ರೀಯ ಭದ್ರತಾ ಮರುಮಾಪನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಮಾಜಿ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗದ (R&AW) ಮುಖ್ಯಸ್ಥ ಅಲೋಕ್ ಜೋಶಿ ಅವರನ್ನು ಎನ್ ಎಸ್ ಎಬಿಯ ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರು ಭಾರತದ ಮಿಲಿಟರಿ, ಪೊಲೀಸ್ ಮತ್ತು ವಿದೇಶಿ ಸೇವೆಗಳ ನಿವೃತ್ತ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಏಳು ಸದಸ್ಯರ ಮಂಡಳಿಯನ್ನು ಮುನ್ನಡೆಸಲಿದ್ದಾರೆ. ಇವರಲ್ಲಿ ಮಾಜಿ ಪಶ್ಚಿಮ ವಾಯು ಕಮಾಂಡರ್ ಏರ್ ಮಾರ್ಷಲ್ ಪಿ.ಎಂ. ಸಿನ್ಹಾ, ಮಾಜಿ ದಕ್ಷಿಣ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎ.ಕೆ. ಸಿಂಗ್ ಮತ್ತು ಸಶಸ್ತ್ರ ಪಡೆಗಳ ರಿಯರ್ ಅಡ್ಮಿರಲ್ ಮಾಂಟಿ ಖನ್ನಾ ಸೇರಿದ್ದಾರೆ. ಒಟ್ಟು ಆರು ಮಂದಿ ಸದಸ್ಯರನ್ನು ಮಂಡಳಿಗೆ ಸೇರ್ಪಡೆ ಮಾಡಲಾಗಿದೆ.
****
ಅಮುಲ್ ಹಾಲಿನ ದರ ಏರಿಕೆ: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಬರೆ

ಅಮುಲ್ ಹಾಲಿನ ದರ ಹೆಚ್ಚಳ: ಹಾಲು ಮತ್ತು ಡೈರಿ ಉತ್ಪನ್ನಗಳ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಅಮುಲ್ ಕಂಪನಿ ಹಾಲಿನ ಬೆಲೆಯನ್ನು ಲೀಟರ್ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಪರಿಷ್ಕೃತ ಬೆಲೆ ದೇಶಾದ್ಯಂತ ಇಂದಿನಿಂದಲೇ ಜಾರಿಗೆ ಬಂದಿದೆ. 2024 ರ ಜೂನ್ನಿಂದ ಹಾಲಿ ಬೆಲೆಯಲ್ಲಿ ಯಾವುದೇ ಏರಿಕೆ ಮಾಡಿಲ್ಲ ಎಂದು ಕಂಪನಿ ತಿಳಿಸಿದೆ.
****
ಕೇರಳದ ಮೊಹಮ್ಮದ್ ಅಶ್ರಫ್ ಹತ್ಯೆ ಪ್ರಕರಣ: ಪಾಕ್ ಬೆಂಬಲಿಸುವುದು ದೇಶದ್ರೋಹ; ಹತ್ಯೆಕೋರರಿಗೆ ಶಿಕ್ಷೆಯಾಗಲಿದೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಯಾರೇ ಆಗಲಿ ಪಾಕಿಸ್ತಾನದ ಪರವಾಗಿ ಮಾತನಾಡುವುದು ತಪ್ಪು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಂತಹ ನಡೆ ದೇಶಕ್ಕೆ ದ್ರೋಹ ಬಗೆಯುವುದು ಅಥವಾ ದೇಶದ್ರೋಹವಾಗುತ್ತದೆ ಎಂದು ಹೇಳಿದರು. ಇದೇ ವೇಳೆ ರಾಜ್ಯದ ಮಂಗಳೂರು ನಗರದಲ್ಲಿ ನಡೆದ ಗುಂಪು ಹತ್ಯೆ ಘಟನೆಯನ್ನು ಸಿದ್ದರಾಮಯ್ಯ ಖಂಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗುಂಪು ಹತ್ಯೆ ಮಾಡಿದವರನ್ನು ಬಿಡುವುದಿಲ್ಲ. ತನಿಖೆ ನಡೆಯುತ್ತಿದೆ. ಇಲ್ಲಿಯವರೆಗೆ 15 ಜನರನ್ನು ಬಂಧಿಸಲಾಗಿದೆ. ತನಿಖೆ ಪೂರ್ಣಗೊಂಡು ವರದಿ ಬಂದ ನಂತರ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪಾಕಿಸ್ತಾನವನ್ನು ಬೆಂಬಲಿಸಿ ಮಾತನಾಡುವುದು ಸಂಪೂರ್ಣವಾಗಿ ತಪ್ಪು. ಅದು ದೇಶದ್ರೋಹ. ನಿಮಗೆ ಅರ್ಥವಾಗಿದೆಯೇ?” ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು. ಇನ್ನು ಗುಂಪು ಹತ್ಯೆ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 20 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ದೃಢಪಡಿಸಿದ್ದಾರೆ.
