1.ಭಾರತೀಯ ಸೇನೆ ದಿಟ್ಟ ಕಾರ್ಯಚರಣೆ: ತಲೆಗೆ 1 ಕೋಟಿ ರೂ ಬಹುಮಾನವಿದ್ದ ನಕ್ಸಲ್ ಪ್ರಯಾಗ್ ಮಾಂಝಿ ಸೇರಿ 8 ಮಂದಿ ಹತ್ಯೆ!

ಬೊಕಾರೊ: ಭದ್ರತಾ ಪಡೆಗಳು ನಕ್ಸಲರ ವಿರುದ್ಧ ಪ್ರಮುಖ ಯಶಸ್ಸನ್ನು ಸಾಧಿಸಿದ್ದು ಈ ಎನ್ಕೌಂಟರ್ನಲ್ಲಿ ಎಂಟು ನಕ್ಸಲರು ಸಾವನ್ನಪ್ಪಿದ್ದಾರೆ. ಲುಗುಬುರು ಬೆಟ್ಟದ ಪ್ರದೇಶದಲ್ಲಿ ಈ ಎನ್ಕೌಂಟರ್ ನಡೆದಿದೆ. ಸ್ಥಳದಿಂದ ಮೂರು ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹತ್ಯೆಯಾದ ನಕ್ಸಲರ ಪೈಕಿ ತಲೆಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಲಾದ ನಕ್ಸಲ್ ಪ್ರಯಾಗ್ ಮಾಂಝಿ ಅಲಿಯಾಸ್ ವಿವೇಕ್ ಕೂಡ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ದೃಢಪಡಿಸಿವೆ.
***
2.ಪ್ರಧಾನಿ ನಿವಾಸದಲ್ಲಿ ಮೋದಿ-ವ್ಯಾನ್ಸ್ ಮಾತುಕತೆ; ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಆದ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಅವರ ಪತ್ನಿ ಉಷಾ ವ್ಯಾನ್ಸ್ ಮತ್ತು ಅವರ ಮೂವರು ಮಕ್ಕಳನ್ನು ತಮ್ಮ ಅಧಿಕೃತ ನಿವಾಸದಲ್ಲಿ ಸ್ವಾಗತಿಸಿದರು.
ಇಂದು ಸಂಜೆ ವ್ಯಾನ್ಸ್ ಕುಟುಂಬ, ರಾಷ್ಟ್ರ ರಾಜಧಾನಿಯಲ್ಲಿರುವ ಪ್ರಧಾನಿಯವರ ಅಧಿಕೃತ ನಿವಾಸಕ್ಕೆ ಆಗಮಿಸಿತು. ನಂತರ ಅಮೆರಿಕ ಉಪಾಧ್ಯಕ್ಷರು, ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಭಾರತ- ಅಮೆರಿಕದ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಆಗಿರುವ “ಮಹತ್ವದ ಪ್ರಗತಿ”ಯನ್ನು ಪ್ರಧಾನಿ ಮೋದಿ ಮತ್ತು ಜೆಡಿ ವ್ಯಾನ್ಸ್ ಶ್ಲಾಘಿಸಿದರು.
****
3.ಧರ್ಮ ಯಾವುದಾದರೂ ತತ್ವ ಒಂದೇ, ಧಾರ್ಮಿಕ ಸಂಪ್ರದಾಯಗಳಿಗೆ ಧಕ್ಕೆ ಸರಿಯಲ್ಲ: ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಕ್ಕೆ ರಾಜ್ಯ ಸರ್ಕಾರ ಖಂಡನೆ


ಬೆಂಗಳೂರು: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳ ಕ್ರಮಕ್ಕೆ ರಾಜ್ಯ ಸರ್ಕಾರ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ವಿವಾದ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಿ.ಇ.ಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಕ್ರಮ ನಿಯಮ ಬಾಹಿರವಾದುದ್ದು. ಪರೀಕ್ಷೆಯಲ್ಲಿ ಅಕ್ರಮ ನಡೆಸಬಹುದಾದ ಸಾಧ್ಯತೆಗಳನ್ನು ಪರಿಗಣಿಸಿ ಮಾತ್ರವೇ ಕ್ರಮ ಕೈಗೊಳ್ಳಬೇಕು, ವಿನಃ ಹೀಗೆ ಅನವಶ್ಯಕವಾಗಿ ಇತರರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾದ ನಿಯಮ ಹೇರಿಕೆ ಮಾಡಬಾರದು. ಇಂಥದ್ದನ್ನು ನಾವು ಸಹಿಸುವುದಿಲ್ಲ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
****
4 ಜವಾಬ್ದಾರಿಯುತ ಸ್ಥಾನದಲ್ಲಿರುವ ಅಶೋಕ್ ಸುಳ್ಳು ಹೇಳಬಾರದು: ಡಿ.ಕೆ.ಶಿವಕುಮಾರ್


ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿರುವ ಆರ್.ಅಶೋಕ್ ಅವರು ಸುಳ್ಳು ಹೇಳಬಾರದು. ಜಾತಿಗಣತಿ ವರದಿ ನಿಜವೇ ಸುಳ್ಳೇ, ನಕಲಿಯೇ ಎಂಬುದರ ಬಗ್ಗೆ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರನ್ನು ಕೇಳಲಿ ಅಥವಾ ಅಧಿಕಾರಿಯಾದ ದಯಾನಂದ್ ಅವರ ಬಳಿ ವಿಚಾರಿಸಿದರೆ ಉತ್ತರ ಸಿಗಬಹುದು ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.ಜಾತಿಗಣತಿ ವರದಿಯನ್ನು ಸಿದ್ದರಾಮಯ್ಯ ಅವರು ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎನ್ನುವ ಆರ್.ಅಶೋಕ್ ಅವರ ಆರೋಪದ ಬಗ್ಗೆ ಮಾಧ್ಯಮದವರ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು.
****
5. ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ ಸಿಸಿಬಿಗೆ ವರ್ಗಾವಣೆ

ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಹತ್ಯೆ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಸಿಸಿಬಿಗೆ ವರ್ಗಾಯಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸುವಂತೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಎಸಿಪಿಗೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಓಂ ಪ್ರಕಾಶ್ ಕೊಲೆ ಹಿಂದೆ ಹಲವು ಕಾರಣಗಳು ಕೇಳಿಬರುತ್ತಿವೆ. ಅವರ ಪತ್ನಿ ಪಲ್ಲವಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರಿಂದ ಭ್ರಮೆಯಲ್ಲಿ ಪತಿಯನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ.

[…] ಮಾರ್ನಿಂಗ್ ಟೈಮ್ ಕ್ವಿಕ್ ನ್ಯೂಸ್ […]