ಹಾಸನ: ಅಡುಗೆ ಮಾಡದ ವಿಚಾರಕ್ಕೆ ತಾಯಿ–ಮಗನ ನಡುವೆ ಶುರುವಾದ ಜಗಳ ಕೊನೆಗೆ ಭೀಕರ ಘಟನೆಯಲ್ಲಿ ಅಂತ್ಯ ಕಂಡಿದೆ. ತಾಯಿಯನ್ನೇ ಮಗನು ಹೊಡೆದು ಕೊಂದಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕದಾಳುಚನ್ನಾಪುರ ಗ್ರಾಮದಲ್ಲಿ ನಡೆದಿದೆ.
ಮೃತೆಯಾದ ತಾಯಿ ಪ್ರೇಮ (45) ಎಂದು ಗುರುತಿಸಲಾಗಿದೆ. ತಾಯಿಯನ್ನು ಹೊಡೆದು ಕೊಂದ ಆರೋಪಿ ಮಗ ಸಂತೋಷ (19).
ನಿನ್ನೆ ರಾತ್ರಿ ಮದ್ಯಪಾನ ಮಾಡಿಕೊಂಡು ಮನೆಗೆ ಬಂದಿದ್ದ ಸಂತೋಷ ಅಡುಗೆ ಮಾಡಿರಲಿಲ್ಲ ಎಂಬ ಕಾರಣಕ್ಕೆ ತಾಯಿಯೊಂದಿಗೆ ವಾಗ್ವಾದ ಆರಂಭಿಸಿದ. ಜಗಳ ತಾರಕಕ್ಕೇರಿದಾಗ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದ ಸಂತೋಷನ ಹಲ್ಲೆಯಿಂದ ತಾಯಿ ಪ್ರೇಮ ತೀವ್ರವಾಗಿ ಗಾಯಗೊಂಡಿದ್ದರು.
ಗಾಯಗೊಂಡ ಪ್ರೇಮ ಅವರನ್ನು ಕುಟುಂಬಸ್ಥರು ತಕ್ಷಣ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಪ್ರೇಮ ಸಾವನ್ನಪ್ಪಿದರು.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
