ಬಾಣಂತಿ ಸಾವು ಪ್ರಕರಣ: ತುರ್ತು ಪರಿಸ್ಥಿತಿ ನಿಭಾಯಿಸಲು ವಿಫಲ- 10 ಲಕ್ಷ ಪರಿಹಾರ ನೀಡಲು ಆಸ್ಪತ್ರೆಗೆ ಗ್ರಾಹಕ ನ್ಯಾಯಾಲಯದ ಆದೇಶ

ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದಲ್ಲಿ 2011ರಲ್ಲಿ ಸಂಭವಿಸಿದ ಹೆರಿಗೆಯ ನಂತರ ಬಾಣಂತಿ ಮೃತಪಟ್ಟ ಪ್ರಕರಣದಲ್ಲಿ, ದರ್ಬೆಯ ನಿಸರ್ಗ ಹೆಲ್ತ್ ಸೆಂಟರ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ. ವೈದ್ಯಕೀಯ ನಿರ್ಲಕ್ಷ್ಯ ಮತ್ತು ತುರ್ತು ವ್ಯವಸ್ಥೆಗಳ ಕೊರತೆಯಿಂದಾಗಿ ಮಹಿಳೆ ಸಾವಿಗೀಡಾದರೆಂದು ನ್ಯಾಯಾಲಯವು ಗುರುತಿಸಿದೆ. ಮೃತ ಮಹಿಳೆಯ ಪತಿಗೆ 10 ಲಕ್ಷ ರೂಪಾಯಿ ಪರಿಹಾರ ಮತ್ತು ಶೇಕಡಾ 6ರ ಬಡ್ಡಿದರದೊಂದಿಗೆ ವ್ಯಾಜ್ಯ ವೆಚ್ಚ ಭರಿಸುವಂತೆ ಆದೇಶಿಸಲಾಗಿದೆ. ಮೊದಲು 2017ರಲ್ಲಿ ದೂರನ್ನು ವಜಾ ಮಾಡಿದರೂ, ಮೇಲ್ಮನವಿ ಬಳಿಕ ಮರುವಿಚಾರಣೆ ನಡೆಸಿ ಈ ತೀರ್ಪು ನೀಡಲಾಗಿದೆ. ಆಸ್ಪತ್ರೆಯು ಕೇಸ್ ಶೀಟ್, ಡಿಸ್ಚಾರ್ಜ್ ಸಮ್ಮರಿಗಳನ್ನು ನೀಡದಿರುವುದೂ ಸೇವಾ ನ್ಯೂನ್ಯತೆಯೆಂದು ಗುರುತಿಸಲಾಗಿದೆ.